ಖಾಲಿಸ್ತಾನ್‌ಗೆ ಬೆಂಬಲ ಕೆನಡಾಗೆ ಕಂಟಕ
ಭಾರತ-ಕೆನಡಾ ಎರಡೂ ದೇಶಗಳು ತಂತಮ್ಮ ದೂತಾವಾಸದ ಅಧಿಕಾರಿಗಳನ್ನು ಹಿಂದಕ್ಕೆ ಕರೆಸಿಕೊಂಡಿವೆ. ಕೆನಡಾದಲ್ಲಿ ನಿಜ್ಜರ್ ಕೊಲೆಗೆ ಭಾರತ ಕಾರಣ ಎಂಬುದು ಅಲ್ಲಿಯ ಸರ್ಕಾರದ ಆರೋಪ. ಇದನ್ನು ಸಂಪೂರ್ಣ ಅಲ್ಲಗಳೆದಿರುವ ಭಾರತ ಖಾಲಿಸ್ತಾನ್ ಪ್ರತ್ಯೇಕತಾವಾದಿಗಳ ಒತ್ತಡಕ್ಕೆ ಅಲ್ಲಿಯ ಸರ್ಕಾರ ಮಣಿದಿದೆ ಎಂದು ಸ್ಪಷ್ಟವಾಗಿ ಹೇಳಿದೆ. ನಿಜ್ಜರ್ ಕೊಲೆಯಲ್ಲಿ ಭಾರತದ ನೇರ ಕೈವಾಡವಿದೆ ಎಂಬುದನ್ನು ಅಮೆರಿಕ, ಆಸ್ಟ್ರೇಲಿಯ, ನ್ಯೂಜಿಲೆಂಡ್, ಯುಕೆ ಒಪ್ಪಿಲ್ಲ. ಇಂದಿರಾ ಹತ್ಯೆಯ ನಂತರ ಖಾಲಿಸ್ತಾನ್ ಪ್ರತ್ಯೇಕತಾವಾದಿಗಳು ವಿದೇಶಗಳಲ್ಲಿ ಭಾರತದ ವಿರುದ್ಧ ಅಪಪ್ರಚಾರ ಕೈಗೊಂಡಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಹಿಂದೆ ನಡೆದ ರೈತಚಳವಳಿಯ ಹಿಂದೆ ಇವರ ಕೈವಾಡ ಇದ್ದದ್ದು ಬಹಿರಂಗ ಗೊಂಡಿತ್ತು. ಈಗ ಮತ್ತೆ ಕೆನಡಾ ಸರ್ಕಾರದ ಕ್ರಮದ ಹಿಂದೆ ಈ ಶಕ್ತಿಗಳ ಪ್ರಭಾವ ಇರುವುದು ನಿಚ್ಚಳ. ಇದು ಭಾರತ ವಿರೋಧಿ ಕ್ರಮ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ.
ಕೆನಡಾ ಮಾಡುತ್ತಿರುವ ಆರೋಪಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಬಲ ಕಂಡು ಬರುತ್ತಿಲ್ಲ. ಇದಕ್ಕೆ ಕಾರಣ ಹುಡುಕುವುದು ಕಷ್ಟವೇನಲ್ಲ. ಈಗ ಭಾರತದ ಆರ್ಥಿಕ ಬೆಳವಣಿಗೆಯನ್ನು ಬೇರೆ ದೇಶಗಳು ಕಡೆಗಣಿಸಲು ಬರುವುದಿಲ್ಲ. ಭಾರತವನ್ನು ಹತ್ತಿಕ್ಕಲು ಯತ್ನಿಸಿದರೆ ಚೀನಾವನ್ನು ಎದುರಿಸಬೇಕಾಗುತ್ತದೆ. ಅಲ್ಲದೆ ಭಾರತದ ಮಾರುಕಟ್ಟೆಯನ್ನು ಯಾವ ದೇಶವೂ ಕಳೆದುಕೊಳ್ಳಲು ಬಯಸುವುದಿಲ್ಲ. ಅಷ್ಟೇ ಏಕೆ, ಕೆನಡಾ ಸರ್ಕಾರದ ಕ್ರಮವನ್ನು ಅಲ್ಲಿಯ ಜನರೇ ಒಪ್ಪುತ್ತಿಲ್ಲ. ಅಲ್ಲಿಯ ಬೆಳವಣಿಗೆಯಲ್ಲಿ ಭಾರತೀಯರ ಪಾತ್ರವನ್ನು ಕಡೆಗಣಿಸಲು ಬರುವುದಿಲ್ಲ. ಅಲ್ಲಿಯ ಒಟ್ಟು ಜನಸಂಖ್ಯೆಯಲ್ಲಿ ಶೇ.೪ ಭಾರತೀಯರು. ೧೦೯೦ಕ್ಕೆ ಮುನ್ನ ಭಾರತ-ಕೆನಡಾ ಸಂಬಂಧ ಸುಮಧುರವಾಗಿತ್ತು. ೧೦೫೪ರಲ್ಲಿ ಟ್ರಾಂಬೆ ಅಣು ವಿದ್ಯುತ್ ಕೇಂದ್ರಕ್ಕೆ ನೆರವು ನೀಡಿದ್ದು ಕೆನಡಾ. ಭಾರತ ಅಣುಶಕ್ತಿ ಪ್ರಯೋಗ ಮಾಡಿದ ಮೇಲೆ ಕೆನಡಾ ತನ್ನ ನಿಲುವನ್ನು ಬದಲಿಸಿತು. ಅಲ್ಲದೆ ಕೆನಡಾ ಅಮೆರಿಕದೊಂದಿಗೆ ತನ್ನ ಸಂಬಂಧವನ್ನು ಬಲಪಡಿಸಿಕೊಂಡರೆ ಭಾರತ ರಷ್ಯಾದೊಂದಿಗೆ ಸ್ನೇಹ ಬೆಳಸಿತು. ಆದರೂ ದ್ವಿಪಕ್ಷೀಯ ವ್ಯಾಪಾರ- ವ್ಯವಹಾರಗಳಿಗೆ ಅಡ್ಡಿ ಬಂದಿರಲಿಲ್ಲ. ಈಗ ಕೆನಡಾ ಪ್ರಧಾನಿ ಟ್ರೋಡೊ ಅವರಿಗೆ ಸಿಖ್ ಸಮುದಾಯದ ಬೆಂಬಲ ಅಗತ್ಯ. ಅಲ್ಲಿಯ ಸಂಸತ್ತಿನಲ್ಲಿ ೧೮ ಜನ ಸಿಖ್ ಸಮುದಾಯದವರೇ ಇದ್ದಾರೆ. ಅಲ್ಲಿಯ ಪ್ರತಿಪಕ್ಷದ ನಾಯಕ ಜಗಮೀತ್‌ಸಿಂಗ್ ಖಾಲಿಸ್ತಾನ್ ಬೆಂಬಲಿಗರು. ಹೀಗಾಗಿ ಅಲ್ಲಿ ಇದು ಮತಬ್ಯಾಂಕ್ ರಾಜಕಾರಣಕ್ಕೆ ಕಾರಣ. ಆದರೆ ದೇಶದೊಳಗಿನ ರಾಜಕಾರಣಕ್ಕೆ ಕೆನಡಾ ತನ್ನ ಘನತೆ, ಗೌರವನ್ನು ಒತ್ತೆ ಇಡುವ ಸ್ಥಿತಿಗೆ ಬಂದಿದೆ. ಪಾಕಿಸ್ತಾನ, ಬಾಂಗ್ಲಾ, ಶ್ರೀಲಂಕಾ, ಮಾರಿಷಸ್ ದೇಶಗಳು ಈಗಾಗಲೇ ಈ ರೀತಿ ಹಲವು ರಾಜಕೀಯ ಶಕ್ತಿಗಳಿಗೆ ಬಲಿಯಾಗಿ ಭಾರತದ ವಿರುದ್ಧ ಸೆಟೆದು ನಿಂತು ಕಷ್ಟನಷ್ಟಗಳಿಗೆ ಒಳಗಾಗಿವೆ ಎಂಬುದನ್ನು ಕೆನಡಾ ಸರ್ಕಾರ ನೆನಪಿಸಿಕೊಳ್ಳುವುದು ಒಳ್ಳೆಯದು. ಭಾರತದ ಮಾನವ ಸಂಪನ್ಮೂಲ ಸರಿಗಟ್ಟುವುದು ಕಷ್ಟ ಎಂಬುದು ಬಹುತೇಕ ದೇಶಗಳಿಗೆ ತಿಳಿದಿದೆ. ಅದರಲ್ಲೂ ಯುವ ಜನಸಂಖ್ಯೆ ಭಾರತದಲ್ಲಿ ಅಧಿಕವಾಗಿದೆ. ಹಿಂದೆ ಕೆನಡಾದಲ್ಲಿ ಸಿಖ್ ಮತ್ತು ಪಂಜಾಬಿಗಳು ಮಾತ್ರ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಈಗ ಗುಜರಾತ್, ದಕ್ಷಿಣ ಭಾರತದವರು ಹೆಚ್ಚಿನ ಸಂಖ್ಯೆ ಸೇರ್ಪಡೆಗೊಂಡಿದ್ದಾರೆ. ಭಾರತದ ವೈದ್ಯರಿಗೆ ಹೆಚ್ಚಿನ ಬೇಡಿಕೆ ಇದೆ. ಅವರು ಯಾರೂ ಖಾಲಿಸ್ತಾನ್ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿಲ್ಲ. ಇದು ಕೆನಡಾ ದೇಶದ ಸ್ಥಳೀಯರಿಗೆ ತಿಳಿದಿರುವುದರಿಂದ ಅವರು ಟ್ರೋಡೊ ಸರ್ಕಾರದ ಕ್ರಮವನ್ನು ಬೆಂಬಲಿಸುತ್ತಿಲ್ಲ. ಅಲ್ಲಿಯ ಸರ್ಕಾರ ಈಗಲೇ ತನ್ನ ತಪ್ಪನ್ನು ಸರಿಪಡಿಸಿಕೊಂಡು ಎಂದಿನಂತೆ ಭಾರತದೊಂದಿಗೆ ಸ್ನೇಹ ಸಂಬಂಧ ಮುಂದುವರಿಸುವುದು ಸೂಕ್ತ ಎಂದು ಅಲ್ಲಿಯ ಜನ ಹೇಳಲು ಆರಂಭಿಸಿದ್ದಾರೆ. ಇತ್ತೀಚೆಗೆ ನಡೆದ ಸಮೀಕ್ಷೆಯಲ್ಲಿ ಟ್ರೋಡೊ ಜನಪ್ರಿಯತೆ ಇಳಿಮುಖಗೊಂಡಿರುವುದು ಬಹಿರಂಗಗೊಂಡಿದೆ. ಬೇರೆ ದೇಶದ ನೆಲದಲ್ಲಿದ್ದು ತಮ್ಮದೇ ಆದ ದೇಶ ಕಟ್ಟುವ ಖಲಿಸ್ತಾನಿಗಳ ಕನಸು ನನಸಾಗುವುದು ಕಷ್ಟ. ಅದರಲ್ಲೂ ಹಿಂಸಾಚಾರದ ಮೂಲಕ ಅಧಿಕಾರ ಹಿಡಿದುಕೊಳ್ಳುವ ಹಂಬಲ ಈಡೇರುವುದಿಲ್ಲ. ನಕ್ಸಲೀಯರು ಈ ಪ್ರಯತ್ನವನ್ನು ಭಾರತದ ನೆಲದಲ್ಲೇ ಮಾಡಿ ವಿಫಲರಾಗಿ ನೆಲಕಚ್ಚಿರುವುದು ನಮ್ಮ ಕಣ್ಣಮುಂದೆ ಇದೆ. ಕೆನಡಾ ಕೂಡ ಇಂಥ ದುಸ್ಸಾಹಸಕ್ಕೆ ಬೆಂಬಲ ನೀಡಿ ಅನಗತ್ಯವಾಗಿ ಇತರ ದೇಶಗಳ ಅವಕೃಪೆಗೆ ಒಳಗಾಗುವುದು ಸರ್ವಥಾ ಸರಿಯಲ್ಲ. ಈಗಲೂ ಕಾಲ ಮಿಂಚಿಲ್ಲ. ಭಾರತದೊಂದಿಗೆ ಹಿಂದಿನ ಸ್ನೇಹ ಸಂಬಂಧವನ್ನು ಮುಂದುವರಿಸಬಹುದು. ಅದರಿಂದ ಉಭಯ ದೇಶಗಳ ಆರ್ಥಿಕ ಅಭಿವೃದ್ಧಿ ಕುಂಠಿತಗೊಳ್ಳುವುದು ತಪ್ಪುತ್ತದೆ. ಎರಡೂ ದೇಶಗಳ ಜನ ವೈಮನಸ್ಯ ಇಲ್ಲದೆ ಒಟ್ಟಾಗಿ ಬದುಕಲು ಬಯಸುವಾಗ ಸರ್ಕಾರಗಳು ಅಡ್ಡಿಯಾಗಬಾರದು. ಕೆನಡಾ ಶಿಕ್ಷಣ ಸಂಸ್ಥೆಗಳಲ್ಲಿ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿದೆ ಎಂಬುದನ್ನು ಮರೆಯಬಾರದು. ರಾಜತಾಂತ್ರಿಕ ಸಂಬಂಧ ಉಭಯ ದೇಶಗಳ ಬೆಳವಣಿಗೆಗೆ ಅಗತ್ಯ ಎಂದು ಹೇಳುವ ಅಗತ್ಯವಿಲ್ಲ. ಪ್ರತ್ಯೇಕತಾವಾದ ಎಷ್ಟೇ ಉನ್ನತ ಚಿಂತನೆ ಹೊಂದಿದ್ದರೂ ಅದಕ್ಕೆ ಜನಬೆಂಬಲ ಸಿಗುವುದು ಕಷ್ಟ. ಅದರಲ್ಲೂ ಬಂದೂಕಿನ ಮೂಲಕ ಹೊಸ ದೇಶ ಕಟ್ಟಲು ಸಾಧ್ಯವಿಲ್ಲ. ಅದಕ್ಕೆ ಬೆಂಬಲ ಕೂಡ ವ್ಯರ್ಥ.