ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

`ಗಗನ ಶಕ್ತಿ' ಸಾಮರ್ಥ್ಯ ಪ್ರದರ್ಶಿಸಿದ ವಾಯುಪಡೆ

03:30 AM Apr 13, 2024 IST | Samyukta Karnataka

ಭಾರತೀಯ ವಾಯುಪಡೆ ಈ ವರ್ಷದ ಫೆಬ್ರವರಿ ತಿಂಗಳಲ್ಲಿ ವಾಯು ಶಕ್ತಿ ಎಂಬ ಹೆಸರಿನ ಅಭ್ಯಾಸವನ್ನು ಪೂರ್ಣಗೊಳಿಸಿದ್ದು, ಅದರಲ್ಲಿ ವಿವಿಧ ಆಯುಧಗಳಿಂದ ದಾಳಿ ನಡೆಸುವ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿತು. ವಾಯುಪಡೆ ವರ್ಷದ ಕೊನೆಯ ವೇಳೆ ತರಂಗ ಶಕ್ತಿ ಎಂಬ ಅಭ್ಯಾಸವನ್ನು ಆಯೋಜಿಸಲಿದೆ. ಇವೆರಡರ ಮಧ್ಯೆ, ಈ ವರ್ಷದ ಎರಡನೇ ಅಭ್ಯಾಸವಾಗಿ, ಭಾರತೀಯ ವಾಯುಪಡೆ 'ಗಗನ ಶಕ್ತಿ' ಎಂಬ ಹೆಸರಿನ ಅಭ್ಯಾಸವನ್ನು ನಡೆಸುತ್ತಿದೆ.
ಗಗನ ಶಕ್ತಿ ಎಂಬುದು ಬೃಹತ್ ಪ್ರಮಾಣದ ಸಮರಾಭ್ಯಾಸವಾಗಿದ್ದು, ಎಪ್ರಿಲ್ ೧, ೨೦೨೪ರಂದು ಆರಂಭಗೊಂಡಿತು. ಇದೊಂದು ನಿರಂತರ ಅಭ್ಯಾಸವಾಗಿದ್ದು, ಸತತ ಹತ್ತು ದಿನಗಳ ಕಾಲ ಪ್ರತಿದಿನವೂ ೨೪ ಗಂಟೆ ನಿರಂತರವಾಗಿ ಅಭ್ಯಾಸ ನಡೆಯುತ್ತಿರುತ್ತದೆ. ವಾಯು ಶಕ್ತಿ ಅಭ್ಯಾಸದ ಸಂದರ್ಭದಲ್ಲಿ, ಭಾರತೀಯ ವಾಯುಪಡೆ ತಾನು ಪೂರ್ವಯೋಜಿತ ಪ್ರದೇಶದಲ್ಲಿರುವ ಗುರಿಗಳ ಮೇಲೆ, ಸರಿಯಾದ ಸಮಯದಲ್ಲಿ ಮತ್ತು ಸರಿಯಾದ ಸ್ಥಳದಲ್ಲಿ ಎಷ್ಟು ನಿಖರವಾಗಿ, ಎಷ್ಟು ಬಲವಾಗಿ ದಾಳಿ ನಡೆಸಬಲ್ಲೆ ಎನ್ನುವುದನ್ನು ಸಾಬೀತುಪಡಿಸಿದೆ.
ಗಗನ ಶಕ್ತಿ-೨೦೨೪ ಅಭ್ಯಾಸದಲ್ಲಿ, ಭಾರತೀಯ ವಾಯುಪಡೆ ಭಾರತದಾದ್ಯಂತ ದೊಡ್ಡ ಸಮರಾಭ್ಯಾಸವನ್ನು ನಡೆಸಿ, ಎರಡು ಸಮರ ರಂಗಗಳಿಂದ ಎದುರಾಗಬಲ್ಲ ಅಪಾಯವನ್ನು ಎದುರಿಸಲು ತನ್ನ ಸಿದ್ಧತೆಯನ್ನು ಪ್ರದರ್ಶಿಸಲಿದೆ.
ಹಿಂದಿನ ಗಗನ ಶಕ್ತಿ ಅಭ್ಯಾಸ ೨೦೧೮ರಲ್ಲಿ ನಡೆದಿದ್ದು, ಆಗ ಭಾರತೀಯ ವಾಯುಪಡೆ ಎರಡು ಬದಿಯಿಂದ ಯುದ್ಧ ಸಾಧ್ಯತೆಗಳನ್ನು ಎದುರಿಸುವ ಸಿದ್ಧತೆಯ ನಿಟ್ಟಿನಲ್ಲಿ ೧೧,೦೦೦ ಸಾರ್ಟೀ ಅಭ್ಯಾಸಗಳನ್ನು ನಡೆಸಿತ್ತು.
ಆ ಅಭ್ಯಾಸದ ಬಳಿಕ ಸಾಕಷ್ಟು ಮಹತ್ವದ ಅಭಿವೃದ್ಧಿಗಳಾಗಿವೆ. ಕಳೆದ ನಾಲ್ಕು ವರ್ಷಗಳಿಂದ ಚೀನಾದೊಡನೆ ನಡೆಯುತ್ತಿರುವ ಗಡಿ ಚಕಮಕಿಗಳ ಕಾರಣದಿಂದ, ಭಾರತೀಯ ವಾಯುಪಡೆ ಹೊಸ ಆಯುಧ ಉಪಕರಣಗಳನ್ನು ಪಡೆದುಕೊಂಡಿದೆ. ಆದ್ದರಿಂದ, ವಾಸ್ತವಿಕವಾಗಿ ಯುದ್ಧ ಸನ್ನಿವೇಶವನ್ನು ಹೋಲುವ ವಾತಾವರಣದಲ್ಲಿ ಅಭ್ಯಾಸ ನಡೆಸುವುದು ಇನ್ನಷ್ಟು ಪ್ರಯೋಜನಕಾರಿಯಾಗಲಿದೆ.
ಪ್ರಸ್ತುತ ಸೆಂಟರ್ ಫಾರ್ ಏರ್ ಪವರ್ ಸ್ಟಡೀಸ್‌ನ ಡೈರೆಕ್ಟರ್ ಜನರಲ್ ಆಗಿರುವ, ನಿವೃತ್ತ ಏರ್ ವೈಸ್ ಮಾರ್ಷಲ್ ಅನಿಲ್ ಗೋಲಾನಿ ಅವರು ಈ ಅಭ್ಯಾಸದ ಕುರಿತು ವಿವರಿಸುತ್ತಾ, ಗಗನ ಶಕ್ತಿ ಭಾರತದ ಎಲ್ಲ ವಾಯುನೆಲೆಗಳು ಮತ್ತು ಎಲ್ಲ ಉಪಕರಣಗಳನ್ನು ಬಳಕೆಗೆ ತರಲಿದೆ ಎಂದಿದ್ದಾರೆ. ಈ ಅಭ್ಯಾಸ, ವಾಯುಪಡೆಯ ಮುಖ್ಯ ಕೌಶಲಗಳಾದ ನಿಖರತೆ, ಹಲವು ಏರ್ ಕ್ರಾಫ್ಟ್ಗಳ ನಿರ್ವಹಣೆ, ವಿವಿಧ ಸನ್ನಿವೇಶಗಳಿಗೆ ಹೊಂದಿಕೊಳ್ಳುವಿಕೆ, ಕ್ಷಿಪ್ರವಾಗಿ ಪ್ರತಿಕ್ರಿಯಿಸುವಿಕೆ, ಮತ್ತು ಏಕಕಾಲದಲ್ಲಿ ಹಲವು ಕಾರ್ಯಗಳನ್ನು ನಿರ್ವಹಿಸುವುದು ಮತ್ತು ದೂರ ದೂರದ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸುವ ಸಾಮರ್ಥ್ಯಗಳನ್ನು ಪರೀಕ್ಷಿಸಲಿದೆ.
ಮೂರು ವಿಭಾಗಗಳ ಸಾಗಾಣಿಕಾ ಬೆಂಬಲ
ಭಾರತೀಯ ವಾಯುಪಡೆಯ ಸಿದ್ಧಾಂತದ ಪ್ರಮುಖ ವಿಚಾರವೆಂದರೆ, ಮಿಲಿಟರಿ ಸಂಪೂರ್ಣ ಒಂದೇ ತಂಡವಾಗಿ ಕಾರ್ಯಾಚರಿಸಬೇಕು. ಮಿಲಿಟರಿಯ ಪ್ರತಿಯೊಂದು ವಿಭಾಗದ ವಿಶಿಷ್ಟ ಸಾಮರ್ಥ್ಯಗಳನ್ನು ಉಳಿಸಿಕೊಳ್ಳುತ್ತಲೇ, ಗಾತ್ರದ ನಿರ್ವಹಣೆ, ಜಂಟಿ ತರಬೇತಿ ಮತ್ತು ಕಾರ್ಯಾಚರಣೆಗಳಿಗಾಗಿ ಜಂಟಿ ತಂಡಗಳನ್ನು ರೂಪಿಸಬೇಕು ಎಂದು ವಾಯುಪಡೆ ಸಲಹೆ ಮಾಡಿದೆ. ಮುಂಬರುವ ಗಗನ ಶಕ್ತಿ ಸಮರಾಭ್ಯಾಸ ಈ ಸಲಹೆಗಳನ್ನು ಕಾರ್ಯರೂಪಕ್ಕೆ ತರಲಿದ್ದು, ಭಾರತೀಯ ಸೇನೆ ಮತ್ತು ನೌಕಾಪಡೆಗಳನ್ನು ಒಳಗೊಂಡು, ಹೆಚ್ಚಿನ ಸಹಕಾರ, ಸಮನ್ವಯ ಮತ್ತು ಯುದ್ಧ ಸಿದ್ಧತೆಗಳನ್ನು ಪರೀಕ್ಷಿಸಲಿದೆ. ಆಧುನಿಕ ಜಗತ್ತಿನಲ್ಲಿ ಬಹು ಆಯಾಮಗಳಲ್ಲಿ ಕಾರ್ಯಾಚರಣೆ ನಡೆಸುವ ಅನಿವಾರ್ಯತೆ ಇರುವುದರಿಂದ, ಭೂ ಸೇನೆ, ನೌಕಾಪಡೆ ಅಥವಾ ವಾಯುಪಡೆಗಳು ಏಕಾಂಗಿಯಾಗಿ ಗೆಲುವು ಖಾತರಿಪಡಿಸಲು ಸಾಧ್ಯವಿಲ್ಲ. ದೇಶದ ಕಾರ್ಯತಂತ್ರದ ಉದ್ದೇಶಗಳನ್ನು ಸಾಧಿಸುವ ಸಲುವಾಗಿ, ಮೂರೂ ಪಡೆಗಳು ಪರಸ್ಪರ ಜೊತೆಯಾಗಿ ಕಾರ್ಯಾಚರಣೆ ನಡೆಸಬೇಕಾಗುತ್ತದೆ.
ಭಾರತೀಯ ಸೇನೆ ಈಗಾಗಲೇ ವಾಯುಪಡೆಯ ಸಿಬ್ಬಂದಿಗಳು ಮತ್ತು ಉಪಕರಣಗಳನ್ನು ಭಾರತೀಯ ರೈಲ್ವೆಯ ಮೂಲಕ ನಿಗದಿತ ತಾಣಗಳಿಗೆ ಕಳುಹಿಸಿ, ವಾಯುಪಡೆಗೆ ತನ್ನ ನೆರವು ಒದಗಿಸುತ್ತಿದೆ. ಅದರೊಡನೆ, ಭಾರತೀಯ ನೌಕಾಪಡೆಯೂ ಸಮರಾಭ್ಯಾಸದಲ್ಲಿ ಪಾಲ್ಗೊಳ್ಳುವ ನಿಟ್ಟಿನಲ್ಲಿ ತನ್ನ ನೌಕೆಗಳನ್ನು ಸಜ್ಜುಗೊಳಿಸುತ್ತಿದೆ. ಭಾರತೀಯ ಸೇನೆ ಈ ಅಭ್ಯಾಸಕ್ಕಾಗಿ ದೇಶಾದ್ಯಂತ ೧೦,೦೦೦ಕ್ಕೂ ಹೆಚ್ಚು ವಾಯುಪಡೆಯ ಸಿಬ್ಬಂದಿಗಳನ್ನು ಮತ್ತು ಅವರ ಆಯುಧ ಉಪಕರಣಗಳನ್ನು ಸಾಗಿಸಲು ನೆರವು ನೀಡುತ್ತಿದೆ. ಈ ಬೃಹತ್ ಸಾಗಾಣಿಕೆಯ ಮೂಲಕ, ಭಾರತೀಯ ವಾಯುಪಡೆ ರೈಲಿನ ಮೂಲಕ ತನ್ನ ಯೋಧರು ಮತ್ತು ಪೂರೈಕೆಗಳನ್ನು ಸಾಗಿಸುವ ಯೋಜನೆಯಾದ ಆಪರೇಶನಲ್ ರೈಲ್ ಮೊಬಿಲೈಸೇಶನ್ ಪ್ಲಾನ್ (ಒಆರ್‌ಎಂಪಿ) ನಿರೀಕ್ಷಿತ ರೀತಿಯಲ್ಲಿ ಕಾರ್ಯಾಚರಿಸುತ್ತದೆಯೇ ಎಂಬುದನ್ನು ಪರೀಕ್ಷೆಗೊಳಪಡಿಸಿದೆ.
ಇದೇ ಮೊದಲ ಬಾರಿಗೆ ಗಗನ ಶಕ್ತಿ ಸಮರಾಭ್ಯಾಸದಲ್ಲಿ ರಫೇಲ್ ಯುದ್ಧ ವಿಮಾನಗಳು, ಪ್ರಚಂಡ್ ಹೆಲಿಕಾಪ್ಟರ್‌ಗಳು, ಮತ್ತು ಎಸ್-೪೦೦ ವಾಯು ರಕ್ಷಣಾ ವ್ಯವಸ್ಥೆಗಳು ಭಾಗಿಯಾಗುವ ನಿರೀಕ್ಷೆಗಳಿವೆ. ಭಾರತೀಯ ವಾಯುಪಡೆ ತನ್ನ ಸುಖೋಯಿ ಯುದ್ಧ ವಿಮಾನಗಳಿಗೆ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ಷಿಪಣಿಗಳನ್ನು ಮತ್ತು ರಫೇಲ್ ಯುದ್ಧ ವಿಮಾನಗಳಿಗೆ ಮಿಟಿಯೋರ್ ದೀರ್ಘ ವ್ಯಾಪ್ತಿಯ ಗಾಳಿಯಿಂದ ಗಾಳಿಗೆ ದಾಳಿ ನಡೆಸುವ ಕ್ಷಿಪಣಿಗಳನ್ನು ಅಳವಡಿಸಿ, ತನ್ನ ಯುದ್ಧ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸಿದೆ.
ಇನ್ನು, ದೇಶಾದ್ಯಂತ ವ್ಯಾಪ್ತಿ ಹೊಂದಿರುವ ಗಗನ ಶಕ್ತಿ ೨೦೨೪ ಅಭ್ಯಾಸದಲ್ಲಿ, ಭಾರತೀಯ ವಾಯುಪಡೆಯ ಹಳೆಯದಾಗಿರುವ ಮಿಗ್-೨೧ ಯುದ್ಧ ವಿಮಾನಗಳು ಕೊನೆಯ ಬಾರಿಗೆ ಭಾಗವಹಿಸಲಿವೆ. ಈ ವ್ಯಾಪಕವಾದ ಸಮರಾಭ್ಯಾಸದಲ್ಲಿ, ಭಾರತೀಯ ವಾಯುಪಡೆ ತನ್ನ ದೂರ ದೂರದ ಪ್ರದೇಶಗಳಲ್ಲಿರುವ ನೆಲೆಗಳನ್ನು ಬಳಸಿಕೊಂಡು, ಅತ್ಯುನ್ನತ ಮಟ್ಟದ ಚಟುವಟಿಕೆಗಳನ್ನು ನಡೆಸುವ ಸಾಮರ್ಥ್ಯವನ್ನು ತೋರಲಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ವಿವಿಧ ಕಾರ್ಯಾಚರಣೆಗಳು-ತೀವ್ರ ಕ್ರಮಗಳು
ಈ ಸಮರಾಭ್ಯಾಸಕ್ಕಾಗಿ, ಸಂಪೂರ್ಣ ಭಾರತೀಯ ವಾಯುಪಡೆ ಮತ್ತು ಅದರ ವಾಯು ನೆಲೆಗಳು ಸಮಗ್ರವಾಗಿ ಕಾರ್ಯಾಚರಿಸಲಿವೆ. ಅಭ್ಯಾಸದಲ್ಲಿ ಶತ್ರು ವಿಮಾನಗಳನ್ನು ಎದುರಿಸುವುದು, ನಮ್ಮ ಆಗಸಗಳನ್ನು ರಕ್ಷಿಸುವುದು, ಎಲೆಕ್ಟ್ರಾನಿಕ್ ಸಮರ, ದೂರದಲ್ಲಿರುವ ಗುರಿಗಳ ಮೇಲೆ ದಾಳಿ ನಡೆಸುವುದು, ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ವೇಗವಾಗಿ ಪಡೆಗಳನ್ನು ರವಾನಿಸುವುದು ಸೇರಿವೆ. ವಿವಿಧ ತುರ್ತು ಪರಿಸ್ಥಿತಿಗಳನ್ನು ಎದುರಿಸುವುದನ್ನು ಅಭ್ಯಸಿಸುವ ನಿಟ್ಟಿನಲ್ಲಿ, ಗಗನ ಶಕ್ತಿಯಲ್ಲಿ ನಾಗರಿಕ ವಿಮಾನ ನಿಲ್ದಾಣಗಳನ್ನೂ ಬಳಸಿಕೊಳ್ಳಲಾಗುತ್ತದೆ. ಅದರೊಡನೆ, ದೇಶಾದ್ಯಂತ ರಾಷ್ಟ್ರೀಯ ಹೆದ್ದಾರಿಗಳ ನಿರ್ದಿಷ್ಟ ಭಾಗಗಳಲ್ಲಿ ಯುದ್ಧ ವಿಮಾನಗಳು ಲ್ಯಾಂಡಿಂಗ್ ನಡೆಸಲಿವೆ.
ಏಕಾಂಗಿಯಾಗಿ ಅಥವಾ ಮಿಲಿಟರಿಯ ಇತರ ವಿಭಾಗಗಳನ್ನು ಬಳಸಿಕೊಂಡು ಕಾರ್ಯಾಚರಿಸುವುದು ಭಾರತದ ಮಿಲಿಟರಿ ಸಿದ್ಧಾಂತ ವಿಧಿಸುವ ನಿಯಮಾವಳಿಗಳು ಮತ್ತು ಕಾರ್ಯತಂತ್ರಗಳನ್ನು ಅನುಸರಿಸಿರುತ್ತದೆ. ಆದರೆ, ವಾಸ್ತವವಾಗಿ ಯಶಸ್ಸಿಗೆ ದಾರಿ ಮಾಡಿಕೊಡುವುದು ಸೇನಾ ತರಬೇತಿ ಮತ್ತು ಕಾರ್ಯಾಚರಣೆಗಳಲ್ಲಿ ಆ ತರಬೇತಿಯನ್ನು ಕಾರ್ಯರೂಪಕ್ಕೆ ತರುವುದು ಎಂದು ನಿವೃತ್ತ ಏರ್ ವೈಸ್ ಮಾರ್ಷಲ್ ಅನಿಲ್ ಗೋಲಾನಿ ಅಭಿಪ್ರಾಯ ಪಡುತ್ತಾರೆ. ಈ ಕಾರಣದಿಂದಲೇ, ಮಿಲಿಟರಿ ಸಿಬ್ಬಂದಿಗಳು ಸಂಭಾವ್ಯ ಯುದ್ಧ ಸನ್ನಿವೇಶವನ್ನು ಹೋಲುವ ಸ್ಥಿತಿಗಳಲ್ಲಿ ಅಭ್ಯಾಸ ನಡೆಸಬೇಕಾಗುತ್ತದೆ.
ಗಗನ ಶಕ್ತಿ - ೨೦೨೪ ಅಭ್ಯಾಸದಲ್ಲಿ, ಭಾರತೀಯ ವಾಯುಪಡೆ ಕಾಶ್ಮೀರದಲ್ಲಿನ ಎಮರ್ಜೆನ್ಸಿ ಲ್ಯಾಂಡಿಂಗ್ ಫೆಸಿಲಿಟಿಯಿಂದ ಕಾರ್ಯಾಚರಣೆ ನಡೆಸಿತು. ವಾಯುಪಡೆ ಚಿನೂಕ್, ಎಂಐ - ೧೭ ವಿ೫, ಮತ್ತು ಎಎಲ್‌ಎಚ್ ಎಂಕೆ-೩ ಹೆಲಿಕಾಪ್ಟರ್‌ಗಳನ್ನು ಬಳಸಿಕೊಂಡು, ದೊಡ್ಡ ಪ್ರಮಾಣದ ಪಡೆಗಳನ್ನು ರಾತ್ರಿಯ ವೇಳೆ ಯಶಸ್ವಿಯಾಗಿ ಏರ್ ಲಿಫ್ಟ್ ನಡೆಸಿತು ಎಂದು ವಾಯುಪಡೆಯ ಮೂಲಗಳು ತಿಳಿಸಿವೆ. ಅದರಲ್ಲೂ ಭಾರತೀಯ ವಾಯು ಸೇನೆಯ ಬಳಿ ಯುದ್ಧ ವಿಮಾನಗಳು, ಆಕಾಶದಲ್ಲೇ ಇಂಧನ ಮರುಪೂರಣ ನಡೆಸುವ ವಿಮಾನಗಳು, ಮತ್ತು ಏರ್‌ಬಾರ್ನ್ ವಾರ್ನಿಂಗ್ ಆ್ಯಂಡ್ ಕಂಟ್ರೋಲ್ ಸಿಸ್ಟಮ್‌ಗಳು (ಎಡಬ್ಲ್ಯುಎಸಿಎಸ್) ನಿಗದಿತ ಪ್ರಮಾಣದಲ್ಲಿ ಇರುವುದರಿಂದ, ಈ ಸಂಪನ್ಮೂಲಗಳನ್ನು ವಾಯುಪಡೆ ಅತ್ಯಂತ ಜಾಗರೂಕವಾಗಿ ಬಳಸಬೇಕಾಗುತ್ತದೆ.
ಅತಿದೊಡ್ಡ ಜಾಗತಿಕ ಮಿಲಿಟರಿ ಅಭ್ಯಾಸ
ವಾಯುಪಡೆಯ ಮುಂಬರುವ ಸಮರಾಭ್ಯಾಸವಾದ ತರಂಗ ಶಕ್ತಿ ೨೦೨೪ರ ಆಗಸ್ಟ್ ತಿಂಗಳಲ್ಲಿ ನಡೆಯಲಿದ್ದು, ಅದು ಭಾರತದ ಅತಿದೊಡ್ಡ ಅಂತಾರಾಷ್ಟ್ರೀಯ ಮಿಲಿಟರಿ ಅಭ್ಯಾಸವಾಗಿರಲಿದೆ. ತರಂಗ ಶಕ್ತಿಯಲ್ಲಿ ಆಸ್ಟ್ರೇಲಿಯಾ, ಯುನೈಟೆಡ್ ಕಿಂಗ್‌ಡಮ್, ಜಪಾನ್, ಫ್ರಾನ್ಸ್, ಅಮೆರಿಕಾ, ಮತ್ತು ಜರ್ಮನ್ ವಾಯುಪಡೆಗಳ ಯುದ್ಧ ವಿಮಾನಗಳು ಆಗಮಿಸಿ, ಸಮರಾಭ್ಯಾಸ ನಡೆಸಲಿವೆ. ಜರ್ಮನ್ ವಾಯುಪಡೆಯ ಮುಖ್ಯಸ್ಥರು ಸ್ವತಃ ಭಾರತಕ್ಕೆ ಯುದ್ಧ ವಿಮಾನವನ್ನು ಚಲಾಯಿಸಲು ಸಿದ್ಧರಾಗಿದ್ದಾರೆ. ಈ ಸಮರಾಭ್ಯಾಸದಲ್ಲಿ ಅಂದಾಜು ೧೨ ರಾಷ್ಟ್ರಗಳು ಪಾಲ್ಗೊಳ್ಳುವ ನಿರೀಕ್ಷೆಗಳಿವೆ. ತರಂಗ ಶಕ್ತಿ ಭಾರತದ ಮಿಲಿಟರಿಯಲ್ಲಿ ತಂಡ ಸ್ಫೂರ್ತಿಯನ್ನು ಉತ್ತೇಜಿಸಿ, ವಿವಿಧ ವಿಭಾಗಗಳು ಉತ್ತಮ ರೀತಿಯಲ್ಲಿ ಜೊತೆಯಾಗಿ ಕಾರ್ಯಾಚರಣೆ ನಡೆಸಬಹುದು ಎನ್ನುವುದನ್ನು ಸಾಬೀತುಪಡಿಸಲಿದೆ. ಅದರೊಡನೆ, ತರಂಗ ಶಕ್ತಿ ಜಾಗತಿಕ ಹಂತದಲ್ಲೂ ಭಾರತ ಪ್ರಬಲ ಶಕ್ತಿ ಎನ್ನುವುದನ್ನು ಸಾಬೀತುಪಡಿಸಲಿದೆ.
ಭಾರತ ಜಗತ್ತಿನ ನಾಲ್ಕನೇ ಅತಿದೊಡ್ಡ ವಾಯು ಸೇನೆಯನ್ನು ಹೊಂದಿದ್ದು, ಈ ಮಿಲಿಟರಿ ಅಭ್ಯಾಸ ವಾಯುಪಡೆಯ ಶಕ್ತಿ ಸಾಮರ್ಥ್ಯಗಳ ಅನಾವರಣ ನಡೆಸಲಿದೆ. ಕಳೆದ ವರ್ಷ, ಭಾರತೀಯ ವಾಯುಪಡೆ ವಿದೇಶಗಳಲ್ಲಿ ನಡೆದ ಸಮರಾಭ್ಯಾಸಗಳಲ್ಲಿ ಭಾಗವಹಿಸಿದ್ದು, ಮಿತ್ರ ರಾಷ್ಟ್ರಗಳ ವಾಯುಪಡೆಗಳ ಅಭ್ಯಾಸಕ್ಕೂ ಆತಿಥ್ಯ ವಹಿಸಿತ್ತು. ಈ ಬೆಳವಣಿಗೆಗಳು ಭಾರತೀಯ ವಾಯುಪಡೆ ಒಂದು ಬೆಳೆಯುತ್ತಿರುವ ಶಕ್ತಿ ಮತ್ತು ಕೌಶಲ ಭರಿತ ಪಡೆ ಎನ್ನುವುದಕ್ಕೆ ಹಿಡಿದ ಕೈಗನ್ನಡಿಯಾಗಿದ್ದು, ಭಾರತ ಒಂದು ಪ್ರಬಲ ಪ್ರಾದೇಶಿಕ ಶಕ್ತಿಯಾಗಿ ಹೊರಹೊಮ್ಮಿದೆ.
ಇಂತಹ ಜಂಟಿ ಸಮರಾಭ್ಯಾಸಗಳು ವಿವಿಧ ದೇಶಗಳ ವಾಯು ಸೇನೆಗಳು ಭಾರತಕ್ಕೆ ಆಗಮಿಸಿ, ಪರಸ್ಪರ ಜ್ಞಾನ, ಯಶಸ್ವಿ ಕಾರ್ಯತಂತ್ರಗಳನ್ನು ಚರ್ಚಿಸಿ, ಜೊತೆಯಾಗಿ ಸಮರಾಭ್ಯಾಸ ನಡೆಸುತ್ತಾ, ಗಟ್ಟಿಯಾದ ಬಾಂಧವ್ಯಗಳನ್ನು ಸ್ಥಾಪಿಸಲು ನೆರವಾಗುತ್ತವೆ. ಜಂಟಿ ಕಾರ್ಯಾಚರಣೆಗಳ ಸಂದರ್ಭದಲ್ಲಿ ಸುಗಮವಾಗಿ ಕಾರ್ಯ ನಿರ್ವಹಿಸಲು ಇವು ಪೂರಕವಾಗಿವೆ. ಮಿಲಿಟರಿ ಅಭ್ಯಾಸಗಳು ಮಿಲಿಟರಿ ರಾಜತಾಂತ್ರಿಕತೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸಿ, ಪ್ರಾದೇಶಿಕ ಸ್ಥಿರತೆ ಮತ್ತು ಶಾಂತಿ ಕಾಪಾಡಲು ನೆರವಾಗುತ್ತವೆ. ಭಾರತದ ಭದ್ರತೆಗೆ ಕಟಿಬದ್ಧವಾಗಿರುವ ವಾಯುಪಡೆ `ನಭಸ್ಪಶಂ ದೀಪ್ತಂ' ಎಂಬ ತನ್ನ ಧ್ಯೇಯವಾಕ್ಯಕ್ಕೆ ಪೂರಕವಾಗಿ, ರಾಷ್ಟ್ರ ರಕ್ಷಣೆಗೆ ಎಲ್ಲ ಪ್ರಯತ್ನಗಳನ್ನೂ ನಡೆಸುತ್ತಿದೆ.

Next Article