ಖಾದಿಗೆ ನಕಲಿ ಭೀತಿ
ಡಾ. ವಿಶ್ವನಾಥ ಕೋಟಿ
ಧಾರವಾಡ: ಕಳೆದ ವರ್ಷ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ನಿಮಿತ್ತ ಹರ್ ಘರ್ ತಿರಂಗಾ ಅಭಿಯಾನದಿಂದಾಗಿ ರಾಷ್ಟ್ರಧ್ವಜ ಅಪಾರ ಪ್ರಮಾಣದಲ್ಲಿ ಮಾರಾಟಗೊಂಡಿದ್ದರೆ, ಈ ವರ್ಷ ರಾಷ್ಟ್ರಧ್ವಜ ಮಾರಾಟ ಇಳಿಮುಖವಾಗಿ ಗರಗ ಕ್ಷೇತ್ರೀಯ ಸೇವಾ ಸಂಘದ ಖಾದಿ ಕೇಂದ್ರ ಆತಂಕ ಎದುರಿಸುತ್ತಿದೆ.
ಕಳೆದ ೫ ದಶಕಗಳಿಂದ ಖಾದಿ ಬಟ್ಟೆ ಉತ್ಪಾದನೆಯಲ್ಲಿ ದೇಶಕ್ಕೆ ಪ್ರಸಿದ್ಧವಾಗಿದ್ದ ಗರಗ ಕ್ಷೇತ್ರೀಯ ಸೇವಾ ಸಂಘಕ್ಕೆ ೨೦೨೩ರಲ್ಲಿ ೨/೩ ಅಡಿ ಧ್ವಜ ನಿರ್ಮಾಣಕ್ಕೆ ಅನುಮತಿ ಲಭಿಸಿದ ಹಿನ್ನೆಲೆಯಲ್ಲಿ ಕೇಂದ್ರದ ಆದಾಯ ಏರುಮುಖವಾಗಿತ್ತು. ಆದರೆ ಕೇಂದ್ರ ಸರಕಾರ ರಾಷ್ಟ್ರಧ್ವಜ ಕುರಿತು ಯಾವುದೇ ಅಭಿಯಾನ ಘೋಷಿಸದ ಹಿನ್ನೆಲೆಯಲ್ಲಿ ರಾಷ್ಟ್ರಧ್ವಜ ಮಾರಾಟ ನಿರೀಕ್ಷಿತ ಮಟ್ಟದಲ್ಲಿಲ್ಲ. ಕಳೆದ ವರ್ಷ ನಡೆದ ರಾಷ್ಟ್ರಧ್ವಜ ಮಾರಾಟಕ್ಕಿಂತ ಕಡಿಮೆ ಪ್ರಮಾಣದಲ್ಲಿ ಮಾರಾಟವಾಗುವ ಲಕ್ಷಣಗಳು ಗೋಚರಿಸಿದ್ದು ಖಾದಿ ಕ್ಷೇತ್ರವನ್ನು ಅವಲಂಬಿಸಿದ ಸಹಸ್ರಾರು ಜನರನ್ನು ಚಿಂತಾಕ್ರಾಂತರನ್ನಾಗಿಸಿದೆ.
ಪ್ರಸ್ತುತ ಗರಗ ಕ್ಷೇತ್ರೀಯ ಸೇವಾ ಸಂಘದ ಖಾದಿ ಕೇಂದ್ರದಲ್ಲಿ ಹಾಗೂ ವ್ಯಾಪ್ತಿಯ ಉಪಕೇಂದ್ರಗಳಲ್ಲಿ ನೂಲುವವರು, ನೇಯುವವರು, ಟೇಲರ್‌ಗಳು, ಬಣ್ಣ ಹಾಕುವ ಸಿಬ್ಬಂದಿ, ಕಚೇರಿ ಸಿಬ್ಬಂದಿ ಸುಮಾರು ೩೦೦ ಜನರಿದ್ದಾರೆ. ಆದರೆ ಖಾದಿ ಬಟ್ಟೆ ಖರೀದಿಗೆ ಜನರು ಆಸಕ್ತಿ ತೋರಿಸದಿರುವುದು ಹಾಗೂ ಸರಕಾರ ಖಾದಿಗೆ ನಿರೀಕ್ಷಿತ ಉತ್ತೇಜನ ನೀಡದಿರುವುದು ಈ ಕ್ಷೇತ್ರ ಕಳೆಗುಂದುವಂತಾಗಿದೆ.
ಉತ್ಪಾದನೆ ಮಾಡಿದ ಖಾದಿ ಮಾರಾಟವಾದರೆ ಮಾತ್ರ ಖಾದಿ ಕೇಂದ್ರಗಳು ಉಸಿರಾಡಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಕೇಂದ್ರಗಳ ನಿರ್ವಹಣೆ ಕಷ್ಟವಾಗುತ್ತದೆ. ಇದರೊಂದಿಗೆ ಖಾದಿ ಹೆಸರಿನಲ್ಲಿ ಡುಪ್ಲಿಕೇಟ್ ಖಾದಿ ಕೂಡ ಮಾರಾಟವಾಗುತ್ತಿದೆ. ಜನರಿಗೆ ನೈಜ ಖಾದಿಯಾವುದೆಂಬುದು ಗೊತ್ತಾಗುವುದಿಲ್ಲ. ಖಾದಿ ಹೆಸರಿನಲ್ಲಿ ಮಾರಾಟವಾಗುವ ಬಟ್ಟೆ, ಉಡುಪನ್ನು ಜನರು ಖರೀದಿ ಮಾಡುತ್ತಾರೆ.
ರಾಜಕಾರಣಿಗಳು, ಸರಕಾರಿ ನೌಕರರು ಕಡ್ಡಾಯವಾಗಿ ಕೇಂದ್ರಗಳಲ್ಲಿ ಉತ್ಪಾದನೆಯಾದ ಖಾದಿ ಬಟ್ಟೆ ಧರಿಸಬೇಕು. ಅಲ್ಲದೇ ಮಕ್ಕಳಿಗೆ ಸಮವಸ್ತçವನ್ನು ಖಾದಿ ಬಟ್ಟೆಯಿಂದಲೇ ಮಾಡಬೇಕು. ಖಾದಿ ಹೊರತಾದ ಬಟ್ಟೆಯಿಂದ ರಾಷ್ಟ್ರಧ್ವಜ ಉತ್ಪಾದಿಸುವವರು ಹಾಗೂ ಮಾರಾಟ ಮಾಡುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕಿದೆ. ಖಾದಿ ಉಳಿಸುವ ದಿಸೆಯಲ್ಲಿ ಸರಕಾರ ಗಂಭೀರ ಕ್ರಮ ಕೈಗೊಂಡರೆ ಮಾತ್ರ ಖಾದಿ ಕ್ಷೇತ್ರವನ್ನು ಉಳಿಸಲು ಹಾಗೂ ಬೆಳೆಸಲು ಸಾಧ್ಯವಾಗುತ್ತದೆ ಎಂದು ಖಾದಿ ಕಾರ್ಯಕರ್ತರು ಹೇಳುತ್ತಾರೆ.
ಮತ್ತೊಂದು ರಾಷ್ಟ್ರಧ್ವಜ ಅನುಮತಿ ಬೇಕಿದೆ….
ಗರಗ ಕೇಂದ್ರವನ್ನು ಮೇಲ್ದರ್ಜೆಗೇರಿಸಬೇಕು. ನೂತನ ಕಟ್ಟಡ ನಿರ್ಮಾಣವಾಗಬೇಕು. ಕಂಪೌಂಡ್ ನಿರ್ಮಿಸಬೇಕು. ಚರಕ ನಿಂತಿದೆ… ನೇಯುವವರ, ನೂಲುವವರ ಸಮಸ್ಯೆ ಕೇಳಲು ಜನಪ್ರತಿನಿಧಿಗಳು ಕಿವಿಗೊಡುತ್ತಿಲ್ಲ. ಕೇವಲ ನೀತಿ-ನಿಯಮ ರೂಪಿಸಿದರೆ ಖಾದಿ ಕ್ಷೇತ್ರ ಉಳಿಸಲು ಸಾಧ್ಯವಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ. ಈ ಸಮಸ್ಯೆ ನಡುವೆಯೂ ಮಧ್ಯೆ ಕೇಂದ್ರದ ಸಾಮರ್ಥ್ಯ ಸದ್ಬಳಕೆಗೆ ಇನ್ನಷ್ಟು ಅಳತೆಯ ರಾಷ್ಟ್ರಧ್ವಜಗಳನ್ನು ಉತ್ಪಾದನೆ ಮಾಡಲು ಅವಕಾಶ ನೀಡಿದರೆ ಕೇಂದ್ರದ ಆದಾಯ ಹೆಚ್ಚಿಸಬಹುದಾಗಿದೆ ಎಂಬ ಒತ್ತಡವೂ ಈ ವಲಯದಿಂದ ಕೇಳಿಬರುತ್ತಿದೆ.
ಈಗ ಗರಗ ಕ್ಷೇತ್ರೀಯ ಸೇವಾ ಸಂಘ ೨/೩ ಅಡಿ ಧ್ವಜಗಳನ್ನು ಯಶಸ್ವಿಯಾಗಿ ಉತ್ಪಾದಿಸುತ್ತಿದೆ. ಒಂದು ವೇಳೆ ೩/೪.೫ ಅಡಿ, ೪/೬ ಅಡಿ, ೬/೮ ಅಡಿ ಧ್ವಜ ಉತ್ಪಾದನೆಗೆ ಅನುಮತಿ ಲಭಿಸಿದರೆ ಖಂಡಿತವಾಗಿ ಖಾದಿ ಕೇಂದ್ರದ ಆದಾಯ ಹೆಚ್ಚಾಗುವುದರಲ್ಲಿ ಸಂಶಯವಿಲ್ಲ. ಪ್ರಸ್ತುತ ಮಳೆಯ ಕಾರಣದಿಂದಾಗ ಕಳೆದೊಂದು ತಿಂಗಳಿಂದ ಖಾದಿ ಕೇಂದ್ರದ ಉತ್ಪಾದನೆ ಸ್ಥಗಿತಗೊಳಿಸಲಾಗಿದೆ. ಈಗ ಬೇಡಿಕೆಗೆ ಅನುಗುಣವಾಗಿ ರಾಷ್ಟ್ರಧ್ವಜ ಸ್ಟಾಕ್ ಇದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ನಿರೀಕ್ಷಿತ ಪ್ರಮಾಣದ ಮಾರಾಟವಿಲ್ಲ. ೧೦ರಿಂದ ೧೫ ಲಕ್ಷ ರೂ. ಮಾರಾಟದ ಗುರಿಯಿದ್ದು, ಗುರಿ ತಲುಪುವ ಸಾಧ್ಯತೆ ಕಡಿಮೆ ಎನಿಸುತ್ತದೆ. ಇನ್ನು ೯-೧೦ ದಿನಗಳಲ್ಲಿ ಹೆಚ್ಚಿನ ಮಾರಾಟ ನಡೆಯುವ ನಿರೀಕ್ಷೆಯಿದೆ.
ಈಶ್ವರ ಇಟಗಿ, ಗರಗ ಕ್ಷೇತ್ರೀಯ ಸೇವಾ ಸಂಘದ ಚೇರಮನ್.