For the best experience, open
https://m.samyuktakarnataka.in
on your mobile browser.

ಖ್ಯಾತ ವಿದ್ವಾಂಸ ಡಾ. ಸೈಯದ್ ಷಾ ಖುಸ್ರೋ ಹುಸೈನಿ ವಿಧಿವಶ

10:30 AM Nov 07, 2024 IST | Samyukta Karnataka
ಖ್ಯಾತ ವಿದ್ವಾಂಸ ಡಾ  ಸೈಯದ್ ಷಾ ಖುಸ್ರೋ ಹುಸೈನಿ ವಿಧಿವಶ

ಕಲಬುರಗಿ: ಕಲ್ಯಾಣ ಕರ್ನಾಟಕದ ಪ್ರಸಿದ್ಧ ಸೂಫಿ ಸಂತ ಹಝ್ರತ್ ಖ್ವಾಜಾ ಬಂದಾ ನವಾಝ್ (ರ.ಅ) ದರ್ಗಾದ ಪೀಠಾಧಿಪತಿ ಹಾಗೂ ಕೆ.ಬಿ.ಎನ್ ವಿಶ್ವ ವಿದ್ಯಾಲಯದ ಕುಲಪತಿ ವಿದ್ವಾಂಸರಾಗಿದ್ದ ಡಾ. ಸೈಯದ್ ಷಾ ಖುಸ್ರೋ ಹುಸೈನಿ ಸಾಹೇಬ್‌ (79) ಅವರು ನಿಧನರಾಗಿದ್ದಾರೆ.

ಗುಲಬರ್ಗಾ ವಿಶ್ವ ವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದ ರಾಜ್ಯೋತ್ಸವ ಪ್ರಶಸ್ತಿ ಭಾಜನರಾಗಿದ್ದ, ಇವರು ಚಿಸ್ತಿ ಮತ್ತು ಸೂಫಿ ಪರಂಪರೆಯ ಪ್ರಮುಖ ವ್ಯಕ್ತಿಯಾಗಿದ್ದರು. ಪ್ರಸಿದ್ಧ ಸೂಫಿ ಸಂತ ಹಝ್ರತ್ ಖ್ವಾಜಾ ಬಂದಾ ನವಾಝ್ (ರ.ಅ) ಅವರ 23 ನೇ ನೇರ ವಂಶಸ್ಥರಾಗಿದ್ದ ಡಾ. ಸೈಯದ್ ಷಾ ಖುಸ್ರೋ ಹುಸೈನಿ ಅವರು ತನ್ನ ಆಳವಾದ ಆಧ್ಯಾತ್ಮಿಕತೆಗೆ ಮಾತ್ರವಲ್ಲದೆ ಬೌದ್ಧಿಕ ಕೊಡುಗೆಗಳಿಗಾಗಿಯೂ ಹೆಸರುವಾಸಿಯಾಗಿದ್ದರು.

ಶೈಕ್ಷಣಿಕ ತಜ್ಞರು ಮತ್ತು ನ್ಯಾಯವಾದಿ ಆಗಿದ್ದ ಇವರು KBN ವಿಶ್ವವಿದ್ಯಾಲಯದ ಕುಲಪತಿಯಾಗಿ ಸೇವೆ ಸಲ್ಲಿಸಿದ್ದರು. ಆಧುನಿಕ ತಂತ್ರಜ್ಞಾನದೊಂದಿಗೆ ಸೂಫಿ ಪರಂಪರೆಯ ಸೇತುವೆ ಆಗಿ ನಿರಂತರವಾಗಿ ದೇಶದ ವಿವಿಧ ಭಾಗಗಳಲ್ಲಿ ಇಂದಿನ ಪೀಳಿಗೆಗಳಿಗೆ ಸೂಫಿ ಪರಂಪರೆಯನ್ನು ತಿಳಿಸುವ ಸಮ್ಮೇಳನಗಳು ಮತ್ತು ಕಾರ್ಯಕ್ರಮಗಳನ್ನು ನಡೆಸುತ್ತಿದ್ದರು.

ಅವರು ಆಧ್ಯಾತ್ಮಿಕತೆಯಿಂದ ಕೂಡಿದ್ದ ಜೀವನದ ಮೂಲಕ ತಮ್ಮ ಪೂರ್ವಜರ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿದ್ದರು. ಡಾ. ಸೈಯದ್ ಷಾ ಖುಸ್ರೋ ಹುಸೈನಿ ಅವರ ನಿಧನದಿಂದ ಅವರ ಅಪಾರ ಅನುಯಾಯಿ ಮತ್ತು ಸೂಫಿ ಸಮುದಾಯಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಇಬ್ಬರು ಗಂಡು ಮತ್ತು ಮೂವರು ಹೆಣ್ಣುಮಕ್ಕಳ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.

ಗುರುವಾರ ಸಂಜೆ 6 ಗಂಟೆಗೆ ಹಝ್ರತ್ ಖಾಜಾ ಬಂದಾ ನವಾಝ್ ದರ್ಗಾದ ಆವರಣದಲ್ಲಿ ವಿಶೇಷ ಪ್ರಾರ್ಥನೆದೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ.

Tags :