ಗೋದಾಮಿನಲ್ಲಿ ಕೊಳೆಯುತ್ತಿರುವ ೧೦ ಲಕ್ಷಟನ್ ರಸಗೊಬ್ಬರ
ರವಿ ನಾಯಕ್, ಬೆಂಗಳೂರು
ಮುಂಗಾರು ಮತ್ತು ಹಿಂಗಾರು ಮಳೆ ಕೊರತೆಯಿಂದಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಈ ಬಾರಿ ೧೦.೯ ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಉಳಿದುಕೊಂಡಿದೆ.
ಬೇಡಿಕೆಯಂತೆ ಸರ್ಕಾರದಿಂದ ಬಿತ್ತನೆ ವೇಳೆ ರಸಗೊಬ್ಬರ ಪೂರೈಕೆಯಾಗುತ್ತಿಲ್ಲ ಎಂದು ರೈತರು ಪ್ರತಿಭಟನೆ ನಡೆಸುತ್ತಿದ್ದರು. ಆದರೆ, ೨೦೨೩-೩೪ನೇ ಸಾಲಿನಲ್ಲಿ ಕೃಷಿ ಚಟುವಟಿಕೆ ಕುಂಠಿತವಾಗಿರುವ ಪರಿಣಾಮ ಕೃಷಿ ಇಲಾಖೆಯ ಎಲ್ಲ ಗೋದಾಮುಗಳಲ್ಲಿ ರೈತರಿಗೆ ಪೂರಕೆಯಾಗಬೇಕಾದ ಡಿ.ಎ.ಪಿ., ಎಂ.ಒ.ಪಿ, ಕಾಂಪ್ಲೆಕ್ಸ್, ಯೂರಿಯಾ, ಎಸ್.ಎಸ್.ಪಿ ಸೇರಿದಂತೆ ವಿವಿಧ ರಸಾಯನಿಕ ಗೊಬ್ಬರ ದಾಸ್ತಾನು ಹಾಗೆ ಬಿದ್ದಿದೆ. ರೈತರಿಂದ ಹೆಚ್ಚಿನ ಬೇಡಿಕೆ ಇರುವ ಯೂರಿಯಾ ೩೭,೭೮೬೬ ಲಕ್ಷ ಮೆಟ್ರಿಕ್ ಟನ್, ಡಿ.ಎ.ಪಿ ೧೩,೩೮೦೫ ಲಕ್ಷ ಮೆಟ್ರಿಕ್ ಟನ್ ದಾಸ್ತಾನು ಇದೆ. ಮುಂಗಾರು ಮಳೆ ಕೊರತೆ ಅನುಭವಿಸಿದ ರೈತರು ಹಿಂಗಾರು ಮಳೆಯ ನೀರಿಕ್ಷೆಯಲ್ಲಿದ್ದರು. ಆದರೆ, ಹಿಂಗಾರು ಮಳೆಯೂ ಕೈಕೊಟ್ಟಿದ್ದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಪೂರೈಕೆಯಾಗಿರುವ ಗೊಬ್ಬರ ಹಾಗೆ ಉಳಿದುಕೊಂಡಿದೆ. ರಿಟೇಲರ್ ಮಾರಾಟಗಾರರ ಬಳಿಯೂ ಸುಮಾರು ೧೨ ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಮಾರಾಟವಾಗದೆ ಹಾಗೆ ಉಳಿದುಕೊಂಡಿದೆ.
ಬೀಜ ದಾಸ್ತಾನು: ರಸಗೊಬ್ಬರ ಅಷ್ಟೇ ಅಲ್ಲದೇ ಬಿತ್ತನೆ ಬೀಜ ಕೂಡ ರೈತ ಸಂಪರ್ಕ ಕೇಂದ್ರದಲ್ಲಿ ಶೇ.೫೦ ಮಾರಾಟವಾಗದೆ ಉಳಿದುಕೊಂಡಿದೆ. ಕಡಲೇ, ಮೆಕ್ಕೆಜೋಳ ಮತ್ತು ಜೋಳದ ಬೀಜಗಳು ಶೇ.೩೦ ರಷ್ಟು ರೈತರಿಗೆ ಹಂಚಿಕೆ ಮಾಡಲಾಗಿರುವುದನ್ನು ಹೊರತು ಪಡಿಸಿ ಉಳಿದಂತೆ ಶೇಂಗಾ, ಗೋಧಿ, ಉದ್ದು, ಹೆಸರು ಸೇರಿದಂತೆ ವಿವಿಧ ದ್ವಿದಳ ಧಾನ್ಯಗಳ ದಾಸ್ತಾನು ಇದೆ.
ಮಳೆಕೊರತೆಯಿಂದಾಗಿ ನಿಗದಿತ ಗುರಿಯಷ್ಟು ಬಿತ್ತನೆ ನಡೆದಿಲ್ಲ. ಇದರಿಂದ ೧೦ ಲಕ್ಷ ಮೆಟ್ರಿಕ್ ಟನ್ ವಿವಿಧ ಕಂಪೆನಿಯ ರಸಗೊಬ್ಬರ ದಾಸ್ತಾನು ಇದೆ. ಕೇಂದ್ರ ಸರ್ಕಾರದಿಂದ ಸಾಕಷ್ಟು ಪ್ರಮಾಣದಲ್ಲಿ ಗೊಬ್ಬರ ಪೂರೈಕೆಯಾಗಿದೆ. ಕೃಷಿಗೆ ಸಾಕಾಗುವಷ್ಟು ಮಳೆಯಾಗಿದ್ದರೆ ಗೊಬ್ಬರ ದಾಸ್ತಾನು ಇರುತ್ತಿರಲಿಲ್ಲ.
- ಡಾ.ಪುತ್ರ ಜಿ.ಟಿ, ಕೃಷಿ ನಿದೇರ್ಶಕರು.ಬೆಂಗಳೂರು.