For the best experience, open
https://m.samyuktakarnataka.in
on your mobile browser.

ಖಾಲಿಸ್ತಾನ್ ಉಗ್ರರು ಕೆನಡಾಗೆ ಸೆರಗಿನಲ್ಲಿ ಕೆಂಡ

02:30 AM Nov 06, 2024 IST | Samyukta Karnataka
ಖಾಲಿಸ್ತಾನ್ ಉಗ್ರರು ಕೆನಡಾಗೆ ಸೆರಗಿನಲ್ಲಿ ಕೆಂಡ

ಖಾಲಿಸ್ತಾನ್ ಉಗ್ರರು ಕೆನಡಾದಲ್ಲಿ ಆಶ್ರಯ ಪಡೆದಿದ್ದು ಮುಂಬರುವ ದಿನಗಳಲ್ಲಿ ಅವರು ಸೆರಗಿನಲ್ಲಿ ಕೆಂಡ ಕಟ್ಟಿಕೊಂಡಂತೆ ಆಗುವುದರಲ್ಲಿ ಸಂದೇಹವಿಲ್ಲ. ಅಲ್ಲಿಯ ಪ್ರಧಾನಿ ತಮ್ಮ ಸರ್ಕಾರಕ್ಕೆ ಖಾಲಿಸ್ತಾನೀಯರ ಬೆಂಬಲ ಬೇಕು ಎಂಬ ಕಾರಣಕ್ಕೆ ಅವರ ದುಷ್ಕೃತ್ಯಕ್ಕೆ ಅವಕಾಶ ನೀಡಿದ್ದಾರೆ. ಇದು ಎರಡೂ ದೇಶಗಳ ನಡುವೆ ಇದೂವರೆಗೆ ಬೆಳೆದು ಬಂದ ಸಂಬಂಧಕ್ಕೆ ಮುಳ್ಳಾಗುತ್ತಿದೆ. ಉಗ್ರವಾದಕ್ಕೆ ಯಾವುದಾದರೊಂದು ವಿಷಯ ನೆಪ ಮಾತ್ರ. ಅದರ ಮೂಲ ಉದ್ದೇಶ ಹಿಂಸಾಚಾರ. ಒಮ್ಮೆ ಜನರಿಗೆ ಈ ಉಗ್ರರ ಮೂಲ ಉದ್ದೇಶ ತಿಳಿಯಿತು ಎಂದರೆ ಸಜ್ಜನರು ಎಲ್ಲರೂ ಹಿಂದೆ ಸರಿಯುವುದು ನಿಶ್ಚಿತ. ಈಗ ಕೆನಡಾದಲ್ಲಿ ಇದೇ ನಡೆಯುತ್ತಿದೆ. ಎಲ್ಲ ಸಿಖ್ ಸಮುದಾಯವರು ಈ ಉಗ್ರವಾದಕ್ಕೆ ಬೆಂಬಲ ನೀಡುತ್ತಿಲ್ಲ. ಅವರಿಗೆ ಹಿಂಸಾಚಾರ ಬೇಕಿಲ್ಲ. ಭಾರತದಿಂದ ಕೆಲಸ ಅರಸಿ ಹೋದವರಿಗೆ ಅಲ್ಲಿಯ ರಾಜಕೀಯ ಬೇಡವಾದ ವಿಷಯ. ಹಣ ಸಂಪಾದನೆಯೊಂದೇ ಅವರ ಜೀವನದ ಗುರಿ. ಅದರಲ್ಲೂ ಭಾರತೀಯ ವೈದ್ಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಮೆರಿಕ ಹೋಗಲು ಬಯಸುವವರು ಮೊದಲು ಹೋಗುವುದು ಕೆನಡಾಗೆ. ಅಲ್ಲಿಂದ ಅಮೆರಿಕ ಹೋಗುವುದು ಅವರ ಉದ್ದೇಶ. ಹೀಗಿರುವಾಗ ಅವರು ಪ್ರತ್ಯೇಕ ದೇಶ ಕಟ್ಟುವ ಕಡೆ ಗಮನಹರಿಸುವುದಿಲ್ಲ.
ಖಾಲಿಸ್ತಾನ್ ಉಗ್ರರು ಈಗ ಭಾರತ-ಕೆನಡಾ ಸಂಬಂಧ ಹದಗೆಡಲು ಕಾರಣರಾಗಿದ್ದಾರೆ. ಕೆಲವು ದಿನಗಳ ಹಿಂದೆ ಹಿಂದೂ ದೇವಾಲಯದ ಮೇಲೆ ಇವರ ದಾಳಿ ನಡೆಯಿತು. ಅಲ್ಲಿದ್ದ ಹಿಂದೂ ಭಕ್ತರ ಮೇಲೆ ಹಲ್ಲೆಯಾಗಿದೆ. ಅಲ್ಲಿಯ ಪೊಲೀಸರು ಹಿಂದೂ ಭಕ್ತರ ರಕ್ಷಣೆಗೆ ಬಂದಿಲ್ಲ ಎಂದು ಸ್ಥಳೀಯರು ದೂರಿದ್ದಾರೆ. ಅಲ್ಲಿಯ ಪ್ರಧಾನಿ ಘಟನೆಯನ್ನು ಖಂಡಿಸಿದ್ದಾರೆಯೇ ಹೊರತು ಕಾನೂನು ಕ್ರಮ ಕೈಗೊಳ್ಳಲು ಹೇಳಿಲ್ಲ. ಹಲ್ಲೆ ನಡೆಸಿದವರು ಕಾನೂನು ಕುಣಿಕೆಯಿಂದ ತಪ್ಪಿಸಿಕೊಂಡಿದ್ದಾರೆ. ದೇವಾಲಯದ ಭಕ್ತರೊಬ್ಬರಿಗೆ ಪೊಲೀಸರೇ ಥಳಿಸಿದ್ದಾರೆ. ಇದೆಲ್ಲ ಸರ್ಕಾರ ಕೃಪಾಪೋಷಿತ ಎಂಬುದು ಸ್ಪಷ್ಟ. ಇದರಿಂದ ಕೆನಡಾಗೆ ನಷ್ಟವಾಗುತ್ತದೆಯೇ ಹೊರತು ಲಾಭವೇನೂ ಆಗುವುದಿಲ್ಲ. ಈಗ ಮತಬ್ಯಾಂಕ್‌ಗಾಗಿ ಉಗ್ರರನ್ನು ಓಲೈಸಬಹುದು. ಮುಂದಿನ ದಿನಗಳಲ್ಲಿ ಇದೇ ದೊಡ್ಡ ಕ್ಯಾನ್ಸರ್ ಆಗಿ ಬೆಳೆಯಲಿದೆ. ಕೆನಡಾದ ಎಲ್ಲ ರಾಜಕೀಯ ಪಕ್ಷಗಳು ಇದನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ.
ಭಾರತ-ಕೆನಡಾ ಸಂಬಂಧ ತುಂಬ ಹಳೆಯದು. ೧೯೫೪ ರಲ್ಲಿ ಮುಂಬೈನಲ್ಲಿ ಅಣುವಿದ್ಯುತ್ ಸ್ಥಾವರ ಸ್ಥಾಪಿಸಲು ಕೆನಡಾ ನೆರವು ನೀಡಿತ್ತು. ೧೦೭೪ ರಲ್ಲಿ ಭಾರತ ಅಣುಪರೀಕ್ಷೆ ನಡೆಸಿದ್ದನ್ನು ಕೆನಡಾ ವಿರೋಧಿಸಿತ್ತು. ಅಲ್ಲದೆ ಕೆನಡಾ ಅಮೆರಿಕದ ನೀತಿ ಅನುಸರಿಸುವುದರಿಂದ ಭಾರತ-ರಷ್ಯಾ ಒಪ್ಪಂದವನ್ನು ಒಪ್ಪಿಲ್ಲ. ೧೯೮೦ ರಲ್ಲಿ ಖಾಲಿಸ್ತಾನ್ ತಲೆಎತ್ತಿತು. ಅಂದಿನಿಂದ ಕೆನಡಾ ಭಾರತದೊಂದಿಗೆ ಸಹಕರಿಸಲು ಮುಂದೆ ಬರುತ್ತಿಲ್ಲ. ಏರ್ ಇಂಡಿಯಾ ಕನಿಷ್ಕ ವಿಮಾನ ಸ್ಫೋಟ ಪ್ರಕರಣದಿಂದ ಹಿಡಿದು ಇತ್ತೀಚೆಗೆ ನಿಜ್ಜರ್ ಹತ್ಯೆ ಪ್ರಕರಣದವರೆಗೆ ಕೆನಡಾ ಭಾರತದ ಯಾವುದೇ ಸಲಹೆ ಸ್ವೀಕರಿಸುವ ಮನಸ್ಸು ಹೊಂದಿಲ್ಲ. ಈಗ ಎರಡೂ ದೇಶಗಳು ತಮ್ಮ ತಮ್ಮ ದೂತಾವಾಸದ ಅಧಿಕಾರಿಗಳನ್ನು ಹಿಂದಕ್ಕೆ ಕರೆಸಿಕೊಂಡ ಮೇಲೆ ಬಿರುಕು ಮತ್ತಷ್ಟು ಅಧಿಕಗೊಂಡಿದೆ. ಈಗ ದೇವಾಲಯದ ಮೇಲೆ ದಾಳಿ ಕೆನಡಾದಲ್ಲಿರುವ ಭಾರತೀಯರ ರಕ್ಷಣೆಯ ಬಗ್ಗೆ ಆತಂಕ ಮೂಡಿಸಿದೆ. ಇಂದಿಲ್ಲ ನಾಳೆ ಕೆನಡಾ ಬುದ್ಧಿ ಕಲಿಯಬೇಕಾದ ಕಾಲ ಬರಲಿದೆ. ವಾಕ್ ಸ್ವಾತಂತ್ರ್ಯದ ಹೆಸರಿನಲ್ಲಿ ಕಾನೂನು ಮೀರಿ ವರ್ತಿಸುವುದಕ್ಕೆ ಅವಕಾಶ ನೀಡುವುದು ಅಪಾಯಕಾರಿ. ಅದು ಈಗ ಆಕರ್ಷಕವಾಗಿ ಕಾಣಬಹುದು. ಮುಂದಿನ ದಿನಗಳಲ್ಲಿ ಕೆನಡಾ ಕಷ್ಟಕ್ಕೆ ಸಿಲುಕುವುದು ನಿಶ್ಚಿತ. ಹೊರ ದೇಶದಲ್ಲಿದ್ದುಕೊಂಡು ಖಾಲಿಸ್ತಾನ್ ಹೊಸ ದೇಶ ಕಟ್ಟುವುದು ಸುಲಭದ ಕೆಲಸವಲ್ಲ. ಎಲ್ಲ ಸಿಖ್ ಸಮುದಾಯದವರು ಇದಕ್ಕೆ ಬೆಂಬಲ ನೀಡುವುದಿಲ್ಲ. ಕೆಲವರು ಹಿಂಸಾಕೃತ್ಯದ ಮೂಲಕ ತಮ್ಮ ಆಸೆ ಪೂರೈಸಿಕೊಳ್ಳಬಹುದು ಎಂದು ತಿಳಿದಿದ್ದರೆ ಭ್ರಮನಿರಸನವಾಗುತ್ತದೆ. ಹಿಂದೆ ಇಂಥ ಪ್ರಯತ್ನಗಳು ಹಲವು ಬಾರಿ ನಡೆದು ವಿಫಲಗೊಂಡಿದೆ. ಪ್ರಜಾಪ್ರಭುತ್ವ ಪದ್ಧತಿಯಲ್ಲಿ ಜನಸಾಮಾನ್ಯರು ಎಲ್ಲ ರೀತಿಯ ಸಶಸ್ತ್ರ ಬಂಡಾಯವನ್ನು ಒಪ್ಪುವುದಿಲ್ಲ. ಇದು ನಮ್ಮ ದೇಶದಲ್ಲಿ ಮಾತ್ರವಲ್ಲ, ಎಲ್ಲ ದೇಶಗಳಲ್ಲೂ ಹಿಂಸಾಚಾರ ಹೆಚ್ಚು ದಿನ ಉಳಿದಿಲ್ಲ. ಇದನ್ನು ಕೆನಡಾ ಜನರಿಗೆ ಹೇಳಿಕೊಡಬೇಕಾದ ಅಗತ್ಯವಿಲ್ಲ. ಅಲ್ಲಿಯ ಪ್ರಜ್ಞಾವಂತರು ಇದರ ಬಗ್ಗೆ ಚಿಂತಿಸಿ ಕ್ರಮ ಕೈಗೊಳ್ಳುವುದು ಅನಿವಾರ್ಯ. ಅದೇರೀತಿ ನಮ್ಮ ದೇಶದಲ್ಲಿರುವವರು ವಾಕ್ ಸ್ವಾತಂತ್ರ್ಯದ ಹೆಸರಿನಲ್ಲಿ ಇಂಥ ದೇಶ ವಿದ್ರೋಹಿ ಶಕ್ತಿಗಳಿಗೆ ಬೆಂಬಲ ನೀಡಬಾರದು. ಅದರಲ್ಲೂ ಪ್ರತಿಪಕ್ಷದ ನಾಯಕರು ಎಚ್ಚರವಹಿಸುವುದು ಅಗತ್ಯ. ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ದೇಶದ ಏಕತೆ ಮತ್ತು ಸಮಗ್ರತೆ ಉಳಿಸಿಕೊಳ್ಳುವುದು ಮುಖ್ಯ. ಈ ವಿಷಯದಲ್ಲಿ ಯಾವುದೇ ರೀತಿಯಲ್ಲಿ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ನಮ್ಮ ದೇಶದ ವಿರುದ್ಧ ಇರುವವರು ಯಾರೇ ಆದರೂ ವಿದ್ರೋಹಿಗಳು. ಅವರ ವೈಚಾರಿಕತೆ ಎಷ್ಟೇ ಉನ್ನತವಾಗಿದ್ದರೂ ನಮಗೆ ಬೇಡ.