For the best experience, open
https://m.samyuktakarnataka.in
on your mobile browser.

ಭ್ರಷ್ಟಾಚಾರದ ಪ್ರಕರಣಗಳಿದ್ದರೆ ಅದನ್ನು ಸುಮ್ಮನೆ ನೋಡುತ್ತಾ ಕುಳಿತುಕೊಳ್ಳುವುದಿಲ್ಲ

04:31 PM Dec 17, 2023 IST | Samyukta Karnataka
ಭ್ರಷ್ಟಾಚಾರದ ಪ್ರಕರಣಗಳಿದ್ದರೆ ಅದನ್ನು ಸುಮ್ಮನೆ ನೋಡುತ್ತಾ ಕುಳಿತುಕೊಳ್ಳುವುದಿಲ್ಲ

ಗದಗ: ಭ್ರಷ್ಟಾಚಾರದ ಪ್ರಕರಣಗಳಿದ್ದರೆ ಅದನ್ನು ಸುಮ್ಮನೆ ನೋಡುತ್ತಾ ಕುಳಿತುಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಅವರು ಇಂದು ಬಾಲಕಿಯರ ಬಾಲಮಂದಿರ ಕಟ್ಟಡದ ಉದ್ಘಾಟನೆ ನೆರವೇರಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು ರಾಜ್ಯದಲ್ಲಿ ಯಾವುದೇ ಭ್ರಷ್ಟಾಚಾರದ ಪ್ರಕರಣಗಳಿದ್ದರೆ ಅದನ್ನು ಸುಮ್ಮನೆ ನೋಡುತ್ತಾ ಕುಳಿತುಕೊಳ್ಳುವುದಿಲ್ಲ. ತನಿಖೆ ಮಾಡಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
ಕ.ರಾ.ರ.ಸಾ ನಿಗಮದಲ್ಲಿ ಸಾಕಷ್ಟು ಬಸ್ ಕೆಟ್ಟು ನಿಂತಿದ್ದು ಚಾಲಕರಿಗೆ ಡ್ಯೂಟಿ ಸಿಗುತ್ತಿಲ್ಲ. ಡ್ಯೂಟಿ ಹಾಕಲು ಅಧಿಕಾರಿಗಳು ಹಣ ಕೇಳುತ್ತಾರೆ ಎಂದು ಕೆಲ ಚಾಲಕರಿಂದ ದೂರು ಕೇಳಿಬರುತ್ತಿದ್ದು, ಡ್ಯೂಟಿ ಹಾಕಲು ಲಂಚ ಕೇಳಿದ ಪ್ರಕರಣವನ್ನೂ ತನಿಖೆ ಮಾಡಿಸಲಾಗುವುದು. ಈಗಾಗಲೇ ನಾವು ಹಿಂದಿನ ಸರ್ಕಾರದ 40% ಭ್ರಷ್ಟಾಚಾರ ಪ್ರಕರಣವನ್ನು ತನಿಖೆ ಮಾಡಿಸುತ್ತಿದ್ದೇವೆ. ಆರೋಪಗಳು ಸಾಬೀತಾದ ಮೇಲೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
ಕಾಂತರಾಜು ವರದಿ ಇನ್ನೂ ಸಲ್ಲಿಸಿಲ್ಲವಾದ್ದರಿಂದ ಸ್ವೀಕಾರ ಮಾಡುವುದು ಹೇಗೆ? ವರದಿ ಕೊಟ್ಟ ಮೇಲೆ ಸ್ವೀಕಾರ ಮಾಡುವ ಪ್ರಶ್ನೆ ಉದ್ಭವವಾಗುತ್ತದೆ. ಶಾಶ್ವತ ಹಿಂದುಳಿದ ವರ್ಗಗಳ ಆಯೋಗವು ವರದಿ ಕೊಟ್ಟಿಲ್ಲ. ಕೊಡಲು ಬಂದಾಗ ವಿಚಾರ ಮಾಡುತ್ತೇವೆ. ವರದಿ ವೈಜ್ಞಾನಿಕವಲ್ಲ ಎಂದು ಕೆಲವರು ವಿಚಾರ ಮಾಡುತ್ತಿದ್ದು, ವರದಿ ಬರದೆ, ಏನಿದೆ ಎಂದು ತಿಳಿಯದೇ ಊಹಾಪೋಹದ ಮೇಲೆ ನಿರ್ಧಾರ ಮಾಡುತ್ತಿದ್ದಾರೆ. ಮೊದಲು ವರದಿ ಬರಲಿ ನೋಡೋಣ.
ಶಕ್ತಿ ಯೋಜನೆಗೆ ಯೋಜನೆಗೆ ಎಷ್ಟು ಹಣ ಖರ್ಚಾಗುತ್ತದೆಯೋ ಅಷ್ಟು ಹಣ ಒದಗಿಸಲಾಗುವುದು. ಈ ಯೋಜನೆಗೆ ಪ್ರತಿ ವರ್ಷ ವೆಚ್ಚವಾಗುವ ಹಣವನ್ನು ಕೆ.ಎಸ್.ಆರ್.ಟಿ. ಸಿ ಗೆ ಸರ್ಕಾರದಿಂದ ತುಂಬಿ ಕೊಡಲಾಗುವುದು. ಬಸ್ಸುಗಳ ದುರಸ್ತಿ ಹಾಗೂ ಹೊಸ ಬಸ್ಸುಗಳ ಖರೀದಿಯೂ ಆಗಲಿದೆ. ರಿಪೇರಿಗೆ ಅನುದಾನವನ್ನು ಒದಗಿಸಲಾಗಿದೆ. ಅನುದಾನವಿಲ್ಲ ಎಂದಿರುವ ಅಧಿಕಾರಿಗಳ ಹೆಸರು ನೀಡಿದರೆ ಪರಿಶೀಲನೆ ನಡೆಸಲಾಗುವುದು. ನಮ್ಮ ಸರ್ಕಾರದಲ್ಲಿ ಘೋಷಿಸಿರುವ ಯೋಜನೆಗಳಿಗೆ ಅನುದಾನದ ಕೊರತೆ ಇಲ್ಲ. ಅಭಿವೃದ್ಧಿ ಕೆಲಸಗಳು ನಿಂತಿಲ್ಲ.
ನವೆಂಬರ್ ಅಂತ್ಯದವರೆಗೆ ಹಿಂದಿನ ಸರ್ಕಾರ 70,814 ಕೋಟಿ ರೂ.ಗಳನ್ನು ಅಭಿವೃದ್ಧಿಗೆ ಖರ್ಚು ಮಾಡಿತ್ತು. ನಮ್ಮ ಸರ್ಕಾರ 73,928 ಕೋಟಿ ರೂ.ಗಳನ್ನು ವೆಚ್ಚ ಮಾಡಿದೆ. ಹಣವನ್ನು ಖರ್ಚು ಮಾಡಿಲ್ಲ ಎನ್ನುವುದು ಸುಳ್ಳು. 3,000 ಕೋಟಿ ರೂ.ಗಳಷ್ಟು ಮೊತ್ತವನ್ನು ಹೆಚ್ಚು ವೆಚ್ಚ ಮಾಡಿದ್ದೇವೆ. ನಾವು ಸರ್ಕಾರ ರೂಪಿಸಿದ್ದು ಮೇ 20 ಕ್ಕೆ, ಬಜೆಟ್ ಮಂಡಿಸಿದ್ದು ಜುಲೈನಲ್ಲಿ, ಅದು ಜಾರಿಯಾಗಿದ್ದು ಆಗಸ್ಟ್ 1 ರಿಂದ. 4 ಗ್ಯಾರಂಟಿ ಗಳನ್ನು ಜಾರಿ ಮಾಡಿದ್ದು, 5 ನೇ ಗ್ಯಾರಂಟಿ ಜನವರಿಯಲ್ಲಿ ಪ್ರಾರಂಭವಾಗಲಿದೆ. ಕೊಟ್ಟ ಮಾತಿನಂತೆ ನಡೆದಿದ್ದೇವೆ.
ಇಡೀ ದೇಶದಲ್ಲಿ ಕೊರೊನಾ ಹೊಸ ತಳಿ ಶುರುವಾಗಿದ್ದು, ಈ ಬಗ್ಗೆ ಆರೋಗ್ಯ ಸಚಿವರಿಗೆ ಕೂಡಲೇ ಸಭೆ ನಡೆಸಿ ಮುನ್ನೆಚ್ಚರಿಕಾ ಕ್ರಮ ವಹಿಸಲು ಸೂಚಿಸಲಾಗಿದೆ.
ಬೆಳಗಾವಿಯಲ್ಲಿ ಮಹಿಳೆ ಮೇಲಾದ ದೌರ್ಜನ್ಯ ಪ್ರಕರಣವನ್ನು ಯಾವ ತನಿಖೆಗೆ ಬೇಕಾದರೂ ವಹಿಸಲು ಸಿದ್ಧ. ತನಿಖೆಯಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ನಮ್ಮ ಪೊಲೀಸರು ತನಿಖೆ ಮಾಡಲು ಸಮರ್ಥರಿದ್ದಾರೆ. ಹಾಗಾಗಿ ಬೇರೆ ಪ್ರಶ್ನೆ ಉದ್ಭವಿಸದು.
ಕ್ಯಾಶ್ ಕಾರ್ಡ್ ಬ್ಯಾಂಕ್ ಸೊಸೈಟಿಗಳಲ್ಲಿ ರೈತರಿಗೆ ನೀಡಿರುವ ಸಾಲದ ಅಸಲು ಕಟ್ಟಿದರೆ ಬಡ್ಡಿ ಮನ್ನಾ ಮಾಡಲಾಗುವುದು.
ಉನ್ನತ ಶಿಕ್ಷಣ ಮತ್ತು ಪ್ರಾಥಮಿಕ ಶಿಕ್ಷಣ ಇಲಾಖೆಗಳು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಒಂದು ಸೂತ್ರ ರೂಪಿಸುತ್ತಿವೆ. ಈ ಸಂಬಂಧ ಸಭೆ ನಡೆಸಿದ ನಂತರ ಪರಿಹಾರ ಸೂತ್ರವನ್ನು ಸರ್ಕಾರಕ್ಕೆ ನೀಡುತ್ತಾರೆ. ತದನಂತರ ಸರ್ಕಾರ ಪರಿಶೀಲನೆ ನಡೆಸಲಿದೆ. ಈ ಕೆಲಸವನ್ನು ತ್ವರಿತವಾಗಿ ನಡೆಸಲು ಸೂಚಿಸಲಾಗಿದೆ ಎಂದಿದ್ದಾರೆ.