ಗೃಹಲಕ್ಷ್ಮೀ ಹಣದಲ್ಲಿ ಫ್ಯಾನ್ಸಿ ಸ್ಟೋರ್ ಹಾಕಿಕೊಟ್ಟ ಅತ್ತೆ
ಹಾವೇರಿ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮೀ ಯೋಜನೆಯ ಹಣವನ್ನು ಕೂಡಿಟ್ಟ ಅತ್ತೆಯೊಬ್ಬಳು ತನ್ನ ಸೊಸೆಗೆ ಫ್ಯಾನ್ಸಿ ಸ್ಟೋರ್ ಹಾಕಿಸಿಕೊಟ್ಟು ಗಮನಸೆಳೆದಿದ್ದಾಳೆ.
ಜಿಲ್ಲೆಯ ಶಿಗ್ಗಾವಿ ತಾಲೂಕಿನ ನೀರಲಗಿ ಗ್ರಾಮದ ದಾಕ್ಷಾಯಿಣಿ ಪಾಟೀಲ ಅವರು ತಮ್ಮ ೧೦ ಕಂತಿನ ಗೃಹಲಕ್ಷ್ಮಿ ಹಣ ಕೂಡಿಟ್ಟು, ೨೦ ಸಾವಿರ ರೂ.ಗಳಲ್ಲಿ ಸೊಸೆ ಕುಮಾರಿ ಶಿವನಗೌಡ ಪಾಟೀಲ್‌ಗೆ ಮನೆಯಲ್ಲೇ ಫ್ಯಾನ್ಸಿ ಸ್ಟೋರ್ ಇಟ್ಟುಕೊಟ್ಟಿದ್ದಾರೆ.
ಅತ್ತೆ ದಾಕ್ಷಾಯಿಣಿ ಗೃಹಲಕ್ಷ್ಮೀ ಯೋಜನೆ ಹಣದಲ್ಲಿ ಒಂದು ಪೈಸೆಯನ್ನೂ ಖರ್ಚು ಮಾಡದೇ ಕೂಡಿಟ್ಟು, ೨೦ ಸಾವಿರಕ್ಕೂ ಹೆಚ್ಚು ಹಣ ಸಂಗ್ರಹಿಸಿ ಸೊಸೆಯ ಕೈಗೆ ಕೊಟ್ಟಿದ್ದಾರೆ. ಈ ಹಣದಲ್ಲಿ ಮನೆಯಲ್ಲೇ ಫ್ಯಾನ್ಸಿ ಸ್ಟೋರ್ ತೆರೆದಿದ್ದಾರೆ. ಈ ಅತ್ತೆ-ಸೊಸೆ ಜೋಡಿ ಗೃಹಲಕ್ಷ್ಮಿ ಯೋಜನೆಯನ್ನು ಸದ್ಬಳಕೆ ಮಾಡಿಕೊಂಡು ಬದುಕು ಕಟ್ಟಿಕೊಳ್ಳುತ್ತಿದ್ದಾರೆ.
ಗೃಹಲಕ್ಷ್ಮೀ ಯೋಜನೆ ನಮ್ಮಂತ ಬಡ ಕುಟುಂಬಗಳಿಗೆ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗಿದೆ. ಕಳೆದ ೧೦ ಕಂತಿನ ಗೃಹಲಕ್ಷ್ಮಿ ಹಣ ಕೂಡಿಟ್ಟು ಮನೆಯಲ್ಲೇ ಫ್ಯಾನ್ಸಿ ಸ್ಟೋರ್ ತೆರೆಯಲಾಗಿದೆ. ಇದರಿಂದಾಗಿ ಸೊಸೆ ಹೊರಗಡೆ ಕೆಲಸಕ್ಕೆ ಹೋಗದೆ ಮನೆಯಲ್ಲಿಯೇ ಇದ್ದುಕೊಂಡು ಉದ್ಯೋಗ ಮಾಡಬಹುದಾಗಿದೆ ಎಂದು ದಾಕ್ಷಾಯಿಣಿ ಪಾಟೀಲ ಹೇಳಿದ್ದಾರೆ.