ಗ್ಯಾರಂಟಿ ಫಲಪ್ರದವಾಗಿರುವುದಕ್ಕೆ ಫಲಿತಾಂಶ ಸಾಕ್ಷಿ
ದಾವಣಗೆರೆ: ಸರ್ಕಾರದ ಕಾರ್ಯಕ್ರಮಗಳು ಜನಪರವಾಗಿವೆ ಎಂಬುದನ್ನು ಸಂಡೂರು, ಚನ್ನಪಟ್ಟಣ, ಶಿಗ್ಗಾವಿ-ಸವಣೂರು ಉಪಚುನಾವಣೆ ಫಲಿತಾಂಶವೇ ತೋರಿಸಿಕೊಟ್ಟಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಿಗ್ಗಾವಿ-ಸವಣೂರು ಉಪಚುನಾವಣೆಯ ಉಸ್ತುವಾರಿ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿನ ಮೂರೂ ಕ್ಷೇತ್ರಗಳ ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಅಭೂತಪೂರ್ವ ಸಾಧನೆ ಮಾಡಿರುವುದು ಗ್ಯಾರಂಟಿ ಯೋಜನೆಗಳಿಗೆ ಜನಮನ್ನಣೆ ಇರುವುದರ ದ್ಯೋತಕವಾಗಿದೆ ಎಂದು ಅಭಿಪ್ರಾಯಪಟ್ಟರು.
ಕಾಂಗ್ರೆಸ್ ಪಕ್ಷವು ರಾಜ್ಯದ ಜನತೆಗೆ ಕೊಟ್ಟ ಮಾತಿನಂತೆ ೫ ಗ್ಯಾರೆಂಟಿ ಯೋಜನೆಗಳನ್ನು ಕೊಟ್ಟಿದೆ. ನಮ್ಮ ಕಾಂಗ್ರೆಸ್ ಸರ್ಕಾರವು ನುಡಿದಂತೆ ನಡೆದಿದಿದ್ದು, ಮತದಾರರು ಮೂರು ಉಪಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷವನ್ನು ಬೆಂಬಲಿಸಿದೇ ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತಂದ ಕಾಂಗ್ರೆಸ್ ಪಕ್ಷದ ಕೈ ಹಿಡಿದಿದ್ದಾರೆ. ಈ ಮೂಲಕ ತಾವು ಗ್ಯಾರಂಟಿ ಯೋಜನೆಗಳ ಪರ ಇರುವುದಾಗಿ ಮತದಾರರೇ ನಿರೂಪಿಸಿದ್ದಾರೆ. ಮತದಾರರರಿಗೆ ನಮ್ಮ ಕಾಂಗ್ರೆಸ್ ಪಕ್ಷವು ಚಿರಋಣಿಯಾಗಿರುತ್ತದೆ ಎಂದು ಹೇಳಿದರು.