ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಗ್ಯಾರಂಟಿ ಕಲ್ಯಾಣಕ್ಕೆ ಒಟ್ಟು ೧.೨೦ ಲಕ್ಷ ಕೋಟಿ

02:45 AM Feb 17, 2024 IST | Samyukta Karnataka

ಕೊರತೆ ಬಜೆಟ್‌ನಲ್ಲಿ ಗ್ಯಾರಂಟಿ ಸೇರಿ ವಿವಿಧ ಕಲ್ಯಾಣ ಕಾರ್ಯಕ್ರಮಗಳಿಗೆ ೧,೨೦,೩೭೩ ಕೋಟಿ ರೂಪಾಯಿಗಳನ್ನು ಸಿಎಂ ಸಿದ್ದರಾಮಯ್ಯ ಮೀಸಲಿಟ್ಟಿದ್ದಾರೆ. ರಾಜ್ಯದ ಆರ್ಥಿಕತೆಯು ಪ್ರಸಕ್ತ ವರ್ಷ ಶೇಕಡಾ ೬.೬ರಷ್ಟು ಬೆಳವಣಿಗೆಯಾಗಲಿದೆ ಎಂದು ತಿಳಿಸಿದ್ದಾರೆ. ಐದು ಗ್ಯಾರಂಟಿಗಳಿಗೇ ಪ್ರತ್ಯೇಕವಾಗಿ ೫೨ ಸಾವಿರ ಕೋಟಿ ನಿಗದಿಪಡಿಸಿದ್ದಾರೆ.
ಸೇವಾ ವಲಯವು ಶೇ. ೮.೭ ಹಾಗೂ ಕೈಗಾರಿಕಾ ಕ್ಷೇತ್ರ ಶೇ. ೭.೫ರಷ್ಟು ಬೆಳವಣಿಗೆಯನ್ನು ದಾಖಲಿಸಿದ್ದರೆ, ಕೃಷಿ ವಲಯ ಮಾತ್ರ ಶೇ. ೧.೮ರಷ್ಟು ಋಣಾತ್ಮಕ ಬೆಳವಣಿಗೆ ದಾಖಲಿಸಿದೆ. ಕೃಷಿ ವಲಯದ ಹಿನ್ನೆಡೆಗೆ ತೀವ್ರ ಬರ ಕಾರಣ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ವಿದೇಶಿ ಹೂಡಿಕೆಯಾಗಿ (ಸೆಪ್ಟೆಂಬರ್, ೨೦೨೩ರ ಅಂತ್ಯದವರೆಗೆ) ೨.೮ ಶತಕೋಟಿ ಅಮೆರಿಕನ್ ಡಾಲರ್ ಹರಿದು ಬಂದಿರುವುದು ಸಕಾರಾತ್ಮಕ ಎಂದಿದ್ದಾರೆ.
ದೇಶದ ಅತೀ ಹೆಚ್ಚು ಜಿಎಸ್‌ಟಿ ಸಂಗ್ರಹಿಸುವ ರಾಜ್ಯಗಳ ಪೈಕಿ ಎರಡನೇ ಸ್ಥಾನದಲ್ಲಿರುವ ಕರ್ನಾಟಕ, ಈ ವಲಯದಲ್ಲಿ ಶೇ. ೧೮ರಷ್ಟು ಹೆಚ್ಚಳ ಕಂಡಿದೆ. ರಾಜ್ಯದ ವ್ಯಾಪ್ತಿಯ ತೆರಿಗೆಗಳಿಂದ ಶೇ. ೧೨ರಷ್ಟು ಹೆಚ್ಚಿನ ಆದಾಯವನ್ನು ರಾಜ್ಯ ಪ್ರಸಕ್ತ ಆರ್ಥಿಕ ವರ್ಷದಲ್ಲಿ ದಾಖಲಿಸಲಿದೆ.
ಕೇಂದ್ರ ತೆರಿಗೆ ಕಾನೂನು ಬಂದ ನಂತರ ಒಟ್ಟು ೪.೯೨ ಲಕ್ಷ ಕೋಟಿ ರೂಪಾಯಿಗಳಷ್ಟು ಜಿ.ಎಸ್.ಟಿ ಸಂಗ್ರಹವಾಗಬೇಕಿತ್ತು. ಕಾಯ್ದೆ ಬಂದಾಗ ನಿಗದಿ ಪಡಿಸಿದ್ದ ಶೇ. ೧೪ರ ಪ್ರಮಾಣದಲ್ಲಿ ಇದು ಸಂಗ್ರಹವಾಗಬೇಕಿತ್ತು. ಒಂದು ವೇಳೆ ಈ ಅಂದಾಜಿಗಿಂತ ಕಡಿಮೆ ಸಂಗ್ರಹವಾದಲ್ಲಿ ಕೇಂದ್ರ ಸರ್ಕಾರ ಪರಿಹಾರ ನೀಡುವ ಭರವಸೆ ನೀಡಿತ್ತು. ಆದರೆ ೨೦೧೭ರಿಂದ ೨೦೨೪ರವರೆಗೆ ೩.೨೬ ಲಕ್ಷ ಕೋಟಿ ರೂಪಾಯಿ ಜಿಎಸ್‌ಟಿ ಸಂಗ್ರಹವಾಗಿದ್ದು, ಇದು ಉದ್ದೇಶಿತ ಅಂದಾಜಿಗಿಂತ ೧.೬೫ ಲಕ್ಷ ಕೋಟಿಯಷ್ಟು ಕಡಿಮೆ. ಇದನ್ನು ತುಂಬಿ ಕೊಡಬೇಕಾಗಿದ್ದ ಕೇಂದ್ರ ಸರ್ಕಾರ ಕೇವಲ ೧.೦೬ ಲಕ್ಷ ಕೋಟಿ ರೂಪಾಯಿಗಳನ್ನು ಮಾತ್ರ ಕೊಟ್ಟಿದೆ. ಇದರಿಂದ ರಾಜ್ಯಕ್ಕೆ ೫೯,೨೭೫ ಕೋಟಿ ನಷ್ಟವಾಗಿದೆ.
ಸರ್ ಚಾರ್ಜ್ ಮತ್ತು ಸೆಸ್ ಹೆಚ್ಚಳ ಮೊತ್ತವನ್ನು ನ್ಯಾಯಯುತವಾಗಿ ಹಂಚಿಕೊಳ್ಳದ ಕಾರಣದಿಂದಾಗಿ ರಾಜ್ಯಕ್ಕೆ ಕಳೆದ ಏಳು ವರ್ಷಗಳಲ್ಲಿ ೪೫,೩೨೨ ಕೋಟಿ ನಷ್ಟ ಉಂಟಾಗಿದೆ. ಈ ಅವಧಿಯಲ್ಲಿ ಕೇಂದ್ರ ಸರ್ಕಾರ ಶೇ ೧೫೩ರಷ್ಟು ಸರ್‌ಚಾರ್ಜ್ ಮತ್ತು ಸೆಸ್ ಹೆಚ್ಚಳ ಮಾಡಿದ್ದರೂ, ರಾಜ್ಯದ ಪಾಲು ನೀಡಿಲ್ಲ ಎಂದು ಬಜೆಟ್ ವಿವರಿಸಿದೆ.
ಪ್ರಸಕ್ತ ಆರ್ಥಿಕ ವರ್ಷದಲ್ಲಿ ೨೭,೩೫೪ ಕೋಟಿ ರೂಪಾಯಿಗಳಷ್ಟು ತೆರಿಗೆ (ರಾಜಸ್ವ) ಹಾಗೂ ೮೨,೯೮೧ ಕೋಟಿಯಷ್ಟು ವಿತ್ತೀಯ ಕೊರತೆ ಸಂಭವಿಸಲಿದೆ ಎಂದು ಅಂದಾಜಿಸಲಾಗಿದೆ.
ರಾಜಸ್ವ ವೆಚ್ಚವಾಗಿ ೨,೯೦,೫೩೧ ಕೋಟಿ, ಬಂಡವಾಳ ವೆಚ್ಚವಾಗಿ ೫೫,೮೭೭ ಕೋಟಿ ಬೊಕ್ಕಸಕ್ಕೆ ಖರ್ಚು ಬರಲಿದೆ. ಸಾಲ ಮರುಪಾವತಿಗೆ ೨೪,೯೭೪ ಕೋಟಿ ಮೀಸಲಿಡಲಾಗಿದೆ.
ವಿವಿಧ ಮೂಲಗಳಿಂದ ರಾಜ್ಯ ಖಜಾನೆಗೆ ೩,೬೮,೬೭೪ ಕೋಟಿ ರೂಪಾಯಿಗಳ ಹರಿವು ನಿರೀಕ್ಷಿಸಲಾಗಿದೆ. ಇದರಲ್ಲಿ ರಾಜ್ಯ ಸರ್ಕಾರ ವಿವಿಧ ಮೂಲಗಳಿಗೆ ನೀಡಿರುವ ಸಾಲದ ೧,೦೫,೨೪೬ ಕೋಟಿ ರೂಪಾಯಿಗಳ ಮರು ಪಾವತಿಯೂ ಸೇರಿದೆ. ತೆರಿಗೆ ರೂಪದಲ್ಲಿ ೨.೬೩ ಲಕ್ಷ ಕೋಟಿ ಜಮೆಯಾಗುವ ಆಶಾಭಾವನೆ ಇಟ್ಟುಕೊಳ್ಳಲಾಗಿದೆ.
ವಾಣಿಜ್ಯ, ಅಬಕಾರಿಯಿಂದ ಅತ್ಯಧಿಕ ತೆರಿಗೆ ನಿರೀಕ್ಷೆ
ಪ್ರಸಕ್ತ ವರ್ಷ ವಾಣಿಜ್ಯ ಹಾಗೂ ಅಬಕಾರಿ ವಲಯಗಳಿಂದ ಕ್ರಮವಾಗಿ ಶೇ. ೫೮ ಹಾಗೂ ಶೇ. ೨೦ರಷ್ಟು ತೆರಿಗೆಯನ್ನು ಸರ್ಕಾರ ನಿರೀಕ್ಷಿಸಿದೆ. ಜಿ.ಎಸ್.ಟಿ ಜಾರಿಗೆ ಬಂದ ನಂತರದಲ್ಲಿ ರಾಜ್ಯದ ಸ್ವಂತ ತೆರಿಗೆಗಳ ರೂಪದಲ್ಲಿ ಬರುವ ಕೆಲವೇ ಕೆಲವು ವಲಯಗಳ ಪೈಕಿ ಇವೆರಡರಿಂದಲೇ ಅತ್ಯಧಿಕ ಸಂಗ್ರಹವಾಗುತ್ತಿದೆ.
ವಾಣಿಜ್ಯ ತೆರಿಗೆಗಳ ರೂಪದಲ್ಲಿ ೧.೧೦ ಲಕ್ಷ ಕೋಟಿ ಹಾಗೂ ಮದ್ಯದಿಂದ ೩೮,೫೨೫ ಕೋಟಿ ಈ ವರ್ಷ ಸಂಗ್ರಹವಾಗುವ ಅಂದಾಜು ಮಾಡಲಾಗಿದೆ. ಉಳಿದಂತೆ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಿಂದ ೨೬ ಸಾವಿರ ಕೋಟಿ (ಶೇ ೧೪), ಮೋಟಾರು ವಾಹನಗಳ ತೆರಿಗೆಯಾಗಿ ೧೩ ಸಾವಿರ ಕೋಟಿ (ಶೇ ೭) ಬೊಕ್ಕಸಕ್ಕೆ ಬರಲಿದೆ ಎನ್ನುವ ನಿರೀಕ್ಷೆ ಹೊಂದಲಾಗಿದೆ. ಉಳಿದ ಎಲ್ಲ ಮೂಲಗಳಿಂದ ಅತ್ಯಲ್ಪ, ಅಂದರೆ ೨,೩೬೮ ಕೋಟಿ (ಶೇ ೧) ಮಾತ್ರ ತೆರಿಗೆ ಸಂಗ್ರಹವಾಗುತ್ತದೆ ಎಂದು ಆಯವ್ಯಯ ಹೇಳಿದೆ.
ಕಳೆದ ಆರ್ಥಿಕ ವರ್ಷದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ೫,೬೫೮ ಕೋಟಿ ರೂಪಾಯಿ ತೆರಿಗೆ ಸಂಗ್ರಹವಾಗಿತ್ತು. ಈ ಸಾಲಿಗೆ ೯ ಸಾವಿರ ಕೋಟಿ ತೆರಿಗೆ ಸಂಗ್ರಹಣೆಯ ಗುರಿ ನಿಗದಿ ಮಾಡಲಾಗಿದೆ. ಸಾರಿಗೆ ಇಲಾಖೆಗೆ ೧೩ ಸಾವಿರ ಕೋಟಿ ರಾಜಸ್ವ ಸಂಗ್ರಹಣೆ ಗುರಿ ನೀಡಲಾಗಿದೆ. ಜಿಎಸ್‌ಟಿ ಸಂಗ್ರಹಣೆಯಲ್ಲಿ ಗಣನೀಯ ಬೆಳವಣಿಗೆ ದಾಖಲಿಸಿರುವ ರಾಜ್ಯದಲ್ಲಿ ಜಿಎಸ್‌ಟಿ ಮೇಲ್ಮನವಿ ನ್ಯಾಯಮಂಡಳಿಯ ಎರಡು ಪೀಠಗಳನ್ನು ಸ್ಥಾಪಿಸಲಾಗುತ್ತದೆ. ತೆರಿಗೆ ವಿವಾದಗಳನ್ನು ಸ್ಥಳೀಯವಾಗಿ ಬಗೆಹರಿಸುವ ದಿಸೆಯಲ್ಲಿ ಇವು ಕಾರ್ಯನಿರ್ವಹಿಸಲಿವೆ.

Next Article