ಗೋಡ್ಸೆ ವಂಶಸ್ಥರಿಂದ ಗಾಂಧಿ ವಿಚಾರಧಾರೆಗಳ ಹತ್ಯೆ
ಹುಬ್ಬಳ್ಳಿ: “ಗೋಡ್ಸೆ ವಂಶಸ್ಥರು ನಿರಂತರವಾಗಿ ಗಾಂಧಿ ಅವರ ವಿಚಾರಧಾರೆಗಳನ್ನು ಹತ್ತಿಕ್ಕುತ್ತಲೇ ಬಂದಿದ್ದಾರೆ” ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ತಿಳಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಪಕ್ಷದ ನಾಯಕರೊಂದಿಗೆ ಸಮಾವೇಶದ ಪೂರ್ವಭಾವಿ ಸಭೆ ನಡೆಸಿದ ನಂತರ ಸುರ್ಜೆವಾಲ ಅವರು ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಜತೆ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದರು.
ಸರ್ಕಾರದ ಹಣದಲ್ಲಿ ನಕಲಿ ಗಾಂಧಿಗಳು ಸಮಾವೇಶ ಮಾಡುತ್ತಿದ್ದಾರೆ ಎಂಬ ಬಿಜೆಪಿ ನಾಯಕರ ಆರೋಪದ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು “ಜನವರಿ 30ರಂದು ಗಾಂಧಿ ಅವರ ಹತ್ಯೆಯಾದಾಗ ಅದು ಕೇವಲ ಅವರ ದೇಹದ ಹತ್ಯೆ ಮಾತ್ರವಲ್ಲ. ಗಾಂಧಿಜಿ ಅವರ ವಿಚಾರಧಾರೆಯ ಹತ್ಯೆಯಾಗಿದೆ. ಭಾರತದ ಸಂಸ್ಕೃತಿ ಹಾಗೂ ಸಂವಿಧಾನದ ವಿಚಾರವಾಗಿ ಇಂದಿಗೂ ಆ ಹೋರಾಟ ಮುಂದುವರಿಯುತ್ತಿದೆ. ಗೋಡ್ಸೆ, ಹಿಂಸೆ, ವಿಭಜನೆ ವಿಚಾರಧಾರೆ ಹಾಗೂ ಪ್ರೀತಿ, ಸೌಹಾರ್ದತೆಯ ವಿಚಾರ ನಡುವೆ ಸಂಘರ್ಷ ನಡೆಯುತ್ತಿದೆ. ಬಿಜೆಪಿಯವರು ಬೇಧ ಭಾವ ಮಾಡುತ್ತಾರೆ. ನಾವು ಎಲ್ಲರನ್ನು ಸಮನಾಗಿ ಕಾಣುತ್ತೇವೆ. ಬಿಜೆಪಿ ದಲಿತ, ಶೋಷಿತ, ಆದಿವಾಸಿ, ಬಡವರು, ಮಹಿಳೆಯರು, ಯುವಕರ ಮೇಲೆ ದೌರ್ಜನ್ಯ ನಡೆಸಿದರೆ ನಾವು ಈ ವರ್ಗದವರ ಕಲ್ಯಾಣಕ್ಕೆ ಶ್ರಮಿಸುತ್ತಿದ್ದೇವೆ. ಅವರು ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ನಡೆಸಿದರೆ, ನಾವು ಅಲ್ಪಸಂಖ್ಯಾತರಿಗೆ ಸಂವಿಧಾನಬದ್ಧವಾಗಿ ಸಮಾನತೆ ನೀಡುತ್ತಿದ್ದೇವೆ. ಅವರು ಶ್ರೀಮಂತರಿಗೆ ನೆರವು ನೀಡಿದರೆ, ನಾವು ಬಡತನದ ವಿರುದ್ಧ ಹೋರಾಟ ಮಾಡಿ ಎಲ್ಲರಿಗೂ ಸಮಾನ ಅವಕಾಶ ನೀಡುವ ಪ್ರಯತ್ನ ಮಾಡುತ್ತೇವೆ. ಇದೇ ಬಿಜೆಪಿ ಹಾಗೂ ಕಾಂಗ್ರೆಸ್ ನಡುವಣ ವ್ಯತ್ಯಾಸ” ಎಂದರು.
ಎಷ್ಟು ಜನ ಆಗಮಿಸಲಿದ್ದಾರೆ ಎಂದು ಕೇಳಿದಾಗ, “ಹೊಸ ಇತಿಹಾಸ ನಿರ್ಮಿಸುವಷ್ಟು ಜನ ಬರುತ್ತಾರೆ” ಎಂದರು.
ಬಿಜೆಪಿ ಆರೋಪದಲ್ಲಿ ಆಧಾರವಿಲ್ಲ
ಇಡಿ ಸಂಸ್ಥೆ 300 ಕೋಟಿಯಷ್ಟು ಆಸ್ತಿ ಜಪ್ತಿ ವಿಚಾರವಾಗಿ ಕೇಳಿದಾಗ, “ಮೋದಿ ಅವರ ಸರ್ಕಾರ ಹಾಗೂ ಬಿಜೆಪಿ ನಾಯಕರು ಬೆಳಗಾವಿಯಲ್ಲಿ ನಡೆಯುತ್ತಿರುವ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶಕ್ಕೆ ಬೆದರಿದ್ದಾರೆ. ಹೀಗಾಗಿ ಇಂತಹ ಕೆಲಸಕ್ಕೆ ಮುಂದಾಗಿದ್ದಾರೆ. ಇವರ ಆರೋಪಗಳಿಗೆ ಯಾವುದೇ ಆಧಾರವಿಲ್ಲ, ಅಸ್ಥಿತ್ವವೂ ಇಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಅವರ ಹಿಂಬಾಲಕರನ್ನು ಅಪಮಾನ ಮಾಡಿರುವ ಹಿನ್ನೆಲೆಯಲ್ಲಿ ಈ ಸಮಾವೇಶ ಗೃಹ ಸಚಿವ ಅಮಿತ್ ಶಾ ಅವರ ರಾಜೀನಾಮೆ ಆಗ್ರಹಿಸುತ್ತಿದ್ದು, ಈ ಸಮಾವೇಶಕ್ಕೆ ಬಿಜೆಪಿ ಹೆದರಿ ಈ ರೀತಿ ಪ್ರತಿಕ್ರಿಯೆ ನೀಡುತ್ತಿದ್ದಾರೆ” ಎಂದರು.
ದೆಹಲಿಯಲ್ಲಿ ಉತ್ತಮ ಆಡಳಿತ ನೀಡುವುದು ಕಾಂಗ್ರೆಸ್ ಗುರಿ
ಇಂಡಿಯಾ ಮೈತ್ರಿಕೂಟದಿಂದ ಕಾಂಗ್ರೆಸ್ ಅನ್ನು ಹೊರಗಿಡುವ ಯತ್ನದ ಬಗ್ಗೆ ಕೇಳಿದಾಗ, “ಆಮ್ ಆದ್ಮಿ ಪಕ್ಷ ಹಾಗೂ ಕಾಂಗ್ರೆಸ್ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಹೋರಾಟ ಮಾಡುತ್ತಿವೆ. ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷ ಶೀಲಾ ದೀಕ್ಷಿತ್ ಅವರ ನೇತೃತ್ವದಲ್ಲಿ 15 ವರ್ಷಗಳ ಕಾಲ ಅತ್ಯುತ್ತಮ ಆಡಳಿತ ನೀಡಿತ್ತು. ದೆಹಲಿಯಲ್ಲಿ ಸಾಧನೆ ಮಾಡಿದ್ದರೆ ಅದು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ. ನಂತರ ದೆಹಲಿ ವಾಯು ಮಾಲೀನ್ಯ, ಕೊಳೆಗೇರಿ ಸೇರಿದಂತೆ ಅನೇಕ ಸಮಸ್ಯೆಗಳಿಂದ ತತ್ತರಿಸಿದೆ. ದೇಶದ ಎಲ್ಲಾ ಭಾಗಗಳಿಂದ ದೆಹಲಿಗೆ ಹೋಗುವ ಜನ ಕೊಳಗೇರಿ ಪ್ರದೇಶಗಳಲ್ಲಿ ವಾಸಿಸುವ ಅನಿವಾರ್ಯತೆ ಎದುರಾಗಿದೆ. ದೆಹಲಿಯಲ್ಲಿ ಉಸಿರಾಡುವುದು ಕಷ್ಟವಾಗಿದೆ. ಇದಕ್ಕೆ ಮೋದಿ ಅವರ ಸರ್ಕಾರ ಹಾಗೂ ಆಪ್ ಸರ್ಕಾರ ಪಾಲುದಾರರಾಗಿದ್ದು, ದೆಹಲಿಯ ಸಮಸ್ಯೆಗೆ ಕಾಂಗ್ರೆಸ್ ಪರಿಹಾರವಾಗಿದೆ. ದೆಹಲಿಗೆ ಹೊಸ ಸ್ವರೂಪ ನೀಡಲು ನಾವು ಹೋರಾಟ ಮಾಡುತ್ತಿದ್ದೇವೆ. ರಾಜಕೀಯ ಪಕ್ಷವಾಗಿ ಜನರಿಗೆ ಉತ್ತಮ ಪರ್ಯಾಯ ಆಯ್ಕೆಯಾಗಿರುವುದು ನಮ್ಮ ಕರ್ತವ್ಯ” ಎಂದು ತಿಳಿಸಿದರು.
ಲೋಕಸಭೆಯಲ್ಲಿ ಮೈತ್ರಿ ಮಾಡಿಕೊಂಡು ಈಗ ದೂರವಾಗಿದ್ದೀರಿ ಎಂದು ಕೇಳಿದಾಗ, “ಪ್ರತಿ ಚುನಾವಣೆಯೂ ಭಿನ್ನ ಚುನಾವಣೆಯಾಗಿದೆ. ಒಂದು ಚುನಾವಣೆಯಲ್ಲಿ ಆಗಿದ್ದೆ ಮತ್ತೊಂದು ಚುನಾವಣೆಯಲ್ಲಿ ಆಗಬೇಕು ಎಂಬುದಿಲ್ಲ. ನಾವು ದೆಹಲಿಯಲ್ಲಿ ಉತ್ತಮ ಆಡಳಿತ ನೀಡಲು ಪ್ರಯತ್ನಿಸುತ್ತಿದ್ದೇವೆ. ಶೀಲಾ ದೀಕ್ಷಿತ್ ಅವರ ಕಾಲದಲ್ಲಿ ಸಿಕ್ಕ ಆಡಳಿತ ಮತ್ತೆ ಸಿಗಲಿ ಎಂದು ಅಲ್ಲಿನ ಜನ ಕಾಯುತ್ತಿದ್ದಾರೆ” ಎಂದು ತಿಳಿಸಿದರು.
ಪಕ್ಷದ ಮುಂದಾಳತ್ವ ತೀರ್ಮಾನ ಹೈಕಮಾಂಡ್ ನದ್ದು:
ರಾಜ್ಯ ಕಾಂಗ್ರೆಸ್ ನಲ್ಲಿ ಬಣ ರಾಜಕೀಯ ಆರಂಭವಾಗಿದೆಯೇ ಎಂದು ಕೇಳಿದಾಗ, “ಪಕ್ಷದ ಮುಂದಾಳತ್ವವನ್ನು ಯಾರು ವಹಿಸಿಕೊಳ್ಳುತ್ತಾರೆ ಎಂಬುದನ್ನು ಹೈಕಮಾಂಡ್ ನಾಯಕರು ತೀರ್ಮಾನ ನೀಡುತ್ತಾರೆ. ಈ ಬಗ್ಗೆ ನಿನ್ನೆ ಮಲ್ಲಿಕಾರ್ಜುನ ಖರ್ಗೆ ಅವರು ಎಲ್ಲರೂ ಬೇರೆ ಕೆಲಸ ಮಾಡುವುದನ್ನು ಬಿಟ್ಟು ತಮಗೆ ನೀಡಲಾಗಿರುವ ಕೆಲಸ ಮಾತ್ರ ಮಾಡಿ ಎಂದು ಸ್ಪಷ್ಟವಾಗಿ ತೀಳಿಸಿದ್ದಾರೆ. ಇದು ಎಲ್ಲರ ರಾಜಕೀಯ ಭವಿಷ್ಯಕ್ಕೆ ಹಾಗೂ ಪಕ್ಷಕ್ಕೆ ಒಳ್ಳೆಯದಾಗಲಿದೆ” ಎಂದು ತಿಳಿಸಿದರು.
ದ್ವೇಷ, ಹಿಂಸೆ ಬಿಜೆಪಿಯ ಇತಿಹಾಸ
ಇಡಿ ಮೂಲಕ ಸಿದ್ದರಾಮಯ್ಯ ಅವರ ವಿರುದ್ದ ಪಿತೂರಿ ನಡೆಯಲಾಗುತ್ತಿದೆಯೇ ಎಂದು ಕೇಳಿದಾಗ, “ಬಿಜೆಪಿ ಇತಿಹಾಸವೇ ದ್ವೇಷದ ರಾಜಕಾರಣ. ದ್ವೇಷ ಸಾಧಿಸುವುದೇ ಬಿಜೆಪಿಯ ಗುಣ. ದ್ವೇಷ. ಹಿಂಸೆ ಬಿಜೆಪಿಯ ಮಬೂಲವಾದ. ಹೀಗಾಗಿ ಅವರು ಸಿದ್ದರಾಮಯ್ಯ ಅವರ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ. ಈ ಹಿಂದೆ ನಮ್ಮ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಪಿತೂರಿ ನಡೆಸಿದ್ದರು. ರಾಹುಲ್ ಗಾಂಧಿ. ಪ್ರಿಯಾಂಕ್ ಗಾಂಧಿ, ಮನಮೋಹನ್ ಸಿಂಗ್ ಅವರ ವಿರುದ್ಧ ದಿನನಿತ್ಯ ದಾಳಿ ಮಾಡುತ್ತಿದ್ದಾರೆ. ವಿರೋಧ ಪಕ್ಷಗಳ ನಾಯಕರ ವಿರುದ್ಧ ನಿರಂತರ ದಾಳಿ ಮಾಡುತ್ತಿದ್ದಾರೆ. ಕಾರಣ, ನಾವು ಜನರ ಧ್ವನಿಯಾಗಿದ್ದೇವೆ. ಶೋಷಿತ ಸಮುದಾಯಗಳ ಪರವಾಗಿ ಧ್ವನಿ ಎತ್ತುವ ಎಲ್ಲರ ವಿರುದ್ಧವೂ ಬಿಜೆಪಿಯವರು ದಾಳಿ ಮಾಡುತ್ತಿದ್ದಾರೆ. ಹೀಗಾಗಿ ರೈತ ನಾಯಕರ ವಿರುದ್ಧವೂ ದಾಳಿ ಮಾಡುತ್ತಿದ್ದಾರೆ. ಅವರ ಈ ಪಿತೂರಿ ಸಿದ್ದರಾಮಯ್ಯ, ಶಿವಕುಮಾರ್ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ತೊಂದರೆಯಾಗುವುದಿಲ್ಲ” ಎಂದರು.
ಜಾತಿ ಗಣತಿ ಯಾವ ಜಾತಿಯ ವಿರುದ್ಧವಲ್ಲ:
ಜಾತಿ ಗಣತಿ ವಿಚಾರವಾಗಿ ಕೇಳಿದಾಗ, “ಕಾಂಗ್ರೆಸ್ ಪಕ್ಷ ಸಾಮಾಜಿಕ ನ್ಯಾಯ ಇರಬೇಕು ಎಂದು ಹೇಳಿದೆ. ಬಿಜೆಪಿ ಸಾಮಾಜಿಕ ನ್ಯಾಯ ಎಂಬ ಶಬ್ಧವನ್ನೇ ಸಂವಿಧಾನದಿಂದ ತೆಗೆದುಹಾಕಬೇಕು ಎಂದು ಹೇಳುತ್ತಿದ್ದಾರೆ. ಜಾತಿ ಗಣತಿಯು ಯಾವುದೇ ಜಾತಿಯ ವಿರುದ್ಧವಲ್ಲ. ಜಾತಿಗಣತಿಯು ಸಮಾಜದಲ್ಲಿ ಅಸಮಾನತೆಗೆ ಒಳಗಾಗಿರುವ ಸಮುದಾಯಗಳನ್ನು ಸರ್ಕಾರದ ಅನುದಾನದ ಮೂಲಕ ಮೇಲೆತ್ತಲು ನೆರವಾಗುವ ಉದ್ದೇಶವಾಗಿದೆ” ಎಂದರು.