ಗುಮ್ಮನ ಆಟ ಅನಗತ್ಯ
ಕರ್ನಾಟಕಕ್ಕೂ ಗೋಧ್ರಾ ಹತ್ಯಾ ಕಾಂಡಕ್ಕೂ ಯಾವ ರೀತಿಯ ಸಂಬಂಧವೂ ಇಲ್ಲದೇ ಇರುವಾಗ ಯಾವ ಕಾರಣಕ್ಕಾಗಿ ಹರಿಪ್ರಸಾದ್ ಅವರು ಇಂತಹ ಗುಮ್ಮನನ್ನು ಛೂ ಬಿಟ್ಟಿದ್ದಾರೆ ಎಂಬುದು ಜನರು ನೇರವಾಗಿ ಕೇಳುವ ಪ್ರಶ್ನೆ.
ಪರಂಪರೆ ಹಾಗೂ ನಂಬಿಕೆಗಳ ಸುತ್ತ ಪ್ರದಕ್ಷಿಣೆ ಹಾಕುವುದು ಆಸ್ತಿಕರ ಮಟ್ಟಿಗೆ ಒಂದು ವ್ರತ. ನಾನಾ ರೀತಿಯ ಆರಾಧನೆಗಳ ಮೂಲಕ ದೇವರ ಸಾಕ್ಷಾತ್ಕಾರವನ್ನು ಪಡೆಯುವ ಗುರಿ ಮುಟ್ಟಲು ಆಸ್ತಿಕರು ಶ್ರದ್ಧಾಭಕ್ತಿಗಳಿಂದ ಯತ್ನಿಸುತ್ತಿರುವ ಸಂದರ್ಭದಲ್ಲಿ ಅನಗತ್ಯ ಭೀತಿ ಹಾಗೂ ಭಯದ ವಾತಾವರಣವನ್ನು ಸೃಷ್ಟಿಸುವ ಯಾವುದೇ ಕೆಲಸ ನಿಜವಾದ ಅರ್ಥದಲ್ಲಿ ಜನದ್ರೋಹಿ. ಜನವರಿ ೨೨ರಂದು ಅಯೋಧ್ಯೆಯ ರಾಮಮಂದಿರದಲ್ಲಿ ರಾಮವಿಗ್ರಹದ ಪ್ರತಿಷ್ಠಾಪನೆಯ ಮುಹೂರ್ತವನ್ನು ದೇಶಕ್ಕೆ ದೇಶವೇ ಕಾದುನೋಡುತ್ತಿರುವ ಸಂದರ್ಭದಲ್ಲಿ `ಗೋಧ್ರಾದಂತಹ ಘಟನೆಯೇ ಮರುಕಳಿಸಬಹುದು' ಎಂಬ ಮುನ್ಸೂಚನೆ ಧಾಟಿಯ ಎಚ್ಚರಿಕೆಯನ್ನು ಕಾಂಗ್ರೆಸ್ ಪಕ್ಷದ ಮುಖಂಡ ಬಿ.ಕೆ. ಹರಿಪ್ರಸಾದ್ ಬಹಿರಂಗವಾಗಿ ವ್ಯಕ್ತಪಡಿಸಿರುವುದು ನಿಜವಾದ ಅರ್ಥದಲ್ಲಿ ವಿಶ್ವಾಸ ಕಂಗೆಡಿಸುವಂಥದ್ದು. ೨೦೦೨ರಲ್ಲಿ ಗುಜರಾತ್‌ನ ಗೋಧ್ರಾದಲ್ಲಿ ಜರುಗಿದ ಕರಸೇವಕರ ಹತ್ಯಾಕಾಂಡಕ್ಕೂ ಈಗಿನ ಬೆಳವಣಿಗೆಗೂ ಸಂಬಂಧ ಕಲ್ಪಿಸುವುದು ಯಾವ ದೃಷ್ಟಿಕೋನದಿಂದಲೂ ಸರಿಯಲ್ಲ. ಅದರಲ್ಲೂ ಕರ್ನಾಟಕಕ್ಕೂ ಗೋಧ್ರಾ ಹತ್ಯಾ ಕಾಂಡಕ್ಕೂ ಯಾವ ರೀತಿಯ ಸಂಬಂಧವೂ ಇಲ್ಲದೇ ಇರುವಾಗ ಯಾವ ಕಾರಣಕ್ಕಾಗಿ ಹರಿಪ್ರಸಾದ್ ಅವರು ಇಂತಹ ಗುಮ್ಮನನ್ನು ಛೂ ಬಿಟ್ಟಿದ್ದಾರೆ ಎಂಬುದು ಜನರು ನೇರವಾಗಿ ಕೇಳುವ ಪ್ರಶ್ನೆ. ಹಾಗೊಮ್ಮೆ ಹರಿಪ್ರಸಾದ್ ಅವರಿಗೆ ಹತ್ಯಾಕಾಂಡ ನಡೆಯುವ ಪಿತೂರಿಯ ವಿವರಗಳು ಏನಾದರೂ ಇದ್ದರೆ ಪೊಲೀಸರ ಜೊತೆ ಅದನ್ನು ಹಂಚಿಕೊಳ್ಳುವುದು ಯೋಗ್ಯವಾದ ಹಾಗೂ ಜವಾಬ್ದಾರಿಯುತ ಮಾರ್ಗವಾಗಿತ್ತು. ಅದನ್ನು ಬಿಟ್ಟು ಬಹಿರಂಗವಾಗಿ ಇಂತಹ ಮಾತನ್ನಾಡಿರುವುದು ಅಮಾಯಕ ಜನವರ್ಗದಲ್ಲಿ ಗಲಿಬಿಲಿಯ ವಾತಾವರಣ ಸೃಷ್ಟಿಯಾಗಲು ಕಾರಣವಾಗಿದೆ.
ರಾಜ್ಯ ಸರ್ಕಾರದ ಮಟ್ಟಿಗೆ ಹೇಳುವುದಾದರೆ ಹರಿಪ್ರಸಾದ್ ಅವರು ಬಹಿರಂಗಪಡಿಸಿರುವ ಗೋಧ್ರಾ ಮರುಕಳಿಸುವ ಭೀತಿಯಿಂದ ಮತ್ತಷ್ಟು ಕಟ್ಟೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳುವ ಅನಿವಾರ್ಯತೆ ಬಂದೊದಗಿದೆ. ಇಂತಹ ಕ್ರಮಗಳನ್ನು ನಿಯೋಜಿಸುವುದು ಜವಾಬ್ದಾರಿ ಸರ್ಕಾರದ ಕರ್ತವ್ಯವೇ. ಆದರೆ, ವಾಡಿಕೆಯಂತೆ ನಡೆಯಬೇಕಾದ ಇಂತಹ ಕರ್ತವ್ಯ ಪರಿಪಾಲನೆ ಈಗ ಜನರು ಭೂತಗಾಜಿನ ಮೂಲಕ ನೋಡುವಂತಾಗಿದೆ.
ಹರಿಪ್ರಸಾದ್ ಅವರು ಹಿರಿಯ ಅನುಭವಿ ರಾಜಕಾರಣಿ. ವಿದ್ಯಾರ್ಥಿ ದೆಸೆಯಿಂದಲೇ ಸಾರ್ವಜನಿಕ ಕ್ಷೇತ್ರಕ್ಕೆ ಧುಮುಕಿ ಹಂತ ಹಂತವಾಗಿ ಕಾಂಗ್ರೆಸ್ ಪಕ್ಷದಲ್ಲಿ ವ್ಯಕ್ತಿತ್ವವನ್ನು ರೂಪಿಸಿಕೊಂಡು ರಾಜ್ಯ ಸಭೆಯ ಸದಸ್ಯರಾಗಿ, ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ, ವಿಧಾನಪರಿಷತ್ ಪ್ರತಿಪಕ್ಷದ ನಾಯಕರಾಗಿ ಹಾಗೂ ಪ್ರಸ್ತುತ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿರುವ ಹರಿಪ್ರಸಾದ್ ಅವರು ಈಗಿನ ಮಟ್ಟಿಗೆ ಕಾಂಗ್ರೆಸ್ ಪಕ್ಷದಲ್ಲಿ ಒಬ್ಬ ಭಿನ್ನಮತೀಯ ಮುಖಂಡರು. ಏಕೆಂದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಹರಿಪ್ರಸಾದ್ ಅವರ ನಡುವಣ ಸಂಬಂಧ ಮೊದಲಿನಷ್ಟು ಮಧುರವಾಗಿಲ್ಲ. ಹಲವು ಬಾರಿ ಹರಿಪ್ರಸಾದ್ ಅವರು ತಮ್ಮ ಅತೃಪ್ತಿ ಆಕ್ರೋಶಗಳನ್ನು ಬಹಿರಂಗವಾಗಿಯೇ ವ್ಯಕ್ತಪಡಿಸಿ ಇರಸುಮುರಸು ಉಂಟು ಮಾಡಿರುವುದು ಜರುಗಿಹೋಗಿರುವ ಕಥೆ. ಕೆಲವರು ಹೇಳುವಂತೆ ಇದಕ್ಕೆ ಮುಖ್ಯ ಕಾರಣ ಹರಿಪ್ರಸಾದ್ ಅವರಿಗೆ ಸಂಪುಟದಲ್ಲಿ ಪ್ರಾತಿನಿಧ್ಯ ನಿರಾಕರಿಸಿರುವುದು. ಆದರೆ, ಇದು ಸತ್ಯವೋ ಮಿಥ್ಯವೋ ಎಂಬುದು ಖಚಿತವಿಲ್ಲ. ಅದೇನೇ ಇರಲಿ. ಗೋಧ್ರಾ ಹತ್ಯಾಕಾಂಡದ ಮಾತಿಗೂ ರಾಜಕಾರಣಕ್ಕೂ ಸಂಬಂಧ ಕಲ್ಪಿಸುವುದು ಕಷ್ಟವೇ. ಆದರೆ, ಈಗಿನ ಬೆಳವಣಿಗೆಯಲ್ಲಿ ಇದು ರಾಜಕೀಯ ವಿದ್ಯಮಾನಗಳಿಗೆ ಗ್ರಾಸವಾಗಿದೆ. ಹರಿಪ್ರಸಾದ್ ಅವರು ಪ್ರಯೋಗಿಸಿರುವ ಅಸ್ತ್ರ ಎರಡು ಅಲುಗಿನ ಕತ್ತಿ ಇದ್ದಂತೆ. ಗುಜರಾತ್‌ನಲ್ಲಿ ಕಾಂಗ್ರೆಸ್ ಪಕ್ಷದ ಉಸ್ತುವಾರಿಯಾಗಿ ಬಹಳ ವರ್ಷ ಕಾರ್ಯ ನಿರ್ವಹಿಸಿರುವ ಕಾರಣ ಅವರಿಗೆ ಗೋಧ್ರಾ ಘಟನಾವಳಿ ನಂತರದ ಪೂರ್ವಾಪರಗಳು ಚೆನ್ನಾಗಿ ಗೊತ್ತು. ಜೊತೆಗೆ ಕರ್ನಾಟಕದ ಬೆಳವಣಿಗೆಗಳ ಒಳದನಿಗಳೂ ಗೊತ್ತು. ಇವೆರಡನ್ನೂ ಸಮೀಕರಿಸಿ ರಾಜಕೀಯವಾಗಿ ಎದುರಾಳಿಗಳನ್ನು ಇಕ್ಕಟ್ಟಿಗೆ ಸಿಕ್ಕಿಸುವುದು ಎರಡು ಅಲುಗಿನ ಕತ್ತಿ ಪ್ರಯೋಗದ ಉದ್ದೇಶವೇ ಆಗಿದ್ದರೆ ಅವರಲ್ಲಿ ಹರಿಪ್ರಸಾದ್ ಯಶಸ್ವಿಯಾಗಿದ್ದಾರೆ. ಆದರೆ, ಇದಕ್ಕೆ ಬೆಲೆ ತೆರಬೇಕಾದವರು ಅಮಾಯಕ ಜನರು, ಏಕೆಂದರೆ, ಆರಾಧನೆಯ ಭಾವದಿಂದ ಶ್ರೀರಾಮನ ಧ್ಯಾನಸ್ಥರಾಗಿದ್ದವರ ಮೇಲೆ ಗೋಧ್ರಾ ಹತ್ಯಾಕಾಂಡ ಮರುಕಳಿಸುವ ಗುಮ್ಮನ ಬಿಟ್ಟಿರುವುದು ಇದಕ್ಕೆ ಕಾರಣ. ಈ ಬೆಳವಣಿಗೆಯಲ್ಲಿ ವೈಚಾರಿಕತೆಗಿಂತ ವೈಯಕ್ತಿಕ ಹಮ್ಮು ಬಿಮ್ಮುಗಳೇ ಪ್ರದರ್ಶನಗೊಳ್ಳುತ್ತಿರುವುದು ಪರಿಸ್ಥಿತಿಯ ಇನ್ನೊಂದು ಮುಖ. ಏನೇ ಆದರೂ ಈ ಸಂದರ್ಭದಲ್ಲಿ ಗುಮ್ಮನನ್ನು ಛೂ ಬಿಡುವ ಕೆಲಸವಾಗಬಾರದಿತ್ತು.