For the best experience, open
https://m.samyuktakarnataka.in
on your mobile browser.

ಗೊತ್ತಿಲ್ಲದಿರುವುದು ಗೊತ್ತಾಗುವುದೇ ಜೀವನ

12:09 PM Nov 07, 2023 IST | Samyukta Karnataka
ಗೊತ್ತಿಲ್ಲದಿರುವುದು ಗೊತ್ತಾಗುವುದೇ ಜೀವನ

ಎಲ್ಲಾ ಕರ್ಮಗಳ ಮೂಲವೂ ಮನಸ್ಸೇ. ಎಲ್ಲಾ ಕರ್ಮಗಳನ್ನೂ ಸಂಕಲ್ಪಿಸುವುದು ಮನಸ್ಸೇ. ಒಬ್ಬ ವ್ಯಕ್ತಿ ಎಷ್ಟು ಹೆಚ್ಚು ವಸ್ತುಗಳನ್ನು ಎಷ್ಟು ಹೆಚ್ಚು ಜನರಿಗೆ ಕೊಟ್ಟು ಎಷ್ಟು ಹೆಚ್ಚು ತೃಪ್ತಿ ಅಥವಾ ಸಂತೋಷಗಳನ್ನು ಉಂಟುಮಾಡಬಲ್ಲ..? ಪ್ರತಿಯೊಬ್ಬನ ಸಾಮರ್ಥ್ಯಕ್ಕೂ ಮಿತಿಯಿದೆಯಲ್ಲವೇ? ಆದ್ದರಿಂದ ಏನನ್ನು ಮಾಡಬಲ್ಲ, ಎಷ್ಟನ್ನು ಮಾಡಬಲ್ಲ ಎನ್ನುವುದಕ್ಕಿಂತ ಹೇಗೆ ಮಾಡಬಲ್ಲ, ಯಾವ ಭಾವದಿಂದ ಮಾಡಬಲ್ಲ ಎಂಬುದೇ ಮುಖ್ಯವಾಗುತ್ತದೆ. ಕರ್ಮಗಳು ಮನಸ್ಸಿನ ಮೇಲೆ ಮಾಡುವ ಪರಿಣಾಮಗಳನ್ನು ಅಂದರೆ ಅಪೇಕ್ಷಿತ ಸಂಸ್ಕಾರಗಳನ್ನು ಗಮನಿಸಿಯೇ ಕರ್ಮಗಳನ್ನು 'ಯಜ್ಞ' ಎಂದಿದ್ದಾರೆ.
ಕರ್ಮವು ಫಲವನ್ನು ಉತ್ಪತ್ತಿಮಾಡಿ ಮುಗಿದುಹೋಗುತ್ತದೆ. ಆದರೆ ಫಲವು ನಾಶವಾಗುವುದಿಲ್ಲ. ಉತ್ಪತ್ತಿಯಾದ ಫಲವು ಅನುಭವಿಸಲ್ಪಡದೆ ನಾಶವಾಗುವುದಿಲ್ಲ. ನಾವು ಈಗ ಅನುಭವಿಸುತ್ತಿರುವ ಸುಖ-ದುಃಖಗಳು ಹಿಂದೆ ನಾವು ಮಾಡಿದ ಕರ್ಮದ ಫಲವಾಗಿದ್ದು 'ಪ್ರಾರಬ್ಧ' ಎನ್ನುತ್ತಾರೆ. ಇನ್ನೂ ಅನುಭವಿಸಲು ಬಾಕಿಯಿರುವ ಅದೃಷ್ಟಫಲವನ್ನು (ಕಣ್ಣಿಗೆ ಗೋಚರಿಸದ) 'ಆಗಾಮಿಫಲ' ಎನ್ನುತ್ತಾರೆ. ಹಿಂದಿನ ಜನ್ಮಗಳಲ್ಲಿ ಮಾಡಿದ ಫಲಗಳನ್ನು ಈಗ ಅನುಭವಿಸುವ ಜೊತೆಯಲ್ಲೇ ಈಗ ಮಾಡಿದ ಕರ್ಮದ ಫಲವನ್ನೂ ಅನುಭವಿಸುತ್ತೇವೆ. ಆದರೆ ಎಲ್ಲ ಫಲಗಳನ್ನೂ ಅನುಭವಿಸಿ ಮುಗಿಸಲಾರೆವು. ಹೀಗೆ ಬಾಕಿ ಉಳಿದಿರುವ ಫಲವನ್ನು 'ಸಂಚಿತಫಲ' ಎನ್ನುತ್ತಾರೆ. ಅವುಗಳನ್ನು ಅನುಭವಿಸಲಿಕ್ಕಾಗಿಯೇ ಮತ್ತೆ ಜನ್ಮವೆತ್ತುವುದು ಪುನರ್ಜನ್ಮಕ್ಕೆ ಕಾರಣವಾಗುತ್ತದೆ. ಆದ್ದರಿಂದಲೇ ಮುಂದಿನ ಜನ್ಮ ಎಂಥದ್ದಾಗಿರಬೇಕು ಎಂದು ಈ ಜನ್ಮದಲ್ಲಿಯೇ ಆಯ್ಕೆಮಾಡಿಕೊಳ್ಳಬಹುದು..! ಕರ್ಮಫಲವನ್ನು ತಿಳಿಸುವುದರಿಂದ ತಾನು ಕೇವಲ ದೇಹವಲ್ಲ; ತಾನು ಜೀವನು ಎಂದು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ.
ಶಬ್ದ (ಪದ) ಬೇರೆ; ವಸ್ತುವಿನ ಇರುವಿಕೆಯ ಅರಿವು ಬೇರೆ. ಸಕ್ಕರೆಯು ಸಿಹಿಯಿದೆ ಎಂದು ಸಾವಿರ ಸಲ ಹೇಳಿದರೂ ಬಿಳಿಹರಳುಗಳ ನೆನಪಾದೀತೇ ವಿನಃ ನಾಲಿಗೆಯು ಆ ರುಚಿಯನ್ನು ಅನುಭವಿಸದು. 'ಚಳಿ' ಎಂಬ ಪದವೇ ನಡುಕ ಉಂಟುಮಾಡದು. 'ನೀರು' ಎಂದು ಕೂಗಿದರೂ ಮೈ ಒದ್ದೆಯಾಗದು. ಹಾಗೆಯೇ 'ನಾನು' ಎಂದು ಸಾವಿರ ಸಲ ಹೇಳಿದರೂ ಆ ಪದವು 'ನಾನಲ್ಲದ ಶರೀರ' ಎಂಬ ಅರ್ಥವನ್ನಷ್ಟೇ ಉಂಟುಮಾಡುತ್ತದೆಯೇ ವಿನಃ 'ನಾನು ಯಾರು' ಎಂಬ ಅರಿವಾಗಲಾರದು.
ಆತ್ಮಸಾಕ್ಷಾತ್ಕಾರ ಒಮ್ಮೆಲೇ ಹೊಂದಬಹುದಾದದ್ದಲ್ಲ; ಹಂತಹಂತವಾಗಿ ಸಾಧಿಸಬೇಕಾದದ್ದು. ಪ್ರಥಮವಾಗಿ ಸ್ಥೂಲಶರೀರವನ್ನು ಸಾಧನವನ್ನಾಗಿ ಮಾಡಿಕೊಳ್ಳುವುದು ಮೊದಲ ಹಂತ. ಸೂಕ್ಷ್ಮಶರೀರ, ಜೀವ ಅಥವಾ ಮನಸ್ಸು, ಬುದ್ಧಿಗಳನ್ನು ಸಾಧನವಾಗಿ ಮಾಡಿಕೊಳ್ಳುವುದು ನಂತರದ ಹಂತ. ಮೊದಲ ಹಂತದ ಸ್ಥೂಲಶರೀರವನ್ನು ಸಾಧನವನ್ನಾಗಿ ಮಾಡಲು ಕರ್ಮಮಾರ್ಗ; ಎರಡನೆಯ ಹಂತದ ಸೂಕ್ಷ್ಮ ಶರೀರವನ್ನು ಹದಗೊಳಿಸಲು ಉಪಾಸನಾಮಾರ್ಗ. ಈ ಎರಡನ್ನೂ ಸಾಧಿಸಿದವರು ಕೊನೆಯದಾದ ಜ್ಞಾನಮಾರ್ಗಕ್ಕೆ ಅಧಿಕಾರಿಗಳಾಗುತ್ತಾರೆ.
ಧರ್ಮಾನುಸಾರವಾಗಿ ಅರ್ಥ-ಕಾಮಗಳನ್ನು ಸಂಪಾದಿಸಿ ಭೋಗಿಸುವುದನ್ನೇ ಗುರಿಯಾಗಿರುವವರು ಮನುಷ್ಯರಾಗುತ್ತಾರೆ. ಆದರೆ ಮನುಷ್ಯರನ್ನು ಮನುಷ್ಯರನ್ನಾಗಿಯೇ ಇಡುವುದು ವೇದ-ಶಾಸ್ತ್ರಗಳ ಗುರಿಯಲ್ಲ; ಮನುಷ್ಯರಿಗೆ ಅವರ ಸ್ವರೂಪವನ್ನು ತಿಳಿಸುವುದೇ ವೇದ-ಶಾಸ್ತ್ರಗಳ ಗುರಿ.
ಭಕ್ತರಾಗುವುದೆಂದರೆ ದೇವರೊಡನೆ ಸಂಬಂಧವನ್ನು ಸ್ಥಾಪಿಸಿಕೊಳ್ಳುವುದು. ನಮ್ಮ ಸಂಬಂಧವೇನಿದ್ದರೂ ಮಾನಸಿಕ ಅಥವಾ ಭಾವನಾತ್ಮಕ. ಸತತ, ನಿಯಮಿತ ಅಭ್ಯಾಸದಿಂದ ದೇವರೊಂದಿಗೆ ಮಾನಸಿಕ ಸಂಬಂಧ ಸಾಧಿಸಬಹುದು. ಉಣ್ಣುವ ಮೊದಲು ಅಡಿಗೆಯನ್ನು ದೇವರಿಗೆ ಸಮರ್ಪಿಸಿದಾಗ ಅದು ಪ್ರಸಾದವಾಗುತ್ತದೆ. ತಾನು ಸಂಪಾದಿಸಿದ್ದನ್ನು ತಾನು ಉಣ್ಣುತ್ತೇನೆ ಎಂಬ ಮನುಷ್ಯನನ್ನಾಗಿಸುವ ಭಾವಕ್ಕಿಂತ ದೇವರ ಪ್ರಸಾದವನ್ನು ಉಣ್ಣುತ್ತೇನೆ ಎಂಬ ಭಕ್ತಭಾವ ಪಾವನವಾಗಿರುತ್ತದೆ. ಅದು ನಮ್ಮನ್ನು ಪವಿತ್ರರನ್ನಾಗಿ, ಭಕ್ತರನ್ನಾಗಿ ಮಾಡುತ್ತದೆ. ಮನಸ್ಸು ಶಬ್ದ ಮತ್ತು ಆಕಾರಗಳ ಮೊತ್ತವೇ ಆಗಿದ್ದು, ಇತರರಿಗೆ ಅಗೋಚರವಾಗಿಯೇ ಇರುತ್ತದೆ. ಮನಸ್ಸಿನಲ್ಲಿನ ಸ್ವಾರ್ಥವನ್ನು ಇಲ್ಲವಾಗಿಸಿ ವಿಶ್ವಕುಟುಂಬಿಯಾಗುವುದೇ ಪ್ರಾರ್ಥನೆಯ ಫಲವಾಗುತ್ತದೆ. ಅಹಂಕಾರದ ತ್ಯಾಗ ಮತ್ತು ಭಕ್ತಿಯ ಬೆಳವಣಿಗೆಗಳು ದೇವಯಜ್ಞದ ಮೊದಲ ಪ್ರಯೋಜನ.
ನಮ್ಮ ಸುತ್ತಮುತ್ತ ಎಷ್ಟು ಖುಷಿ, ಸಂತೋಷವಿರುತ್ತದೆ ನೋಡಿ..! ನಾವು ಒಂದು ರೇಡಿಯೋ ಆಗಬೇಕು. ವಾಸ್ತವದಲ್ಲಿ ರೇಡಿಯೋದ ಒಳಗೆ ಹಾಡುಗಳಿರುವುದಿಲ್ಲ; ನಾವು ಸರಿಯಾಗಿ ಫ್ರೀಕ್ವೆನ್ಸಿಯನ್ನು ಸೆಟ್‌ಮಾಡಿದರೆ ಹಾಡುಗಳು ಅದರೊಳಗೆ ಹರಿಯುತ್ತವೆ. ಅದೇ ಥರಾ ನಮ್ಮ ಸುತ್ತಮುತ್ತ ಎಷ್ಟೋ ಸಂತೋಷ ಇದೆ; ಅವೆಲ್ಲಾ ನಮ್ಮ ಜೀವನದಲ್ಲಿ ಹರಿಯುವ ಥರಾ ನಾವು ಟ್ಯೂನ್ ಆಗಬೇಕು. ಒಂದು ಸಲ ಟ್ಯೂನ್ ಆಯಿತೆಂದಾದರೆ ನಾವೇ ಒಂದು ದೊಡ್ಡ ಜಗತ್ತಾಗುತ್ತೇವೆ..! ಆ ಕ್ಷಣ ಸಾವೇ ಬಂದು ಎದುರು ನಿಂತರೂ ಅದನ್ನೂ ಪ್ರೀತಿಯಿಂದಲೇ ಸ್ವಾಗತಿಸುವ ಮನಃಸ್ಥಿತಿ ನಮ್ಮದಾಗಿರುತ್ತದೆ. ಮನುಷ್ಯ ಭಾವನಾಜೀವಿ. ಭಾವನಾಜೀವಿ ಎಂದಾದ ಮೇಲೆ ಬೇಸರ ಉಂಟಾಗುವುದು ಸಹಜ. ಹಾಗಂತ ಬೇಸರ ಆಯ್ತು ಅಂತಾ ಬೇಸರ ಮಾಡಿಕೊಂಡರೆ ಬೇಸರ ಆಗೋದು ನಮಗೇ ತಾನೇ? ಮನಃಸ್ಥಿತಿಯೇ ಪರಿಸ್ಥಿತಿ; ಮನಃಸ್ಥಿತಿಯನ್ನು ಬದಲಾಯಿಸಿಕೊಂಡರೆ ಪರಿಸ್ಥಿತಿಯನ್ನೇ ಬದಲಾಯಿಸಬಹುದು.
ಜಲಪಾತದಲ್ಲಿನ ನೀರಿನ ಹನಿಗಳು ಪ್ರತಿಕ್ಷಣವೂ ಬದಲಾಗುತ್ತಿದ್ದರೂ ನಮಗದು ಅನುಭವಕ್ಕೆ ಬರದೆ ಜಲಪಾತವು ಸತ್ಯವಾಗಿ ಒಂದೇ ರೂಪದಲ್ಲಿದೆ ಎಂದು ಭಾಸವಾಗುತ್ತದೆ. ನಾವು ಈಗ ಕಂಡ ಹನಿಗಳು ಮುಂದಿನ ಕ್ಷಣದಲ್ಲಿ ಅಲ್ಲಿರದಿರುವುದೇ ಸತ್ಯವೆಂದು ವಿವೇಕವು ತಿಳಿಸಿದರೂ ನಮ್ಮ ಇಂದ್ರಿಯಗಳು ನಮ್ಮನ್ನು ವಂಚಿಸುತ್ತಲೇ ಇರುತ್ತವೆ. ಹಾಗೆಯೇ ಶೈಶವ, ಬಾಲ್ಯ, ಕೌಮಾರ್ಯ, ಯೌವನ, ಅನಾರೋಗ್ಯ, ಮುದಿತನಗಳಲ್ಲೆಲ್ಲ ಒಂದೇ ಶರೀರವನ್ನು ನಾವು ನೋಡಲು ಸಾಧ್ಯವಿಲ್ಲವಾದರೂ ಅದನ್ನು ಮನಗಾಣದೆ ಒಂದೇ 'ವ್ಯಕ್ತಿ'ಯನ್ನು ಕಾಣುತ್ತೇವೆ. ಆದರೆ ಶರೀರವೆಂಬ ನಮ್ಮ ವ್ಯಕ್ತಿತ್ವದ ಅಂಶ ಸದಾ ಬದಲಾಗುತ್ತಲೇ ಇರುತ್ತದೆ! ಪ್ರತಿಕ್ಷಣವೂ ಹೊಸ ಜೀವಕೋಶಗಳು ಸೃಷ್ಟಿಯಾಗುತ್ತಾ ಮತ್ತು ನಶಿಸುತ್ತಾ ಇರುತ್ತವೆ. ನದಿಯ ನೀರೇ ಜಲಪಾತವಾಗಿ ಪುನಃ ನದಿಯೇ ಆಗುತ್ತಿದ್ದರೂ ಜಲಪಾತದಲ್ಲಿನ ನೀರು ನದಿಯ ನೀರಿಗಿಂತ ಬೇರೆಯಲ್ಲದಿದ್ದರೂ ಜಲಪಾತವು ನದಿಯಂತೆ ತೋರುವುದಿಲ್ಲವೆಂಬ ಕಾರಣದಿಂದ 'ಜಲಪಾತವು ನದಿಯಲ್ಲ' ಎಂದು ತೀರ್ಮಾನಿಸಿದಂತೆ ಶರೀರವು ಪ್ರಪಂಚಕ್ಕಿಂತ ಬೇರೆಯಲ್ಲದಿದ್ದರೂ ಪ್ರಪಂಚವು ಶರೀರದಿಂದ ಹೊರಗಿದೆ ಎಂದೇ ಭ್ರಮಿಸುತ್ತಿರುತ್ತೇವೆ. ಏಕೆಂದರೆ, ನಾವೆಂದರೆ ಶರೀರ ಮಾತ್ರವೆಂದೇ ನಂಬಿದ್ದೇವೆ. ಇದು ನಂಬಿಕೆ ಮಾತ್ರವೇ ವಿನಃ ಜ್ಞಾನವಲ್ಲ.
ಜಗತ್ತು ಎಂದರೆ ಎಲ್ಲಾ ಚರಾಚರ ವಸ್ತುಗಳ ಮೊತ್ತ. ಆ ವಸ್ತುರಾಶಿಗಳಲ್ಲಿ ಒಂದಾಗಿರುವ ನಮ್ಮ ದೇಹವೂ ಜಗತ್ತಿನ ಒಂದು ಸಣ್ಣ ಅಂಶ. ಜಗತ್ತನ್ನೆಲ್ಲಾ ಸುತ್ತುವ ಮುಂಚೆ ನಮ್ಮೊಳಗೆ ನಾವು ಸುತ್ತಬೇಕು. ಜಗತ್ತಿನ ಪಯಣ ಸಾಧ್ಯವಾಗುವುದು ನಮ್ಮೊಳಗೆ ನಾವು ಪ್ರಯಾಣಮಾಡಿದಾಗ ಮಾತ್ರ. ಆಗ ಮಾತ್ರವೇ ನಮಗೆ ನಾವು ಸಿಗುವುದು. ನಮ್ಮನ್ನೇ ನಾವು ಮರೆಮಾಡಿಕೊಂಡು ಜಗತ್ತನ್ನೆಲ್ಲಾ ಸುತ್ತಿದರೆ ಏನು ಪ್ರಯೋಜನ?
ಗೊತ್ತಿಲ್ಲದೇ ಇದ್ದರೂ ಗೊತ್ತಿರುವ ಥರಾ ಇರುತ್ತೇವೆ. ಗೊತ್ತಾದ ಮೇಲೆಯೇ ಗೊತ್ತಾಗುವುದು ನಮಗೇನೂ ಗೊತ್ತಿರ್ಲಿಲ್ಲ ಅಂತ. ಗೊತ್ತಿಲ್ಲ ಅನ್ನೋದು ಗೊತ್ತಿರೋದಕ್ಕಿಂತ ಶ್ರೇಷ್ಠ. ಗೊತ್ತಾಗುವ ಆಸೆ ನಮಗೆ ಹುಟ್ಟೋದೇ ನಮಗೇನೂ ಗೊತ್ತಿಲ್ಲ ಅಂತ ಗೊತ್ತಾದ ಮೇಲೆಯೇ ಅಲ್ಲವೇ..?! ಗೊತ್ತಿಲ್ಲದಿರುವುದು ಗೊತ್ತಾಗುವುದೇ ಜೀವನ. ಗೊತ್ತಾದ ಮೇಲೆ ಗೊತ್ತಿಲ್ಲದಿರುವ ಥರಾ ಬದುಕುವುದು ಬಹಳ ಕಷ್ಟ.