ಖಾತೆಗೆ ಜಮೆ ಆಗದ ಭಾಗ್ಯಲಕ್ಷ್ಮೀ...
ಬೆಂಗಳೂರು: ‘ಭಾಗ್ಯಲಕ್ಷ್ಮೀ’ ಯೋಜನೆಯ ಬಾಂಡ್‌ಗಳ ಅವಧಿ ಮುಗಿದ್ದರೂ ಫಲಾನುಭವಿಗಳಿಗೆ ಇನ್ನೂ ಹಣ ವರ್ಗಾವಣೆಯಾಗಿಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಕಳೆದ ಏಪ್ರಿಲ್‌ನಿಂದಲೇ ಭಾಗ್ಯಲಕ್ಷ್ಮೀ ಬಾಂಡ್‌ಗಳು ಮೆಚ್ಯೂರಿಟಿಯಾಗಲು ಆರಂಭವಾಗಿದ್ದು, ತಾಂತ್ರಿಕ ತೊಡಕಿನಿಂದಾಗಿ ಇಲ್ಲಿಯವರೆಗೆ ಯಾವೊಬ್ಬ ಫಲಾನುಭವಿಯ ಖಾತೆಗೂ ಹಣ ಜಮೆಯಾಗಿಲ್ಲ. ಕೆಲವೆಡೆ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ದಾಖಲೆಗಳನ್ನು ಸಲ್ಲಿಸಿ ತಿಂಗಳುಗಳಾದರೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನು ಕೆಲವೆಡೆ ಅರ್ಜಿ ಸ್ವೀಕಾರ ಪ್ರಕ್ರಿಯೆಯೇ ಆರಂಭ ಮಾಡಿಲ್ಲ ಎಂಬ ದೂರುಗಳು ಕೇಳಿಬಂದಿವೆ.
ಹೆಣ್ಣು ಮಕ್ಕಳ ಭವಿಷ್ಯ ಬೆಳಗಲೆಂದೇ ಬಿ. ಎಸ್. ಯಡಿಯೂರಪ್ಪ ಅವರ ನೇತೃತ್ವದ ಕರ್ನಾಟಕ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಭಾಗ್ಯಲಕ್ಷ್ಮಿ ಯೋಜನೆಯ ಆರಂಭಿಕ ವರ್ಷದಲ್ಲಿ ಹೆಸರು ನೋಂದಾಯಿಸಿದ್ದ ಸುಮಾರು 2.30 ಲಕ್ಷ ಫಲಾನುಭವಿಗಳಿಗೆ 2024 ರ ಏಪ್ರಿಲ್, ಮೇ ತಿಂಗಳಲ್ಲೇ ಮೆಚುರಿಟಿ ಹಣ ಫಲಾನುಭವಿ ಹೆಣ್ಣುಮಕ್ಕಳ ಮನೆಗಳನ್ನು ತಲುಪಬೇಕಿತ್ತು. ಆದರೆ ಸಾಲು ಸಾಲು ಹಗರಣಗಳು, ಭ್ರಷ್ಟಾಚಾರದಲ್ಲಿ ಮುಳುಗಿ, ಬೊಕ್ಕಸ ಬರಿದಾಗಿಸಿಕೊಂಡಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರದ ತುಕ್ಕು ಹಿಡಿದಿರುವ ಆಡಳಿತ ಯತ್ರದ ತಾತ್ಸಾರ ಧೋರಣೆಯಿಂದ ದಾಖಲೆ ಒದಗಿಸಿರುವ ಫಲಾನುಭವಿಗಳಿಗೂ ಹಣ ಬಿಡುಗಡೆ ಮಾಡದೇ ತಾಂತ್ರಿಕ ತೊಂದರೆಯ ನೆಪವೊಡ್ಡುತ್ತಿರುವುದು ನಾಚಿಕೆಗೇಡಿನ ಸಂಗತಿ. ನಾಡಿನ ಲಕ್ಷಾಂತರ ಹೆಣ್ಣು ಹೆತ್ತ ಕುಟುಂಬಗಳ ಶಾಪಕ್ಕೆ ಗುರಿಯಾಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಈ ಕೂಡಲೇ ಅರ್ಹ ಫಲಾನುಭವಿಗಳಿಗೆ ಭಾಗ್ಯಲಕ್ಷ್ಮಿ ಯೋಜನೆಯ ಹಣ ಬಿಡುಗಡೆ ಮಾಡಬೇಕೆಂದು ಆಗ್ರಹಿಸುತ್ತೇನೆ ಎಂದಿದ್ದಾರೆ.