For the best experience, open
https://m.samyuktakarnataka.in
on your mobile browser.

ಗ್ಯಾರಂಟಿಗೆ ಎಸ್‌ಸಿ, ಎಸ್‌ಟಿ ಅನುದಾನ: ಪ್ರತಿಭಟನೆ

07:03 PM Jul 29, 2024 IST | Samyukta Karnataka
ಗ್ಯಾರಂಟಿಗೆ ಎಸ್‌ಸಿ  ಎಸ್‌ಟಿ ಅನುದಾನ  ಪ್ರತಿಭಟನೆ

ಮಂಗಳೂರು: ಎಸ್‌ಸಿ, ಎಸ್‌ಟಿ ಮತ್ತು ಟಿಎಸ್‌ಪಿ ಕಾಯ್ದೆಯಲ್ಲಿ ಎಸ್‌ಸಿ, ಎಸ್‌ಟಿ ಜನರ ಅಭಿವೃದ್ಧಿ ಗೆ ಮೀಸಲಿಟ್ಟಿರುವ ಅನುದಾನದ ಮೊತ್ತವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಲಾಗುತ್ತಿದೆ ಎಂದು ಆರೋಪಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸ್ವಾಭಿಮಾನಿ ಪ್ರೊ.ಬಿ.ಕೃಷ್ಣಪ್ಪ ಬಣದ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.
ನಗರ ಮಧ್ಯದ ಕ್ಲಾಕ್ ಟವರ್ ಬಳಿ ಸೇರಿದ ಪ್ರತಿಭಟನಾಕಾರರು ತಮಟೆಯ ಸದ್ದಿನ ಹಿನ್ನೆಲೆಯಲ್ಲಿ ಕ್ರಾಂತಿಗೀತೆಗಳನ್ನು ಹಾಡುತ್ತ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಗ್ಯಾರಂಟಿ ಯೋಜನೆಗಳಿಗೆ ಬಳಕೆ ಆಗುತ್ತಿರುವ ಎಸ್‌ಸಿ, ಎ ಟಿ ಅಭಿವೃದ್ಧಿ ಯೋಜನೆಯ ಹಣವನ್ನು ತಕ್ಷಣ ವಾಪಸ್ ತರಬೇಕು, ಅನುದಾನ ಹಂಚಿಕೆಗೆ ಮತ್ತು ದುರುಪಯೋಗದ ಮೇಲೆ ನಿಗಾವಹಿಸಲು ಕಾವಲು ಸಮಿತಿ ರಚಿಸಬೇಕು, ಎಸ್‌ಸಿ ಎಸ್‌ಟಿ ಮತ್ರು ಟಿಎಸ್ ಪಿ ಅನುದಾನದ ಹಣದಲ್ಲಿ ಪ್ರಾಥಮಿಕ ಹಂತದಿಂದ ಉನ್ನತ ಹಂತದ ವರೆಗೆ ಉಚಿತ ಶಿಕ್ಷಣ ನೀಡಬೇಕು, ಎಸ್‌ಸಿ ಎಸ್‌ಟಿ ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗ ಮಾಡಲು ಅವಕಾಶ ಮಾಡಿಕೊಡಬೇಕು, ಸುಸಜ್ಜಿತ, ಸಂತ ಮನೆ ಕಟ್ಟಿಕೊಳ್ಳಲು ಆರ್ಥಿಕ ನೆರವು ನೀಡಬೇಕು. ಭೂರಹಿತರಿಗೆ ತಲಾ ಐದು ಎಕರೆ ಭೂಮಿ ನೀಡಬೇಕು, ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಮುಂದುಚರಿಸಬೇಕು, ಡಾ.ಬಿ.ಆರ್.ಅಂಬೇಡ್ಕರ್ ನಿಗಮದಲ್ಲಿ ಸ್ವಯಂ ಉದ್ಯೋಗಕ್ಕಾಗಿ ಆಯ್ಕೆ ಮಾಡುವ ಫಲಾನುಭವಿಗಳ ಸಂಖ್ಯೆ ೫೦ಕ್ಕೆ ಏರಿಸಬೇಕು, ಫಲಾನುವಿಗಳ ಪಟ್ಟಿ ಅಂತಿಮಗೊಳಿಸುವ ಅಧಿಕಾರ ಆಯಾ ಜಿಲ್ಲಾಧಿಕಾರಿಗೆ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ಸಂಘಟನಾ ಸಂಚಾಲಕ ಎಂ.ದೇವದಾಸ್, ’ಸಿದ್ದರಾಮಯ್ಯ ಸರ್ಕಾರ ಒಂದು ವರ್ಷದಲ್ಲಿ ಎಸ್ ಸಿ ಎಸ್ ಟಿ ಅಭಿವೃದ್ಧಿ ಯೋಜನೆಯ ಕೋಟ್ಯಂತರ ಮೊತ್ತವನ್ನು ಗ್ಯಾರಂಟಿಗಾಗಿ ಬಳಸಿದ್ದಾರೆ. ಹಿಂದೆ ಮುಂದೆ ಯೋಚನೆ ಮಾಡದೆ ಯೋಜನೆ ಜಾರಿಗೆ ತಂದು ಹಾನಿ ಮಾಡಿದ್ದಾರೆ. ದೇಶದಲ್ಲಿ ಅತಿ ಹೆಚ್ಚು ತೆರಿಗೆ ಪಾವತಿಸುವ ಕರ್ನಾಟಕ ರಾಜ್ಯದಲ್ಲಿ ಆರ್ಥಿಕ ಸಮಸ್ಯೆ ಇಲ್ಲ. ಆದ್ದರಿಂದ ಈಗ ನಡೆಯುತ್ತಿರುವುದು ದಲಿತರನ್ನು ಮತ್ತೆ ಮೇಲೇಳದಂತೆ ಮಾಡುವ ಹುನ್ನಾರ ನಡೆಯುತ್ತಿದೆ’ ಎಂದು ದೂರಿದರು.
ಸಮಿತಿಯ ಜಿಲ್ಲಾ ಸಂಚಾಲಕ ರಘು ಕೆ. ಎಕ್ಕಾರ್ ಮಾತನಾಡಿ ’ರಾಜ್ಯದಿಂದ ಕೋಮುವಾದಿ ಸರ್ಕಾರ ತೊಲಗಬೇಕು, ಜಾತ್ಯತೀತ ಸಿದ್ಧಾಂತದ ಸರ್ಕಾರ ಬರಬೇಕೆಂದು ಎಲ್ಲರೂ ಹೋರಾಡಿದೆವು. ಆದರೆ ಈಗಿನ ಸರ್ಕಾರ ದಲಿತ ಸಮುದಾಯಕ್ಕೆ ವಂಚನೆ ಮಾಡಿದೆ. ಗ್ಯಾರಂಟಿ ಯೋಜನೆಗಳಿಗೆ ಷೋಷಿತರ ಹಣ ಬಳಸುತ್ತಿದೆ’ ಎಂದರು.
ಜಿಲ್ಲಾ ಸಂಚಾಲಕ ಕೃಷ್ಣಾನಂದ, ರಾಚಯ್ಯ, ರವಿ ಎಸ್.ಪೇಜಾವರ, ರುಕ್ಮಯ್ಯ ಮೊದಲಾದವರಿದ್ದರು.