For the best experience, open
https://m.samyuktakarnataka.in
on your mobile browser.

ಗದುಗಿನಲ್ಲಿ ಮೂರು ದಶಕಗಳ ಹಿಂದೆಯೇ ರೂಪಗೊಂಡಿದ್ದ ರಾಮಮಂದಿರ ಮಾದರಿ

02:17 AM Jan 22, 2024 IST | Samyukta Karnataka
ಗದುಗಿನಲ್ಲಿ ಮೂರು ದಶಕಗಳ ಹಿಂದೆಯೇ ರೂಪಗೊಂಡಿದ್ದ ರಾಮಮಂದಿರ ಮಾದರಿ

ಹುಬ್ಬಳ್ಳಿ: ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಗ್ರಾಮದ ರೈತರಾದ ಕೆಂಚರಡ್ಡಿ ಅಳವಂಡಿ ಅವರು ಮೂರು ದಶಕಗಳ ಹಿಂದೆ ನಡೆದ ರಾಮಜನ್ಮಭೂಮಿ ರಥಯಾತ್ರೆ ವೇಳೆ ಥರ್ಮಾಕೋಲ್‌ನಲ್ಲಿ ಶ್ರೀರಾಮಮಂದಿರ ಮಾದರಿಯನ್ನು ರೂಪಿಸಿ ಗಮನ ಸೆಳೆದಿದ್ದರು.
ಆಗ (ಮೂರು ದಶಕಗಳ ಹಿಂದೆ) ಇವರು ಗಣೇಶೋತ್ಸವ ಸಂದರ್ಭದಲ್ಲಿ ತಮ್ಮ ಮನೆಯಲ್ಲಿ ಗಣೇಶ ಪ್ರತಿಷ್ಠಾಪನೆಗೆ ಪ್ರತಿ ವರ್ಷ ಒಂದಿಲ್ಲೊಂದು ರೀತಿ ವಿಶಿಷ್ಟ ಅಲಂಕಾರ, ಮಾದರಿಗಳನ್ನು ರೂಪಿಸುತ್ತಿದ್ದರು. ಗಣೇಶನ ಮೂರ್ತಿ, ಮಾದರಿಗಳನ್ನು ಕಂಡು ಸಾರ್ವಜನಿಕರು ಅಪಾರ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು.
ಹೀಗೆ ಮಾದರಿ ರೂಪಿಸುವ ಚಿಂತನೆ ನಡೆದಾಗ ಹೊಳೆದಿದ್ದು `ಶ್ರೀರಾಮಮಂದಿರ'. ಕರಸೇವೆ, ರಥಯಾತ್ರೆ ವೇಳೆ ರಾಷ್ಟçವ್ಯಾಪಿ ಬಿಡುಗಡೆಯಾದ ರಾಮಂದಿರದ ಚಿತ್ರ ಆಕರ್ಷಣೀಯವಾಗಿತ್ತು. ರಾಮಮಂದಿರದ ಭವ್ಯತೆ ಗಮನ ಸೆಳೆಯುತ್ತಿತ್ತು. ಅದನ್ನು ಕಂಡ ಇವರು ಅದೇ ಮಾದರಿ ಮಾಡಲು ನಿರ್ಧರಿಸುತ್ತಾರೆ. ತಡ ಮಾಡದೇ ಗಣೇಶೋತ್ಸವಕ್ಕಿಂತ ಮುಂಚೆ ೨೦ ದಿನ ಮೊದಲು ಥರ್ಮಾಕೋಲ್‌ನಲ್ಲಿ ರಾಮಮಂದಿರದ ಮಾದರಿ ರೂಪಿಸಲು ಆರಂಭಿಸಿದರು.
ಇವರಿಗೆ ಥರ್ಮಾಕೋಲ್‌ನಲ್ಲಿ ಸ್ಕೆಚ್ ಹಾಕಿ ಮಾರ್ಗದರ್ಶನ ನೀಡಿದವರು ಗ್ರಾಮದ ಜಗದ್ಗುರು ಫಕೀರೇಶ್ವರ ಪ್ರೌಢ ಶಾಲೆಯ ನಿವೃತ್ತ ಶಿಕ್ಷಕರಾದ ಬಿ.ಎಂ. ಯರಕದ ಅವರು. ಅಲ್ಲದೇ, ಈ ರಾಮಮಂದಿರ ಮಾದರಿ ರೂಪಗೊಳ್ಳಲು ಸೂಕ್ತ ಕೊಠಡಿ ನೀಡಿ ಬೆನ್ನು ತಟ್ಟು ಹುರುದುಂಬಿಸಿದ್ದವರು ಕೆಂಚರಡ್ಡಿ ಅವರ ಮತ್ತೊಬ್ಬ ಹಿರಿಯ ಸ್ನೇಹಿತರಾದ ಕೃಷ್ಣಭವನ ಹೊಟೇಲ್ ಮಾಲೀಕರಾದ ವಸಂತರಾವ್ ಮಂಜನಬೈಲ್ ಅವರು.
ಥರ್ಮಾಕೋಲ್‌ನಲ್ಲಿ ಒಂದೆಡೆ ರಾಮಮಂದಿರ ಮಾದರಿ ಸಿದ್ಧವಾಗುತ್ತಿದ್ದರೆ ಅತ್ತ ನೀಲವ಼ರ್ಣದ ಬಾಲರಾಮನ ಮಾದರಿ ಗಣೇಶಮೂರ್ತಿಯನ್ನು ಮೂರ್ತಿ ಕಲಾವಿದರಿಗೆ ಹೇಳಿ ಮಾಡಿಸಿದ್ದರು.
ಗಣೇಶಮೂರ್ತಿ ವೀಕ್ಷಣೆಗೆ ಬಂದ ಜನ ರಾಮಮಂದಿರ ಮಾದರಿ ಮತ್ತು ಬಾಲರಾಮನ ಮೂರ್ತಿ ಕಂಡು ಅಯೋಧ್ಯೆ ಶ್ರೀರಾಮಚಂದ್ರನ ದರ್ಶನ ಪಡೆದಂತೆಯೇ ಆಯ್ತು ಎಂದು ಹರ್ಷ ವ್ಯಕ್ತಪಡಿಸಿದ್ದುಂಟು.
ಆಸಕ್ತಿಯೇ ರಾಮಮಂದಿರ ಮಾದರಿ ರೂಪಿಸಲು ಕಾರಣ
ರಾಮಮಂದಿರ ಮಾದರಿ ಮಾಡಲೇಬೇಕು ಎಂಬ ಆಸಕ್ತಿ ಜೊತೆಗೆ ಹಿರಿಯ ಸ್ನೇಹಿತರ ಪ್ರೋತ್ಸಾಹ, ಪ್ರೇರಣೆಯಿಂದ ಥರ್ಮಾಕೋಲ್‌ನಲ್ಲಿ ರಾಮಮಂದಿರ ನಿರ್ಮಾಣ ಮಾಡಲು ಸಾಧ್ಯವಾಯಿತು. ರಥಯಾತ್ರೆ ವೇಳೆ ಅಂದಿನ ಅವಿಭಜಿತ ಧಾರವಾಡ ಜಿಲ್ಲೆಯ ತಾಲೂಕುಗಳಲ್ಲಿ ಈ ಥರ್ಮಾಕೋಲ್ ರಾಮಮಂದಿರ ಮಾದರಿಯನ್ನು ತೆಗೆದುಕೊಂಡು ಹೋಗಿ ಮೆರವಣಿಗೆ ಮಾಡಿದ್ದರು. ಥರ್ಮಾಕೋಲ್‌ನಲ್ಲಿ ಮಾದರಿ ರೂಪಿಸಿದ್ದಕ್ಕೆ ನೂರಾರು ಜನರು ಅಚ್ಚರಿ, ಮೆಚ್ಚುಗೆ ವ್ಯಕ್ತಪಡಿಸಿದ್ದರು ಎಂದು ರಾಮಮಂದಿರದ ಮಾದರಿ ರೂಪಿಸಿದ ಹಿರಿಯ ರೈತರಾದ ಕೆಂಚರಡ್ಡಿ ಅಳವಂಡಿಯವರು ಈಗ ಅಯೋಧ್ಯೆಯಲ್ಲಿ ರಾಮಮಂದಿರದಲ್ಲಿ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ ಸನ್ನಿವೇಶದಲ್ಲಿ ನೆನಪಿಸಿಕೊಂಡರು.