ಗರ್ಭಕಂಠ ಕ್ಯಾನ್ಸರ್ ಎಂಬ ಮಹಿಳಾ ಕಂಟಕ
ಗರ್ಭಕಂಠದ ಕ್ಯಾನ್ಸರ್ ಗರ್ಭಕಂಠದ ಒಂದು ಕೋಶದೊಳಗೆ ಬೆಳವಣಿಗೆ ಆರಂಭಿಸುತ್ತದೆ. ಇದರ ಪ್ರಗತಿ ನಿಧಾನವಾಗಿರುತ್ತದೆ. ಮನುಷ್ಯರಲ್ಲಿ ಹಲವು ರೀತಿಯ ಕ್ಯಾನ್ಸರ್‌ಗಳು ಬಾಧಿಸುತ್ತವೆ. ಸ್ತನ ಕ್ಯಾನ್ಸರ್, ಗರ್ಭಕೋಶ ಕ್ಯಾನ್ಸರ್ ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ೩೦ ಮತ್ತು ೬೫ ವರ್ಷ ವಯೋಮಾನದ ಒಳಗಿನ ಪ್ರತಿ ಮಹಿಳೆಯೂ ಗರ್ಭಕಂಠದ ಕ್ಯಾನ್ಸರ್ ತಪಾಸಣೆಗೆ ಒಳಗಾಗಬೇಕು, ಈ ವಯಸ್ಸಿನಲ್ಲಿ ಪ್ರತಿ ಐದು ವರ್ಷಗಳಿಗೆ ಒಮ್ಮೆ ತಪಾಸಣೆ ಮಾಡಿಸಿಕೊಳ್ಳಬೇಕು. ಸ್ಕ್ರೀನಿಂಗ್ ಪರೀಕ್ಷೆಗಳು ಮತ್ತು ಸೋಂಕಿನಿಂದ ರಕ್ಷಿಸುವ ಲಸಿಕೆಯನ್ನು ಸ್ವೀಕರಿಸುವುದು ಒಳ್ಳೆಯದು.
ಕಾರಣ: ಜನನ ನಿಯಂತ್ರಣ ಮಾತ್ರೆಗಳನ್ನು ಹೆಚ್ಚು ಸೇವಿಸುವುದರಿಂದ ಗರ್ಭಕಂಠದ ಕ್ಯಾನ್ಸರ್ ಅಪಾಯ ಹೆಚ್ಚು. ಹೀಗಾಗಿ ಇವುಗಳಿಂದ ಆದಷ್ಟು ದೂರವಿರಬೇಕು, ಬಹು ಜನರೊಂದಿಗಿನ ಲೈಂಗಿಕತೆ ಗರ್ಭಕಂಠದ ಕ್ಯಾನ್ಸರ್‌ಗೆ ಕಾರಣವಾಗುತ್ತದೆ. ಧೂಮಪಾನ ಮಾಡಬಾರದು.
ನಿಯಂತ್ರಣ: ೩೦ ವರ್ಷಗಳ ನಂತರ ಮಹಿಳೆಯರು ನಿಯಮಿತ ಪ್ಯಾಪ್ ಸ್ಮಿಯರ್ ಮತ್ತು ದ್ರವ-ಆಧಾರಿತ ಸೈಟೋಲಜಿ ಪರೀಕ್ಷೆ ಮಾಡಿಸಿಕೊಳ್ಳುವಂತೆ ಸೂಚಿಸಲಾಗುತ್ತದೆ. ಪ್ಯಾಪ್ ಪರೀಕ್ಷೆ ಗರ್ಭಕಂಠದ ಕ್ಯಾನ್ಸರ್ ಅನ್ನು ತಡೆಗಟ್ಟಲು ಸಹಾಯ ಮಾಡುತ್ತದೆ ಅಥವಾ ಅದನ್ನು ಮೊದಲೇ ಕಂಡುಹಿಡಿಯಬಹುದು. ಸಾಕಷ್ಟು ಹಣ್ಣುಗಳು, ತರಕಾರಿಗಳು ಮತ್ತು ಆರೋಗ್ಯಕರ ಆಹಾರವನ್ನು ಸೇವಿಸಬೇಕು.
ಚಿಕಿತ್ಸೆ: ಒಮ್ಮೆ ಕ್ಯಾನ್ಸರ್ ಕಾಣಿಸಿಕೊಂಡರೆ, ಶಸ್ತ್ರ ಚಿಕಿತ್ಸೆ (ಗರ್ಭಾಶಯವನ್ನು ಕತ್ತರಿಸಿ , ಹೊರ ತೆಗೆಯುವುದು), ಔಷಧಿ ಚಿಕಿತ್ಸೆ, ರೇಡಿಯೋ ಥೆರಪಿ ಅನಿವಾರ್ಯ.
ಗರ್ಭಕಂಠದ ಕ್ಯಾನ್ಸರ್ ಲಕ್ಷಣಗಳೇನು..?
ಸಂತಾನೋತ್ಪತ್ತಿ ಆರೋಗ್ಯ ಸಮಸ್ಯೆಗಳು ಜನನಾಂಗದಲ್ಲಿ ಅಸಹಜ ಮತ್ತು ಅಸಾಧಾರಣ ಪ್ರಮಾಣದಲ್ಲಿ ರಕ್ತಸ್ರಾವ
ಲೈಂಗಿಕ ಸಂಪರ್ಕದ ವೇಳೆ ಮತ್ತು ಮೂತ್ರವಿಸರ್ಜನೆಯ ಸಂದರ್ಭದಲ್ಲಿ ನೋವು,
ಲೈಂಗಿಕ ಸಂಪರ್ಕದ ಬಳಿಕ ರಕ್ತಸ್ರಾವ, ಋತುಚಕ್ರದ ಅವಧಿಯಲ್ಲಿ ಬೆನ್ನು ನೋವು, ತುರಿಕೆ ಮತ್ತು ಉರಿ, ಹೆಚ್ಚು ಆಯಾಸ, ತುರ್ತು ಮೂತ್ರ ವಿಸರ್ಜನೆ, ಹೊಟ್ಟೆ ಉಬ್ಬರ
ರೋಗ ಉಲ್ಬಣಿಸಿದಾಗ, ಕೊನೆಯ ಹಂತದಲ್ಲಿ ಕೀಲು ನೋವು
ವಿಪರೀತ, ತಡೆದುಕೊಳ್ಳಲಾರದ ನೋವು ಉದ್ಬವಿಸಿದರೆ, ಇತರ ನರಗಳಿಗೆ, ರಕ್ತನಾಳಗಳಿಗೆ, ಅಂಗಾಂಗಗಳಿಗೆ ವ್ಯಾಪಿಸಿದೆ ಎಂದೇ ಅರ್ಥ.
- ಡಾ. ಅದಿತಿ ಕುಲಕರ್ಣಿ,
ಹೆರಿಗೆ, ಸ್ತ್ರೀ ರೋಗ ತಜ್ಞರು, ಹುಬ್ಬಳ್ಳಿ