ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಗೃಹಲಕ್ಷ್ಮೀ ಹಣ ಕೊಡಲಿಲ್ಲವೆಂದು ಪತ್ನಿಯ ಕೊಲೆ

04:57 PM Oct 23, 2024 IST | Samyukta Karnataka

ದಾವಣಗೆರೆ: ಕುಡಿತಕ್ಕಾಗಿ ಗೃಹಲಕ್ಷ್ಮಿ ಯೋಜನೆ ಹಣವನ್ನು ತನಗೆ ಕೊಡಲಿಲ್ಲವೆಂದು ಪತ್ನಿಯನ್ನು ಹತ್ಯೆ ಮಾಡಿ, ಅದನ್ನು ಆಕಸ್ಮಿಕ ಸಾವು ಎಂಬುದಾಗಿ ನಂಬಿಸಲು ಯತ್ನಿಸಿದ ಆರೋಪಿ ಪತಿ ಹಾಗೂ ಕುಟುಂಬ ಸದಸ್ಯರು ತಲೆ ಮರೆಸಿಕೊಂಡ ಘಟನೆ ಜಗಳೂರು ತಾ. ಉಜ್ಜಪ್ಪ ವಡೇರಹಳ್ಳಿಯಲ್ಲಿ ನಡೆದಿದೆ.

ಜಗಳೂರು ತಾ. ಉಜ್ಜಪ್ಪ ವಡೇರಹಳ್ಳಿ ಗ್ರಾಮದ ಸತ್ಯಮ್ಮ(40 ವರ್ಷ) ಕೊಲೆಯಾದ ಮಹಿಳೆ. ಅಣ್ಣಪ್ಪ ಕೊಲೆ ಆರೋಪಿ.

ಮದ್ಯವ್ಯಸನಿಯಾಗಿದ್ದ ಆಕೆಯ ಪತಿ ಅಣ್ಣಪ್ಪ ಹಣಕ್ಕಾಗಿ ನಿತ್ಯವೂ ಸತ್ಯಮ್ಮನಿಗೆ ಪೀಡಿಸುತ್ತಿದ್ದ. ಬಿಳಿಚೋಡು ಪೊಲೀಸ್ ಠಾಣೆಯಲ್ಲಿ ಎರಡೂ ಸಲ ಸತ್ಯಮ್ಮ ಮತ್ತು ಆಕೆಯ ತವರು ಮನೆಯವರ ಸಮ್ಮುಖದಲ್ಲೇ ಪೊಲೀಸರು ಬುದ್ಧಿ, ಹೇಳಿ ರಾಜಿ ಮಾಡಿ ಕಳಿಸಿದ್ದರು. ಕುಡಿತದ ದಾಸನಾಗಿದ್ದ ಅಣ್ಣಪ್ಪ ನಿತ್ಯವೂ ಕುಡಿಯಲು ಹಣ ಕೊಡುವಂತೆ ಸತ್ಯಮ್ಮನಿಗೆ ಪೀಡಿಸುತ್ತಲೇ ಇದ್ದನು. ಗೃಹಲಕ್ಷ್ಮಿ ಹಣವನ್ನು ಬಿಡಿಸಿಕೊಡುವಂತೆ ಆಕೆಗೆ ಒತ್ತಡ ಹೇರುತ್ತಿದ್ದನು. ಪ್ರತಿ ತಿಂಗಳು ಗೃಹಲಕ್ಷ್ಮಿ ಹಣ ಬರುವುದನ್ನೇ ಕಾದು, ಗೂಗಲ್‌ ಪೇ, ಪೋನ್ ಪೇ ಮೂಲಕ ತಾನೇ ಹಣವನ್ನು ಕಳಿಸಿಕೊಂಡು, ಅದೇ ಹಣದಲ್ಲಿ ಮದ್ಯ ಸೇವಿಸುತ್ತಿದ್ದ ಎಂದು ಮೃತಳ ಬಂಧುಗಳು ಆರೋಪಿಸಿದ್ದಾರೆ.

ಅಸಗೋಡು ಗ್ರಾಮದ ಬ್ಯಾಂಕ್‌ನಲ್ಲಿ ನಿನ್ನೆ ಗೃಹಲಕ್ಷ್ಮಿ ಯೋಜನೆ ಹಣ ಬಿಡಿಸಲು ಸತ್ಯಮ್ಮ ಹೋಗಿದ್ದಳು. ಆಗ ಅಣ್ಣಪ್ಪ ಸಹ ಹಣ ಬಿಡಿಸಿಕೊಡುವಂತೆ ಬ್ಯಾಂಕ್‌ನಲ್ಲೇ ಆಕೆಗೆ ತೊಂದರೆ ಕೊಟ್ಟು, ಹಲ್ಲೆ ಮಾಡಿದ್ದಾನೆ. ಆದರೆ, ಸತ್ಯಮ್ಮ ಹಣ ಕೊಡದ ಹಿನ್ನೆಲೆಯಲ್ಲಿ ಆಕೆಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿ, ಕೊಲೆ ಮಾಡಿದ್ದಾನೆ. ಕೊಲೆಯನ್ನು ಮುಚ್ಚಿ ಹಾಕಲು ಆಕೆ ಆಕಸ್ಮಿಕವಾಗಿ ವಿದ್ಯುತ್ ತಗುಲಿ ಸಾವನ್ನಪ್ಪಿದ್ದಾಳೆಂದು ಕಥೆ ಕಟ್ಟಿದ್ದನು.

ಮೃತ ಸತ್ಯಮ್ಮನ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ದಾವಣಗೆರೆ ಜಿಲ್ಲಾಸ್ಪತ್ರೆ ಶವಾಗಾರಕ್ಕೆ ಕಳಿಸಲಾಗಿತ್ತು. ಅತ್ತ ಮೃತಳ ಕುಟುಂಬಸ್ಥರು ತನ್ನ ವಿರುದ್ಧ ದೂರು ನೀಡುತ್ತಿದ್ದಾರೆ, ಪ್ರಕರಣ ದಾಖಲಾಯಿತು ಎಂಬು ವಿಚಾರ ತಿಳಿಯುತ್ತಿದ್ದಂತೆಯೇ ಅಣ್ಣಪ್ಪ ಮತ್ತು ಆತನ ಕುಟುಂಬಸ್ಥರು ತಲೆ ಮರೆಸಿಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಅಣ್ಣಪ್ಪನಿಗಾಗಿ ತೀವ್ರ ಶೋಧ ಕೈಗೊಂಡಿದ್ದಾರೆ.

Next Article