ಗಮನ ಸೆಳೆದ ಜಂಗಿ ನಿಕಾಲಿ ಕುಸ್ತಿ: ಹರಿದು ಬಂದ ಜನಸಾಗರ
ರಬಕವಿ-ಬನಹಟ್ಟಿ: ಬನಹಟ್ಟಿಯ ಶ್ರೀ ಕಾಡಸಿದ್ಧೇಶ್ವರ ಜಾತ್ರೆ ನಿಮಿತ್ತ ಬುಧವಾರ ೩ ಗಂಟೆಯಿಂದ ಹಲವಾರು ಜಗಜಟ್ಟಿಗಳ ನಡುವೆ ರಾಷ್ಟ್ರಮಟ್ಟದ ಜಂಗಿ ನಿಕಾಲಿ ಕುಸ್ತಿಗಳು ಜರುಗಿದವು. ಕುಸ್ತಿ ವೀಕ್ಷಿಸಲು ಅನೇಕ ಗ್ರಾಮ ಮತ್ತು ಪಟ್ಟಣಗಳಿಂದ ಅಪಾರ ಪ್ರಮಾಣದ ಜನಸಾಗರವೇ ಹರಿದು ಬಂದಿತ್ತು.
ಬನಹಟ್ಟಿಯ ರಾಜೇಂದ್ರ ಭದ್ರಣ್ಣವರ ಕುಸ್ತಿ ಮೈದಾನಕ್ಕೆ ಪೂಜೆ ಸಲ್ಲಿಸಿದ ಬಳಿಕ ನಡೆದ ಸ್ಪರ್ಧೆಯಲ್ಲಿ ೧೦೦ಕ್ಕೂ ಹೆಚ್ಚು ಕುಸ್ತಿಪಟುಗಳು ವಿಭಿನ್ನ ರೀತಿಯಲ್ಲಿ ಟಾಂಗ್‌ಗಳನ್ನು ಹಾಕಿ ಕುಸ್ತಿಯಾಡಿ ನೆರೆದ ಜನರನ್ನು ರಂಜಿಸಿದರು. ಕುಸ್ತಿ ಆಡಿಸುವವರು ಅವರ ಗಮನಕ್ಕೆ ಬಾರದೇ ಅಚಾನಕ್ಕಾಗಿ ಏನಾದರೂ ತಪ್ಪುಗಳಾದರೆ ಸಾವಿರಾರು ಜನ ಕೇಕೆ ಹಾಕಿ ಕೆಲ ಕುಸ್ತಿಪಟುಗಳಿಗೆ ನ್ಯಾಯ ದೊರಕಿಸಿ ಕೊಡುವ ಕೆಲಸ ಮಾಡಿದರು.
ನೆರೆಯ ದಕ್ಷಿಣ ಮಹಾರಾಷ್ಟ್ರ ಹಾಗೂ ಕರ್ನಾಟಕದ ಬಹುತೇಕ ನಗರಗಳಿಂದ ಇಲ್ಲಿನ ಕುಸ್ತಿಗಳನ್ನು ನೋಡಲು ವೀಕ್ಷಕರ ದಂಡೇ ಆಗಮಿಸುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಕುಸ್ತಿ ಪಟುಗಳು ದಸರಾ ಮಹೋತ್ಸವದ ಅಂಗವಾಗಿ ಮೈಸೂರಿನಲ್ಲಿ ಪಾಲ್ಗೊಳ್ಳುವ ಕುಸ್ತಿ ಪಟುಗಳು ಇಲ್ಲಿ ಪಾಲ್ಗೊಂಡಿದ್ದು ವಿಶೇಷ.
ಸುಮಾರು ೧೦ ಲಕ್ಷ ರೂ.ಗಳಷ್ಟು ವೆಚ್ಚದಲ್ಲಿ ಕುಸ್ತಿಗಳು ನಡೆದವು. ಪ್ರಮುಖ ಕುಸ್ತಿ ಪಟುಗಳಾಗಿ ಮಹಾರಾಷ್ಟ್ರದಲ್ಲಿ ಹೆಸರುವಾಸಿಯಾಗಿರುವ ಪುಣೆಯ ಮೌಲಿ ಪೈ ಜೊತೆ ದಿಲ್ಲಿಯ ಆಶೀಶ್ ಪೈ. ಹೂಡಾ, ಕೊಲ್ಲಾಪುರ ಗಂಗಾವೇಶದ ಸಾಗರ ಪೈ. ತಮಕಡೆ ಜೊತೆ ಪುಣೆಯ ನಾಗರಾಜ ಪೈ. ಬಸಿಡೋಣಿ, ಕಾರ್ತಿಕ ಪೈ, ಕಾಟೆ ಜೊತೆ ದೀಪಕ ಪೈ. ದಿಲ್ಲಿ ಬೆಳಗಾವಿಯ ಶಿವಯ್ಯ ಪೈ. ಪೂಜಾರಿ ಜೊತೆ ಸಾಂಗಲಿಯ ವಿಶ್ವಜೀತ ರೂಪಣ್ಣವರ, ಹಣಮಂತ ಪೈ. ಬನಹಟ್ಟಿ ಜೊತೆ ದತ್ತುಸಾಬ ಪೈ. ಕೊಲ್ಹಾಪೂರ, ಸಾಗರ ಪೈ. ಜಗದಾಳ ಜೊತೆ ಪರಶು ಪೈಲ ಹರಿಹರ, ಹುಚ್ಚಪ್ಪ ಪೈ ಬನಹಟ್ಟಿ ಜೊತೆ ಸಚಿನ್ ಪೈ.ಕೊಲ್ಹಾಪೂರ, ಕಾಡು ಪೈ. ಗೌಳಿ ಜೊತೆ ಮಹೇಶ ಪೈ. ಬಿರ್ಜೆ, ಮಹೇಶ ಪೈ. ಬನಹಟ್ಟಿ ಜೊತೆ ಸಾಗರ ಪೈ. ಪಾಟೀಲ ಹೀಗೆ ನೂರಾರು ಕುಸ್ತಿ ಪಟುಗಳು ಕ್ರೀಡಾಭಿಮಾನಿಗಳಿಗೆ ಕುಸ್ತಿ ಅಖಾಡದಲ್ಲಿ ರಸದೌತಣ ನೀಡಿದರು.
ಕುಸ್ತಿ ಪ್ರೇಮಿಗಳ ಮಾತು: ಪ್ರೇಕ್ಷಕರಿಗೆ ರಸದೌತಣ ನೀಡಿದ ಕುಸ್ತಿಗಳೆಲ್ಲವೂ ವಿಶೇಷ ಮುದ ನೀಡುವಲ್ಲಿ ಕಾರಣವಾಯಿತು. ಹೊಡಿ, ಎತ್ತ, ತಿರುವ ಹಾ.. ಉಕಾಡ್ ಹಾಕ್ಯಾನ್ರಿ.. ಟಾಂಗ್ ಜೋಡಿ ಒಳ ಟಾಂಗ್, ಹೊರ ಟಾಂಗ್, ದಿಸೆ ಜೋಡಿ ಚಿತ್ತ ಹಾಕ್ಯಾನ್ರೀ…. ಹೀಗೆ ಕುಸ್ತಿ ಶೈಲಿಯ ಮಾತುಗಳು ಫಲಿತಾಂಶ ನೀಡುವ ವಸ್ತಾದರನ್ನೂ ನಿಬ್ಬೆರಗು ಮಾಡಿದವು.