ಜಾತಿ ಗಣತಿ ಬಿಡುಗಡೆಯಾದ್ರೆ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ಚ್ಯುತಿ
ಗದಗ: ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವತ್ತು ಜಾತಿ ಜನಗಣತಿ ಬಿಡುಗಡೆ ಮಾಡುತ್ತಾರೋ ಅಂದೇ ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳಲಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಭವಿಷ್ಯ ನುಡಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಳೆದ ಒಂಬತ್ತು ವರ್ಷದಿಂದ ಜಾತಿಗಣತಿ ಹೆಸರಿನಲ್ಲಿ ಕಾಂಗ್ರೆಸ್ಸಿಗರು ರಾಜಕೀಯ ಮಾಡುತ್ತಿದ್ದಾರೆ. ವಿಧಾನಪರಿಷತ್ತನಲ್ಲಿ ನಾನೇ ಹತ್ತು ಬಾರಿ ಕೇಳಿದ್ದೇನೆ. ಯಾವಾಗ ಜಾತಿ ಜನಗಣತಿ ರಿಲೀಸ್ ಮಾಡ್ತೀರಿ? ನಾಳೆ, ನಾಡಿದ್ದು, ಆಚೇನಾಡಿದ್ದು. ರೆಡಿ ಆಗ್ತಿದೆ ಕೊಡ್ತಾರೆ ಅಂದ್ರು. ನಾನು ಇಳಿಯೋದ್ರೊಳಗೆ ಕೊಟ್ಟೆ ಇಳಿತಿ ಅಂದಿದ್ರು. ಇವತ್ತಿನವರೆಗೂ ಆಗಿಲ್ಲವೆಂದು ಟೀಕಿಸಿದರು.
ಈ ಹಿಂದೆಯೇ ಜಾತಿ ಗಣತಿ ಬಗ್ಗೆ ಕಾಂಗ್ರೆಸ್ಸಿಗರು ಜಾತಿ ಜಾತಿ ನಡುವೆ ಬೆಂಕಿ ಹಚ್ಚುತ್ತೀರಿ ಎಂದು ಹೇಳಿದ್ದೆ. ಅದು ಈಗ ನಿಜವಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ತಾವು ಹಿಂದುಳಿದ, ದಲಿತರ ಪರ ಅಂತ ಹೇಳಿ ರಾಜಕೀಯ ಮಾಡುತ್ತಿದ್ದಾರೆ. ಅವರಿಗೆ ತಾಕತ್ತಿದ್ರೆ ಇವತ್ತು ಬಿಡುಗಡೆ ಮಾಡಿ ಬದುಕಲಿ ನೋಡೋಣವೆಂದು ವ್ಯಂಗ್ಯವಾಡಿದರು.
ಜಾತಿ ಗಣತಿಯನ್ನು ಒಂದು ಕಡೆ ಲಿಂಗಾಯತರು, ಮತ್ತೊಂದು ಕಡೆ ಒಕ್ಕಲಿಗರು ವಿರೋಧಿಸುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಜಾತಿ ಗಣತಿ ಹೆಸರಿನಲ್ಲಿ ಇಡೀ ಸಮಾಜ ಛಿದ್ರ ಮಾಡಿ ಬಿಟ್ರಲ್ಲಾ ಅಂತ ಕಿಡಿಕಾರಿದರು.
ಇಡೀ ವಿಶ್ವ ನರೇಂದ್ರ ಮೋದಿ ಕಾಲಿಗೆ ಬೀಳುತ್ತಿದೆ. ಪ್ರೀತಿಯಿಂದ ಬಾಚಿ ತಬ್ಬಿಕೊಳ್ತಾಯಿದೆ. ಅಂಥ ಸುಸ್ಕೃಂತ ವ್ಯಕ್ತಿ ವಿಶ್ವ ನಾಯಕನಿಗೆ ಗಿರಾಕಿ ಅಂತಾರಲ್ಲ ಎಂದು ಈಶ್ವರಪ್ಪ ಕೆಂಡಕಾರಿದರು.