For the best experience, open
https://m.samyuktakarnataka.in
on your mobile browser.

ಗುಡ್ಡ ಕುಸಿದಿದ್ದು ಎಲ್ಲೋ ಬದುಕು ಕಸಿದಿದ್ದು ಇನ್ನೆಲ್ಲೋ ….

07:33 PM Jul 25, 2024 IST | Samyukta Karnataka
ಗುಡ್ಡ ಕುಸಿದಿದ್ದು ಎಲ್ಲೋ ಬದುಕು ಕಸಿದಿದ್ದು ಇನ್ನೆಲ್ಲೋ …
-ಚಿತ್ರ ವರದಿ: ಶಶಿ ಬೆಳ್ಳಾಯರು

ಮಂಗಳೂರು: ಅಲ್ಲಿ ಅನಾದಿ ಕಾಲದಿಂದ ಮೀನುಗಾರಿಕೆಯನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದ ಅಂಬಿಗ ಕುಟುಂಬಗಳು ವಾಸಿಸುತ್ತಿದ್ದವು. ಎದುರಿಗೆ ತಣ್ಣನೆ ಹರಿವ ಗಂಗಾವಳಿ ನದಿ ಮಳೆಗಾಲದಲ್ಲಿ ಭೋರ್ಗರೆದರೂ ಅಲ್ಲಿನ ಜನ ಭಯ ಪಡುತ್ತಿರಲಿಲ್ಲ. ನದಿಯೊಡಲನ್ನೇ ನಂಬಿಕೊಂಡು ಸಣ್ಣಪುಟ್ಟ ದೋಣಿಗಳಲ್ಲಿ ಮೀನು ಹಿಡಿದು ತಮ್ಮ ಸಂಸಾರ ಸಾಗಿಸುತ್ತಿದ್ದರು. ಕೂಡಿಡುವಷ್ಟು ಆಸ್ತಿ ಮಾಡದೇ ಹೋದರೂ ಕುಟುಂಬ ಸದಸ್ಯರ ಜೊತೆ ನೆಮ್ಮದಿಯ ಜೀವನಕ್ಕೆ ಎಂದೂ ಅಡ್ಡಿ ಆತಂಕ ಎದುರಾಗಿರಲಿಲ್ಲ. ಆದರೆ ಆ ಒಂದು ದುರಂತ ಅವರ ಬದುಕನ್ನು ನುಂಗಿ ನೀರು ಕುಡಿದು ಬಿಟ್ಟಿತ್ತು. ಎಲ್ಲೋ ಕಿಮೀ ದೂರದಲ್ಲಿ ಕುಸಿದ ಗುಡ್ಡ ಇವರ ಬದುಕನ್ನು ಕಸಿಯುತ್ತೆ ಅಂತ ಅಲ್ಲಿನವರಿಗೆ ಸಣ್ಣ ಸುಳಿವು ಕೂಡ ಸಿಕ್ಕಿರಲಿಲ್ಲ. ಹೌದು! ಇದು ಶಿರೂರು ಗುಡ್ಡ ಕುಸಿತದಿಂದ ಮನೆ ಮಠ ಕಳೆದುಕೊಂಡಿರುವ ಉಳವರೆ ಅನ್ನೋ ಉತ್ತರ ಕನ್ನಡ ಜಿಲ್ಲೆಯ ಪುಟ್ಟ ಹಳ್ಳಿಯ ದೈನೇಸಿ ಸ್ಥಿತಿ.

ಹೆದ್ದಾರಿಯಲ್ಲಿ ನಡೆದಿತ್ತು ದುರಂತ: ಕುಮಟಾ ಪೇಟೆ ದಾಟಿ ಮುಂದಕ್ಕೆ ಹೋದರೆ ಆಂಕೋಲ ಮಧ್ಯೆ ಶಿರೂರು ಸಿಗುತ್ತದೆ. ರಾಷ್ಟೀಯ ಹೆದ್ದಾರಿ ಕಾಮಗಾರಿಗಾಗಿ ಗುತ್ತಿಗೆ ಪಡೆದುಕೊಂಡ ಐಆರ್ ಬಿ ಕಂಪೆನಿ ಇಲ್ಲಿ ಬೇಕಾಬಿಟ್ಟಿ ಗುಡ್ಡ ಅಗೆದು ರಸ್ತೆಯನ್ನು ಮಾಡಿತ್ತು. ಇಲ್ಲೇ ಗುಡ್ಡದ ಬದಿಯಲ್ಲಿ ಸ್ಥಳೀಯರು ಗೂಡಂಗಡಿ, ಕ್ಯಾಂಟೀನ್ ಇರಿಸಿ ಜೀವನ ನಿರ್ವಹಣೆ ಮಾಡುತ್ತಿದ್ದರು. ಜು.16ರ ಮುಂಜಾನೆ ಗುಡ್ಡ ಭಾರೀ ಮಳೆಯಿಂದಾಗಿ ಹೆದ್ದಾರಿಗೆ ಜಾರಿಕೊಂಡು ಬಂದಿತ್ತು. ನೋಡನೋಡುತ್ತಿದ್ದಂತೆ ಕ್ಯಾಂಟೀನ್ ಸಮೇತ ಲಕ್ಷ್ಮಣ್ ನಾಯ್ಕ್ ರ ಕುಟುಂಬ, ಲಾರಿಗಳು, ಗ್ಯಾಸ್ ಟ್ಯಾಂಕರ್, ಲಾರಿ ಚಾಲಕ, ಕ್ಲೀನರ್ ಸೇರಿದಂತೆ ಒಟ್ಟು 10 ಮಂದಿಯನ್ನು ಗಂಗಾವಳಿ ನದಿ ತನ್ನ ಒಡಲಿಗೆ ಸೆಳೆದುಕೊಂಡು ಬಿಟ್ಟಿತ್ತು. ಇದು ಶಿರೂರಿನ ಕಥೆಯಾದರೆ ನದಿಯ ಇನ್ನೊಂದು ಬದಿಯಲ್ಲಿರುವ ಉಳವರೆ ಗ್ರಾಮದ ಸ್ಥಿತಿ ಕೇಳುವುದೇ ಬೇಡ.
ಗ್ರಾಮಸ್ಥರ ಪ್ರಕಾರ ಗುಡ್ಡ ಕುಸಿಯುತ್ತಿದ್ದಂತೆ ಗ್ಯಾಸ್ ಟ್ಯಾಂಕರ್ ನೀರಿಗೆ ಬಿದ್ದು ಜೋರಾದ ಸ್ಫೋಟದ ಸದ್ದು ಕೇಳಿಸಿತು. ಮನೆಯಿಂದ ಹೊರಬರುತ್ತಿದ್ದಂತೆ ನದಿಯ ನೀರು ಸುನಾಮಿ ರೀತಿ ತೆಂಗಿನ ಮರದೆತ್ತರಕ್ಕೆ ಬಡಿದು 6 ಮನೆಗಳನ್ನು ಅದರ ತಳಪಾಯ ಮಾತ್ರವೇ ಉಳಿಸಿ ತನ್ನೊಂದಿಗೆ ಕೊಂಡೊಯ್ದಿತ್ತು. ಮಕ್ಕಳು, ಮಹಿಳೆಯರು ನೀರಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದರೆ ಅಕ್ಕಪಕ್ಕದವರು ಮೇಲಕ್ಕೆತ್ತಿ ಕಾಪಾಡಿದ್ರು. ಇನ್ನೂ ಕೆಲವರು ಮನೆ ಬಿಟ್ಟು ಮೇಲಿನ ಗುಡ್ಡ ಹತ್ತಿ ಪ್ರಾಣ ಉಳಿಸ್ಕೊಂಡ್ರು. ಆದರೆ ಮನೆಯೊಳಗಿದ್ದ ಸಣ್ಣಿ ಹನುಮಂತ ಗೌಡ ಎಂಬ ವೃದ್ಧೆ ಮಾತ್ರ ನೀರು ಪಾಲಾದರು.
ಕೆಲವೇ ನಿಮಿಷಗಳಲ್ಲಿ ಉಳವರೆ ಊರಿನ ಸ್ಥಿತಿಯೇ ಬದಲಾಗಿಬಿಟ್ಟಿತ್ತು. 6 ಮನೆಗಳು ನಾಮಾವಶೇಷಗೊಂಡರೆ 16 ಮನೆಗಳು ಭಾಗಷ: ಹಾನಿಗೊಳಗಾಗಿತ್ತು. ತಾವು ಸಾಕಿದ್ದ 50 ರಷ್ಟು ಗೋವುಗಳು, ಸಾಕುನಾಯಿ, ಬೆಕ್ಕು, ಕೋಳಿ ಸಹಿತ ಜೀವನಕ್ಕೆ ಆಧಾರವಾಗಿದ್ದ ದೋಣಿ, ತೆಪ್ಪ ಇದಾವುದು ಕೂಡ ಉಳಿದಿಲ್ಲ. ಗದ್ದೆ, ತರಕಾರಿ ಕೃಷಿ ಭೂಮಿಯಲ್ಲಿ ಕಲ್ಲು ಮಣ್ಣು ತುಂಬಿದ್ದು ಇದೆಲ್ಲ ಏನಾಯ್ತು ಅನ್ನೋ ಶಾಕ್ ನಲ್ಲಿ ಅಲ್ಲಿನ ಜನರಿದ್ದಾರೆ.

ಜಿಲ್ಲಾಡಳಿತ, ಪೊಲೀಸ್, ಭದ್ರತೆ ವ್ಯವಸ್ಥೆ ಯಾವುದೂ ಇಲ್ಲ!: ಘಟನೆ ನಡೆದ ಶಿರೂರು ಹೆದ್ದಾರಿಯಲ್ಲಿ ಮಣ್ಣು ತೆಗೆಯುವ ಕಾಮಗಾರಿ ನಡೆಯುತ್ತಿದೆ. ನೂರಾರು ಪೊಲೀಸರು, ಹಿರಿಯ ಅಧಿಕಾರಿಗಳು, ಸರಕಾರಿ ಅಧಿಕಾರಿಗಳು ಸಿಬ್ಬಂದಿ, ಸ್ಥಳೀಯ ಜನಪ್ರತಿನಿಧಿಗಳು ಹೀಗೆ ಎಲ್ಲರೂ ಬೀಡು ಬಿಟ್ಟಿದ್ದಾರೆ. ಆದರೆ ಉಳವರೆಯಲ್ಲಿ ನದಿ ಮಧ್ಯೆ ಕಿರಿದಾದ ರಸ್ತೆಯಿದ್ದು ಜನರ ಪ್ರಾಣಕ್ಕೆ ಯಾವುದೇ ಭದ್ರತೆ ಇರದಿದ್ದರೂ ಕನಿಷ್ಠ ಒಬ್ಬ ಪೊಲೀಸ್ ಸಿಬ್ಬಂದಿ ಕೂಡ ಇಲ್ಲ. ನೀರುಪಾಲಾದ ಸಣ್ಣಿ ಗೌಡರ ಶವ 8 ದಿನಗಳ ಬಳಿಕ ಸಿಕ್ಕಿದ್ದು ಶವಸಂಸ್ಕಾರ ಸಂದರ್ಭದಲ್ಲೂ ಸಹಾಯಕ್ಕೂ ಯಾರೂ ಇರಲಿಲ್ಲ. ಅಂತಿಮವಾಗಿ ಅಲ್ಲಿದ್ದ ಮಂಗಳೂರಿನ ಪತ್ರಕರ್ತರೇ ಶವಕ್ಕೆ ಹೆಗಲು ಕೊಟ್ಟು ಅಂತಿಮ ಸಂಸ್ಕಾರ ಮಾಡಬೇಕಾಯ್ತು.

ರಾಜಕೀಯಕ್ಕೆ ಬಳಸಬೇಡಿ!: ಉಳವರೆಯ ಜನರು ಮೊದಲೇ ನೋವಲ್ಲಿದ್ದಾರೆ. ಹೀಗಿರುವಾಗ ರಾಜಕೀಯ ನಾಯಕರು ಅವಕಾಶ ಸಿಕ್ಕಿದೆ ಎಂದು ರಾಜಕೀಯ ಮಾಡಿದರೆ ಜನರಿಗೆ ಸಿಗಬೇಕಾದ ಪರಿಹಾರ, ಸೌಲಭ್ಯಗಳು ಮರೀಚಿಕೆಯಾದೀತು. 5 ಲಕ್ಷ ಪರಿಹಾರದ ಭರವಸೆ ನೀಡಿದರೆ ಅವರು ಮತ್ತೆ ಮೊದಲಿನಂತೆ ಬದುಕು ಕಟ್ಟಿಕೊಳ್ಳಲು ಸಾಧ್ಯವಿಲ್ಲ. ಪ್ರಚಾರಕ್ಕಾಗಿ ಶಿರೂರಿನ ಗುಡ್ಡ ಕುಸಿದ ಜಾಗಕ್ಕೆ ಭೇಟಿಕೊಡುವ ಬದಲು ಉಳವರೆ ಬಂದು ಅಲ್ಲಿನ ಪರಿಸ್ಥಿತಿಯ ಗಂಭೀರತೆ ಅರಿತುಕೊಳ್ಳಬೇಕಿದೆ. ಉಳವರೆಯ ಮುಗ್ಧ ಮನಸುಗಳಿಗೆ ಧೈರ್ಯ ತುಂಬಬೇಕಿದೆ.