ಗಾಂಜಾ ಮಾಫಿಯಾಗೆ ನಕ್ಸಲರ ಗಾಢ ನಂಟು
ಶಿವಕುಮಾರ್ ಮೆಣಸಿನಕಾಯಿ
ಬೆಂಗಳೂರು: ಪ್ರತಿನಿತ್ಯ ರಾಜಧಾನಿ ಬೆಂಗಳೂರಿಗೆ ಸರಿಸುಮಾರು ೫೦ ಕೆಜಿ ಗಾಂಜಾ ಬೇಡಿಕೆ ಇದ್ದು, ಇಷ್ಟೊಂದು ಬೃಹತ್ ಪ್ರಮಾಣದ ಮಾದಕವಸ್ತು ನಕ್ಸಲ್‌ಪೀಡಿತ ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ.
ಕೆಲ ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಒಂದು ಟ್ರಕ್ ಗಾಂಜಾ ಜಪ್ತಿಮಾಡಿದ್ದ ರಾಜ್ಯದ ಪೊಲೀಸರು ಗಾಂಜಾ ಕಳ್ಳಸಾಗಣೆ ಜಾಲದ ಬುಡಕ್ಕೆ ಕೈಹಾಕಿದ್ದರಾದರೂ ಅದರ ಮೂಲ ನಕ್ಸಲ್‌ಪೀಡಿತ ಪ್ರದೇಶದವರೆಗೆ ಹೋಗಿದ್ದರಿಂದ ಅಲ್ಲಿಯ ಪೊಲೀಸರ ನೆರವು ಸಿಗದೇ ಮಾಫಿಯಾ ನಿಗ್ರಹಿಸುವಲ್ಲಿ ಹಿನ್ನಡೆ ಅನುಭವಿಸಿದ್ದಾರೆ. ಹೀಗಾಗಿ ಕರ್ನಾಟಕದ ಬೀದರ್, ಕಲಬುರಗಿ, ರಾಯಚೂರು, ಬಳ್ಳಾರಿ, ಬೆಳಗಾವಿ, ಮಂಗಳೂರು, ಉತ್ತರ ಕನ್ನಡದಂತಹ ಗಡಿಜಿಲ್ಲೆಗಳಲ್ಲಿ ಇಂದಿಗೂ ಪ್ರತಿನಿತ್ಯ
ಸಾವಿರಾರು ಕೆಜಿ ಗಾಂಜಾ ರಾಜ್ಯದೊಳಕ್ಕೆ ನುಸುಳುತ್ತಲೇ ಇದೆ.
ಈ ಕುರಿತು ಸಂಯುಕ್ತ ಕರ್ನಾಟಕದ ಗಾಂಜಾ ಸಾಗಾಟದ ಹಲವು ಪೆಡ್ಲರ್‌ಗಳನ್ನೂ, ಗಾಂಜಾ ವಿರುದ್ಧ ಕಾರ್ಯಾಚರಣೆ ನಡೆಸಿದ ಹಲವು ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿ ಸಮಗ್ರ ಮಾಹಿತಿ ಕಲೆ ಹಾಕಿದ್ದು, ಕರ್ನಾಟಕದ ಗಾಂಜಾ ಮಾಫಿಯಾದ ಮೂಲಕ ನಕ್ಸಲ್ ಪೀಡಿತ ರಾಜ್ಯಗಳಾದ ಛತ್ತೀಸ್‌ಗಢ, ಒಡಿಶಾ, ಬಿಹಾರ್, ಗುಜರಾತ್ ಗಡಿಪ್ರದೇಶ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಲ್ಲಿದೆ ಎಂಬ ವಿವರಗಳು ಲಭ್ಯವಾಗಿವೆ.
ಚಳವಳಿಯಲ್ಲಿ ನಿರತರಾಗಿ ಭೂಗತರಾಗಿರುವ ನಕ್ಸಲೀಯರು ತಮ್ಮ ಹಣಕಾಸು ಮೂಲಗಳನ್ನು ತಾವೇ ಸೃಷ್ಟಿಸಿಕೊಳ್ಳುತ್ತಾರೆ. ಅದರ ಭಾಗವಾಗಿ ದಟ್ಟ ಅರಣ್ಯಪ್ರದೇಶಗಳಲ್ಲಿ ಗಾಂಜಾ ಬೆಳೆದು ಅಥವಾ ನೈಸರ್ಗಿಕವಾಗಿಯೇ ಸಿಗುವ ಅಪಾರ ಪ್ರಮಾಣದ ಗಾಂಜಾವನ್ನು ಪೆಡ್ಲರ್‌ಗಳ ಮೂಲಕ ಮಾರಾಟ ಮಾಡುತ್ತಾರೆ ಎನ್ನುತ್ತಿವೆ ಮೂಲಗಳು. ನಕ್ಸಲರು ಅಡಗಿಕೊಂಡಿರುವ ಪ್ರದೇಶದಿಂದ ಕೆಲಮಟ್ಟಿನ ದೂರದಲ್ಲಿರುವ ಪಟ್ಟಣ ಪ್ರದೇಶದವರೆಗೆ ಗಾಂಜಾವನ್ನು ತರಕಾರಿ ಬುಟ್ಟಿಗಳಲ್ಲಿ ರವಾನೆ ಮಾಡುತ್ತಾರೆ. ಅದರ ಆಚೆಗೆ ಸಾಗಾಟ ಮಾಡುವುದು ಪೆಡ್ಲರ್‌ಗಳ ಜವಾಬ್ದಾರಿ. ಆದರೆ ಪೆಡ್ಲರ್‌ಗಳು ಮತ್ತು ಗಾಂಜಾ ಬೆಳೆಯುವ ನಕ್ಸಲರು ಮುಖಾಮುಖಿ ಭೇಟಿಯೇ ಆಗುವುದಿಲ್ಲ. ಹೀಗಾಗಿ ಮಾಫಿಯಾದ ಮೂಲವನ್ನು ಪತ್ತೆ ಮಾಡಲು ಸಾಧ್ಯವಾಗುತ್ತಿಲ್ಲ ಎನ್ನುತ್ತಿವೆ ಪೊಲೀಸ್ ಮೂಲಗಳು.
ಕಳೆದ ೨ ತಿಂಗಳ ಅವಧಿಯಲ್ಲಿ ಛತ್ತೀಸ್‌ಗಢ ಮತ್ತು ಆಂಧ್ರಪ್ರದೇಶದಿಂದ ಕರ್ನಾಟಕದ ಬೀದರ್ ಜಿಲ್ಲೆಯ ಮೂಲಕ ಮಹಾರಾಷ್ಟ್ರಕ್ಕೆ ಸರಬರಾಜು ಮಾಡುತ್ತಿದ್ದ ಸರಿಸುಮಾರು ೧೬ ಕೋಟಿ ರೂ. ಮೌಲ್ಯದ ೨ ಟನ್ ಗಾಂಜಾ ಜಪ್ತಿ ಮಾಡಲಾಗಿದ್ದು, ನಕ್ಸಲ್ ಪ್ರದೇಶದಿಂದಲೇ ಗಾಂಜಾ ಸಾಗಾಟ ಮಾಡಲಾಗುತ್ತಿತ್ತು ಎಂಬ ಅಂಶ ಬೆಳಕಿಗೆ ಬಂದಿದೆ. ಕರ್ನಾಟಕದ ಬೀದರ್‌ನಿಂದ ಮಂಗಳೂರುವರೆಗೆ, ವಿಶೇಷವಾಗಿ ರಾಜಧಾನಿ ಬೆಂಗಳೂರು ನಗರಕ್ಕೂ ಕೂಡ ಬೀದರ್‌ನಲ್ಲಿ ಜಪ್ತಿಯಾದ ಮೂಲದಿಂದಲೇ ಪ್ರತಿನಿತ್ಯ ಗಾಂಜಾ ಸರಬರಾಜು ಆಗುತ್ತದೆ.
ಪೊಲೀಸ್ ಇಲಾಖೆಯಿಂದ ಹಿಡಿದು ಜನಪ್ರತಿನಿಧಿಗಳವರೆಗೂ ಗಾಂಜಾ ಮಾಫಿಯಾ ಬಗೆಗೆ ಸಾಕಷ್ಟು ಮಾಹಿತಿ ಇದ್ದರೂ ಯಾರೂ ಕೂಡ ಗಾಂಜಾ ನಿರ್ಮೂಲನೆಗೆ ಪ್ರಾಮಾಣಿಕ ಪ್ರಯತ್ನ ನಡೆಯುತ್ತಿಲ್ಲ ಎಂಬುದು ಬಹಿರಂಗ ಸತ್ಯ.