For the best experience, open
https://m.samyuktakarnataka.in
on your mobile browser.

ಗದಗ ಕೊಲೆ ಪ್ರಕರಣ: ಕೊಲೆಗೂ ಮುನ್ನ ಮಾದಕ ದ್ರವ್ಯ ಸೇವಿಸಿದ್ದ ಕೊಲೆ ಆರೋಪಿಗಳು

04:59 PM Apr 23, 2024 IST | Samyukta Karnataka
ಗದಗ ಕೊಲೆ ಪ್ರಕರಣ  ಕೊಲೆಗೂ ಮುನ್ನ ಮಾದಕ ದ್ರವ್ಯ ಸೇವಿಸಿದ್ದ ಕೊಲೆ ಆರೋಪಿಗಳು

ಗದಗ: ರಾಜ್ಯದ ಜನತೆಯನ್ನು ಬೆಚ್ಚಿ ಬೀಳಿಸಿದ್ದ ನಗರಸಭೆ ಉಪಾಧ್ಯಕ್ಷೆ ಪುತ್ರ ಹಾಗೂ ಇತರ ಮೂವರನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಆರೋಪಿಗಳು, ಕೊಲೆಗೂ ಮುನ್ನ ಮಾದಕ ದ್ರವ್ಯ ಸೇವನೆ ಮಾಡಿದ್ದರೆಂದು ತಿಳಿದು ಬಂದಿದೆ.
ನಗರದ ಹೊರವಲಯದಲ್ಲಿನ ವಸತಿ ಗೃಹದಲ್ಲಿ ರಾತ್ರಿ ೧೦ಕ್ಕೆ ಚರಸ್ ಮಾದಕ ದ್ರವ್ಯ ಸೇವಿಸಿದ ಆರೋಪಿಗಳು ರಾತ್ರಿ ೧೨ರವರೆಗೆ ಮುಳಗುಂದ ನಾಕಾ, ಕಿತ್ತೂರ ಚನ್ನಮ್ಮ ವರ್ತುಳ, ಡಂಬಳ ನಾಕಾದಲ್ಲಿ ಕಾಲಕ್ಷೇಪ ಮಾಡಿದ್ದಾರೆ. ಗದಗ ಮೂಲದ ಇಬ್ಬರು ವ್ಯಕ್ತಿಗಳಲ್ಲೊರ್ವ ಮಿರಜ್‌ದ ಫೈರೋಜ್ ಗ್ಯಾಂಗ್‌ನ ಸದಸ್ಯರನ್ನು ಒಬ್ಬರನ್ನಾಗಿ ಪ್ರಕಾಶ ಬಾಕಳೆ ಮನೆಯ ಪಕ್ಕದಲ್ಲಿನ ಚಿಕ್ಕ ರಸ್ತೆ ಮೂಲಕ ಕರೆದುಕೊಂಡು ಹೋಗಿ ಮನೆ ತೋರಿಸಿದ್ದಾನೆ. ರಾತ್ರಿ ೧೨ರ ಸುಮಾರಿಗೆ ಮನೆಯ ಹಿಂದಿನ ಪ್ರದೇಶದಿಂದ ಮನೆಯ ಮೇಲ್ಭಾಗ ಪ್ರವೇಶಿಸಿ ಮಹಡಿ ಮೇಲೆ ಅಡಗಿ ಕುಳಿತಿದ್ದರು. ಪ್ರಕಾಶ ಬಾಕಳೆ ಮೊದಲ ಪತ್ನಿಯ ಸಹೋದರ ಪರಶುರಾಮಸಾ ಹಾದಿಮನಿ, ಪತ್ನಿ ಲಕ್ಷ್ಮೀಯ ಜನ್ಮದಿನಾಚರಣೆ ಅಂಗವಾಗಿ ಮನೆಯ ಸದಸ್ಯರು ರಾತ್ರಿ ೧೨:೦೫ರವರೆಗೆ ಎಚ್ಚರವಾಗಿದ್ದರಿಂದ ಆರೋಪಿಗಳು ರಾತ್ರಿ ಎರಡು ಗಂಟೆಯವರೆಗೆ ಮನೆಯೊಳಗೆ ಪ್ರವೇಶಿಸಿರಲಿಲ್ಲವೆಂದು ತಿಳಿದು ಬಂದಿದೆ.

ಏನಾಗಿತ್ತು?: ದಾಸರಗಲ್ಲಿಯಲ್ಲಿ ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ ಪುತ್ರ ಕಾರ್ತಿಕ ಬಾಕಳೆ, ಕೊಪ್ಪಳ ಜಿಲ್ಲೆಯ ಪರಶುರಾಮಸಾ ಹಾದಿಮನಿ, ಪತ್ನಿ ಲಕ್ಷ್ಮೀ, ಪುತ್ರಿ ಆಕಾಂಕ್ಷಾಳನ್ನು ದಿ.೧೮ರಂದು ರಾತ್ರಿ ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿ ಕೊಲೆಗಾರರು ಪರಾರಿಯಾಗಿದ್ದರು. ಈ ಘಟನೆಯಿಂದ ಜಿಲ್ಲೆಯ ಜನತೆ ತೀವ್ರವಾಗಿ ಬೆಚ್ಚಿ ಬಿದ್ದಿದ್ದರು.
ನಗರಸಭೆಯ ಮಾಜಿ ಉಪಾಧ್ಯಕ್ಷ, ರಿಯಲ್ ಎಸ್ಟೇಟ್ ಉದ್ದಿಮೆದಾರ ಪ್ರಕಾಶ ಬಾಕಳೆಗೆ ಇಬ್ಬರು ಪತ್ನಿಯರು. ಮೊದಲ ಪತ್ನಿ (ಮರಣ ಹೊಂದಿದ್ದು)ಗೆ ಇಬ್ಬರು ಪುತ್ರರು, ಓರ್ವ ಪುತ್ರಿಯಿದ್ದಾರೆ. ಹಿರಿಯ ಮಗ ವಿನಾಯಕ, ಎರಡನೇ ಮಗ ದತ್ತಾತ್ರೇಯ. ಪುತ್ರಿಯನ್ನು ವಿವಾಹ ಮಾಡಿಕೊಡಲಾಗಿದೆ. ಹಿರಿಯ ಪುತ್ರ ವಿನಾಯಕ ಎಲ್ಲರೊಂದಿಗೆ ಮನೆಯಲ್ಲಿದ್ದುಕೊಂಡೆ ಕುಟುಂಬದ ಸದಸ್ಯರ ಕೊಲೆಗೆ ಸ್ಕೆಚ್ ಹಾಕಿದ್ದಾನೆ.