For the best experience, open
https://m.samyuktakarnataka.in
on your mobile browser.

ಗುಜರಾತ್ ಬೆಳೆಯುತ್ತಿದ್ದರೆ ಮಹಾರಾಷ್ಟ್ರ ಚಿಕ್ಕದಾಗುತ್ತಿದೆ

07:15 AM Nov 17, 2024 IST | Samyukta Karnataka
ಗುಜರಾತ್ ಬೆಳೆಯುತ್ತಿದ್ದರೆ ಮಹಾರಾಷ್ಟ್ರ ಚಿಕ್ಕದಾಗುತ್ತಿದೆ

ಹಿಂದೆ ಮಹಾರಾಷ್ಟ್ರ ದೇಶದ ಆರ್ಥಿಕ ಬೆಳವಣಿಗೆಗೆ ದಿಕ್ಸೂಚಿಯಾಗಿತ್ತು. ಈಗ ಮಹಾರಾಷ್ಟ್ರವನ್ನು ಗುಜರಾತ್ ಮೀರಿಸುತ್ತಿದೆ. ಎಲ್ಲ ಕೈಗಾರಿಕೆಗಳು ಈಗ ಗುಜರಾತ್‌ದತ್ತ ಮುಖ ಮಾಡಿವೆ. ಜಿಡಿಪಿ ಬೆಳವಣಿಗೆ ಇಳಿಮುಖ ಕಂಡಿದೆ. ಅಲ್ಲದೆ ನಿರುದ್ಯೋಗ ಸಮಸ್ಯೆ ತೀವ್ರಗೊಳ್ಳುತ್ತಿದೆ. ಇದಕ್ಕೆ ಕಾರಣ ಹುಡುಕುವುದು ಕಷ್ಟವೇನಲ್ಲ. ಮಹಾರಾಷ್ಟ್ರದಲ್ಲಿ ಡಬ್ಬಲ್ ಎಂಜಿನ್ ಸರ್ಕಾರ ಅಲ್ಲದೆ ಮತ್ತ ಮತ್ತೆ ಸರ್ಕಾರಗಳ ಬದಲಾವಣೆ. ಇದರಿಂದ ಅಸ್ಥಿರತೆ ಕಾಡುತ್ತಿರುವುದಂತೂ ನಿಜ. ಇದಕ್ಕೆ ಪ್ರತಿಯಾಗಿ ಗುಜರಾತ್‌ನಲ್ಲಿ ಉದ್ಯೋಗ ಅವಕಾಶಗಳು ಅಧಿಕಗೊಳ್ಳುತ್ತಿದೆ. ಕೇಂದ್ರದ ಕೃಪೆ ಕೂಡ ಅತ್ತಕಡೆ ಕಂಡುಬಂದಿರುವುದು ಈ ಬೆಳವಣಿಗೆಗೆ ಕಾರಣ ಎಂಬುದು ಸ್ಪಷ್ಟ.
ಹಿಂದೆ ಮಹಾರಾಷ್ಟ್ರ ರಚನೆಯಾದಾಗ ಕಾಂಗ್ರೆಸ್ ಪಕ್ಷ ರಾಜ್ಯದ ಬೆಳವಣಿಗೆಗೆ ಭದ್ರ ಬುನಾದಿ ಹಾಕಿತು. ಒಟ್ಟು ೨೯ ಮುಖ್ಯಮಂತ್ರಿಗಳು ಆಳ್ವಿಕೆ ನಡೆಸಿದರು. ಇದರಲ್ಲಿ ಮನೋಹರ ಜೋಶಿ, ನಾರಾಯಣ ರಾಣೆ, ದೇವೇಂದ್ರ ಫಡ್ನವೀಸ್, ಉದ್ಧವ್ ಠಾಕ್ರೆ, ಏಕನಾಥ ಶಿಂಧೆ ಮಾತ್ರ ಪ್ರತಿಪಕ್ಷದ ಮುಖ್ಯಮಂತ್ರಿಗಳು. ಕಾಂಗ್ರೆಸ್ ಪಕ್ಷ ಮಹಾರಾಷ್ಟ್ರವನ್ನು ಕೈಗಾರಿಕೆಯಲ್ಲಿ ನಂ.೧ ಆಗುವಂತೆ ಮಾಡಿತು. ಆರ್ಥಿಕ ಬೆಳವಣಿಗೆಯಾದರೂ ಉದ್ಯೋಗ ಅವಕಾಶ ಅಧಿಕಗೊಳ್ಳಲಿಲ್ಲ. ಶೇಕಡ ೧೦.೮ ನಿರುದ್ಯೋಗವಿದ್ದರೆ ಮಹಿಳೆಯರಲ್ಲಿ ಶೇ. ೧೧.೧ ನಿರುದ್ಯೋಗ ಕಾಡುತ್ತಿದೆ. ೧೮,೩೦೦ ಹುದ್ದೆಗಳಿಗೆ ೧೧ ಲಕ್ಷ ಅಭ್ಯರ್ಥಿಗಳಿದ್ದಾರೆ. ಗ್ರಾಮಲೆಕ್ಕಿಗ ಹುದ್ದೆ ಇರುವುದು ೪೬೦೦. ಅದಕ್ಕೆ ಸಾವಿರಾರು ಜನ ಅರ್ಜಿ ಇನ್ನೂ ಹಾಗೆ ಇದೆ. ಟಾಟಾ ಏರ್‌ಬಸ್, ವೇದಾಂತ್ ಸೆಮಿಕಂಡಕ್ಟರ್ ತಯಾರಿಕೆ ಘಟಕ ಗುಜರಾತ್‌ಗೆ ಹೋಗಿದೆ. ಮಹಾರಾಷ್ಟ್ರದಲ್ಲೇ ಜಿಲ್ಲೆಯಿಂದ ಜಿಲ್ಲೆಗೆ ಬಡತನ ವ್ಯತ್ಯಾಸವಾಗುತ್ತದೆ. ಆರ್ಥಿಕ ಅಸಮಾನತೆ ಕಣ್ಣಿಗೆ ಕಾಣುವಷ್ಟು ಬೆಳೆದಿದೆ. ಮುಂಬೈ, ಪುಣೆ, ಥಾಣೆಯಲ್ಲಿ ಅತ್ಯಂತ ಶ್ರೀಮಂತರಿದ್ದರೆ, ನರ್ದುಬಾರ್, ವಾಶಿ, ಗಾಡ್ ಚಿರೋಳಿ, ಯಾವತ್ಮಲ್, ಹಿಂಗೋಳಿ, ಬುಲ್ದಾನಗಳಲ್ಲಿ ಕಡು ಬಡವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕಳೆದ ೧೦ ವರ್ಷಗಳಲ್ಲಿ ಕೆಲವರ ತಲಾವಾರು ಆದಾಯ ೨.೪ ಲಕ್ಷ ರೂ. ತಲುಪಿದೆ. ೨೦೨೩ ರಲ್ಲಿ ಮಹಾರಾಷ್ಟ್ರದಲ್ಲಿ ೨೮೫೧ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೇಂದ್ರ ಸರ್ಕಾರ ಮನಬಂದಂತೆ ಈರುಳ್ಳಿ ರಫ್ತಿನ ನೀತಿಯನ್ನು ಬದಲಿಸಿದ್ದು ರೈತರಿಗೆ ಅಪಾರ ನಷ್ಟವನ್ನು ತಂದುಕೊಟ್ಟಿದೆ. ಕೇಂದ್ರ ಸರ್ಕಾರ ಮೊದಲು ಈರುಳ್ಳಿ ರಫ್ತಿಗೆ ನಿಷೇಧ ಹೇರಿತು. ಆಮೇಲೆ ಒತ್ತಡಕ್ಕೆ ಮಣಿದು ಅದನ್ನು ಹಿಂದಕ್ಕೆ ಪಡೆಯಿತು. ರಫ್ತು ಬೆಲೆಯನ್ನು ನಿಗದಿಪಡಿಸಿ ರಫ್ತು ತೆರಿಗೆಯನ್ನು ಶೇ. ೪೦ರಷ್ಟು ಹೆಚ್ಚಿಸಿತು. ಜೂನ್ ತಿಂಗಳಲ್ಲಿ ೧೫ ಲಕ್ಷ ಟನ್ ಈರುಳ್ಳಿ ರಫ್ತಾಗುತ್ತಿತ್ತು. ಈಗ ೨.೬ ಲಕ್ಷ ಟನ್‌ಗೆ ಇಳಿದಿದೆ. ಡಬ್ಬಲ್ ಎಂಜಿನ್ ಸರ್ಕಾರದಲ್ಲಿ ಒಂದು ಎಂಜಿನ್ ಎಲ್ಲವನ್ನೂ ಗುಜರಾತ್‌ಗೆ ತೆಗೆದುಕೊಂಡು ಹೋಗುತ್ತಿದೆ. ಮತ್ತೊಂದು ಎಂಜಿನ್ ಸ್ಥಗಿತಗೊಂಡಿದೆ. ಆರ್ಥಿಕ ಪ್ರಗತಿ ಮಂದಗತಿಯಲ್ಲಿ ಸಾಗಿರುವುದು ಮತದಾರರಲ್ಲಿ ಅಸಮಾಧಾನ ಮೂಡಿಸಿರುವುದಂತೂ ನಿಜ.
ಮಹಾರಾಷ್ಟ್ರ ಜಿಡಿಪಿ ಶೇ.೯.೪ ರಿಂದ ಶೇ.೭.೬ಕ್ಕೆ ಇಳಿದಿದೆ. ಸೇವಾ ವಲಯದಿಂದ ಶೇ.೬೦ರಷ್ಟು ಆದಾಯ ಬರುತ್ತಿದೆ. ಕೈಗಾರಿಕೆ ಕ್ಷೇತ್ರದಿಂದ ಶೇ.೨೬.೮, ಕೃಷಿ ಶೇ.೧೩.೨ ರಷ್ಟು ಬೆಳವಣಿಗೆ ಕಂಡುಬಂದಿದೆ. ನಿರುದ್ಯೋಗ ಶೇ.೧೦.೮ ತಲುಪಿದೆ. ವಿತ್ತೀಯ ಕೊರತೆ ಅಧಿಕಗೊಂಡಿದೆ. ಮಹಾರಾಷ್ಟ್ರ ಕಳೆದ ೧೨ ವರ್ಷಗಳಲ್ಲಿ ಶೇ.೧೫೦ ರಷ್ಟು ಬೆಳವಣಿಗೆ ಕಂಡಿದ್ದರೆ ಗುಜರಾತ್ ಶೇ.೧೬೦ ಬೆಳವಣಿಗೆ ಗುರುತಿಸಿಕೊಂಡಿದೆ. ಮಹಾರಾಷ್ಟ್ರ ಮೀರಿ ಗುಜರಾತ್ ಆರ್ಥಿಕ ಪ್ರಗತಿ ಕಾಣುವುದಕ್ಕೆ ಅಲ್ಲಿರುವ ರಾಜಕೀಯ ಸ್ಥಿರತೆಯೂ ಕಾರಣ. ಈಗ ಚುನಾವಣೆ ಸಮೀಪಿಸಿದೆ. ಮಹಾರಾಷ್ಟ್ರ ಮತದಾರರು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಕಾಲ ಬಂದಿದೆ. ಹಿಂದೆ ಇದ್ದ ಆರ್ಥಿಕ ಬೆಳವಣಿಗೆ ಕುಸಿಯಲು ಕಾರಣ ಏನು ಎಂಬುದನ್ನು ಗುರುತಿಸುವುದು ಬಹಳ ಮುಖ್ಯ. ಪ್ರಮುಖವಾಗಿ ನಿರುದ್ಯೋಗ ಕಡಿಮೆ ಮಾಡುವುದು ಅಗತ್ಯ. ಈಗ ಯುವ ಪೀಳಿಗೆ ಉದ್ಯೋಗಕ್ಕೆ ಕಾಯುತ್ತಿರುವುದು ಸ್ಪಷ್ಟ. ಎಲ್ಲರೂ ಸ್ವಯಂ ಉದ್ಯೋಗ ಬಯಸಿದರೆ ಅದಕ್ಕೆ ಬಂಡವಾಳ ಹೂಡಿಕೆಯಾಗುವುದು ಕಷ್ಟ. ಸರ್ಕಾರ ಹೆಚ್ಚು ಉದ್ಯೋಗ ಅವಕಾಶವನ್ನು ಹೆಚ್ಚಿಸುವ ರೀತಿಯಲ್ಲಿ ಯೋಜನೆಗಳನ್ನು ರೂಪಿಸಬೇಕು. ಹಿಂದೆ ಕಾಂಗ್ರೆಸ್ ಸರ್ಕಾರ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಿತ್ತು. ಈಗ ಖಾಸಗಿ ಬಂಡವಾಳ ಹೂಡಿಕೆಯಾದರೆ ಮಾತ್ರ ಉದ್ಯೋಗ ಅವಕಾಶ ಅಧಿಕಗೊಳ್ಳುತ್ತದೆ ಎಂಬ ಭಾವನೆ ಮೂಡಿದೆ. ಖಾಸಗಿ ಬಂಡವಾಳ ಹೂಡಿಕೆ ಅಧಿಕಗೊಳ್ಳಬೇಕು ಎಂದರೆ ಜನರಿಗೆ ಸರ್ಕಾರದ ಮೇಲೆ ವಿಶ್ವಾಸ ಮೂಡಬೇಕು. ಅಸ್ಥಿರ ಸರ್ಕಾರಗಳು ಆರ್ಥಿಕ ಬೆಳವಣಿಗೆಗೆ ಮಾರಕ. ಮುಂಬರುವ ಚುನಾವಣೆಯಲ್ಲಿ ಮತದಾರರು ಆರ್ಥಿಕವಾಗಿ ಚಿಂತಿಸುವ ಸಂದರ್ಭ ಒದಗಿಬಂದಲ್ಲಿ ಬದಲಾವಣೆ ಬರುವುದಂತೂ ಖಚಿತ. ರಾಜಕೀಯ ಪಕ್ಷಗಳು ಆರ್ಥಿಕ ಚಿಂತನೆಗಳತ್ತ ಗಮನಹರಿಸುವುದು ಸೂಕ್ತ. ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳನ್ನೂ ಆರ್ಥಿಕವಾಗಿ ಬೆಳೆಯಲು ಬೇಕಾದ ವಾತಾವರಣ ರೂಪಿಸಬೇಕು.