ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಗುಳೆಯಿಂದ ಭಾಷೆ, ಸಂಸ್ಕೃತಿಗಳ ಜಾಲ ಮುರಿಯುವ ಭೀತಿ

03:30 AM Mar 22, 2024 IST | Samyukta Karnataka

ಮನುಷ್ಯರು ಅಥವಾ ಪ್ರಾಣಿಗಳು ಆಹಾರಕ್ಕಾಗಿ ತಾವಿದ್ದ ಸ್ಥಳದಿಂದ ಅಗತ್ಯಕ್ಕಾಗಿ ಇನ್ನೊಂದೆಡೆಗೆ ನೆಲೆಸಲು ಸ್ಥಳವನ್ನು ಬದಲಾಯಿಸುವುದಕ್ಕೆ ಗುಳೆ ಅಥವಾ ವಲಸೆ ಹೋಗುವುದು ಎನ್ನುವರು.
ಗುಳೆ ಹೋಗುವುದು ಸಾಮಾನ್ಯವಾಗಿ ಇಳೆಗೆ ಮಳೆಯಾಗದೇ ಹೋದಾಗ ಮನುಷ್ಯರಿಗೆ, ಪ್ರಾಣಿಗಳಿಗೆ ಮೂಲಭೂತವಾಗಿ ನೀರು ಆಹಾರಗಳ ಅಭಾವ ತಲೆದೋರಿ ಗುಳೆಹೋಗುವುದು ನಡೆಯುತ್ತದೆ. ಅದರಲ್ಲೂ ರಾಜ್ಯದ ವಿಜಯಪುರ, ಬಾಗಲಕೋಟೆ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ಹೆಚ್ಚು.
ಗುಳೆ ಹೋಗುವವರು ಕರ್ನಾಟಕದಲ್ಲಿ ದಕ್ಷಿಣ ಕರ್ನಾಟಕದ ಜಿಲ್ಲೆಗಳಾದ ಮಂಗಳೂರು, ಮೈಸೂರು, ಬೆಂಗಳೂರಿಗೆ ಹಾಗೂ ಹೊರ ರಾಜ್ಯದ ಮುಂಬೈ, ಗೋವಾ, ರತ್ನಗಿರಿ, ಮುಂತಾದ ಪ್ರದೇಶಕ್ಕೆ ತೆರಳಿ ಮತ್ತೆ ಮುಂಗಾರು ಪ್ರಾರಂಭಕ್ಕೆ ಪುನಃ ತಮ್ಮ ಊರಿಗೆ ವಾಪಸು ಬರುವರು. ಆದರೆ ಕೆಲವೊಂದು ಕುಟುಂಬಗಳು ಶಾಶ್ವತವಾಗಿ ಅಲ್ಲಿಯೇ ನೆಲೆ ಕಂಡುಕೊಂಡಿದ್ದೂ ಕೂಡಾ ಇದೆ. ಹೀಗಾದಾಗ ಆರ್ಥಿಕವಾಗಿ ಆ ವರ್ಷ ಮಾತ್ರ ಅನುಕೂಲವಾಗಿರಬಹುದು. ಆದರೆ ಶಾಶ್ವತವಾದ ಆರ್ಥಿಕ ಬಲವನ್ನು ಕಂಡುಕೊಳ್ಳಲಿಕ್ಕೆ ಸಾಧ್ಯವಾಗಿಲ್ಲ, ಗುಳೆ ಹೋಗುವುದು ಇದೊಂದು ಮಾನವೀಯ ಹಕ್ಕು. ಇದನ್ನು ಎಲ್ಲ ಕಾಲ, ಸಂದರ್ಭಗಳಲ್ಲೂ ಅಡಚಣೆಗಳನ್ನು ಮಾಡದೇ ಸಹಕರಿಸುವುದು ಅವಶ್ಯ. ೧೯೮೩-೮೫ರಲ್ಲಿ ವಿಶ್ವಸಂಸ್ಥೆಯ ಒಂದು ಅಂದಾಜಿನಂತೆ ಪೂರ್ವ ಆಫ್ರಿಕಾದಲ್ಲಿ ಕ್ಷಾಮ ತಲೆದೋರಿ ೨೦ ದೇಶಗಳ ೨೨ ಮಿಲಿಯನ್ ಜನ ನರಳಿದರು. ೧೯೯೧-೯೨ರಲ್ಲಿ ಸೋಮಾಲಿಯಾ ಬರಗಾಲದಲ್ಲಿ ೫ ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಕಾಲು ಭಾಗ ಮೃತಪಟ್ಟರು. ೧೯೯೮ರಲ್ಲಿ ಸುಡಾನಿನ ದಕ್ಷಿಣದಲ್ಲಿ ೨೯ ಮಿಲಿಯನ್ ಜನಸಂಖ್ಯೆಯ ಶೇ. ೧೦ ಭಾಗ ಹಸಿವಿನಿಂದ ನರಳಿದರು.
ಗುಳೆಯ ಕಾರಣಕ್ಕಾಗಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಜನರು ಬಂದು ನೆಲೆಸಿದಾಗ ಪರಸ್ಥಳೀಯರ ವಲಸೆಯ ಆರಂಭದ ವರ್ಷಗಳಲ್ಲಿ ಸ್ಥಳೀಯರ ನುಡಿಗಳ ಅವಸಾನಕ್ಕೆ ಕಾರಣವಾಗುತ್ತದೆ.
ಸುಡಾನಿನಲ್ಲಿ ೧೩೨ ಜೀವಂತ ಭಾಷೆಗಳಿದ್ದವು ಅವುಗಳಲ್ಲಿ ೧೨೨ರ ಬಗೆಗೆ ಮಾಹಿತಿ ಇದೆ. ಇವುಗಳಲ್ಲಿ ೧೭ ಭಾಷೆಗಳನ್ನಾಡುವವರು ತಲಾ ಒಂದು ಸಾವಿರಕ್ಕಿಂತ ಕಡಿಮೆ. ೫೪ ಭಾಷೆಗಳಿಗೆ ತಲಾ ಹತ್ತು ಸಾವಿರ ಇದ್ದರು. ೧೦೫ ಭಾಷೆಗಳನ್ನಾಡುವವರು ೧ ಲಕ್ಷಕ್ಕಿಂತ ಕಡಿಮೆ ಇದ್ದರು. ಕ್ಷಾಮ, ಬರಗಾಲಗಳ ಕಾರಣಗಳಿಂದ ಎಷ್ಟೋ ಸ್ಥಳೀಯ ಭಾಷೆಗಳು ಇಲ್ಲವಾದವು.
ಸಂಪನ್ಮೂಲವನ್ನು ಶೋಷಿಸುವ ಪ್ರಮಾಣಕ್ಕೂ ಜನ ಅನುಭವಿಸುವ ಸಂಕಟಕ್ಕೂ ನೇರ ಸಂಬಂಧವಿದೆ. ಆಫ್ರಿಕಾ ಖಂಡದಲ್ಲಿ ೧೯೭೦-೮೦ರ ದಶಕದಲ್ಲಿ ಮಳೆಯ ಪ್ರದೇಶಗಳಲ್ಲಿ ಪರಕೀಯರು ನಡೆಸಿದ ಅತಿಬೇಸಾಯ, ಅತಿಪ್ರಾಣಿ ಸಾಕಣೆ, ಕೆಟ್ಟ ನೀರಾವರಿ ಪದ್ಧತಿ, ಕಾಡುಕಡಿತ, ಜೊತೆಗೆ ಹವಾಮಾನ ವೈಪರೀತ್ಯಗಳು ಇವೆಲ್ಲದರ ಪರಿಣಾಮ ಸ್ಥಳೀಯ ಜನ ಆಹಾರ ಬೆಳೆಸಿಕೊಳ್ಳುವ ಪ್ರದೇಶ ಕುಗ್ಗಿ ಬಹುದೊಡ್ಡ ಗುಳೆಗಳು ನಡೆದು ಹೋದವು. ಇದರಿಂದ ಸಮುದಾಯಗಳ ಅಖಂಡತೆ, ಪಾರಂಪರಿಕ ಸಂಸ್ಕೃತಿ, ಭಾಷೆಗಳ ಜಾಲ ಮುರಿದು ಬಿದ್ದಿತು. ತಮ್ಮ ಸಾಂಸ್ಕೃತಿಕ ಲಕ್ಷಣಗಳನ್ನು ಕಳೆದುಕೊಳ್ಳುವ ಭೀತಿ ಬಂದಿತು. ಬದುಕಿ ಉಳಿಯಲು ಹೊಸ ಭಾಷೆಯನ್ನು ಕಲಿಯುವುದು ಅವರಿಗೆ ಅನಿವಾರ್ಯವಾಯಿತು. ಯಾವುದೇ ಭಾಷೆ ಸ್ಥಳೀಯ ಪುಟ್ಟ ಭಾಷೆ ಒಂದು ತಲೆ ಮಾರನ್ನು ದಾಟಿ ಉಸಿರು ಹಿಡಿದುಕೊಂಡು ಬಾಳಲಾರದು.
ಜನ ಸಮೃದ್ಧವಾಗಿ ಬದುಕಿದ್ದರೂ ಅವರ ಭಾಷೆ ಅವನತಿಯ ದಾರಿಯಲ್ಲಿ ಕಣ್ಮರೆಯಾಗಬಹುದು. ಒಂದು ಸಂಸ್ಕೃತಿ ಪ್ರಬಲವಾದ ಇನ್ನೊಂದು ಸಂಸ್ಕೃತಿಯ ಪ್ರಭಾವಕ್ಕೆ ಗುರಿಯಾಗಿ ಅದರೊಳಗೆ ಜೀರ್ಣವಾದಾಗ ಹೀಗಾಗುತ್ತದೆ. ತಮ್ಮದೇ ಭಾಷೆಯನ್ನಾಡುತ್ತಿದ್ದ ಜನ ಹೊಸವರ್ತನೆ, ಹೊಸನೀತಿಗಳನ್ನು ಅಳವಡಿಸಿಕೊಳ್ಳುತ್ತಾ ತಮ್ಮ ಸಾಂಸ್ಕೃತಿಕ ಲಕ್ಷಣಗಳನ್ನು ಕಳೆದುಕೊಳ್ಳುತ್ತಾರೆ.
ಒಂದು ಭಾಷೆ ಮತ್ತೊಂದು ಭಾಷೆಯನ್ನು ಕೊಲ್ಲುವುದಿಲ್ಲ. ಆದರೆ ಭಾಷೆಯೊಂದರ ಬಗೆಗೆ ಇರುವ ನಕಾರಾತ್ಮಕ ಧೋರಣೆಯ ಕಾರಣಕ್ಕಾಗಿ ಭಾಷೆ ಸಾವನ್ನಪ್ಪುತ್ತದೆ. ಜನ ತಮ್ಮ ಭಾಷೆಯನ್ನು ಪ್ರಜ್ಞಾಪೂರ್ವಕವಾಗಿ ನಿಲ್ಲಿಸಿ ಅದನ್ನು ತಮ್ಮ ಮಕ್ಕಳಿಗೆ ಕಲಿಸಬಾರದೆಂದು ನಿರ್ಣಯಿಸಿ ತಮ್ಮ ಭಾಷೆ ಅಸಹನೀಯ ಹೊರೆ ಎಂದು ತಿಳಿದು ವರ್ತಿಸಿದಾಗ ನಡೆಯುವುದು ಭಾಷೆಯ ಆತ್ಮಹತ್ಯೆ. ಹೀಗಾಗಲು ಕಾರಣ ತಮ್ಮ ಭಾಷೆ ಹಿಂದುಳಿದಿರುವಿಕೆಯ ಸಂಕೇತ, ಸಾಮಾಜಿಕ ಅಂತಸ್ತಿಗೆ ಬಾಧಕ ಎಂದು ತಿಳಿದು ತಮ್ಮ ಭಾಷೆಯ ಸಾವಿಗೆ ತಾವೇ ಕಾರಣರಾಗುತ್ತಾರೆ. ಸರಕಾರಗಳು ನದಿಗಳಿಗೆ ಆಣೆಕಟ್ಟುಗಳನ್ನು, ಕೆರೆಗಳಿಗೆ ಕೆರೆತುಂಬುವ ಯೋಜನೆ, ಏತನೀರಾವರಿಗಳು ಹಾಗೂ ದುಡಿಮೆಗಾಗಿ ಅನೇಕ ಯೋಜನೆಗಳನ್ನು ಕೈಗೊಳ್ಳುವ ಮೂಲಕ ಬರಗಾಲದ ತೀವ್ರತೆಯನ್ನು ಇತ್ತೀಚಿನ ವರ್ಷಗಳಿಂದ ಕಡಿಮೆ ಮಾಡಿದ್ದರೂ ಇನ್ನೂ ಪರಿಣಾಮಕಾರಿ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಗುಳೆ ತಡಗಟ್ಟಿ ಭಾಷೆ, ಸಂಸ್ಕೃತಿಗಳನ್ನು ಉಳಿಸಬೇಕು.

Next Article