ಗ್ಯಾರಂಟಿ ಯೋಜನೆಯಿಂದ ಜೀವನ ಮಟ್ಟ ಸುಧಾರಣೆ
ವಿಧಾನಪರಿಷತ್: ರಾಜ್ಯ ಸರ್ಕಾರ ನುಡಿದಂತೆ ನಡೆದಿದೆ. ಚುನಾವಣೆ ವೇಳೆ ನೀಡಿದ ಎಲ್ಲ ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದೆ. ಇದರಿಂದ ಬಡಜನರ ಆರ್ಥಿಕ ಸ್ಥಿತಿ ಸುಧಾರಿಸಿದೆ ಎಂದು ಸದಸ್ಯ ಯು.ಬಿ.ವೆಂಕಟೇಶ್ ಹೇಳಿದರು.
ಕಲಾಪದಲ್ಲಿ ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದ ವಂದನಾ ಪ್ರಸ್ತಾವದ ಮೇಲಿನ ಚರ್ಚೆಯಲ್ಲಿ ಮಾತನಾಡಿದರು.
ಸರ್ಕಾರ ಎಲ್ಲ ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದೆ. ಗ್ಯಾರಂಟಿಗಳ ಜಾರಿಯನ್ನು ಪರಿಶೀಲಿಸಲು ಸಮಿತಿಗಳನ್ನು ರಚಿಸಲಾಗಿದೆ. ಆದರೆ ಬಿಜೆಪಿ ನಾಯಕರು ಗ್ಯಾರಂಟಿಗಳು ಜಾರಿಯಾಗಿಲ್ಲ ಎಂದು ಹೇಳುತ್ತಿದ್ದಾರೆ. ಅವರು ಗ್ಯಾರಂಟಿ ವಿರೋಧಿಗಳು ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಬರಗಾಲ ಎದುರಾಗಿದ್ದು ಕೇಂದ್ರ ಸರ್ಕಾರದ ಅಧಿಕಾರಿಗಳು ಭೇಟಿ ನೀಡಿ ವರದಿ ತಯಾರಿಸಿದ್ದಾರೆ. ಆದರೆ ಇನ್ನು ಕೇಂದ್ರ ಸರ್ಕಾರ ನಯಾ ಪೈಸೆಯನ್ನು ಬಿಡುಗಡೆ ಮಾಡಿಲ್ಲ.
ರಾಜ್ಯ ಸರ್ಕಾರ ರೈತರಿಗೆ ತುರ್ತು ಪರಿಹಾರವಾಗಿ ೨ ಸಾವಿರ ರೂ.ಗಳನ್ನು ಖಾತೆಗೆ ಜಮಾ ಮಾಡಿದೆ. ರಾಜ್ಯ ಪಾವತಿಸುವ ತೆರಿಗೆಯಲ್ಲೂ ನಮಗೆ ಪಾಲು ನೀಡುತ್ತಿಲ್ಲ. ಹೀಗಾಗಿ ದೆಹಲಿಯಲ್ಲಿ ನಮ್ಮ ತೆರಿಗೆ ನಮ್ಮ ಹಕ್ಕು ಎಂದು ಪ್ರತಿಭಟನೆ ಮಾಡಬೇಕಾಯಿತು ಎಂದರು.
ಭಾಷಣದಲ್ಲಿ ತುಂಬಾ ನಿರಾಸೆ
ಸದಸ್ಯ ಪ್ರತಾಪಸಿಂಹ ನಾಯಕ ಮಾತನಾಡಿ, ಕಾಂಗ್ರೆಸ್ ಸರ್ಕಾರ ರಾಜ್ಯಪಾಲರ ಭಾಷಣದಲ್ಲಿ ಸುಳ್ಳು ಹೇಳಿಸಿದೆ. ಭಾಷಣದ ಪ್ರತಿಯಲ್ಲಿ ಇರುವಂತೆ ಸರ್ಕಾರ ಯೋಜನೆಗಳನ್ನು ಜಾರಿಗೊಳಿಸಿಲ್ಲ. ಹೀಗಾಗಿ ರಾಜ್ಯಪಾಲರ ಭಾಷಣ ನಿರಾಸೆ ಮೂಡಿಸಿದೆ. ಯೋಜನೆಗಳು ಭಾಷಣದ ಪ್ರತಿಯಲ್ಲಿ ಮಾತ್ರ ಇವೆ. ಜನರಿಗೆ ತಲುಪಿಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರಾದ ಯೋಜನೆಗಳಿಗೆ ಸಿಎಂ ಬೊಮ್ಮಾಯಿ ಅವರೇ ಹಣ ಮಂಜೂರು ಮಾಡಿದ್ದರು.
ಇದನ್ನು ಕಾಂಗ್ರೆಸ್ ಸರ್ಕಾರ ನಮ್ಮದು ಎಂದುಕೊಳ್ಳುತ್ತಿದೆ. ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದು ೮ ತಿಂಗಳಾದರೂ ಯಾವುದೇ ಅಭಿವೃದ್ಧಿ ಗೋಚರಿಸುತ್ತಿಲ್ಲ. ಗ್ಯಾರಂಟಿ ಹೊರೆಯಿಂದ ಸರ್ಕಾರದ ಬೊಕ್ಕಸ ಬರಿದಾಗುತ್ತಿದೆ ಎಂದು ಟೀಕಿಸಿದರು.
೧೬೦ ಭರವಸೆ ಈಡೇರಿಸಿದ್ದೇವೆ
ಆಡಳಿತ ಪಕ್ಷದ ಸದಸ್ಯ ಎಂ. ನಾಗರಾಜು ಮಾತನಾಡಿ, ರಾಜ್ಯದಲ್ಲಿ ಭೀಕರ ಬರಗಾಲ ಇದ್ದರೂ ಕಾಂಗ್ರೆಸ್ ಸರ್ಕಾರ ೧೬೦ ಭರವಸೆಗಳನ್ನು ಈಡೇರಿಸಿದೆ. ರೈತರ ಖಾತೆಗೆ ೨ ಸಾವಿರ ರೂ. ಹಣ ಪಾವತಿಯಾಗಿದೆ. ಎಲ್ಲ ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿ ಅನುಷ್ಠಾನಗೊಂಡಿವೆ. ತಮ್ಮ ಪಕ್ಕದೂರನ್ನು ನೋಡದ ಮಹಿಳೆಯರು ಹಲವು ಪುಣ್ಯಕ್ಷೇತ್ರಗಳಿಗೆ ಬಸ್‌ನಲ್ಲಿ ಉಚಿತವಾಗಿ ತೆರಳುತ್ತಿದ್ದಾರೆ. ಶಕ್ತಿ ಯೋಜನೆ ಜಾರಿಗೊಳಿಸಿದ ಸಿದ್ದರಾಮಯ್ಯ ಅವರನ್ನು ಸ್ಮರಿಸುತ್ತಿದ್ದಾರೆ ಎಂದು ಹೇಳಿದರು. ತೆರಿಗೆಯಲ್ಲಿ ನಮ್ಮ ಪಾಲು ಕೇಳಿದ ಸಂಸದರನ್ನು ಬಿಜೆಪಿ ನಾಯಕರು ಗುಂಡಿಕ್ಕಿ ಕೊಲ್ಲಿ ಎಂದು ಬೆದರಿಕೆ ಹಾಕಿದ್ದಾರೆ. ಇದು ತಾಲಿಬಾನ್ ಸಂಸ್ಕೃತಿ ಅಲ್ಲವೆ. ನಾವು ಒಕ್ಕೂಟ ವ್ಯವಸ್ಥೆಯಲ್ಲಿ ಇದ್ದೇವೆ. ಹೀಗಾಗಿ ಪಾಲು ಕೇಳುತ್ತೇವೆ ಎಂದರು.
ರೈತರ ಆತ್ಮಹತ್ಯೆಯಲ್ಲಿ ರಾಜಕೀಯ
ಸರ್ಕಾರ ರೈತರ ಆತ್ಮಹತ್ಯೆ ವಿಚಾರದಲ್ಲೂ ರಾಜಕೀಯ ಮಾಡುತ್ತಿದೆ ಎಂದು ಸದಸ್ಯ ನವೀನ್ ಆಕ್ರೋಶ ವ್ಯಕ್ತಪಡಿಸಿದರು. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ರೈತರ ಆತ್ಮಹತ್ಯೆ ಕಡಿಮೆಯಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಇದು ರಾಜಕೀಯ ಅಲ್ಲದೆ ಮತ್ತೇನು ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕಾಮಗಾರಿಗೆ ಹಣ ಬಿಡುಗಡೆ ಮಾಡಿಲ್ಲ. ಗುದ್ದಲಿ ಹಾಗೂ ಹಾರೆಗಳು ಅಟ್ಟ ಸೇರಿ ತುಕ್ಕು ಹಿಡಿಯುತ್ತಿವೆ. ಬಿಜೆಪಿ ಗುತ್ತಿಗೆ ನೀಡಿ ಹಣ ಬಿಡುಗಡೆ ಮಾಡಿದ ಕಾಮಗಾರಿಗಳು ಮಾತ್ರ ನಡೆಯುತ್ತಿವೆ ಎಂದರು.
ಕೃಷ್ಣ ಹಾಗೂ ಮಹದಾಯಿಗೆ ಹಣ ಮೀಸಲಿಡಿ
ಸದಸ್ಯ ಪಿ.ಎಚ್.ಪೂಜಾರ್ ಮಾತನಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಲಿರುವ ಬಜೆಟ್‌ನಲ್ಲಿ ಕೃಷ್ಣ ಮೇಲ್ದಂಡೆ ಹಾಗೂ ಮಹದಾಯಿ ಯೋಜನೆಗಳಿಗೆ ೨೫ ಸಾವಿರ ಕೋಟಿ ರೂ. ಹಣವನ್ನು ಮೀಸಲಿಡಬೇಕು. ಈ ಯೋಜನೆಯಿಂದ ನೀರಾವರಿಯಿಂದ ವಂಚಿತರಾಗಿರುವ ಬಾಗಲಕೋಟೆ ಜಿಲ್ಲೆಯಲ್ಲಿ ನೀರು ಹರಿದು ಹಸಿರು ನಳನಳಿಸಲಿದೆ. ಕೂಡಲಸಂಗಮ ಅಭಿವೃದ್ಧಿಗೆ ೫೦೦ ಕೋಟಿ ರೂ. ಮೀಸಲಿಡಬೇಕು ಎಂದು ಆಗ್ರಹಿಸಿದರು.