For the best experience, open
https://m.samyuktakarnataka.in
on your mobile browser.

ಗಣೇಶೋತ್ಸವ ಹತ್ತಿಕ್ಕಲು ವ್ಯವಸ್ಥಿತ ಸಂಚು

04:33 PM Sep 29, 2024 IST | Samyukta Karnataka
ಗಣೇಶೋತ್ಸವ ಹತ್ತಿಕ್ಕಲು ವ್ಯವಸ್ಥಿತ ಸಂಚು

ದಾವಣಗೆರೆ: ಗಣೇಶೋತ್ಸವವನ್ನು ಹತ್ತಿಕ್ಕಲು ರಾಜ್ಯದಲ್ಲಿ ವ್ಯವಸ್ಥಿತವಾಗಿ ಪಿತೂರಿ ನಡೆಯುತ್ತಿದ್ದು, ಇದಕ್ಕೆ ಸಿಎಂ ಸಿದ್ದರಾಮಯ್ಯ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಣೇಶೋತ್ಸವದಲ್ಲಿ ಸಣ್ಣಪುಟ್ಟ ಗಲಾಟೆಗಳಾಗುತ್ತಿದ್ದದು ಸರಿಯಷ್ಟೇ, ಆದರೆ, ಈ ಬಾರಿಯ ಗಣೇಶೋತ್ಸವದಲ್ಲಿ ನಾಗಮಂಗಲದಿಂದ ಹಿಡಿದು ಕರಾವಳಿ ಪ್ರದೇಶ, ಬಯಲುಸೀಮೆಯವರೆಗೂ ಕಲ್ಲುತೂರಾಟ, ಗಲಭೆಗಳಾಗಿವೆ. ಇವು ವ್ಯವಸ್ಥಿತವಾಗಿ ನಡೆದಿರುವ ಗಲಭೆಗಳು ಎಂಬುದು ಮೇಲ್ನೋಟಕ್ಕೆ ಬಹಿರಂಗವಾಗುತ್ತಿದ್ದು, ಇದಕ್ಕೆ ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರ ತುಷ್ಠಿಕರಣ ಮಾಡುತ್ತಿರುವುದೇ ಕಾರಣ. ರಾಜ್ಯದಲ್ಲಿರುವುದು ಇದೊಂದು ತಾಲಿಬಾನಿ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.
ನಾಗಮಂಗಲದಲ್ಲಿ ಗಣೇಶೋತ್ಸವದಲ್ಲಿ ಮುಸ್ಲಿಮರು ಕಲ್ಲುತೂರಾಟ, ಪೆಟ್ರೋಲ್‌ಬಾಂಬ್ ಸ್ಫೋಟ ಮಾಡಿ ಹಿಂದೂಗಳ ಅಂಗಡಿಮುಂಗಟ್ಟುಗಳನ್ನು ಧ್ವಂಸ ಮಾಡಿದ್ದಾರೆ. ಹೀಗಿದ್ದರೂ ಕೂಡ ಎ೧ನಿಂದ ಎ೩೨ವರೆಗೂ ಹಿಂದೂಗಳ ಮೇಲೆಯೇ ದೂರು ದಾಖಲಿಸಿ ಆರೋಪಿಗಳನ್ನಾಗಿ ಮಾಡಲಾಗಿದೆ. ಅಲ್ಲದೇ ದಾವಣಗೆರೆಯಲ್ಲಿ ಗಣೇಶೋತ್ಸವದಲ್ಲೂ ಐದು ಹಿಂದೂಗಳ ಮೇಲೆ ಮತ್ತು ಇಬ್ಬರು ಮುಸ್ಲಿಂರ ಮೇಲೆ ಎಫ್‌ಐಆರ್ ಹಾಕಲಾಗಿದೆ. ಹಿಂದೂಗಳ ಮೇಲೆ ೩೦೭ ಕೊಲೆಯತ್ನದ ಕೇಸ್ ದಾಖಲಿಸಿರುವ ಪೊಲೀಸರು ಕಾಂಗ್ರೆಸ್ ಸರ್ಕಾರದ ಕೈಗೊಂಬೆಗಳಂತೆ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಈದ್ ಮಿಲಾದ್ ವೇಳೆ ರಸ್ತೆಯನ್ನು ಬ್ಲಾಕ್ ಮಾಡಿ ಮುಸ್ಲಿಮರು ನಮಾಜ್ ಮಾಡುವಾಗ ಮತ್ತು ಸುಪ್ರೀಂ ಕೋರ್ಟ್ ಆದೇಶಕ್ಕೆ ಕಿಂಚಿತ್ತೂ ಗೌರವ ಕೊಡದೇ ಧ್ವನಿವರ್ಧಕ ಬಳಸಿ ಆಜಾನ್ ಕೂಗಿಸುವಾಗ ಪೊಲೀಸ್ ಇಲಾಖೆ ಪ್ರಶ್ನೆ ಮಾಡುವುದಿಲ್ಲ. ಆದರೆ, ಗಣೇಶೋತ್ಸವ ಆಚರಿಸಲು ನೂರಾರು ಕಡೆ ಪರವಾನಿಗೆ ಪಡೆಯಲು ನಿಯಮ ವಿಧಿಸುತ್ತಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
ಹಿಂದೂ ಕಾರ್ಯಕರ್ತ ಸತೀಶ್ ಪೂಜಾರಿಯವರ ವಂಶವೃಕ್ಷವನ್ನು ಪೊಲೀಸ್ ಇಲಾಖೆ ಯಾಕೆ ಕೇಳುತ್ತಿದೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

Tags :