ಗುರುವಾದ ಸಿದ್ದಪ್ಪ
ಆಗ ಬದುಕು ಸುಲಭವಾಗಿತ್ತೇನೋ ಎಂದು ಈಗ ಅನ್ನಿಸುತ್ತದೆ. ಸುಂದರನಗರದ ನಮ್ಮ ವಾಸದ ಕಟ್ಟಡದ ಹಿಂಭಾಗದಲ್ಲಿ, ತುಸುದೂರದಲ್ಲಿ ಒಂದು ಪುಟ್ಟ ಹೋಟೆಲ್ಲು. ಅಲ್ಲಿಯೇ ನಮ್ಮ ಬೆಳಗಿನ ತಿಂಡಿಯಾಗಬೇಕಿತ್ತು. ಅಲ್ಲಿ ಸಿಗುವ ತಿಂಡಿಗಳು ಮಿತ. ಇಡ್ಲಿ, ವಡೆ ಕಾಯಂ ಇರುತ್ತಿತ್ತು. ಅವಲಕ್ಕಿ, ಚುರುಮುರಿ ಕೂಡ ದೊರೆಯುತ್ತಿತ್ತು. ಆಗಾಗ ದೋಸೆಯೂ ಸಿಗುತಿತ್ತು ಎಂಬ ನೆನಪು. ಯಾವ ತಿಂಡಿಯಾದರೂ ಐವತ್ತು ಪೈಸೆಯಲ್ಲಿ ಮುಗಿಯುತ್ತಿತ್ತು. ನನಗೆ ಚಹಾ, ಕಾಫಿಯ ಅಭ್ಯಾಸವಿಲ್ಲದ್ದರಿಂದ ಅದರ ಖರ್ಚು ತಪ್ಪಿತ್ತು. ಊಟ ಮಾಡುವುದಕ್ಕೆ ಸ್ಟೇಶನ್‌ನಿಂದ ಗಂಜ್‌ಗೆ ಹೋಗುವ ದಾರಿಯಲ್ಲಿದ್ದ ವಾದಿರಾಜ ಭವನ ಹೋಟೆಲ್ ಗೊತ್ತು ಮಾಡಿಕೊಂಡಿದ್ದೆವು. ಅದು ಆಗ ಹೊಸದಾಗಿ ಇದ್ದಂತಿತ್ತು. ನಾವು ತಿಂಗಳಿನ ಕೂಪನ್ ತೆಗೆದುಕೊಳ್ಳುತ್ತಿದ್ದೆವು. ಒಂದು ಊಟಕ್ಕೆ ಒಂದು ರೂಪಾಯಿ, ಮೂವತ್ತು ಕೂಪನ್‌ಗಳ ಒಂದು ಪುಟ್ಟ ಪುಸ್ತಕ. ಪ್ರತಿದಿನ ಒಂದು ಕೂಪನ್ ಹರಿದುಕೊಟ್ಟು ಊಟಮಾಡಿ ಬರುವ ವ್ಯವಸ್ಥೆ. ಮಧ್ಯಾಹ್ನ ನಾವು ಪಿ.ಜಿ.ಸೆಂಟರ್‌ಗೆ ಹೋಗುತ್ತಿದ್ದುದರಿಂದ ಊಟ ಅಲ್ಲಿಗೇ ಬರುತ್ತಿತ್ತು. ನಾವು ಆರು ಜನ ವಾದಿರಾಜ ಭವನದ ಮ್ಯಾನೇಜರ್‌ರಿಗೆ ಹೇಳಿ ಅಲ್ಯೂಮಿನಿಯಂ ಕ್ಯಾರಿಯರ್ ಕೊಂಡುಕೊಟ್ಟು, ಒಬ್ಬ ಮನುಷ್ಯನನ್ನು ಗೊತ್ತು ಮಾಡಿ, ಪಿ.ಜಿ ಸೆಂಟರಿಗೆ ತರುವಂತೆ ದಾರಿ ಮಾಡಿಕೊಂಡಿದ್ದೆವು. ಆ ಮನುಷ್ಯ ಒಂದು ದೊಡ್ಡ ಬುಟ್ಟಿಯಲ್ಲಿ ಆರೂ ಕ್ಯಾರಿಯರ್‌ಗಳನ್ನು ಜೋಡಿಸಿಕೊಂಡು ಬಿಸಿಲಿನಲ್ಲಿ ನಡೆದುಕೊಂಡು ಅಲ್ಲಿಗೆ ಬರುತ್ತಿದ್ದ. ಅವನನ್ನು ಕಂಡಾಗ ನಮ್ಮಲ್ಲಿ ಆಶ್ಚರ್ಯ ಹಾಗೂ ಕರುಣೆ ಎರಡೂ ಹುಟ್ಟುತ್ತಿದ್ದವು. ನಾವು ಅವನಿಗೆ ಕೊಡುತ್ತಿದ್ದುದು ತಿಂಗಳಿಗೆ ತಲಾ ಹದಿನೈದು ರೂಪಾಯಿಗಳು! ಅದಕ್ಕಾಗಿ ಆತ ಸುಮಾರು ಐದು ಮೈಲಿ ನಡೆದುಬಂದು ಹಾಗೆಯೇ ಮರಳಿ ಕ್ಯಾರಿಯರ್‌ಗಳನ್ನು ತೆಗೆದುಕೊಂಡು ಹೋಗುತ್ತಿದ್ದ. ನಮ್ಮ ಊಟವಾಗುವವರೆಗೂ ಅಲ್ಲಿಯೇ ಕುಳಿತಿರುತ್ತಿದ್ದ. “ನಿನ್ನ ಊಟಾ ಆತೇನೋ ಸಿದ್ದಣ್ಣ? ಎಂದು ಕೇಳಿದರೆ “ಆತಲ್ರೀ” ಎಂದು ಒಂದು ಪುಟ್ಟ ಚೀಲದ ಕಡೆಗೆ ಕೈತೋರಿಸುತ್ತಿದ್ದ. ನಾನು ಅವನನ್ನು ಕೇಳಿದ್ದೆ, “ಸಿದ್ದಣ್ಣ ದಿನಾ ಊಟಕ್ಕ ಏನ ತರತೀ? ಇಷ್ಟ ದೂರ ಬಂದು ತಿರುಗಿ ಹೋಗತೀಯಲಾ, ಬ್ಯಾರೇ ಕೆಲಸಾ ಏನು ಮಾಡತೀ? ಇಷ್ಟs ರೊಕ್ಕದಾಗ ಬದುಕು ನಡೀತದೇನು?”. ಆತ ಹೇಳಿದ, “ಅಪ್ಪಾವರ, ರೊಕ್ಕ ಎಷ್ಟಾದರ ಸಾಕಾದೀತರೀ? ನಾವೇ ಸಾಕು ಅನಬೇಕಲ್ಲs. ಲಕ್ಷ ಬಂದರ ತೃಪ್ತಿ ಐತೇನ್ರಿ ಈ ಮನುಷ್ಯ ಜೀವಕ್ಕ? ಈ ಚರ್ಮದ ಚೀಲ ಇರೂ ತನಕಾ ಬರೋಬರಿ ಇರ್ಲಿ ಅಂತ ಎಷ್ಟು ಬೇಕೋ ಅಷ್ಟೇ ಕೊಡಬೇಕಲ್ಲರೀ? ನಾ ಊಟಕ ತರೂದು ಮೂರು ರೊಟ್ಟಿ, ಖಾರ ಚಟ್ನಿ ಮತ್ತು ಎರಡು ಉಳ್ಳಾಗಡ್ಡಿ, ಅಷ್ಟ ಸಾಕಾಗತೈತರಿ. ಮುಂಜಾನೆದ್ದು ನಾನೇ ರೊಟ್ಟಿ ಮಾಡಿ ಮಗಳಿಗೆ ಕಟ್ಟಿಕೊಟ್ಟು ನಾನೂ ಕಟಿಕೊಂಡು ರ‍್ತೀನ್ರಿ. ಮತ್ತ, ಅಕೀ ಸಾಲೀ ಇಂದ ಬರೂದ್ರಾಗ ಮನ್ಯಾಗ ರ‍್ತೀನ್ರಿ. ಆ ಹುಡುಗೀ ಕಣ್ಣ ನನ್ನs ಹುಡಕತಿರತಾವ್ರಿ. ಅದಕ್ಕs ಓಡಿಕೊಂತನೇ ಹೋಗತೇನ್ರಿ”. ನಾನು ಆಶ್ಚರ್ಯದಿಂದ ಕೇಳಿದೆ, “ಸಿದ್ದಣ್ಣಾ ನೀನೇ ಯಾಕ ರೊಟ್ಟಿ ಮಾಡತೀ? ಹೆಂಡ್ತಿ ಇಲ್ಲೇನು?”. “ಇಲ್ರಿ ಯಪ್ಪಾ, ಲಗ್ನ ಆಗಿ ಎಡ್ಡ ವರ್ಸದಾಗ ಶಿವನ ಪಾದಾ ಸೇರಿಬಿಟ್ಳರಿ. ಆ ದೇವರಿಗೂ ಒಳ್ಳೇ ಮಂದಿ ಬೇಕಲ್ಲರಿ, ಅದಕs ಲಗೂನ ಕರಕೊಂಡು ಹ್ವಾದಾ, ನಂದು ಒಂದ ಜೀವಾ ಆತ್ರಿ. ಮನ್ಯಾಗಿನ ಮಂದಿ ಭಾಳ ಹೇಳಿರ‍್ರಿ, ಇನ್ನೊಂದು ಮದಿವಿ ಆಗೋ ಸಿದ್ದ, ನಿನ್ನದಿನ್ನಾ ಸಣ್ಣ ವಯಸ್ಸು. ಹ್ಯಾಂಗ ಆಗಲ್ರೀ ಯಪ್ಪಾ? ನನ್ನ ಹೆಂಡ್ತೀನೇ ನನ್ನ ಜೀವಾ ಅಂತ ಮಾತ ಕೊಟ್ಟಿದ್ದೆನಲ್ರೀ. ಹಂಗಾದ ಮ್ಯಾಲೆ ಅಕೀ ಸತ್ತಮ್ಯಾಲೆ ಅಕೀನ್ನ ಮರತು ಮತ್ತೊಬ್ಬಾಕೀನ ಲಗ್ನ ಆಗೂದು ಹ್ಯಾಂಗ್ರೀ? ಯಾಕೋರಿ, ಆ ಒಳ್ಳೇ ಹೆಂಡ್ತೀನ್ನ ಮನಸಿನ್ಯಾಗ ಇಟ್ಕೊಂಡು ಮತ್ತೊಂದು ಹೆಂಗಸಿನ್ನ ಮದವಿ ಆಗೂದು ಮನಸಿಗೆ ಬರೋಬರಿ ಅನ್ನಿಸಲಿಲ್ರಿ, ಹಾದರಾ ಮಾಡಿದ್ಹಂಗ ಅನಸಾಕ್ಹತ್ತಿರಿ. ಅದಕs ಅದರ ಉಸಾಬರೀ ಬಿಟ್ಟ ಬಿಟ್ಟಿನ್ರಿ’’ ಎಂದು ಕಣ್ಣು ಒರೆಸಿಕೊಂಡ.
“ಅಲ್ಲ ಸಿದ್ದಣ್ಣ, ನಿನ್ನ ಹೆಂಡ್ತಿ ಮಗಳ್ನ ಹಡದ ಮ್ಯಾಲೇ ತೀರಿಕೊಂಡಳೇನು?” ಎಂದು ಕೇಳಿದೆ.
“ಎಲ್ರೀಯಪ್ಪಾ, ಆಕಿ ಹಡೀಲಿಲ್ರಿ. ಸಾಯೂ ಮುಂದ ಮೂರು ತಿಂಗಳು ಬಸರ ಇದ್ದಳರಿ. ಅದು ಯಾವುದೋ ವಿಚಿತ್ರ ಜ್ವರಾ ಬಂದು ಮೂರು ದಿನದಾಗ ಹೋಗೇಬಿಟ್ಟಳರಿ”.
“ಮತ್ತ ಈ ಹುಡುಗಿ ಯಾರು?”
“ಅದೂ ಒಂದು ಕಥೀನ ಯಪ್ಪಾ. ಯಾರೋ ಪುಣ್ಯಾತ್ಮರು ಆಗಿನ್ನ ಹುಟ್ಟಿದ ಕೂಸನ್ನ ನಮ್ಮ ಮನೀಗೆ ಹೋಗೋ ದರ‍್ಯಾಗ ತಿಪ್ಯಾಗ ಒಗದ ಹೋಗಿದ್ರ‍್ರಿ. ಹೋಗಿ ನೋಡಿದ್ನಿರಿ. ಇನ್ನಾ ಜೀವ ಇತ್ತರಿ. ಮನೀಗೆ ತೊಗೊಂಡು ಹೋಗಿ, ಮೈ ಒರಸಿ, ಬತ್ತಿಯೊಳಗ ಹಾಲು ನೆನೆಸಿ ಕೂಸಿನ ಬಾಯಾಗ ಹಾಕಿ ಉಳಿಸಿಕೊಂಡಿನ್ರಿ. ಆಮ್ಯಾಲೆ ಪೊಲೀಸರಿಗೆ ಹೇಳಿ, ನಾನೇ ಬೆಳಸಾಕ್ಹತ್ತೇನ್ರಿ. ಯಪ್ಪಾ, ಮಕ್ಕಳು ನಮಗೆ ದೇವರು ಕೊಟ್ಟ ವರಾ ಅಲ್ಲೇನ್ರೀ? ಭಾಳಮಂದಿ ಮಕ್ಕಳಾಗಿಲ್ಲ, ಮಕ್ಕಳಾಗಿಲ್ಲ ಅಂತ ಎಲ್ಲಾ ದೇವರಿಗೆ ಹರಕೀ ಹೊತ್ತು, ಏನೇನೋ ಔಷಧ, ಉಪಚಾರ ಮಾಡತಾರಲ್ರೀ? ಅಂಥಾದ್ದು ಮಕ್ಕಳು ಬೇಕು ಅಂತ ಬಸರಾಗಿ, ಕೂಸು ಹುಟ್ಟಿದಾಗ ತಿಪ್ಯಾಗ ಹಾಕೂದು, ದೇವರ ಪ್ರಸಾದ ತಿಪ್ಯಾಗ ಹಾಕಿಂದ್ಹಗs ಅಲ್ರೀ? ಆತ ಬಿಡು, ಅವರಿಗೆ ಬ್ಯಾಡಾದ್ರ ಬಿಡ್ಲಿ, ನಾನs ಈ ಪ್ರಸಾದ ತೊಗೋತೀನಿ ಅಂತ ಹೇಳಿ ನಾನು ಬೆಳಸಾಕ್ಹತೇನ್ರಿ. ನಾ ಇಲ್ಲೆ ಮಧ್ಯಾಹ್ನ ನಿಮ್ಮ ಊಟಾ ಆಗೂತನಕಾ ಕುಂತಿರತೇನಲ್ರಿ, ಭಾಳ ಛಂದ ಅನ್ನಸತೈತ್ರಿ. ನೀವು ಎಲ್ಲಾರೂ ಓದೂದು, ಮಾತಾಡೂದು, ಪ್ರಯೋಗ ಮಾಡೂದು ನೋಡಿದ್ರ, ನನ್ನ ಮಗಳ್ನೂ ಇಲ್ಲೇ ಓದಾಕ ಕಳಸಬೇಕು ಅಂತ ಅನಸಾಕ್ಹತ್ತೇತ್ರಿ”.
“ಭಾಳ ಛೊಲೋ ಮಾಡಿದಿ ಸಿದ್ದಣ್ಣ. ಆದರ ಇಷ್ಟs ರೊಕ್ಕ ಹೆಂಗ ಸಾಕಾದೀತೋ?”
“ಸಾಕ್ರೀಯಪ್ಪಾ ಸಾಕು. ಭಾಳ ಬಂದ್ರ ತೆಲಿ ತಿರಗತೈತ್ರಿ. ನಂದೇನೈತ್ರಿ? ಒಂಟಿ ಜೀವ. ಈಗೊಂದು ಕುಡಿ ಹುಟ್ಟೈತ್ರಿ. ಏನ ಮಾಡಿದ್ರೂ ಆಕೀಗೇ ಅಲ್ರಿ? ಸ್ವಂತ ಮನಿ ಐತಿ, ಹೊಟ್ಟಿಗೆ ಬಟ್ಟಿಗೆ ಆಗೂವಷ್ಟು ಹೊಲದಿಂದ ಬರತೈತಿ. ನೀವು ಕೊಟ್ಟಿದ್ದು ಮಗಳ ಸಾಲೀ, ಅರಿವಿ, ಪುಸ್ತಕಕ್ಕ ಆಗತೈತಿ, ಸಾಕಲ್ರೀ. ಈ ಕೂಸಿನ್ನ ಅಷ್ಟ ಛಂದಾಗಿ ಓದಿಸಿ ಒಬ್ಬ ಪ್ರಾಮಾಣಿಕ ಹುಡುಗನ ಕೈಯಾಗ ಒಪ್ಪಿಸಿಬಿಟ್ರ ನನ್ನ ಕೆಲಸ ಮುಗೀತ್ರಿ. ಶಿವಾಶಿವಾ ಅಂದ ಬಿಡ್ತೀನ್ರಿ” ಎಂದ ಸಿದ್ದಣ್ಣ.
ಸಿದ್ದಣ್ಣನನ್ನು ಸಾಮಾನ್ಯ ಮನುಷ್ಯ ಎನ್ನುವುದು ಸಾಧ್ಯವೇ? ನನಗೆ ಯೂನಿವರ್ಸಿಟಿ ಕಲಿಸದಿದ್ದನ್ನು ಆತ ನನಗೆ ಕಲಿಸಿದ್ದ. ಅಪರಿಗ್ರಹದ ಬಗ್ಗೆ ದೊಡ್ಡ ದೊಡ್ಡ ಮಾತನಾಡುತ್ತ ಒಳಗೊಳಗೆ ಗಂಟು ಮಾಡುತ್ತೇವೆ. ಹೆಂಡತಿಯ ಮೇಲಿನ ಪ್ರೀತಿಯ ಮೇಲೆ ಭಾಷಣ ಮಾಡುತ್ತೇವೆ, ಅವಕಾಶ ಸಿಕ್ಕರೆ, ನೆಪ ಹುಡುಕಿ ಮತ್ತೊಂದೆರಡು ಮದುವೆಯಾಗುತ್ತೇವೆ. ಮಮತಾಜಳ ನೆನಪಿಗೆ ತಾಜಮಹಲ್ ಕಟ್ಟಿದ ಶಹಾಜಹಾನ ಪತ್ನಿಯ ಪ್ರೇಮಕ್ಕೆ ಮತ್ತೊಂದು ಹೆಸರಾದ. ಆದರೂ ನಂತರ ಬೇರೆ ಮದುವೆ ಮಾಡಿಕೊಂಡ. ನಮ್ಮ ಸಿದ್ದಣ್ಣನಿಗೆ ಪತ್ನಿಯ ಬಗ್ಗೆ ಇದ್ದ ನಿಷ್ಠೆ ಅಪರೂಪದ್ದು. ಆಕೆಯ ನೆನಪಿನಲ್ಲಿ ಮತ್ತೆ ಮದುವೆಯಾಗಲಿಲ್ಲ, ಬೇರೆ ಹೆಂಗಸಿನ ಸಹವಾಸ ಮಾಡಲಿಲ್ಲ. ಹಡೆದವರಿಗೇ ಬೇಡವಾಗಿ ತಿಪ್ಪೆಗೆ ಹಾಕಿದ್ದ ಮಗುವನ್ನು ತನ್ನದೆಂದು, ದೇವರ ಪ್ರಸಾದವೆಂದು ತಬ್ಬಿಕೊಂಡು ಅದನ್ನೇ ತನ್ನ ಕಣ್ಣ ಮಣಿಯಾಗಿ ಪೋಷಿಸುತ್ತಿದ್ದ. ಸಾಕ್ರೆಟಿಸ್ ಹೇಳಿದ, “Less money is bad but more money is dangerous” ಎಂಬ ಮಾತನ್ನು ಇನ್ನೂ ಸುಂದರವಾಗಿ “ಭಾಳ ಬಂದ್ರ ತೆಲಿ ತಿರಗತೈತ್ರಿ” ಹೇಳಿದನಲ್ಲ ಸಿದ್ದಣ್ಣ! ಅವನು ಯಾವ ಸಾಕ್ರೆಟಿಸ್‌ಗಿಂತ ಕಮ್ಮಿ ?
ಯಾವ ಯಾವುದೋ ಪುಸ್ತಕಗಳಲ್ಲಿ ಓದಿದ ಎರವಲು ಮಾತುಗಳನ್ನು ನಮ್ಮದೆಂಬಂತೆ ಮಾತನಾಡುತ್ತ, ನಮ್ಮ ಮೈಮೇಲೆ ತುಂಬಿಕೊಂಡ ಈ ಸತ್ತ ಶಬ್ದಗಳ ಧೂಳನ್ನು ಝಾಡಿಸಿಕೊಂಡು, ಬುದ್ಧಿವಂತರಂತೆ ಭ್ರಮೆಗಳನ್ನು ಸೃಷ್ಟಿಸುತ್ತ ಓಡಾಡುವ ನಮ್ಮಂತಹವರಿಗೆ ಈ ಸಿದ್ದಣ್ಣ ಒಬ್ಬ ನಿಜವಾದ ಗುರು. ಯಾವ ಆಧ್ಯಾತ್ಮಿಕ ಗುರುವಿಗೂ ಕಮ್ಮಿ ಇಲ್ಲದ ಜ್ಞಾನ ಮತ್ತು ಪ್ರಜ್ಞೆ ಸಿದ್ದಣ್ಣನದು. ಅವನೊಬ್ಬ ಪ್ರಾಯೋಗಿಕ ಯೋಗಿ.
ಕಣ್ಣು ತೆರೆದು, ಮನಸ್ಸು ಬಿಚ್ಚಿ ನೋಡಿದರೆ ನನ್ನ ಭಾರತದಲ್ಲಿ ಹೆಜ್ಜೆಹೆಜ್ಜೆಗೆ ಇಂಥ ಸಿದ್ದಣ್ಣನಂತಹವರು ಕಂಡಾರು. ಇದು ನನ್ನ ಭಾರತದ ಶ್ರೇಷ್ಠತೆ. ಆದರೆ ನಾವು ಅವರನ್ನು ಗುರುತಿಸಬೇಕಲ್ಲ? ನಾವು ಹುಡುಕಿಕೊಂಡು ಎತ್ತರದಲ್ಲಿ ಕುಳಿತಿದ್ದವರನ್ನು, ಪ್ರಖ್ಯಾತರಾದವರನ್ನು, ವ್ಯವಸ್ಥೆಗಳನ್ನು ಕಟ್ಟಿಕೊಂಡವರನ್ನು ಗುರುಗಳೆಂದು ಸ್ವೀಕರಿಸಲು ಹೋಗುತ್ತೇವೆ. ಅದೂ ಸರಿಯೆ. ಆದರೆ ನಮ್ಮ ಸುತ್ತಮುತ್ತಲಿನ ಬದುಕಿನಲ್ಲಿ ನಮಗೆ ಗುರುವಾಗಬಹುದಾದಂತಹವರು ಮರೆಯಲ್ಲಿ ಕುಳಿತಿದ್ದಾರೆ. ಅವರ ಅನಾವರಣ ನಮ್ಮ ಬದುಕಿಗೊಂದು ಹೊಸ ಆಯಾಮ ನೀಡೀತು.