For the best experience, open
https://m.samyuktakarnataka.in
on your mobile browser.

ಗಂಡಸರಿಗೂ ಫ್ರೀ ಬಸ್ಸು : ಮುಂದಿದೆ ಭಾರೀ ಸರ್ಕಸ್ಸು

07:05 AM Nov 17, 2024 IST | Samyukta Karnataka
ಗಂಡಸರಿಗೂ ಫ್ರೀ ಬಸ್ಸು   ಮುಂದಿದೆ ಭಾರೀ ಸರ್ಕಸ್ಸು

ಮದ್ರಾಮಣ್ಣೋರ ಸರ್ಕಾರ ನಮ್ಮ ಮೇಲೆ ಕಣ್ಣು ತೆರೆಯುವ ಎಲ್ಲ ಲಕ್ಷಣಗಳು ಕಾಣುತ್ತಿವೆ ಎಂದು ಲೊಂಡೆನುಮನ ಗೆಳೆಯರ ಬಳಗದ ಸದಸ್ಯರು ಎಲ್ಲೆಂದರಲ್ಲಿ ಹೇಳಿಕೊಂಡು ಬರುತ್ತಿದ್ದಾರೆ. ಆ ಗೆಳೆಯರ ಬಳಗದ ಪೂಜಾರಿ ಕುಪ್ಪಣ್ಣನ ಮಗ ಕುಲ್ಡಕಿಟ್ಯಾ ಅಂತೂ ಹನುಮಂತದೇವರಿಗೆ ಅಭಿಷೇಕ ಮಾಡಿಸಿ ಊರತುಂಬ ಪಂಚಾಮೃತ ಹಂಚಿದ. ಯಾಕೆ ಎಂದು ಕೇಳಿದರೆ ಇನ್ನು ಮುಂದೆ ಗಣ್ಮಕ್ಕಳಿಗೂ ಬಸ್ಸು ಫ್ರೀ ಅಂತೆ ಎಂದು ಹೇಳಿದ. ಈ ಮಾತು ಊರು ಸೇರಿದಂತೆ ಆಜೂಬಾಜೂ ಹತ್ತೂರಿನ ಗಂಡಸರ ಕಿವಿಗೆ ಬಿದ್ದು ಅವರು ಹಿರಿಹಿರಿ ಹಿಗ್ಗಿದರು. ಕನ್ನಾಳ್ಮಲ್ಲನಂತೂ ಈ ವಿಷಯದ ವಿಶ್ಲೇಷಣೆ ಮಾಡತೊಡಗಿದ. ಇಷ್ಟು ದಿನಗಳ ಕಾಲ ಕೇವಲ ಹೆಣ್ಮಕ್ಕಳಿಗೆ ಫ್ರೀ ಬಸ್ಸು ಇದ್ದುದಕ್ಕೆ ಅವರು ನೋಡದ ಒಂದೂ ಊರು ಉಳಿದಿಲ್ಲ. ಒಂದೂ ದೇವಸ್ಥಾನ ಬಿಟ್ಟಿಲ್ಲ. ಹೆಣ್ಮಕ್ಕಳೆಲ್ಲ ಊರೂರು ತಿರುಗಾಡುತ್ತಿದ್ದರಿಂದ ನಾವು ಅದೆಷ್ಟು ದಿನಗಳ ಕಾಲ ಉಪವಾಸ ಬಿದ್ದಿದ್ದೇವೆ. ತಿಂಗಳಾನುಗಟ್ಟಲೇ ಅರೆಹೊಟ್ಟಿ ಊಟ ಮಾಡಿದ್ದೇವೆ. ಅಂತೂ ಶಿವ ನಮ್ಮ ಮೇಲೆ ಕಣ್ಣು ತೆರೆಯುವ ಹಾಗೆ ಕಾಣುತ್ತದೆ ಎಂದು ಆಕಾಶದತ್ತ ನೋಡಿ ಕೈ ಮುಗಿದ. ಎಲ್ಲೆಡೆ ಚರ್ಚೆಗಳು ಶುರುವಾದವು. ಹಳೆಸಾಲಿಯಲ್ಲಿ ಎಲ್ಲ ಗಂಡಸರು ಸಭೆ ಸೇರಿದರು. ಗಂಡಸರಿಗೆ ಫ್ರೀ ಬಸ್ಸಿನ ಆದೇಶ ಬಂದಕೂಡಲೇ ಮದ್ರಾಮಣ್ಣೋರು ಹಾಗೂ ಬಂಡೆಸಿವು ಅವರನ್ನು ಕರೆಯಿಸಿ ಸನ್ಮಾನ ಮಾಡೋಣ ಅಂದರು. ದಿನಾಲೂ ಮುಂಜಾನೆ ಫಸ್ಟ್ಬಸ್ಸು ಹತ್ತಿ ತಾಲೂಕಿಗೆ ಹೋಗುವುದು ಅಲ್ಲಿಂದ ಇನ್ನೊಂದು ಬಸ್ಸು ಹತ್ತಿ ಇನ್ನೊಂದು ಕಡೆ ಹೋಗುವುದು ಎಂದು ಪ್ಲಾನ್ ಮಾಡಿದರು. ಹೆಣ್ಮಕ್ಕಳಿಗೆ ಆದರೆ ಎರಡು ಸಾವಿರ ರೂ ಕೊಡುತ್ತಿದ್ದರು. ಅವರು ಬಸ್ಸಿನಲ್ಲಿ ಹೋಗಿ ಆ ಎರಡು ಸಾವಿರ ರೂ ದಿಂದ ಮಿರ್ಚಿ ಗಿರ್ಚಿ ತಿನ್ನುತ್ತಿದ್ದರು. ನಮಗೆ ಆ ಭಾಗ್ಯವಿಲ್ಲ ಎಂಬುದು ಸಭೆಯಲ್ಲಿ ಚರ್ಚೆಗೆ ಬಂತು. ಸಭೆಯ ನೇತೃತ್ವ ವಹಿಸಿದ್ದ ಲೊಂಡೆನುಮ…ಗೆಳೆಯರೇ ಚಿಂತೆ ಮಾಡಬೇಡಿ….ಹೆಣ್ಮಕ್ಕಳು ಬ್ಯಾಂಕಿನಲ್ಲಿ ಹಣ ಇಡುವ ಪೈಕಿ ಅಲ್ಲ. ಎರಡು ಸಾವಿರ ರೂ ಬಂದಕೂಡಲೇ ಅಲ್ಪ ಸ್ವಲ್ಪ ಕೊಡುಕೊಳ್ಳಿ ಮುಗಿಸಿ ಉಳಿದಿದ್ದನ್ನು ಸಾಸಿವೆ, ಅಥವಾ ಇನ್ಯಾವುದೋ ಡಬ್ಬದಲ್ಲಿ ಇಟ್ಟಿರುತ್ತಾರೆ. ಮೆಲ್ಲನೇ ಅದನ್ನು ಎಗರಿಸಿ ಜೇಬಿನಲ್ಲಿಟ್ಟುಕೊಳ್ಳಿ. ಇನ್ನು ಊಟ ಅಂತ ಬಂದರೆ ದೊಡ್ಡ ದೊಡ್ಡ ದೇವಸ್ಥಾನಗಳಲ್ಲಿ ಊಟದ ವ್ಯವಸ್ಥೆ ಇದ್ದೇ ಇರುತ್ತದೆ ಅಲ್ಲಿಗೆ ಹೋಗುವುದು ಊಟ ಮಾಡುವುದು, ರಾತ್ರಿ ಬಸ್ಸು ಹತ್ತುವುದು ಮನೆಗೆ ಬರುವುದು. ಒಂದೂ ಊರು ಬಿಡುವುದು ಬೇಡ. ಮನೆಯ ಹೆಂಗಸರು ಹೇಗೆ ನಮ್ಮ ಹೊಟ್ಟೆ ಉರಿಸಿದರೋ ನಾವೂ ಹಾಗೆಯೇ ಮಾಡೋಣ ಏನಂತೀರಿ ಎಂದು ಲೊಂಡೆನುಮ ಜೋರಾಗಿ ಕೇಳಿದ ಕೂಡಲೇ ನಾವ್ ರೆಡಿ…ಓಕೆ..ಓಕೆ ಎಂದು ಕೂಗಿದರು. ನಡೆದ ಎಲ್ಲ ವಿದ್ಯಮಾನಗಳನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿ ಬಗ್ಗೀಕಾನಿ ಲಚುಮ ಕರಿಭಾಗೀರತಿಗೆ ಕಳುಹಿಸಿದ. ಎಲ್ಲವನ್ನೂ ನೋಡಿದ ಆಕೆ…ಕೂಡಲೇ ಎಲ್ಲ ಹೆಣಕ್ಕಳು ಸೇರಿ ಫ್ರೀಬಸ್ಸಿನಲ್ಲಿ ಹೋಗಿ ಮದ್ರಾಮಣ್ಣರನ್ನು ಕಂಡು ನಮ್ಮ ಫ್ರೀ ಬಸ್ಸು ಮುಂದುವರಿಸಿ ಎಂದು ಮನವಿ ಕೊಡಬೇಕು ಹಾಗೂ ಈ ಗಂಡಸರಿಗೆ ಡಬಲ್ ಚಾರ್ಜ್ ಮಾಡಿ ಎಂದು ರಿಕ್ವೆಸ್ಟ್ ಮಾಡಲು ನಿರ್ಧರಿಸಿ ಮರುದಿನ ಎಲ್ಲ ಮಹಿಳೆಯರ ಸಭೆ ಕರೆದಳು.