For the best experience, open
https://m.samyuktakarnataka.in
on your mobile browser.

ಗುರುವಿನ ಗುಲಾಮನಾಗುವತನಕ….

04:00 AM Sep 04, 2024 IST | Samyukta Karnataka
ಗುರುವಿನ ಗುಲಾಮನಾಗುವತನಕ…

ವಿಶ್ವನ ಮನೆಯಲ್ಲಿ ಗುರುಗಳ ಬಗ್ಗೆ ಚರ್ಚೆ ನಡೆದಿತ್ತು. ದೊರೆಯದಣ್ಣ ಮುಕುತಿ’ ಎಂಬ ಪುರಂದರ ವಾಣಿಯನ್ನು ಮರೆತುತಮ್ಮ ಗುರುಗಳೇ ಬೆಸ್ಟ್’ ಅಂತ ವಿಶಾಲು ವಾದಿಸಿದರೆ ವಿಶ್ವ ಅದನ್ನು ವಿರೋಧಿಸಿದ.
“ಯಾವ ಮಹಾ ನಿಮ್ ಗುರು? ನಮ್ ಗುರು ಮುಂದೆ ನಿಮ್ ಗುರು’ ಬರೀಲಘು’ ಅಷ್ಟೇ” ಎಂದ.
ಸಣ್ಣ ವಿಷಯಕ್ಕೆ ಶುರುವಾದ ವಾಗ್ವಾದ ವ್ಯಾಕರಣದ ವ್ಯಾಜ್ಯಕ್ಕೆ ತಿರುಗಿತ್ತು. ನಾನು ಸಂತ ಕಬೀರದಾಸ ವಾಣಿಯನ್ನು ತಂದು ಅವರ ಜಗಳದ ಮಧ್ಯೆ ನಿಲ್ಲಿಸಿದೆ.
“ಗುರು ಮತ್ತು ದೇವರ ನಡುವೆ ಇರುವ ಅಂತರವನ್ನು ದಡ್ಡರಿಗೂ ಅರ್ಥ ಆಗೋ ಥರ ಸಂತ ಕಬೀರ್‌ದಾಸ್ ಹೇಳ್ತಾರೆ” ಎಂದು ಪದ್ಯಗಳನ್ನು ಕೋಟ್ ಮಾಡಿದೆ.
“ಯಾರು ದೊಡ್ಡವರು ಅಂತಾನಾ?”
“ಹೌದು, ಬೆಳ್ಳಂಬೆಳಿಗ್ಗೆ ಬಾಗಿಲು ಶಬ್ದ ಆಗುತ್ತೆ. ನೀನು ಬಾಗಿಲು ತೆಗೀತೀಯ. ನಿನ್ನ ಪ್ರೈಮರಿ ಸ್ಕೂಲ್ ಮಾಸ್ತರು ಬೆತ್ತ ಹಿಡಿದು ನಿಂತಿದ್ದಾರೆ. ಅವರ ಪಕ್ಕದಲ್ಲಿ ಒರಿಜಿನಲ್ ದೇವರು ಒರಿಜಿನಲ್ ಕಿರೀಟ ಹಾಕ್ಕೊಂಡು ನಿಂತಿದ್ದಾನೆ. ಮೊದಲ ನಮಸ್ಕಾರ ನೀನು ಯಾರಿಗೆ ಮಾಡ್ತೀಯ?” ಎಂದು ಕೇಳಿದಾಗ ವಿಶ್ವನ ತಲೇಲಿ ಹುಳ ಹೊಕ್ಕಂತಾಯ್ತು.
“ದೇವರಿಗೇ ನಮಸ್ಕಾರ ಮಾಡ್ಬೇಕು” ಎಂದ.
ವಿಶಾಲೂ ಅದನ್ನು ವಿರೋಧಿಸಿದಳು.
“ಹೆಂಗ್ರೀ ದೇವರಿಗೆ ಮೊದಲು ನಮಸ್ಕಾರ ಮಾಡ್ತೀರ? ಗುರುಗಳೇನು ಬಿಟ್ಟಿ ಸಿಕ್ಕಿದ್ದಾರಾ? ಗುರು ಅಂದ್ರೆ ಗಣೇಶನ ಥರ, ಓ ನಾಮ ಕಲಿಸಿದವರು. ನಿಮ್ಮ ತಲೇಲಿರೋ ಜೇಡಿಮಣ್ಣು ತೆಗೆದು ಅಲ್ಲಿ ಬುದ್ಧಿ ತುಂಬಿದ್ದು ಯಾರು?” ಎಂದಳು.
ಮತ್ತೆ ಜಗಳ ಶುರುವಾಯಿತು. ಕಡೆಗೆ ಅವರ ಜಗಳಕ್ಕೆ ತಡೆಯಾಜ್ಞೆ ತಂದೆ.
“ನೋಡು ವಿಶ್ವಾ, ನಿಮ್ಮಿಬ್ಬರ ಅಭಿಪ್ರಾಯ ತಿಳೀತು. ಈಗ ಸಂತ ಕಬೀರ್‌ದಾಸ್ ಏನ್ಹೇಳಿದ್ದಾರೆ ತಿಳ್ಕೊಳ್ಳೋಣ. ಏಕಕಾಲಕ್ಕೆ ಗುರು ಮತ್ತು ದೇವರು ಪ್ರತ್ಯಕ್ಷ ಆದಾಗ ಮೊದಲ ನಮಸ್ಕಾರ ಗುರುವಿಗೇ ಬೀಳ್ಬೇಕು. ಯಾಕೆ ಅಂದ್ರೆ, ದೇವರ ಬಗ್ಗೆ ಮೊದಲ ಬಾರಿಗೆ ತಿಳಿಸಿಕೊಟ್ಟವ್ರು ಯಾರು? ಗುರುಗಳು. ಅವರು ಇಲ್ದೆ ಹೋಗಿದ್ರೆ ದೇವರ ಮಹತ್ವ, ದೇವರು ಯಾವ ರೂಪದಲ್ಲರ‍್ತಾರೆ, ಕಿರೀಟ, ಶಂಖ, ಚಕ್ರ, ಗದೆ ಯಾವ ಯಾವ ಕೈಲಿ ಹಿಡಿದರ‍್ತಾರೆ ಅನ್ನೋದು ಗೊತ್ತಾಗ್ತಾನೇ ರ‍್ಲಿಲ್ವಲ್ಲ” ಎಂದೆ.
“ಅದೇನೋ ಸರಿ, ಆದ್ರೆ ಎಲ್ಲ ಕಡೆ ಈ ಫರ‍್ಮುಲ ಅಪ್ಲೈ ಮಾಡೋಕಾಗೊಲ್ಲ” ಎಂದ.
“ಯಾಕಾಗೊಲ್ಲ?”
“ನಮ್ಮನೆ ಬಾಗಿಲು ಶಬ್ದ ಆಗುತ್ತೆ. ಡಿ.ಸಿ.ಎಂ. ಮತ್ತು ಸಿ.ಎಂ. ನನ್ನ ನೋಡೋಕೆ ಒಟ್ಟಿಗೆ ಬಂದರ‍್ತಾರಪ್ಪ, ಆಗ ಯಾರಿಗೆ ಫಸ್ಟ್ ನಮಸ್ಕಾರ ಮಾಡಬೇಕು?” ಎಂದು ನನ್ನೇ ಕೇಳಿದ.
“ಇದು ಬಹಳ ಕ್ಲಿಷ್ಟಕರ ಪ್ರಶ್ನೆ. ಇಬ್ಬರಿಗೂ ಸೇರಿಸಿ ಜನರಲ್ ನಮಸ್ಕಾರ ಮಾಡ್ಬೇಕು. ಯಾಕೇಂದ್ರೆ ಅವರಿಬ್ಬರಲ್ಲಿ ಯಾರಿಗಿಂತ ಯಾರೂ ಕಡಿಮೆ ಇಲ್ಲ” ಎಂದೆ.
ತಮ್ಮ ಕಾಲದ ಗುರುಗಳ ಬಗ್ಗೆ ವಿಶಾಲೂ ಮತ್ತೆ ಹೊಗಳಿಕೆ ಶುರು ಮಾಡಿದಳು.
“ನಾವು ಮೇಷ್ಟಿçಗೆ ಹೆರ‍್ತಾ ಇದ್ವಿ. ಗುರುಗಳು ಅಂದ್ರೆ ನಮ್ಗೆ ಎಂಥದ್ದೋ ಅವ್ಯಕ್ತ ಭಯ. ಅವರು ಹೇಳಿದ ಮಾತನ್ನ ನಾವು ಅಂದೂ ಮರ‍್ತಾರ‍್ಲಿಲ್ಲ”
ವಿಶ್ವ ತನಗಾದ ಅನುಭವ ಹೇಳಿದ.
“ಎದುರು ಮನೆ ಪದ್ಮಾ ಆಂಟಿ ತಮ್ಮ ಮಗನ ಬಗ್ಗೆ ಹೇಳ್ತಾ ಇದ್ರು. ೪ನೇ ಕ್ಲಾಸ್‌ನ ಟೀರ‍್ರು ಬ್ಲ್ಯಾಕ್‌ಬೋರ್ಡ್ ಒರೆಸೋಕೆ ಅವರ ಮಗನಿಗೆ ಹೇಳಿದ್ರಂತೆ. ವಿದ್ಯಾರ್ಥಿ ಬೋರ್ಡ್ ಒರೆಸಿ ಕೊಟ್ಟರೆ ತಪ್ಪೇನು ಅಂತ ನಾನು ಪದ್ಮಾ ಆಂಟೀನ ಕೇಳಿದೆ.”
“ಅಯ್ಯೋ ಅಯ್ಯೋ! ಓದೋಕೆ ಅಂತ ಶಾಲೆಗೆ ಕಳಿಸಿರೋ ಮಕ್ಕಳ ಕೈಯಲ್ಲಿ ಬ್ಲ್ಯಾಕ್‌ಬೋರ್ಡ್ ಒರೆಸೋ ಕೆಲ್ಸ ಮಾಡ್ಸೋದಾ? ಮೇಷ್ಟುç ಇರೋದು ಯಾಕೆ” ಅಂದ್ಲು ವಿಶಾಲೂ.
“ವಿಶಾಲೂ, ಬೋರ್ಡ್ ಒರೆಸೋದ್ರಲ್ಲಿ ತಪ್ಪೇನಿದೆ?” ಎಂದ ವಿಶ್ವ.
“ಇವತ್ತು ಬೋರ್ಡ್ ಒರೆಸು ಅಂತಾರೆ. ನಾಳೆ ತಮ್ಮ ಬೂಟು ಒರೆಸು ಅಂತಾರೆ. ಒರೆಸೋದು ಮಕ್ಕಳ ಕೆಲ್ಸ ಅಲ್ಲ. ಅವರಿಗೆ ಬುದ್ಧಿ ಬರಿಸೋದು ಗುರುಗಳ ಕರ್ತವ್ಯ” ಎಂದಳು.
ಆಗ ನಾನು ಮತ್ತೊಂದು ಉದಾಹರಣೆಯನ್ನು ಕೊಟ್ಟೆ.
“ನಾವು ಬಾಲ್ಯದಲ್ಲಿ ಸೈಕಲ್ ಕಲೀತಿದ್ದ ದಿನಗಳು. ಸೈಕಲ್ ತುಳೀತಾ ಹೋಗ್ತಿದ್ದಾಗ ಎದುರುಗಡೆಯಿಂದ ಗುರುಗಳು ನಡ್ಕೊಂಡು ಬಂದ್ರೆ ನಾವು ಸೈಕಲ್ಲಿಂದ ಇಳಿದು ಬಿಡ್ತಾ ಇದ್ವಿ. ಗುರುಗಳ ಬಗ್ಗೆ ಅಷ್ಟು ಭಯ ಇತ್ತು. ಆದ್ರೆ ಈ ಕಾಲದಲ್ಲಿ ಹಂಗೇನಿಲ್ಲ. ಪ್ರೊಫೆಸರ್ ಒಬ್ರು ಕಾಲೇಜ್ ಕಾರಿಡಾರ್‌ನಲ್ಲಿ ನಿಂತ್ಕೊಂಡು ವಿದ್ಯಾರ್ಥಿಗಳ ಜೊತೆ ಮಾತಾಡ್ತಾ ಇದ್ದಾಗ ಯಾವೋನೋ ಒಬ್ಬ ಸ್ಟೂಡೆಂಟು ಮೋಟರ್‌ಬೈಕ್ ಹೊಸದಾಗಿ ಕೊಂಡ್ಕೊಂಡು ಸ್ಪೀಡಾಗಿ ಕಾಂಪೌಂಡ್ ಒಳಗೆ ನುಗ್ಗಿ ಬಂದ. ಇನ್ನೇನು ಪ್ರೊಫೆಸರ್‌ಗೆ ಗುದ್ದೇ ಬಿಡ್ತಾನೆ ಅನ್ನೋವಾಗ ಅವರು ಪಕ್ಕಕ್ಕೆ ಹರ‍್ಕೊಂಡು ಬಚಾವ್ ಆದ್ರು.”
“ಅಯ್ಯೋ ದೇವ್ರೇ! ಆಮೇಲೆ?” ಎಂದಳು ವಿಶಾಲು.
“ಬೈಕ್ ಹುಡುಗ ಆಯತಪ್ಪಿ ಗೋಡೆಗೆ ಗುದ್ದಿ ಕೆಳಗಡೆ ಬಿದ್ದ. ವಿದ್ಯಾರ್ಥಿಗಳೆಲ್ಲ ಸೇರಿ ಅವನ್ನ ಹಿಗ್ಗಾಮುಗ್ಗಾ ಬಡಿದ್ರು.”
“ಅಯ್ಯೋ ಪಾಪ! ಅಟ್ಟದಿಂದ ಬಿದ್ದವನ್ನ ದಡಿಯಿಂದ ಚೆಚ್ಚಿದರು ಅಂತಾರಲ್ಲ ಹಾಗೆ!”
“ಆ ಏಟುಗಳು ತಡೆಯೋಕಾಗ್ದೆ ಹುಡುಗ ಒದ್ದಾಡ್ತಾ ಇದ್ದ. ಆಗ ಪ್ರೊಫೆರ‍್ರೇ ಅಡ್ಡ ಬಂದು, `ಹೊಡೀಬೇಡಿ ಅವನ್ನ ಬಿಟ್ಬಿಡಿ, ನನಗೇನೂ ಆಗಿಲ್ಲ’ ಅಂದ್ರು. ಆಗ ವಿದ್ಯಾರ್ಥಿಗಳು ಹೇಳಿದ್ದೇನು ಗೊತ್ತಾ?”
“ಏನು?”
“ನಿಮ್ಗೇನೂ ಆಗ್ಲಿಲ್ವಲ್ಲ, ಅದಕ್ಕೇ ಸಾರ್, ಇವನ್ನ ಹೊಡೀತಾ ಇರೋದು. ನಿಮ್ಗೇನಾದ್ರೂ ಆಗಿದ್ರೆ ಕಾಲೇಜ್‌ಗೆ ಮೂರು ದಿನ ರಜಾ ಸಿಕ್ತಿತ್ತು!”
ಈ ಕಾಲದಲ್ಲಿ ಮಕ್ಕಳ್ನ ಮುಟ್ಟೋ ಹಂಗಿಲ್ಲ, ಗದರಿಸೋ ಹಂಗಿಲ್ಲ. ಅವರ ಮೇಲೆ ಶಿಸ್ತಿನ ಕ್ರಮಾನ ತಗೊಳ್ಳೋ ಹಂಗಿಲ್ಲ. ಬೆಂಚ್ ಮೇಲೆ ನಿಲ್ಲಿಸಬರ‍್ದು. ಹೋಂ ವರ್ಕ್ ಯಾಕೆ ಮಾಡಿಲ್ಲ ಅಂತ ದಬಾಯಿಸಿ ಕೇಳಬರ‍್ದು. ಹೀಗಾದ್ರೆ ಮಕ್ಕಳಲ್ಲಿ ಶಿಸ್ತು ಎಲ್ಲಿಂದ ಬರುತ್ತೆ?
ಮೂವರೂ ಯೋಚನೆ ಮಾಡುತ್ತಾ ಕುಳಿತಿದ್ವಿ. ಅಷ್ಟರಲ್ಲಿ ಪಕ್ಕದ ಮನೆ ಪ್ರೈಮರಿ ಸ್ಕೂಲ್ ರಾಮಣ್ಣ ಮಾಸ್ತರು ತಲೆಗೆ ಬ್ಯಾಂಡೇಜ್ ಹಾಕಿಕೊಂಡು ಗಾಬರೀಲಿ ಬಂದ್ರು.
“ಏನಾಯ್ತು ಮೇಷ್ಟ್ರೇ?” ವಿಶ್ವ ಕೇಳಿದ.
“೭ನೇ ಕ್ಲಾಸಲ್ಲಿ ರಾಜಕಾರಣಿ ಮಗ ಇದ್ದಾನಲ್ಲ, ಅವನು ತಪ್ಪು ಮಾಡಿದ್ದಕ್ಕೆ ನಾನು ಬೈದೆ. ಅದಕ್ಕೆ ಅವನು ಕಿಟಕಿಗೆ ಅಡ್ಡ ಇಟ್ಟಿದ್ದ ಕಲ್ಲು ಎತ್ತಿ ನನ್ನತ್ತ ಎಸೆದು ಓಡ್ಹೋಗಿಬಿಟ್ಟ. ತಲೆಯಿಂದ ರಕ್ತ ಸುರೀತು.”
“ಪೊಲೀಸ್ ಕಂಪ್ಲೇಂಟ್ ಕೊಡಿ” ಎಂದೆ.
“ರಾಜಕಾರಣಿ ಮಗನ ಬಗ್ಗೆ ಪೊಲೀಸ್ ಕಂಪ್ಲೇಂಟ್ ಕೊಟ್ರೆ ಅವರ ಚೇಲಾಗಳು ನನ್ನ ಬಿಡ್ತಾರಾ? ಅಸಲಿಗೆ ಪೊಲೀಸ್ರು ಕಂಪ್ಲೇಂಟೇ ತಗೊಳ್ಳೊಲ್ಲ. ಬ್ಯಾಂಡೇಜ್ ಬಿಚ್ಚೋವರೆಗೂ ರಜೆ ಹಾಕಿ ಮನೇಲರ‍್ತೀನಿ.”
“ಗುರುಗಳಾಗಿ ನೀವು ಕಾಂಪ್ರೊಮೈಸ್ ಆಗೋದಾ?” ಎಂದ ವಿಶ್ವ.
“ಇದು ಕಲಿಯುಗ. ಅಲ್ಲಮಪ್ರಭು ಹೇಳಿದ್ಹಾಗೆ, ಕಲಿಯುಗದಲ್ಲಿ ನಾವು ಮಕ್ಕಳಿಗೆ ವಂದಿಸಿ ಪಾಠ ಹೇಳ್ಬೇಕು. ಇಲ್ಲಾಂದ್ರೆ ಗುರುಗಳಿಗೆ ಉಳಿಗಾಲ ಇಲ್ಲ” ಎಂದರು ಮಾಸ್ತರು.