ಗವಿಮಠ ಬಿಟ್ಟು ಹೊರಗೆ ಕರೆದೊಯ್ಯದಿರಿ: ಗವಿಶ್ರೀ ಕಣ್ಣೀರು
ಕೊಪ್ಪಳ: ನನಗೆ ಪ್ರಶಸ್ತಿ ಬೇಡ, ರೈಲ್ವೆ ನಿಲ್ದಾಣಕ್ಕೆ ಹೆಸರು ಬೇಡ, ಯಾವ ಮಠಕ್ಕೂ, ಸ್ವಾಮೀಜಿಗೂ ಹೋಲಿಕೆ ಬೇಡ, ಜಾತಿ, ಧರ್ಮದ ಜಗಳಕ್ಕೆ ಎಳೆದು ತರಬೇಡಿ ಎಂದು ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಕಣ್ಣೀರು ಹಾಕಿದರು.
ನಗರದ ಗವಿಮಠದ ಕೈಲಾಸ ಮಂಟಪದಲ್ಲಿ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಭಕ್ತರಿಗೆ ಸೂಚಿಸಿದರು.
ನನ್ನ ಹೆಸರನ್ನು ಯಾವುದೇ ಪ್ರಶಸ್ತಿಗಳಿಗೆ ಸೂಚಿಸಬೇಡಿ. ನಾನು ಪ್ರಶಸ್ತಿಗಳನ್ನು ತಿರಸ್ಕರಿಸುವಷ್ಟು ದೊಡ್ಡವನಲ್ಲ. ಪ್ರಶಸ್ತಿ ಪಡೆಯುವ ಅರ್ಹತೆ ನನಗಿಲ್ಲ. ಹಾಗಾಗಿ ಪ್ರಶಸ್ತಿ ಪಡೆಯುವುದಿಲ್ಲ ಎಂಬ ವಿನಮ್ರ ವಿನಂತಿ ಮಾಡಿದ್ದೇನೆ. ಅಲ್ಲದೇ ಕೊಪ್ಪಳ ರೈಲ್ವೆ ನಿಲ್ದಾಣಕ್ಕೆ ಗವಿಸಿದ್ಧೇಶ್ವರರ ಹೆಸರಿಸುವುದು ಬೇಡ. ಏಕೆಂದರೆ ಗವಿಸಿದ್ಧೇಶ್ವರನನ್ನು ಗವಿಮಠ ಬಿಟ್ಟು ಹೊರಗೆ ಕರೆದೊಯ್ಯಬೇಡಿ. ಮುಂದೆ ನೀವು ವಿಶ್ವವಿದ್ಯಾಲಯಕ್ಕೆ ಹೆಸರಿಡಿ ಎನ್ನುತ್ತೀರಿ. ಇದರ ವಿರುದ್ಧ ಹೋರಾಟ ಮಾಡುವವರು ಅಲ್ಲಿಯೇ ಇರುತ್ತಾರೆ ಎಂದರು.
ನಮ್ಮ ಭಾವಚಿತ್ರ ಮತ್ತು ಬೇರೆ ಸ್ವಾಮೀಜಿ ಅಥವಾ ಮಠದ ಭಾವಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಹೋಲಿಕೆ ಮಾಡಬೇಡಿ. ಏಕೆಂದರೆ ನಾನೂ ಜಗತ್ತಿನಲ್ಲಿರುವ ಎಲ್ಲ ಸ್ವಾಮೀಜಿಗಳ ಪಾದದ ಧೂಳಿಗೆ ಸಮನಾಗಿದ್ದೇನೆ. ಅಲ್ಲದೇ ನನ್ನನ್ನು ಯಾವುದೇ ಜಾತಿ, ಧರ್ಮದ ಜಗಳಗಳಿಗೆ ಎಳೆದು ತರಬೇಡಿ. ಏಕೆಂದರೆ ನಾನು ಲವ್ ಆಲ್, ಸರ್ವ್ ಆಲ್ ಎನ್ನುವ ತತ್ವದ ಅಡಿ ಬದುಕುತ್ತಿದ್ದೇನೆ ಎಂದು ಭಾವುಕರಾಗಿ ಕಣ್ಣೀರು ಹಾಕಿದರು.