For the best experience, open
https://m.samyuktakarnataka.in
on your mobile browser.

ಗೋವಾದಲ್ಲಿ ನಿರಂತರ ಮಳೆ, ಪ್ರವಾಹ ಪರಿಸ್ಥಿತಿ

07:39 PM Aug 01, 2024 IST | Samyukta Karnataka
ಗೋವಾದಲ್ಲಿ ನಿರಂತರ ಮಳೆ  ಪ್ರವಾಹ ಪರಿಸ್ಥಿತಿ

ಪಣಜಿ: ಗೋವಾ ರಾಜ್ಯಾದ್ಯಂತ ಬುಧವಾರ ರಾತ್ರಿಯಿಂದ ಮತ್ತೆ ಮಳೆಯ ಆರ್ಭಟ ಶುರುವಾಗಿದ್ದು, ಗುರುವಾರ ಬೆಳಗಿನ ಜಾವದವರೆಗೂ ಭಾರಿ ಮಳೆ ಮುಂದುವರಿದಿದೆ. ನಿರಂತರ ಸುರಿಯುತ್ತಿರುವ ಭಾರಿ ಮಳೆಗೆ ಕೊಂಕಣ, ಗೋವಾ ಕರಾವಳಿ ಪ್ರದೇಶಗಳ ಹಲವು ಊರುಗಳು ಜಲಾವೃತವಾಗಿದ್ದು ಪ್ರವಾಹ ಪರಿಸ್ಥಿತಿ ಉಂಟಾಗಿದೆ.
ಹಲವೆಡೆ ಭೂಕುಸಿತ, ರಸ್ತೆ ಕುಸಿತ, ಮನೆ ಗೋಡೆ ಕುಸಿತ, ವಿದ್ಯುತ್ ಕಂಬಗಳು ಧರೆಗುರುಳುವ ಘಟನೆಗಳು ನಡೆಯುತ್ತಲೇ ಇವೆ.
ವಾಳವಂಟಿ ನದಿ ಉಕ್ಕಿ ಹರಿದಿದ್ದು, ಕೆಲ ಊರುಗಳಿಗೆ ನೀರು ನುಗ್ಗಿದೆ. ಕೇರಿ-ಘೋಟೇಲಿ ಸೇತುವೆ ಜಲಾವೃತಗೊಂಡಿದೆ. ನಿರಂಕಲ್‌ನ ದೂಧಸಾಗರ ನದಿಯ ನೀರಿನ ಮಟ್ಟ ಹೆಚ್ಚಳ ಮತ್ತು ಮಹದಾಯಿ ಮಟ್ಟ ಹೆಚ್ಚಳದಿಂದ ಗಂಜೆ-ಉಸಗಾಂವ್ ರಸ್ತೆ ಜಲಾವೃತಗೊಂಡು ಸಂಚಾರಕ್ಕೆ ತೊಂದರೆಯಾಗಿದೆ. ನಾನೋಡ-ಡಿಚೋಳಿಗೆ ವಿದ್ಯಾರ್ಥಿಗಳನ್ನು ಕರೆತರಲು ಹೊರಟಿದ್ದ ಕದಂಬ ಬಸ್ ಪ್ರವಾಹದ ನೀರಿನಲ್ಲಿ ಸಿಲುಕಿಕೊಂಡ ಘಟನೆಯೂ ನಡೆದಿದೆ. ಮಳೆಯಿಂದಾಗಿ ಸಾಲ್‌ನಲ್ಲಿರುವ ಭೂಮಿಕಾ ದೇವಸ್ಥಾನದ ಪ್ರದೇಶವು ನೀರಿನಿಂದ ಆವೃತವಾಗಿದೆ.
ಸವರ್ಶೆಯಲ್ಲಿ ನದಿ ನೀರು ರಸ್ತೆಗೆ ನುಗ್ಗಿದ ಕಾರಣ ವಾಲ್ಪೆ-ಪೋಂಡಾ ರಸ್ತೆಯಲ್ಲೂ ಸಂಚಾರ ಸ್ಥಗಿತಗೊಳಿಸಲಾಗಿದೆ. ಕಲ್ನೆ ನದಿಯ ಪ್ರವಾಹದಿಂದಾಗಿ ಚಂದೇಲ್ ರಸ್ತೆ ಮುಳುಗಿದೆ. ಇದು ಸಂಚಾರದ ಮೇಲೆ ಪರಿಣಾಮ ಬೀರಿದೆ ಮತ್ತು ಇತರ ಗ್ರಾಮಗಳೊಂದಿಗೆ ಸಂಪರ್ಕ ಕಡಿತಗೊಂಡಿದೆ ಈ ಮಧ್ಯೆ ಖೋರ್ಲಿ-ಮ್ಹಾಪ್ಸಾ, ಕಾಸರವರ್ಣದಲ್ಲೂ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ಶಿರ್ವಾಯಿ-ಜಾಂಬವಲಿ (ಕುಡಚಡೆ) ರಸ್ತೆ ಜಲಾವೃತಗೊಂಡಿದೆ.
ಮೋಪಾ ವಿಮಾನ ನಿಲ್ದಾಣಕ್ಕೆ ತೆರಳುವ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ರಸ್ತೆ ನಾಗಝಾರ್‌ನಲ್ಲಿ ಸಂಪೂರ್ಣ ಮುಳುಗಡೆಯಾಗಿದೆ. ಇಲ್ಲಿಂದ ಬರುವ ಪ್ರಯಾಣಿಕರಿಗೆ ಮತ್ತೆ ಬಿರುಗಾಳಿ ಸಹಿತ ಗಂಟೆಗೆ ೧೫ ಮಿ.ಮೀ.ಗೂ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

Tags :