For the best experience, open
https://m.samyuktakarnataka.in
on your mobile browser.

ಗುಡಿಕೈಗಾರಿಕೆ ಗ್ರಾಮಗಳ ಆರ್ಥಿಕತೆಯ ತಳಹದಿ

01:00 PM Jan 30, 2025 IST | Samyukta Karnataka
ಗುಡಿಕೈಗಾರಿಕೆ ಗ್ರಾಮಗಳ ಆರ್ಥಿಕತೆಯ ತಳಹದಿ

ಗಾಂಧಿ ಭಾರತವನ್ನು ನಿರ್ಮಿಸಲು ಎಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡಬೇಕು

ಬೆಂಗಳೂರು: ಗಾಂಧೀಜಿಯವರ ತತ್ವಾದರ್ಶಗಳು ಇಂದಿಗೂ ಪ್ರಸ್ತುತ. ನನ್ನ ಜೀವನವೇ ನನ್ನ ಸಂದೇಶ ಎಂದು ನುಡಿದಿದ್ದ ಮಹಾತ್ಮ ಗಾಂಧೀಜಿಯವರ ಹೋರಾಟದ ಬದುಕು ಪ್ರತಿಯೊಬ್ಬರಿಗೂ ಪ್ರೇರಣಾದಾಯಕ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಅವರು ರಾಷ್ಟ್ರೀಯ ಹುತಾತ್ಮ ದಿನದ ಅಂಗವಾಗಿ ವಿಧಾನಸೌಧದಲ್ಲಿ ಮಹಾತ್ಮ ಗಾಂಧೀಜಿಯವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ ಜನವರಿ 30, 1948 ರಂದು ಮತಾಂಧನಾಗಿದ್ದ ನಾಥೂರಾಮ್ ಗೋಡ್ಸೆ ಮಹಾತ್ಮ ಗಾಂಧೀಜಿಯವರನ್ನು ಹತ್ಯೆ ಮಾಡಿದ ದಿನ. ಗಾಂಧೀಜಿಯವರು ಇಹಲೋಕವನ್ನು ತ್ಯಜಿಸಿದ್ದರೂ, ಅವರ ಮೌಲ್ಯಗಳನ್ನು ಕೊನೆಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ. ಸತ್ಯ, ಅಹಿಂಸೆಗಳ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾನ್ ವ್ಯಕ್ತಿ ಅವರು. ಜಗತ್ತಿನ ಅಹಿಂಸಾ ಹೋರಾಟಗಳ ನಾಯಕತ್ವ ವಹಿಸಿದ್ದರು. ಗಾಂಧೀಜಿ ಮೊದಲು ಭಾರತಕ್ಕೆ ಬಂದು ತಳಮಟ್ಟದಿಂದ ದೇಶವನ್ನು ಅರಿಯಲು ಪ್ರಯತ್ನಿಸಿ, ನಂತರ ದೇಶದ ಜನರನ್ನು ಬ್ರಿಟೀಷರ ದಾಸ್ಯದಿಂದ ಮುಕ್ತಗೊಳಿಸಿದರು.

1924ರಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆಯನ್ನು ಗಾಂಧಿ ವಹಿಸಿದ್ದರು. ಈ ಅಧಿವೇಶನದ ಶತಮಾನೋತ್ಸವದ ನೆನಪಿಗಾಗಿ ಬೆಳಗಾವಿಯಲ್ಲಿ ಕಾಂಗ್ರೆಸ್ ನ ಕಾರ್ಯಕಾರಿ ಸಮಿತಿ ಸಭೆ ನಡೆಸಿ, ಜನವರಿ 21ರಂದು ಬೆಳಗಾವಿಯ ಸುವರ್ಣಸೌಧದಲ್ಲಿ ಗಾಂಧೀಜಿಯವರ ಪ್ರತಿಮೆ ಅನಾವರಣಗೊಳಿಸಿ, ನಂತರ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಘೋಷವಾಕ್ಯದೊಂದಿಗೆ ಸಾರ್ವಜನಿಕ ಸಭೆಯನ್ನು ನಡೆಸಲಾಯಿತು.

ಭಾರತ ದೇಶ ಹಳ್ಳಿಗಳ ದೇಶ, ಹಳ್ಳಿಗಳ ಅಭಿವೃದ್ಧಿಗಳ ಮೂಲಕ ದೇಶ ಅಭಿವೃದ್ಧಿ ಸಾಧ್ಯವೆಂದು ಪ್ರತಿಪಾದಿಸಿದ ಗಾಂಧೀಜಿಯವರು ಗ್ರಾಮ ಸ್ವರಾಜ್ಯದ ಪರಿಕಲ್ಪನೆಗೆ ಜೀವ ತುಂಬಿದ್ದರು. ಗ್ರಾಮಗಳ ಸ್ವಾವಲಂಬನೆಯಿಂದ ದೇಶ ಸ್ವಾವಲಂಬಿಯಾಗುತ್ತದೆ. ಗುಡಿಕೈಗಾರಿಕೆಗಳು ಗ್ರಾಮಗಳ ಆರ್ಥಿಕತೆಯ ತಳಹದಿಯಾಗಿದ್ದು, ಹೆಚ್ಚಿನ ಪ್ರೋತ್ಸಾಹ ನೀಡಬೇಕಿದೆ ಎಂದು ಪ್ರತಿಪಾದಿಸಿದ್ದರು. ಈ ನಿಟ್ಟಿನಲ್ಲಿ ಗಾಂಧಿ ಭಾರತವನ್ನು ನಿರ್ಮಿಸಲು ಎಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದಿದ್ದಾರೆ.

Tags :