ಗುರು ಎಂದರೆ ಕಲ್ಪವೃಕ್ಷ: ಬೇಡಿದ್ದನ್ನು ಕೊಡುವ ಮತ್ತು ಅದ್ಭುತವಾದ ಶಕ್ತಿ
ಗುರುಗಳ ಪೀಠದಲ್ಲಿ ವಿರಾಜಮಾನ ರಾಗಿದ್ದ ಸಂದರ್ಭದಲ್ಲಿ ಅನೇಕ ಪಂಡಿತರನ್ನು , ವಿದ್ವಾಂಸರನ್ನು ಅನುಗ್ರಹಿಸಿ ಬೆಳೆಸಿದರು. ಅವರೆಲ್ಲರೂ ರಚಿಸಿದ ಕೃತಿಗಳು ಇಂದು ಮಧ್ವಶಾಸ್ತ್ರದ ಉತ್ತಮೋತ್ತಮ ಕೃತಿ ಆಗಿವೆ
ಮೈಸೂರು : ಗುರುಗಳ ಸನ್ನಿಧಾನ ಎಂಬುದು ಸಕಲ ಸತ್ಕಾರ್ಯಗಳಿಗೆ ಪ್ರೇರಕವಾಗಿರುವುದು ನಮ್ಮೆಲ್ಲರ ಮಹಾಭಾಗ್ಯ ಎಂದು ಪಂಡಿತ ಆದ್ಯ ಗೋವಿಂದಾಚಾರ್ಯ ಹೇಳಿದರು.
ಅವರು ಅಗ್ರಹಾರದ ಉತ್ತರಾದಿ ಮಠದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶ್ರೀ ಸತ್ಯ ಸಂಕಲ್ಪ ತೀರ್ಥ ಮಹಾಸ್ವಾಮಿಗಳ ಆರಾಧನಾ ಮಹೋತ್ಸವದ ವಿಶೇಷ ಉಪನ್ಯಾಸದಲ್ಲಿ ಮಾತನಾಡಿದರು. ಗುರುವಿನ ಕೃಪೆ ಎಂಬುದು ಲಭ್ಯವಾಗುವುದು ಕೆಲವರಿಗೆ ಮಾತ್ರ ಸಾಧನಾ ಮಾರ್ಗದಲ್ಲಿ ಇದ್ದವರಿಗೆ ಬಹುಬೇಗ ಗುರುವಿನ ಅನುಗ್ರಹವಾಗುತ್ತದೆ ಸಾಮಾನ್ಯರಾಗಿದ್ದರು ಅತ್ಯಂತ ಭಕ್ತಿ ಮತ್ತು ಭಾವವನ್ನು ತೋರಿದಾಗ ಗುರುಗಳು ಮಾತೃ ಸ್ವರೂಪದಲ್ಲಿ ಅಂತವರನ್ನು ರಕ್ಷಿಸಿ ಅನುಗ್ರಹಿಸಿದ್ದಾರೆ ಈ ನಿಟ್ಟಿನಲ್ಲಿ ಉತ್ತರಾದಿ ಮಠದ ಪರಂಪರೆಯ ಶ್ರೀಮನ್ ಮಧ್ವಾಚಾರ್ಯರ ತತ್ವ ಮತ್ತು ಸಿದ್ದಾಂತಗಳನ್ನು ದೇಶಾದ್ಯಂತ ಪ್ರಸಾರ ಮಾಡಿದ ಕೀರ್ತಿಗೆ ಭಾಜನರಾದ ಸತ್ಯಸಂಕಲ್ಪ ತೀರ್ಥರು ಸಮಾಜದ ಅಭ್ಯುದಯಕ್ಕೆ ವಿಶೇಷವಾದ ಕೊಡುಗೆಗಳನ್ನು ನೀಡಿರುವುದು ಮಹತ್ವದ ಸಂಗತಿ ಎಂದರು.
ಕಲ್ಪವೃಕ್ಷವಾಗಿ, ಕಾಮಧೇನವಾಗಿ ಚಿಂತಾಮಣಿಯೂ ಆಗಿ ಗುರುಗಳು ಭಕ್ತರನ್ನು ಸಂರಕ್ಷಣೆ ಮಾಡಿದ್ದಾರೆ. ಜ್ಞಾನವನ್ನು ಕೊಟ್ಟು ಬೆಳೆಸಿದ್ದಾರೆ. ಅನ್ನ ಆಹಾರಗಳನ್ನು ಇತ್ತು ಪೋಷಣೆ ಮಾಡಿದ್ದಾರೆ. ಇದು ಅವರ ತಪಸ್ಸಿನ ಶಕ್ತಿಯ ಪ್ರತೀಕ ಎಂದು ಆದ್ಯ ಗೋವಿಂದಾಚಾರ್ಯರು ಉಲ್ಲೇಖಿಸಿದರು.
ಗುರುಗಳ ಪೀಠದಲ್ಲಿ ವಿರಾಜಮಾನ ರಾಗಿದ್ದ ಸಂದರ್ಭದಲ್ಲಿ ಅನೇಕ ಪಂಡಿತರನ್ನು , ವಿದ್ವಾಂಸರನ್ನು ಅನುಗ್ರಹಿಸಿ ಬೆಳೆಸಿದರು. ಅವರೆಲ್ಲರೂ ರಚಿಸಿದ ಕೃತಿಗಳು ಇಂದು ಮಧ್ವಶಾಸ್ತ್ರದ ಉತ್ತಮೋತ್ತಮ ಕೃತಿ ಆಗಿವೆ ಎಂದು ಅವರು ಹೇಳಿದರು. ಗುರು ಎಂದರೆ ಕಲ್ಪವೃಕ್ಷ. ಬೇಡಿದ್ದನ್ನು ಕೊಡುವ ಮತ್ತು ಅದ್ಭುತವಾದ ಶಕ್ತಿ. ಅಂಥ ಗುರುಗಳಾದ ಶ್ರೀ ಸತ್ಯ ಸಂಕಲ್ಪ ತೀರ್ಥರು ಮೈಸೂರು ಮಹಾರಾಜರಿಗೂ ಕಾಲ ಕಾಲಕ್ಕೆ ತಕ್ಕಂತೆ ಸಂದೇಶ ಸೂಚನೆ,, ಸಲಹೆ ಮತ್ತು ಮಾರ್ಗದರ್ಶನಗಳನ್ನು ನೀಡಿ ಕರುನಾಡಿನ ಅಭ್ಯುದಯಕ್ಕೂ ಮಹೋನ್ನತವಾದ ಕಾಣಿಕೆಯನ್ನು ಕೊಟ್ಟಂತಹ ಜ್ಞಾನ ಸೂರ್ಯರು. ಅವರ ಆರಾಧನೆಯ ಸಂದರ್ಭದಲ್ಲಿ ಜೀವನ ಆದರ್ಶಗಳನ್ನು ಪಾಲಿಸುವುದರೊಂದಿಗೆ ಅವರ ಕೃತಿಗಳನ್ನು ಅಧ್ಯಯನ ಮಾಡಿ ನಮ್ಮ ಬದುಕಿಗೆ ಸಾಧ್ಯವಾದಷ್ಟು ಅಳವಡಿಸಿಕೊಳ್ಳುವ ಪ್ರಯತ್ನವನ್ನು ಮಾಡಿದರೆ ಮಾತ್ರ ಧನ್ಯತೆ ಪ್ರಾಪ್ತವಾಗುತ್ತದೆ ಎಂದು ಗೋವಿಂದಾಚಾರ್ಯ ನುಡಿದರು. ಇದೇ ಸಂದರ್ಭದಲ್ಲಿ ಶ್ರೀ ಸತ್ಯ ಸಂಕಲ್ಪ ತೀರ್ಥರ ಮಹಾ ವೃಂದಾವನಕ್ಕೆ ಬೆಳಗಿನಿಂದಲೇ ಅಭಿಷೇಕ, ಪಂಚಾಮೃತ, ಅಲಂಕಾರ ಇತ್ಯಾದಿ ಸೇವೆಗಳು ನೆರವೇರಿದವು.
ಭಾನುವಾರ ಕಾರ್ಯಕ್ರಮ: ಶ್ರೀ ಸತ್ಯ ಸಂಕಲ್ಪ ಗುರುಗಳ ವೃಂದಾವನಕ್ಕೆ ಪಂಚಾಮೃತ ಅಭಿಷೇಕ , ಎಂಟು ಮೂವತ್ತರಿಂದ ಪಾರಾಯಣ, ಬೆಳಗ್ಗೆ 9:00 ರಿಂದ 10ರವರೆಗೆ ವಿದ್ವಾಂಸರಿಂದ ಪ್ರವಚನ, ಮಧ್ಯಾಹ್ನ 12:30 ಕ್ಕೆ ಮಹಾಮಂಗಳಾರತಿ ,
ಸಂಜೆ 5:00 ಗಂಟೆಗೆ ಪ್ರಖ್ಯಾತ ಗಾಯಕ ಮೈಸೂರು ರಾಮಚಂದ್ರಾಚಾರ್ಯ ಮತ್ತು ಸಂಗಡಿಗರಿಂದ ದಾಸವಾಣಿ ಸಂಗೀತ ಕಾರ್ಯಕ್ರಮ ನೆರವೇರಲಿದೆ.