For the best experience, open
https://m.samyuktakarnataka.in
on your mobile browser.

ಗಾಂಧಿಗಿರಿಯ ವಿಶ್ವರೂಪ

02:00 AM May 31, 2024 IST | Samyukta Karnataka
ಗಾಂಧಿಗಿರಿಯ ವಿಶ್ವರೂಪ

ಸಾರ್ವಜನಿಕ ಹಕ್ಕೊತ್ತಾಯಗಳ ಫಲಶ್ರುತಿಗೆ ಅಹಿಂಸೆಯ ದಾರಿಯಲ್ಲಿ ಸತ್ಯಾಗ್ರಹವೆಂಬ ಹೊಸ ಮಾರ್ಗವನ್ನು ಜಗತ್ತಿಗೆ ಪರಿಚಯಿಸಿದ ಮಹಾತ್ಮಗಾಂಧಿ ವ್ಯಕ್ತಿತ್ವ ಅಜರಾಮರ. ಬ್ರಿಟನ್‌ನಲ್ಲಿ ವಕೀಲಿಕೆ ಮಾಡಿದ ನಂತರ ದಕ್ಷಿಣ ಆಫ್ರಿಕಾದಲ್ಲಿ ಅದೇ ವೃತ್ತಿಯನ್ನು ಮುಂದುವರಿಸಿದ ಸಂದರ್ಭದಲ್ಲಿ ಎದುರಾದ ವರ್ಣಬೇಧ ನೀತಿಯನ್ನು ಧಿಕ್ಕರಿಸಿ ಹೋರಾಟದ ಮಾರ್ಗವನ್ನು ತುಳಿದ ಮೋಹನದಾಸ ಕರಂಚಂದ್ ಗಾಂಧಿ ನಂತರದ ದಿನಗಳಲ್ಲಿ ಭಾರತದಲ್ಲಿ ಬ್ರಿಟಿಷರ ಗುಲಾಮಗಿರಿ ಆಡಳಿತದ ವಿರೋಧಿ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡ ನಂತರ ದೇಶಕ್ಕೆ ಸ್ವಾತಂತ್ರ್ಯ ಪ್ರಾಪ್ತವಾದ ನಿರ್ಣಾಯಕ ಘಟನಾವಳಿಗಳ ಬೆಳವಣಿಗೆ ಈಗ ಜಾಗತಿಕ ಇತಿಹಾಸದ ಭಾಗ. ಇಂತಹ ಜಗಮಾನ್ಯ ಗಾಂಧಿಯವರನ್ನು ಸ್ತುತಿಸುತ್ತಲೇ ಕಾಂಗ್ರೆಸ್ ಪಕ್ಷವನ್ನು ನಿಂದಿಸಲು ಪ್ರಧಾನಿ ನರೇಂದ್ರ ಮೋದಿ ಅವರು `ಗಾಂಧಿ ಪರಂಪರೆಗೆ ಸೂಕ್ತವಾದ ಗೌರವ ಕೊಡುವ ರೀತಿಯಲ್ಲಿ ಈ ಹಿಂದಿನ ಕಾಂಗ್ರೆಸ್ ಸರ್ಕಾರಗಳು ನಡೆದುಕೊಂಡಿಲ್ಲ' ಎಂಬ ಮಾತನ್ನಾಡಿರುವುದು ಸಹಜವಾಗಿಯೇ ಸಾರ್ವಜನಿಕ ಚರ್ಚೆಗೆ ಗ್ರಾಸ. ಇದರ ಜೊತೆಗೆ ೧೯೮೨ರಲ್ಲಿ ಅಟೆನ್‌ಬರೋ ನಿರ್ಮಾಣದ ಗಾಂಧಿ ಚಿತ್ರ ಬಿಡುಗಡೆಯಾಗುವವರೆಗೆ ಜಗತ್ತಿಗೆ ಗಾಂಧಿಯವರ ವ್ಯಕ್ತಿತ್ವ ಗೊತ್ತೇ ಇರಲಿಲ್ಲ ಎಂಬ ಅರ್ಥದಲ್ಲಿ ಮಾತನಾಡಿರುವುದಂತೂ ವಿಚಿತ್ರ. ಏಕೆಂದರೆ, ಗಾಂಧಿ ವಿಶ್ವಮಾನ್ಯ ವ್ಯಕ್ತಿಯಾಗಿ ರೂಪುಗೊಂಡು ಹಲವಾರು ದೇಶಗಳಲ್ಲಿ ಅವರ ಪ್ರತಿಮೆಗಳು ಸ್ಥಾಪನೆಯಾಗಿರುವುದು ಕಣ್ಣ ಮುಂದೆ ಇರುವಾಗ ೧೯೮೨ರವರೆಗೆ ಗಾಂಧಿ ಅಷ್ಟಾಗಿ ಗೊತ್ತೇ ಇರಲಿಲ್ಲ ಎಂಬ ಮಾತನ್ನು ಒಪ್ಪುವುದು ಕಷ್ಟ. ಹಾಗೆ ನೋಡಿದರೆ ಮೋದಿ ಅವರು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸುವ ಮಾರ್ಟಿನ್ ಲೂಥರ್ ಕಿಂಗ್, ನೆಲ್ಸನ್ ಮಂಡೆಲಾ ಮೊದಲಾದವರು ಮಹಾತ್ಮಗಾಂಧಿಯವರಿಂದಲೇ ಸತ್ಯಾಗ್ರಹದ ಪ್ರೇರಣೆ ಪಡೆದವರು ಎಂಬ ವಿಚಾರ ಬಹಿರಂಗ ರಹಸ್ಯ. ವಸ್ತುಸ್ಥಿತಿ ಹೀಗಿರುವಾಗಲೂ ಗಾಂಧಿ ಅವರ ಹೆಸರನ್ನು ಚುನಾವಣಾ ಪ್ರಚಾರ ಭಾಷಣದಲ್ಲಿ ಬಳಕೆ ಮಾಡಿಕೊಂಡ ಸ್ವರೂಪ ನಿಜಕ್ಕೂ ಯಾವುದೇ ರೀತಿಯಲ್ಲಿ ಸಮರ್ಥನೀಯವಲ್ಲ.
ನಿಜ. ರಣರಂಗದಂತೆ ಚುನಾವಣಾ ರಂಗದಲ್ಲೂ ಕೂಡಾ ಎಲ್ಲಾ ವಿಷಯಗಳೂ ಸಂಗತವೇ. ಆದರೆ, ಗಾಂಧಿಯಂತಹ ಯುಗಪುರುಷರನ್ನು ರಾಜಕೀಯ ಚೆದುರಂಗದಾಟಕ್ಕೆ ಎಳೆಯುವುದು ಸಲ್ಲ. ಏಕೆಂದರೆ, ಗಾಂಧಿ ಮೌಲ್ಯಾಧಾರಿತ ರಾಜಕಾರಣಿಯ ಪ್ರತಿಬಿಂಬ. ಈಗಿರುವುದು ಮೌಲ್ಯವಿಲ್ಲದ ರಾಜಕಾರಣದ ವಕ್ರಬಿಂಬ. ಹೀಗಾಗಿ ಗಾಂಧಿಯಂತಹ ಮಹಾತ್ಮರನ್ನು ಚುನಾವಣಾ ರಾಜಕಾರಣಕ್ಕೆ ಬಳಸಿಕೊಳ್ಳುವುದು ಯಾವುದೇ ದೃಷ್ಟಿಕೋನದಿಂದಲೂ ಜನ ಮೆಚ್ಚುವ ಸಂಗತಿಯಾಗಲಾರದು. ಚುನಾವಣಾ ನೀತಿ ಸಂಹಿತೆ ಇಂತಹ ವಿಚಾರದ ಪ್ರಸ್ತಾಪಕ್ಕೆ ಅಡ್ಡಿಬರುವುದಿಲ್ಲ. ಆದರೆ, ಯುಗಪುರುಷರಾಗಿ ಬಾಳಿ ಬೆಳಗಿದವರನ್ನು ಔಚಿತ್ಯಪೂರ್ಣವಾಗಿ ಬಳಸಿಕೊಳ್ಳುವುದು ನೇತಾರರ ವಿವೇಚನೆಯ ನಿರ್ಧಾರವಾಗಬೇಕೆ ವಿನಃ ಬೀಸು ಮಾತಿಗೆ ಇಂತಹವರು ಅಸ್ತ್ರವಾಗಬಾರದು.
ಲೋಕಸಭಾ ಚುನಾವಣೆಯ ೭ನೆಯ ಹಾಗೂ ಕಡೆಯ ಸುತ್ತಿಗೆ ಮತದಾನಕ್ಕೆ ಕೆಲವೇ ಗಂಟೆಗಳು ಬಾಕಿ ಉಳಿದಿರುವ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಮತದಾರರ ಧ್ರುವೀಕರಣಕ್ಕಾಗಿ ನಾನಾ ರೀತಿಯ ಮಾರ್ಗೋಪಾಯಗಳನ್ನು ರೂಪಿಸಿ ಬಳಕೆ ಮಾಡುವುದು ಸ್ವಾಭಾವಿಕ. ಆದರೆ, ಇಂತಹ ಸ್ವಾಭಾವಿಕ ವಿಚಾರಗಳಲ್ಲಿ ಔಚಿತ್ಯಪೂರ್ಣವಾದ ವಿಧಾನವಿರಬೇಕು. ಅಧಿಕಾರಾರೂಢ ಬಿಜೆಪಿ ಹಾಗೂ ಪ್ರತಿಪಕ್ಷ ಕಾಂಗ್ರೆಸ್ ಮತ್ತಿತರ ಪಕ್ಷಗಳ ನಡುವೆ ವೈಚಾರಿಕ ಇಲ್ಲವೇ ವ್ಯಕ್ತಿಗತ ದೋಷಾರೋಪಗಳು ನಡೆಯಬಹುದು. ಅದನ್ನು ನಿರ್ಬಂಧಿಸಲು ಯಾರಿಗೂ ಸಾಧ್ಯವಿಲ್ಲ. ಇದೊಂದು ರೀತಿಯ ಸ್ವೇಚ್ಚಾಚಾರವೆನಿಸಿದರೂ ವ್ಯಕ್ತಿಗಳ ಹೆಸರನ್ನು ಪ್ರಸ್ತಾಪಿಸುವಾಗ ಸಾಕಷ್ಟು ಎಚ್ಚರ ಇದ್ದಷ್ಟೂ ಸೂಕ್ತ. ಸಂಸದೀಯ ನಡವಳಿಕೆಗಳಲ್ಲಿ ಅನುಸರಿಸುವಂತೆ ನಿಧನರಾದ ಮಹನೀಯರ ಹೆಸರುಗಳನ್ನು ಅನಿವಾರ್ಯವಲ್ಲದಿದ್ದರೆ ಪ್ರಸ್ತಾಪಿಸುವುದು ಅನಗತ್ಯ. ಏಕೆಂದರೆ, ನಿಧನರಾದವರ ವಿರುದ್ಧ ಯಾರಾದರೂ ಟೀಕೆ ಟಿಪ್ಪಣಿ ಮಾಡಿದರೆ ಅದನ್ನು ಒಪ್ಪಲು ಅಥವಾ ನಿರಾಕರಿಸಲು ಅವರು ಜಗತ್ತಿನಲ್ಲಿಯೇ ಇಲ್ಲ. ಅವರ ಪರವಾಗಿ ಯಾರು ಎಷ್ಟೇ ಹೇಳಿದರೂ ಕೂಡಾ ಅದು ಕೇವಲ ವಕಾಲತಷ್ಟೆ. ಈಗ ಪ್ರಧಾನಿ ಮೋದಿ ಅವರು ಪ್ರಚಾರ ಭಾಷಣದಲ್ಲಿ ಗಾಂಧಿಯವರ ಹೆಸರಿನ ಪ್ರಸ್ತಾಪ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು ನಡೆದುಕೊಳ್ಳುತ್ತಿರುವುದು ಕೂಡಾ ಕೇವಲ ವಕೀಲರು ವಕಾಲತು ವಹಿಸುವ ರೀತಿಯಲ್ಲಿದೆ. ಇಂತಹ ಅನುಚಿತ ಬೆಳವಣಿಗೆಗಳನ್ನು ತಡೆಗಟ್ಟುವ ಒಂದೇ ವಿಧಾನವೆಂದರೆ ಅಂತಹ ಮುತ್ಸದ್ಧಿಗಳ ಹೆಸರನ್ನು ರಾಜಕೀಯ ವಿಷಯಗಳಿಗಾಗಿ ಪ್ರಸ್ತಾಪಿಸಬಾರದು ಎಂಬುದಷ್ಟೆ.
ದೇಶದ ಭವಿಷ್ಯವನ್ನು ರೂಪಿಸುವ ಪ್ರಸ್ತುತ ಲೋಕಸಭಾ ಚುನಾವಣೆಯ ಮತದಾನದ ಮುಕ್ತಾಯದ ಹಂತದಲ್ಲಿ ಇಡೀ ಪ್ರಚಾರದ ವೈಖರಿಯನ್ನು ಹಿನ್ನೋಟದಲ್ಲಿ ಗಮನಿಸಿದಾಗ ಯಾವುದೇ ಪಕ್ಷದಿಂದಲೂ ಕೂಡಾ ದೇಶೋದ್ಧಾರ, ಜನಕಲ್ಯಾಣ, ಸಾರ್ವಜನಿಕ ಹಿತಾಸಕ್ತಿ, ಬದುಕಿನ ಗುಣಮಟ್ಟ ಸುಧಾರಣೆ, ದೇಶದ ಸುರಕ್ಷತೆ ಮುಂತಾದ ಗಂಭೀರ ವಿಚಾರಗಳ ಪ್ರಸ್ತಾಪವಾಗಿರುವುದು ಜನರ ಗಮನಕ್ಕೆ ಬಂದಂತಿಲ್ಲ. ಪ್ರಣಾಳಿಕೆಯ ಜೊತೆಗೆ ಪ್ರಣಾಳಿಕೆಯನ್ನು ರೂಪಿಸುವ ಪಕ್ಷಗಳ ಮುಖಂಡರು ಜನರ ಮುಂದೆ ಪ್ರಮಾಣಪತ್ರದ ರೂಪದಲ್ಲಿ ಮಂಡಿಸುವ ವಾಗ್ವಿಲಾಸದಲ್ಲಿ ಜನಾದೇಶದ ತತ್ವ, ಸತ್ವ, ಮಹತ್ವಗಳನ್ನು ತಿಳಿಸಿ ಹೇಳಿದ್ದರೆ ಆಗ ಜನಾದೇಶದ ಸ್ವರೂಪ ಸ್ಪಷ್ಟವೂ ಖಚಿತವೂ ಆಗಿರುತ್ತಿತ್ತೇನೋ. ಆದರೆ, ಈಗ ಗುಂಪಿನಲ್ಲಿ ಗೋವಿಂದ ಎಂಬಂತೆ ವೈಯಕ್ತಿಕ ವಿವೇಚನೆಗೆ ಬಿಡುವು ಕೊಟ್ಟು ಸಮೂಹ ಸನ್ನಿಗೆ ಒಳಗಾಗಿ ಜನಾದೇಶ ಕೊಡುತ್ತಿರುವ ಮತದಾರರಿಗೆ ದೇಶೋದ್ಧಾರದ ಸದ್ಬುದ್ಧಿ ಬಂದರೆ ಆಗ ದೇಶ ಕಲ್ಯಾಣ ಕಟ್ಟಿಟ್ಟ ಬುತ್ತಿ.