ಗೃಹಲಕ್ಷ್ಮೀ ಹಣದಿಂದ ಇಡೀ ಊರಿಗೆ ಹೋಳಿಗೆ ಊಟ
ಬೆಂಗಳೂರು: ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಸುಟ್ಟಟ್ಟಿ ಗ್ರಾಮದ ಹಿರಿಯ ಮಹಿಳೆ ಅಕ್ಕಾತಾಯಿ ಲಂಗೋಟಿ ಅವರು ಗೃಹಲಕ್ಷ್ಮಿ ಯೋಜನೆಯಿಂದ ಬಂದ ಹಣದಲ್ಲಿ ಇಡೀ ಊರಿಗೆ ಹೋಳಿಗೆ ಊಟ ಹಾಕಿಸಿ ಸಂಭ್ರಮಿಸಿದ್ದಾರೆ. ಅಜ್ಜಿಯ ಕಾರ್ಯವನ್ನು ಮೆಚ್ಚಿದ ಸುಟ್ಟಟ್ಟಿ ಗ್ರಾಮದ ಮಹಿಳೆಯರು ಸಾಥ್ ನೀಡಿರುವುದು ಸಂತಸದ ವಿಚಾರ. ಮಹಿಳೆಯರ ಈ ಸಕಾರ್ಯವನ್ನು ನೋಡಿ ನನಗೆ ಮನತುಂಬಿ ಬಂತು ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್.ಬೋಸರಾಜು ಅವರು ಹೇಳಿದರು.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಮಹಿಳೆಯರು ಸಾಮಾಜಿಕವಾಗಿ ಮುಂದೆ ಬರಬೇಕು ಎಂಬ ಸದುದ್ದೇಶದಿಂದ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿರುವ ನಮ್ಮ ಹೆಮ್ಮೆಯ ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕು ಎಂದು ಅಕ್ಕಾತಾಯಿ ಅವರು ಹರಸಿದ್ದಾರೆ. ನಮ್ಮ ಸರ್ಕಾರ ಕಾರ್ಯರೂಪಕ್ಕೆ ತಂದಿರುವ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಯು ನಾಡಿನ ಮಹಿಳೆಯರ ಪಾಲಿಗೆ ಸಾಕ್ಷಾತ್ ಗೃಹಲಕ್ಷ್ಮಿಯಾಗಿ ಆಶೀರ್ವಾದಿಸಿದ್ದಾಳೆ ಎಂಬುದಕ್ಕೆ ಇಂತಹ ಹೃದಯಸ್ಪರ್ಶಿ ಸತ್ಕಾರ್ಯಗಳೇ ಸಾಕ್ಷಿ. ಅಕ್ಕಾತಾಯಿ ಅವರಂತಹ ಲಕ್ಷಾಂತರ ಗೃಹಲಕ್ಷ್ಮಿಯರ ಆಶೀರ್ವಾದ ನಮ್ಮ ಸರ್ಕಾರದ ಮೇಲಿರುವಾಗ ದುಷ್ಟರ ಕುತಂತ್ರಗಳು ಫಲಿಸಲು ಸಾಧ್ಯವೇ? ಬಡವರ ಪರವಾಗಿರುವ ಜನಪ್ರಿಯ ಸರ್ಕಾರವನ್ನು ಬೀಳಿಸಲು ವಿಫಲ ಯತ್ನ ನಡೆಸುತ್ತಿರುವ ಬಿಜೆಪಿ-ಜೆಡಿಎಸ್ ನಾಯಕರು ಇನ್ನಾದರೂ ಬುದ್ಧಿ ಕಲಿಯಲಿ. ಗ್ಯಾರಂಟಿ ಸರ್ಕಾರದ ಜೊತೆ ನಿಂತು ಸಮಾಜ ಒಪ್ಪುವಂತಹ ಕೆಲಸಗಳನ್ನು ಮಾಡಲಿ ಎಂದಿದ್ದಾರೆ.