For the best experience, open
https://m.samyuktakarnataka.in
on your mobile browser.

ಗೌರವ ಡಾಕ್ಟರೇಟ್: ಹೆಸರಿನ ಮುಂದೆ ಡಾ. ಪದ ಬಳಕೆಗೆ ಸರ್ಕಾರದ ನಿರ್ಬಂಧ

06:45 AM Feb 20, 2024 IST | Samyukta Karnataka
ಗೌರವ ಡಾಕ್ಟರೇಟ್  ಹೆಸರಿನ ಮುಂದೆ ಡಾ  ಪದ ಬಳಕೆಗೆ ಸರ್ಕಾರದ ನಿರ್ಬಂಧ

ವಿಧಾನಪರಿಷತ್ತು: ಗೌರವ ಡಾಕ್ಟರೇಟ್ ಪಡೆದಿದ್ದರೂ ಅವರು ತಮ್ಮ ಹೆಸರಿನ ಮುಂದೆ ಡಾ.' ಎಂದು ಹಾಕಿಕೊಳ್ಳುವಂತಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ತಿಳಿಸಿದರು. ಪ್ರಶ್ನೋತ್ತರ ಕಲಾಪದ ವೇಳೆ ಕಾಂಗ್ರೆಸ್ ಸದಸ್ಯ ಮಂಜುನಾಥ ಭಂಡಾರಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಗೌರವ ಡಾಕ್ಟರೇಟ್ ಕೊಡುವುದಕ್ಕೂ ನಿಯಮ ಇದೆ. ಗೌರವ ಡಾಕ್ಟರೇಟ್ ಪಡೆದವರು ಹೆಸರಿನ ಮೊದಲುಡಾ.' ಎಂದು ಹಾಕಿಕೊಳ್ಳುವಂತಿಲ್ಲ. ಈ ಬಗ್ಗೆ ಸುಪ್ರಿಂ ಕೋರ್ಟ್ ಆದೇಶವೇ ಇದೆ ಎಂದರು.
ಇತ್ತೀಚಿನ ದಿನಗಳಲ್ಲಿ ಯಾವ್ಯಾವುದೋ ವಿವಿಗಳು ಅರ್ಹರಲ್ಲದವರಿಗೂ ಡಾಕ್ಟರೇಟ್ ಪದವಿಗಳನ್ನು ನೀಡುತ್ತಿವೆ. ಇದರಿಂದಾಗಿ ಗೌರವ ಡಾಕ್ಟರೇಟ್ ನೀಡಲು ಸರ್ಕಾರಿ, ಖಾಸಗಿ ವಿವಿಗಳಿಗೆ ಏಕರೂಪ ನಿಯಮ ಜಾರಿಗೆ ತರಲಾಗುವುದು. ಈ ಕುರಿತಂತೆ ಕರ್ನಾಟಕ ಉನ್ನತ ಶಿಕ್ಷಣ ಪರಿಷತ್ತಿನ ಮೂಲಕ ಗೌರವ ಡಾಕ್ಟರೇಟ್ ಕೊಡುವ ಬಗ್ಗೆ ನಿಯಮ ರೂಪಿಸುತ್ತೇವೆ. ಖಾಸಗಿ ಸೇರಿದಂತೆ ಎಲ್ಲ ವಿವಿಗೆ ಏಕರೂಪ ನಿಯಮ ಜಾರಿಗೆ ತರುತ್ತೇವೆ ಎಂದು ತಿಳಿಸಿದರು.
ಹಾಗೆಯೇ ವಿವಿಗಳು ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡುವುದು, ರ‍್ಯಾಂಕ್ ನೀಡುವ ವಿಷಯದಲ್ಲಿ ಒಂದೊಂದು ಮಾದರಿ ಅನುಸರಿಸುತ್ತಿವೆ. ಅದರಲ್ಲೂ ಖಾಸಗಿ ವಿವಿಗಳು ತಮ್ಮದೇ ನಿಲುವನ್ನು ತೆಗೆದುಕೊಳ್ಳುತ್ತವೆ. ಮೌಲ್ಯಮಾಪನವನ್ನೂ ಅವರೇ ಮಾಡುವುದರಿಂದ ಅಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಹೆಚ್ಚು ಅಂಕ ಬರುವಂತಾಗಿದೆ. ಇದಕ್ಕಾಗಿ ಎಲ್ಲ ವಿವಿಗಳು ಅಂಕಗಳ ಬದಲು ಗ್ರೇಡಿಂಗ್ ನೀಡುವ ಕುರಿತು ಚಿಂತನೆ ಮಾಡಲಾಗುವುದು ಎಂದರು.
ಇದಕ್ಕೂ ಮುನ್ನ ಮಂಜುನಾಥ ಭಂಡಾರಿ ಮಾತನಾಡಿ, ರಾಜ್ಯದಲ್ಲಿರುವ ವಿವಿಗಳು ಒಂದೊಂದು ರೀತಿಯ ಅಂಕಗಳು ನೀಡುತ್ತಿವೆ. ಇದರಿಂದ ವಿದ್ಯಾರ್ಥಿಗಳಲ್ಲಿ ಆತಂಕ ಇದೆ. ಇತ್ತೀಚೆಗೆ ವಿದ್ಯಾರ್ಥಿಯೋರ್ವ ಕಡಿಮೆ ಅಂಕ ಬಂದಿದ್ದರಿಂದ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದರಿಂದಾಗಿ ಅಂಕಗಳನ್ನು ನೀಡುವ ಬದಲು ಗ್ರೇಸ್ ನೀಡುವ ವ್ಯವಸ್ಥೆ ಜಾರಿಗೆ ತರುವುದು ಸೂಕ್ತ ಎಂದರಲ್ಲದೆ, ಗೌರವ ಡಾಕ್ಟರೇಟ್ ನೀಡುವ ವಿಷಯದಲ್ಲಿ ಸರ್ಕಾರ ಯಾವ ಮಾನದಂಡ ಅನುಸರಿಸುತ್ತಿದೆ ಎಂದು ಕೇಳಿದರು.