ಖರ್ಗೆ ಪ್ರಧಾನಿ ಅಭ್ಯರ್ಥಿ ಬೇಡ ಎಂದಿದ್ದೆ ಸಿದ್ಧರಾಮಯ್ಯ: ಜಿಟಿಡಿ ಅರೋಪ
ಹುಬ್ಬಳ್ಳಿ : ಕಾಂಗ್ರೆಸ್ ಪಕ್ಷದ ಆಧಿನಾಯಕಿ ಸೇರಿದಂತೆ ಆ ಪಕ್ಷದ ನಾಯಕರು ಮಲ್ಲಿಕಾರ್ಜುನ ಖರ್ಗೆ ಅವರನ್ನೇ ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆ ಮಾಡುವ ಆಶಯ ಹೊಂದಿದ್ದರು. ಅಭಿಪ್ರಾಯ ಕೇಳಿದ ವೇಳೆ ಖರ್ಗೆಯವರು ಬೇಡ. ರಾಹುಲ್ ಗಾಂಧಿ ಅವರ ಹೆಸರನ್ನೇ ಘೋಷಣೆ ಮಾಡಬೇಕು ಎಂದು ಸಲಹೆ ನೀಡೊ ಪಟ್ಟು ಹಿಡಿದಿದ್ದು ಸಿದ್ಧರಾಮಯ್ಯ ಅವರು ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ, ಶಾಸಕ ಜಿ.ಟಿ. ದೇವೇಗೌಡ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಖರ್ಗೆ ಪ್ರಧಾನಿಯಾಗುವುದು ಸಿದ್ದರಾಮಯ್ಯಗೆ ಇಷ್ಟವಿರಲಿಲ್ಲ. ದಲಿತರಿಗೆ ಅವಕಾಶ ಮಾಡಿಕೊಡುತ್ತಾರೆಯೇ ಅವರು ಎಂದು ಟೀಕಿಸಿದರು.
ಈ ಹಿಂದೆ ಡಾ.ಜಿ ಪರಮೇಶ್ವರ ಮುಖ್ಯಮಂತ್ರಿ ಆಗುತ್ತಾರೆಂಬ ಕಾರಣಕ್ಕೆ ಸಿದ್ದರಾಮಯ್ಯ ಏನೇನು ಮಾಡಿದರು. ಪರಮೇಶ್ವರಗೆ ಸಿಎಂ ಕುರ್ಚಿ ಸಿಗದಂತೆ ಮಾಡಿದ್ದು ರಾಜ್ಯಕ್ಕೆ ಗೊತ್ತಿರುವ ಸತ್ಯ. ದಲಿತರು ರಾಜಕೀಯದಲ್ಲಿ ಉನ್ನತ ಸ್ಥಾನಕ್ಕೇರುವುದು ಸಿದ್ದರಾಮಯ್ಯಗೆ ಇಷ್ಟವಿಲ್ಲ. ಒಂದು ವೇಳೆ ಆ ಕಾಳಜಿ ಇದ್ದಿದ್ದರೆ ಖರ್ಗೆ ಅವರನ್ನೇ ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆ ಮಾಡಲು ಒತ್ತಡ ಹಾಕಬಹುದಿತ್ತು. ಬದಲಾಗಿ ವಿರುದ್ಧ ಧೋರಣೆ ಪ್ರದರ್ಶಿಸಿದರು ಎಂದು ಆರೋಪಿಸಿದರು.
ದೇವೇಗೌಡರು ಪ್ರಧಾನಿಯಾದಾಗ ನಾಡಿನ ಎಲ್ಲರೂ ಸಂತೋಷ ಪಟ್ಟಿದ್ದರು. ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆ ಮಾಡಿ ಅವರನ್ನು ಪ್ರಧಾನಿಯನ್ನಾಗಿ ಮಾಡಿದ್ದರೆ ನಾವು ಬಹಳ ಸಂತೋಷಪಡುತ್ತಿದ್ದೆವು. ಬೆಂಬಲಿಸುತ್ತಿದ್ದೇವು. ಆದರೆ, ಕಾಂಗ್ರೆಸ್ ಹಾಗೆ ಮಾಡಲೇ ಇಲ್ಲ ಎಂದು ಟೀಕಿಸಿದರು.