ಖಾಸಗಿ ವೈದ್ಯಕೀಯ ಕಾಲೇಜುಗಳ ಪ್ರವೇಶ ಶುಲ್ಕ ಶೇ. ೧೦ರಷ್ಟು ಹೆಚ್ಚಳ
ಬೆಂಗಳೂರು: ಅತ್ತ ಪ್ರತಿಷ್ಠಿತ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸೀಟು ಬ್ಲಾಕ್ ದಂಧೆ ಜೋರಾಗಿದ್ದರೇ ಇತ್ತ ರಾಜ್ಯದ ವೈದ್ಯಕೀಯ ಕಾಲೇಜುಗಳಲ್ಲಿ ಸ್ನಾತಕೋತ್ತರ ಎಂಡಿ-ಎಂಸ್ ಕೋರ್ಸ್‌ಗಳ ಪ್ರವೇಶ ಶುಲ್ಕವನ್ನು ಶೇ.೧೦ರಷ್ಟು ಸರಕಾರ ಹೆಚ್ಚಿಸಿರುವುದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.
೨೦೨೪-೨೫ನೇ ಸಾಲಿನ ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ಗಳಿಗೆ ಸಂಬಂಧಿಸಿದಂತೆ, ಸರ್ಕಾರಿ ಸ್ವಾಯತ್ತ ವೈದ್ಯಕೀಯ ಕಾಲೇಜುಗಳು, ಕರ್ನಾಟಕ ವೃತ್ತಿಪರ ಕಾಲೇಜುಗಳ ಪ್ರತಿಷ್ಠಾನ (KPCF), ಕರ್ನಾಟಕ ಅಲ್ಪಸಂಖ್ಯಾತರ ವೃತ್ತಿಪರ ಕಾಲೇಜುಗಳ ಸಂಘ (AMPCK) ಹಾಗೂ ಕರ್ನಾಟಕ ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತ ಕಾಲೇಜುಗಳ ಸಂಘದ (KRLMPCA) ಅಡಿಯಲ್ಲಿ ಬರುವ ಎಲ್ಲಾ ಕಾಲೇಜುಗಳು ಹಾಗೂ ರಾಜ್ಯದ ಡೀಮ್ಡ್ ವಿಶ್ವವಿದ್ಯಾಲಯ ಮತ್ತು ಖಾಸಗಿ ವಿಶ್ವವಿದ್ಯಾಲಯದಡಿ ಬರುವ ವೈದ್ಯಕೀಯ ಕಾಲೇಜುಗಳಲ್ಲಿ ದರ ಹೆಚ್ಚಳವಾಗಿದೆ.
೨೦೧೯ ರಲ್ಲಿ ಹೆಚ್ಚಳವಾಗಿತ್ತು
ಖಾಸಗಿ ಕಾಲೇಜುಗಳಲ್ಲಿ ೨೦೧೯ರಲ್ಲಿ ಸರಕಾರಿ ಹಾಗೂ ಖಾಸಗಿ ಕಾಲೇಜಿನ ಕೋಟಾದ ಪ್ರವೇಶ ಶುಲ್ಕ ಶೇ. ೧೫ರಷ್ಟು ಹೆಚ್ಚಳವಾಗಿತ್ತು. ಸರಕಾರಿ ವೈದ್ಯ ಕಾಲೇಜುಗಳಲ್ಲಿನ ವೈದ್ಯ ಕೋರ್ಸ್ ಪ್ರವೇಶ ಶುಲ್ಕವನ್ನು ೨೦೧೯ರಲ್ಲಿ ೧೫ ಸಾವಿರ ರೂ.ಗಳಿಂದ ದಿಢೀರನೆ ೫೦ ಸಾವಿರ ರೂ.ಗಳಿಗೆ ಹೆಚ್ಚಿಸಲಾಗಿತ್ತು. ಆದರೆ ಆ ವರ್ಷ ಸರಕಾರಿ ಕಾಲೇಜುಗಳ ಪ್ರವೇಶ ಶುಲ್ಕವನ್ನು ಹೆಚ್ಚಿಸಿರಲಿಲ್ಲ.