For the best experience, open
https://m.samyuktakarnataka.in
on your mobile browser.

ಗಾಂಧೀಜಿ ಎಲ್ಲರಿಗೂ ಮಾದರಿ

04:14 AM Oct 02, 2024 IST | Samyukta Karnataka
ಗಾಂಧೀಜಿ ಎಲ್ಲರಿಗೂ ಮಾದರಿ

೧೯೪೭ ಆಗಸ್ಟ್ ೧೫ ಇಡೀ ಭಾರತ ದೇಶ ಸ್ವಾತಂತ್ರೋತ್ಸವದ ಸಂಭ್ರಮದಲ್ಲಿತ್ತು ಆದರೆ ಸ್ವಾತಂತ್ರ‍್ಯಕ್ಕೆ ಪ್ರಮುಖ ಕಾರಣಕರ್ತರಾದ ಮಹಾತ್ಮ ಗಾಂಧೀಜಿರವರು ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿದ್ದ ಹಿಂಸಾಚಾರವನ್ನು ತಡೆಯುವ ನಿಟ್ಟಿನಲ್ಲಿ ರಸ್ತೆ ರಸ್ತೆಯಲ್ಲಿ ಶಾಂತಿ ಸಭೆಗಳನ್ನು ಮಾಡುತ್ತ ಜನರ ನಡುವೆ ಇದ್ದರು.
೧೯೪೭ರಲ್ಲಿ ದೇಶಕ್ಕೆ ಸ್ವಾತಂತ್ರ‍್ಯ ಬಂದಾಗ ತಾವು ಬಯಸಿದ ಯಾವುದೇ ಹುದ್ದೆಯನ್ನು ಬೇಕಾದರೂ ಅಲಂಕರಿಸಬಹುದಾಗಿತ್ತು. ಆದರೆ ತಾನು ಹೋರಾಟ ನಡೆಸಿದ್ದು ಕೇವಲ ದೇಶದ ದಾಸ್ಯದ ಮುಕ್ತಿಗಾಗಿ ಹೊರತು ಅಧಿಕಾರಕ್ಕಾಗಿ ಅಲ್ಲ ಎಂದು ಅವುಗಳನ್ನು ತಿರಸ್ಕರಿಸಿದರು.
ಬದುಕಿನ ಉದ್ದಕ್ಕೂ ಎಂತಹ ವಾತಾವರಣದಲ್ಲೂ ನಿಮ್ಮ ಉಡುಪು ಬದಲಾಗಲಿಲ್ಲ ಎಂತಹ ಸಂದರ್ಭದಲ್ಲಿ ನಿಮ್ಮ ಬದುಕಿನ ಶೈಲಿಯೂ ಬದಲಾಗಲಿಲ್ಲ. ಸರಳತೆ ಮತ್ತು ಅತಿ ಕಡಿಮೆ ಉಡುಪು ಧರಿಸುವುದರ ಮೂಲಕ ನೀವು ಸರಳತೆಯ ಸಂಕೇತವಾಗಿ ಬದ್ಧತೆಯ ಬದುಕಿನ ಭದ್ರಬುನಾದಿಯಾಗಿ ಇದ್ದೀರಿ.
ದೇಶಕ್ಕೆ ಸ್ವಾತಂತ್ರ‍್ಯವನ್ನು ತಂದುಕೊಟ್ಟ ತಾವು ಮನಸ್ಸು ಮಾಡಿದ್ದರೆ ನಿಮ್ಮ ಕುಟುಂಬದವರನ್ನು ಯಾವುದಾದರೂ ಒಂದು ಪ್ರಮುಖವಾದ ಅಧಿಕಾರದ ಹುದ್ದೆಗಳಲ್ಲಿ ನೇಮಿಸಬಹುದಾಗಿತ್ತು. ತಮಗೆ ಇಷ್ಟ ಬಂದಷ್ಟು ಮಂದಿಯನ್ನು ನಿಮ್ಮವರನ್ನು ಅಧಿಕಾರದಲ್ಲಿ ಸ್ಥಾಪಿಸಬಹುದಾಗಿತ್ತು. ಆದರೆ ನೀವು ಆ ದಿಕ್ಕಿನಲ್ಲಿ ಒಂದು ಕ್ಷಣವೂ ಯೋಚಿಸದೆ ನಿಸ್ವಾರ್ಥದಿಂದ ನಡೆದುಕೊಂಡು ಎಲ್ಲರಿಗೂ ಮಾದರಿಯಾಗಿದ್ದಾರೆ.
ನಿಮಗಿದ್ದ ಜನಪ್ರಿಯತೆ ನಿಮಗಿದ್ದ ಪ್ರಭಾವ ಇವುಗಳಿಂದ ನಿಮ್ಮ ಕುಟುಂಬದ ಸದಸ್ಯರನ್ನು ನಾಲ್ಕು ಮಕ್ಕಳಲ್ಲಿ ಒಂದಷ್ಟು ಮಂದಿಯನ್ನಾದರೂ ಉತ್ತಮವಾದಂತಹ ಶಿಕ್ಷಣವನ್ನು ಕೊಡಿಸಿ ವಿದೇಶದಲ್ಲಿ ಓದಿಸಿ ಅವರಿಗೆ ಆರ್ಥಿಕವಾದಂತಹ ಭದ್ರತೆಯನ್ನು ಅಥವಾ ರಾಜಕೀಯವಾದ ಭದ್ರತೆಯನ್ನು ಕಲ್ಪಿಸಿ ಕೊಡಬಹುದಾಗಿತ್ತು. ಒಂದು ಕ್ಷಣವೂ ನೀವು ಸ್ವಾರ್ಥಕ್ಕಾಗಿ ನಿಮ್ಮ ಸಂಸಾರಕ್ಕಾಗಿ ನಿಮ್ಮ ಪ್ರಭಾವವನ್ನು ಬಳಸಲೇ ಇಲ್ಲ ಅದಕ್ಕಾಗಿ ನಿಮ್ಮ ಹಿರಿಯ ಮಗ ಹರಿಲಾಲ ತಾನು ಬದುಕಿರುವ ತನಕ ನೀವು ಬದುಕಿರುವ ತನಕ ನಿಮಗೆ ಕೊಟ್ಟಂತಹ ಕಾಟ ಮಾಡಿದ ಅವಮಾನ ಇವುಗಳೆಲ್ಲವನ್ನು ನೀವು ನುಂಗಿಕೊಂಡು ಜನಸೇವೆಯನ್ನು ಮಾಡುತ್ತಲೇ ಬದುಕನ್ನು ಸಾಗಿಸಿ ಮುನ್ನಡೆದರಿ ಅದಕ್ಕಾಗಿ ನೀವು ಎಲ್ಲರಿಗೂ ಮಾದರಿ.
ಆಶ್ರಮದಲ್ಲಿ ಸಣ್ಣ ಸಣ್ಣ ವಿಚಾರಗಳಿಗೂ ಉತ್ತಮವಾದಂತಹ ಕಣ್ಣುಗಳಿಂದ ಅವುಗಳನ್ನು ಅವಲೋಕಿಸುತ್ತ ಸಣ್ಣ ತಪ್ಪು ಆಗದಂತೆ ಎಚ್ಚರಿಕೆ ವಹಿಸುತ್ತಿದ್ದೀರಿ. ನಿಮ್ಮ ಧರ್ಮಪತ್ನಿ ಎರಡು ರೂಪಾಯಿಯ ಲೆಕ್ಕ ಕೊಡಲಿಲ್ಲವೆಂದು ಮೊಮ್ಮಕ್ಕಳಿಗೆ ಒಂದಷ್ಟು ಚಮಚ ಹೆಚ್ಚಿನ ಸಕ್ಕರೆಯನ್ನು ಹಾಕಿದಿರಿ ಎಂದು ನೀವು ಪ್ರಾಯಶ್ಚಿತ್ತಕ್ಕಾಗಿ ಉಪವಾಸವನ್ನು ಮಾಡಿ ನಿಮ್ಮ ಬದ್ಧತೆಯಲ್ಲಿನ ಕಠಿಣತೆಯನ್ನು ತೋರಿಸಿದ್ದೀರಿ. ಅಸ್ಪೃಶ್ಯತೆಯ ನಿವಾರಣೆಗಾಗಿ ನೀವು ಉಪವಾಸವನ್ನು ಮಾಡುವುದರ ಮೂಲಕ ನಿಮ್ಮ ದೇಹವನ್ನು ದಂಡಿಸಿಕೊಂಡಿರಿ. ಅಸ್ಪೃಶ್ಯಕರಿಗೆ ಪ್ರವೇಶವಿಲ್ಲದ ದೇವಾಲಯಗಳಿಗೆ ಎಷ್ಟೇ ಆಹ್ವಾನಗಳು ಬಂದರೂ ಅದನ್ನು ತಿರಸ್ಕರಿಸಿ ನಡೆದಿರಿ.
ದಕ್ಷಿಣ ಆಫ್ರಿಕಾದಲ್ಲಿ ತಾವು ಹಲವಾರು ವರ್ಷಗಳ ಕಾಲ ವಕೀಲರಾಗಿ ಹೋರಾಟವನ್ನು ನಡೆಸಿ ಅಲ್ಲಿನ ಕಪ್ಪು ಜನರಿಗೆ ಮತ್ತು ಭಾರತೀಯರಿಗೆ ರಾಜಕೀಯವಾದಂತಹ ಅಧಿಕಾರವನ್ನು ಸಾಮಾಜಿಕ ಗೌರವವನ್ನು ಕಲ್ಪಿಸಿ ಕೊಡುವ ನಿಟ್ಟಿನಲ್ಲಿ ಅದೆಷ್ಟು ಹಿಂಸೆಯನ್ನು ಅನುಭವಿಸಿದ್ದೀರಿ ಅಂತಿಮವಾಗಿ ಆಫ್ರಿಕಾವನ್ನು ತೊರೆಯುವ ಸಂದರ್ಭದಲ್ಲಿ ಅಲ್ಲಿ ಗಳಿಸಿದ್ದ ಎಲ್ಲವನ್ನು ಅಲ್ಲಿಯೇ ಟ್ರಸ್ಟ್ ಒಂದನ್ನು ಸ್ಥಾಪಿಸಿ ಅವರಿಗೆ ಒಪ್ಪಿಸಿ ಬರುವ ವೇಳೆಯಲ್ಲಿ ನಿಮ್ಮ ಹೆಂಡತಿಯ ಮೈ ಮೇಲಿದ್ದ ಬಂಗಾರದ ಒಡವೆಯನ್ನು ಅವರಿಂದ ತೆಗೆದುಕೊಂಡು ಹಿಂತಿರುಗಿಸಿದ್ದೀರಿ ಇಂತಹ ಕಠಿಣವಾದಂತಹ ನಡವಳಿಕೆ ಪ್ರಾಮಾಣಿಕತೆಯ ವಿಚಾರದಲ್ಲಿ ನಿಮ್ಮನ್ನು ಬಿಟ್ಟು ಬೇರೆಯವರಿಂದ ನಾವು ಕಾಣಲು ಸಾಧ್ಯವೇ ಇಲ್ಲ.
ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದು ಹೋರಾಟದಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಲು ಗೋಪಾಲಕೃಷ್ಣ ಗೋಕುಲೆರವರ ಮಾತಿನಂತೆ ಒಂದು ವರ್ಷಗಳ ಕಾಲ ರೈಲಿನಲ್ಲಿ ಸಾಧಾರಣವಾದ ಪ್ರಯಾಣಿಕರಾಗಿ ದೇಶವನ್ನು ಸುತ್ತಿ ದೇಶದ ಸಂಸ್ಕೃತಿ, ಸಮಸ್ಯೆಯನ್ನು ಅರಿತು ನಂತರ ಸಂಪೂರ್ಣ ತಯಾರಿಯೊಂದಿಗೆ ಸ್ವಾತಂತ್ರ ಚಳವಳಿಗೆ ಧುಮಕಿ ಹೋರಾಟಕ್ಕೆ ಹೊಸ ರೂಪವನ್ನು ಕೊಟ್ಟಿರಿ ರಚನಾತ್ಮಕ ಕಾರ್ಯಕ್ರಮಗಳ ಮೂಲಕ ಜನರನ್ನು ಸಂಘಟಿಸಿ ಆ ಮೂಲಕ ಅವರನ್ನು ಹೋರಾಟದ ದಿಕ್ಕಿನಲ್ಲಿ ಸಾಗುವಂತೆ ನೀವು ಮಾಡಿದಂತಹ ಸಂಘಟನೆಯ ಆ ಚತುರತೆ ಎಲ್ಲರಿಗೂ ಮಾದರಿಯಾಗಿದೆ.
ಆತ್ಮಚರಿತ್ರೆಯನ್ನು ಬರೆದುಕೊಳ್ಳುವವರು, ಸತ್ಯವನ್ನಷ್ಟೇ ಹೇಳಬೇಕು, ತಮ್ಮನ್ನು ವೈಭವೀಕರಿಸಿ ಕೊಳ್ಳಬಾರದು, ಯಾವುದನ್ನು ಮುಚ್ಚಿಡಬಾರದು ಎನ್ನುವುದನ್ನು ನಿಮ್ಮ ಆತ್ಮಚರಿತ್ರೆಯಲ್ಲಿ ನೀವು ತೋರಿಸಿಕೊಟ್ಟು ನಿಮ್ಮ ತಪುö್ಪಗಳನ್ನು ಒಪ್ಪಿಕೊಂಡು ನಿಮ್ಮ ನ್ಯೂನ್ಯತೆಗಳನ್ನು ಒಪ್ಪಿಕೊಂಡು ಸತ್ಯವಂತಿಕೆಯ ನಿಮ್ಮ ನಡವಳಿಕೆ ಎಲ್ಲರಿಗೂ ಮಾದರಿಯಾಗಿದೆ.
ಆಶ್ರಮದಲ್ಲಿ ಸಮಾಜದ ಎಲ್ಲ ವರ್ಗದ ಜನರಿಗೆ ಅವಕಾಶವನ್ನು ಕಲ್ಪಿಸಿ ಕೊಟ್ಟು ಅಲ್ಲಿಯೂ ಶೌಚಾಲಯವನ್ನು ತೊಳೆಯುವಂತಹ ಕೆಲಸವನ್ನು ಮಾಡುತ್ತಾ ಸಾರ್ವಜನಿಕ ಜೀವನಕ್ಕೆ ಬರುವ ವ್ಯಕ್ತಿ ಎಷ್ಟರಮಟ್ಟಿಗೆ ಸರಳವಾಗಿ ಬದುಕಬೇಕು ಎನ್ನುವುದನ್ನು ತೋರಿಸಿಕೊಟ್ಟಿದ್ದೀರಿ. ಕಾಂಗ್ರೆಸ್ ಇತಿಹಾಸದಲ್ಲಿ ಕರ್ನಾಟಕದ ಬೆಳಗಾವಿಯಲ್ಲಿ ೧೯೨೪ರಲ್ಲಿ ನಡೆದಂತಹ ಅಧಿವೇಶನದಲ್ಲಿ ಒಂದು ಬಾರಿ ಮಾತ್ರ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ನೀವು ಎಂದೂ ಸಹ ಪಕ್ಷದ ಹುದ್ದೆಯನ್ನು ಸಹ ಬಯಸದೇ ಮಾದರಿಯಾಗಿದ್ದಾರೆ.
ಅವಿವಾಹಿತರಾಗಿ ಪ್ರಾಮಾಣಿಕವಾಗಿ ಬದುಕಬಹುದು, ಆದರೆ ಸಂಸಾರಸ್ಥರಾಗಿ ಸಾರ್ವಜನಿಕ ಬದುಕಿನಲ್ಲಿರುವ ಜನ ಜನಪ್ರಿಯತೆ ಮತ್ತು ಅವಕಾಶಗಳು ಹೇರಳವಾಗಿ ದೊರಕ ಸಂದರ್ಭದಲ್ಲಿ ಪ್ರಾಮಾಣಿಕವಾಗಿ ಸಾಹಸಿವೆ ಕಾಳಿನಷ್ಟು ಲೋಪ ಬರದಂತೆ ಬದುಕುವುದು ಕಷ್ಟವಾದ ಮಾರ್ಗವಾಗಿರುತ್ತದೆ ಅಂತಹ ಕಠಿಣ ಮಾರ್ಗದಲ್ಲಿ ಸಾಗಿದ್ದೀರಿ.
ರಾಷ್ಟçಪಿತ ಎಂದು ಅಥವಾ ಮಹಾತ್ಮ ಎಂದು ಘೋಷಿಸಿ ಎಂದು ನೀವು ಕೇಳಿಕೊಳ್ಳಲಿಲ್ಲ. ನಿಮ್ಮ ನಡವಳಿಕೆ ನಿಮ್ಮ ವಿಚಾರ ನಿಮ್ಮ ಬದುಕು ನಿಮ್ಮನ್ನ ರಾಷ್ಟçಪಿತನನ್ನಾಗಿಸಿತು ಮಹಾತ್ಮನನ್ನಾಗಿಸಿತು. ನಿಮ್ಮ ಬದುಕಿನ ಹಾದಿ ಬಹಳ ಕಠಿಣ, ಆ ಹಾದಿಯಲ್ಲಿ ಸಾಗುವುದು ಕ್ಲಿಷ್ಟಕರ.
ನಿಮ್ಮ ಪತ್ನಿ ಕಸ್ತೂರಿಬಾ ಅವರನ್ನು ನಿಮ್ಮ ದಾರಿಯಲ್ಲಿ ಸಾಗುವಂತೆ ಮಾನಸಿಕವಾಗಿ ಸಿದ್ಧಗೊಳಿಸಿದ ನೀವು ನಿಮ್ಮ ಪುತ್ರರಾದ ಹರಿಲಾಲ ಮಡಿಲಾಲ ರಾಮದಾಸ ದೇವದಾಸ ಇವರುಗಳಿಗೆ ನೀವು ಬಿಟ್ಟು ಹೋದದ್ದು ರಕ್ತ ಸಿಕ್ತವಾಗಿದ್ದ ತುಂಡು ಪಂಚೆ. ಒಂದು ಕನ್ನಡಕ. ಕೋಲು, ಗಡಿಯಾರದ ತುಂಡು ಹೋಗಲಿ ಅದು ಸಹ ಗಾಂಧಿ ಮ್ಯೂಸಿಯಂನಲ್ಲಿ ಸ್ಥಾಪಿತವಾಗಿದೆ.
ಹೀಗಾಗಿ ನಿಮ್ಮ ಕುಟುಂಬಕ್ಕಾಗಿ ನಿಮ್ಮ ಮಕ್ಕಳಿಗಾಗಿ ಏನನ್ನೂ ಕೊಡದೆ ಹೋದಂತಹ ನಿಮ್ಮ ಬದುಕು ಆಳುತ್ತಿರುವ ಜನರಿಗೆ ಕಾಣುತ್ತಲೇ ಇಲ್ಲ. ಅದೆಷ್ಟು ಪ್ರೀತಿ ಸಂಸಾರದ ಮೇಲೆ ಅದೆಷ್ಟು ಒಲವು ತಮ್ಮ ಕುಟುಂಬದ ಕುಡಿಗಳ ಮೇಲೆ ಯೋಗ್ಯತೆ ಇರಲಿ ಇಲ್ಲದಿರಲಿ ಸಾಮರ್ಥ್ಯ ಇರಲಿ ಇಲ್ಲದಿರಲಿ, ಹಿರಿತನ ಇರಲಿ ಇಲ್ಲದಿರಲಿ, ಸೇವೆಯ ಮನೋಭಾವ ಇರಲಿ ಇಲ್ಲದಿರಲಿ, ಅವರಿಗಾಗಿ ಸ್ಥಿರಸ್ಥಿತಿಗಳ ಮಾಡಬೇಕು ಅವರನ್ನು ಅಧಿಕಾರದ ಸ್ಥಾನದಲ್ಲಿ ಉಳಿಸಬೇಕು ಎಂಬ ಎಷ್ಟು ಉತ್ಸಾಹ ಆದರೂ ನಿಮ್ಮನ್ನು ಜಪ ಮಾಡುವವರು ಬಹಳಷ್ಟು ಮಂದಿ ಅವರೇ ಆಗಿರುವುದರಿಂದ ಒಂದು ರೀತಿಯಲ್ಲಿ ನಗುವಿನ ಸಂಗತಿಯಾಗಿದೆ.

- ಕೆ.ಎಸ್‌. ನಾಗರಾಜ