ಗೋವಾ ಗಡಿಯಲ್ಲಿ ಟೆಸ್ಟೇ ಇಲ್ಲ...
ಜೋಯಿಡಾ: ಗೋವಾಕ್ಕೆ ಹೋಗುವ ಪ್ರವಾಸಿಗರಿಗೆ ಜೋಯಿಡಾ ತಾಲೂಕಿನ ಅನಮೋಡ ಗೇಟ್ ಕರ್ನಾಟಕ ರಾಜ್ಯದ ಗೋವಾ ಗಡಿಯ ಮಹಾದ್ವಾರವಾಗಿದೆ. ಗೋವಾದಲ್ಲಿ ಈಗಾಗಲೆ ಕೊರೊನಾ ಮಹಾಮಾರಿಯ ಲಕ್ಷಣಗಳು ಹೆಚ್ಚುತ್ತಿದ್ದು, ದಿನನಿತ್ಯ ಲಕ್ಷಾಂತರ ಪ್ರವಾಸಿಗರು ಈ ಗೇಟ್ ಮೂಲಕ ಪ್ರಯಾಣಿಸುತ್ತಿರುತ್ತಾರೆ. ಆದರೆ ಈ ಗೇಟ್‌ನಲ್ಲಿ ಜೆಎನ್ ೧ ಕುರಿತ ಯಾವುದೇ ಮುನ್ನೆಚ್ಚರಿಕೆ ಕ್ರಮಕೈಗೊಳ್ಳದಿರುವುದು ಆತಂಕಕ್ಕೆ ಕಾರಣವಾಗಿದೆ.
ಉತ್ತರ ಕರ್ನಾಟಕ ಹಾಗೂ ರಾಜಧಾನಿ, ಬೆಂಗಳೂರು, ಆಂಧ್ರ, ತೆಲಂಗಾಣ ಮುಂತಾದ ಕಡೆಗಳ ಜನರಿಗೆ ಗೋವಾ ಹೋಗಲು ಇದೇ ಪ್ರಧಾನ ಹೆದ್ದಾರಿಯಾಗಿದೆ. ಈಗಾಗಲೆ ಗೋವಾದಲ್ಲಿ ಹೊಸ ವರ್ಷಾಚರಣೆಯ ಸಿದ್ಧತೆ ಜೋರಾಗಿ ನಡೆದಿದೆ. ಮಹಾಮಾರಿಯ ಆತಂಕದ ನಡುವೆಯೂ ಗೋವಾಕ್ಕೆ ಹೋಗುವ ರಾಜ್ಯದ ಜನರು ತುದಿಗಾಲಲ್ಲಿ ನಿಂತಿದ್ದಾರೆ. ಇಂತಹ ಸಂದರ್ಭದಲ್ಲಿ ಅನಮೋಡ ಗೇಟ್‌ನಲ್ಲಿ ಕೊರೊನಾ ತಪಾಸಣೆ ನಡೆಸದಿದ್ದರೆ ಮುಂದೆ ನಮ್ಮ ರಾಜ್ಯದಲ್ಲಿ ಕೊರೊನಾ ಮಾರಿಗೆ ಆತಿಥ್ಯ ನೀಡಿದಂತಾಗಲಿದೆ.
ಜೋಯಿಡಾ ತಾಲೂಕು ಈ ಹಿಂದೆ ಕೊರೊನಾ ಮಹಾಮಾರಿಯಿಂದಾಗಿ ಅನೇಕರನ್ನು ಕಳೆದುಕೊಂಡಿದ್ದ ಹೃದಯ ವಿದ್ರಾಹಕ ಘಟನೆ ಇನ್ನೂ ಮರೆಯಾಗದಿರುವಾಗಲೇ ಮತ್ತೆ ವರ್ಷಾಚರಣೆ ಹೆಸರಿನಲ್ಲಿ ಅನಮೋಡ ಗೇಟ್ ಮೂಲಕ ಕೊರೊನಾ ಮಹಾಮಾರಿ ಕರೆಸಿಕೊಂಡಂತಾಗಲಿದೆ. ಈ ಬಗ್ಗೆ ಆರೋಗ್ಯ ಇಲಾಖೆ ಎಚ್ಚರಿಕೆ ವಹಿಸಿ ಅನಮೋಡ್ ಗೇಟ್‌ನಲ್ಲಿ ಈಗಿನಿಂದಲೇ ತಪಾಸಣೆ ನಡೆಸುವ ಮೂಲಕ ತಾಲೂಕು ಹಾಗೂ ರಾಜ್ಯಕ್ಕೆ ಮುಂದೆ ಗೋವಾ ಮಾರ್ಗವಾಗಿ ಹರಡಲಿರುವ ಮಹಾಮಾರಿಯನ್ನು ತಪ್ಪಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.