ಗ್ರಹಗತಿ ಕೈ ಕೊಟ್ಟಾಗಲೂ ಸಾರಥಿ ಮಹಾರಥಿ
ಗಣೇಶ್ ರಾಣೆಬೆನ್ನೂರು
ದರ್ಶನ್ ಅಭಿನಯದ ಸಾರಥಿ ಸಿನಿಮಾ, ಅವರ ಕೆರಿಯರ್‌ನ್ನು ಉತ್ತುಂಗಕ್ಕೇರಿಸಿದ ಚಿತ್ರ. ಅದರಲ್ಲೂ ಅದರ ಬಿಡುಗಡೆ ಹೊತ್ತಿನಲ್ಲಿ ನಾನಾ ಸಂಕಷ್ಟಗಳನ್ನೆದುರಿಸುತ್ತಿದ್ದ ದರ್ಶನ್, ಸಾರಥಿ ಚಿತ್ರದ ಮೂಲಕ ಮತ್ತೆ ಫೀನಿಕ್ಸ್ನಂತೆ ಎದ್ದುಬಂದಿದ್ದರು. ದರ್ಶನ್ ಹೆಸರಿಸುವ ಸೆಲೆಬ್ರಿಟಿಗಳು (ಅಭಿಮಾನಿಗಳು) ಅವರನ್ನು ಮಾನಸಿಕವಾಗಿ ಕುಸಿಯದಂತೆ ನೋಡಿಕೊಂಡರು ಎಂಬುದಕ್ಕೆ ಸಾಕ್ಷಿಯೇ ಸಾರಥಿಯ ಭರ್ಜರಿ ಗೆಲುವು.
ವಿಶೇಷವೆಂದರೆ ಈ ಚಿತ್ರವನ್ನು ದರ್ಶನ್ ಸಹೋದರ ದಿನಕರ್ ತೂಗುದೀಪ ನಿರ್ದೇಶನ ಮಾಡಿದ್ದರು. ಅವರಿಗೂ ಇದು ಮೂರನೇ ಚಿತ್ರ. ತುಂಬಾ ಕನಸಿಟ್ಟುಕೊಂಡು ಈ ಸಿನಿಮಾ ಮಾಡಿದ್ದಾಗಿ ಹೇಳುವ ದಿನಕರ್, ಸಿನಿಮಾದ ಸಾರಥಿಯಾಗಿ ತಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿ ಮುಗಿಸಿದ್ದರು. ಹಾಗಾಗಿದ್ದರಿಂದಲೇ, ಸಾರಥಿ ಸಿನಿಮಾ ಅದರಲ್ಲಿ ಕೆಲಸ ಮಾಡಿದ ಎಲ್ಲರಿಗೂ ಐರಾವತದ ಸುಖಾಸೀನ ಪ್ರಯಾಣವನ್ನೇ ಕಲ್ಪಿಸಿತು.
ಸಾರಥಿಯನ್ನೇ ಶೀರ್ಷಿಕೆಯಾಗಿಸಬೇಕು ಅಂತನ್ನಿಸಿದ್ದು ಯಾಕೆ? ಹೇಗೆ?
ದಿನಕರ್ ತೂಗುದೀಪ ತಮ್ಮ ನೆನಪಿನ ಗೇರ್ ಶಿಫ್ಟ್ ಮಾಡಿಕೊಂಡರು. ಸಾರಥಿ ಸಿನಿಮಾವನ್ನು ಗ್ರ್ಯಾಂಡ್ ಆಗಿಯೇ ಥಿಂಕ್ ಮಾಡಿದ್ದೆ. ಆದರೆ ನಿಜ ಹೇಳಬೇಕೆಂದರೆ, ಚಿತ್ರಕ್ಕೆ ಏನು ಟೈಟಲ್ ಇಡಬೇಕು ಅಂತ ಅಲ್ಲೀವರೆಗೂ ಯೋಚಿಸಿಯೇ ಇರಲಿಲ್ಲ. ಅದೇಕೋ ಗೊತ್ತಿಲ್ಲ, ಶೀರ್ಷಿಕೆ ವಿಷಯದಲ್ಲಿ ನಿರ್ಲಿಪ್ತನಾಗಿಬಿಟ್ಟಿದ್ದೆ. ಆದರೆ ಹಾಗಂತ ಶೂಟಿಂಗ್ ಸಮಯ ಬಂದ ಮೇಲೆಯೂ ಸುಮ್ಮನೆ ಇದ್ದುಬಿಡಲು ಸಾಧ್ಯವೇ? ಸ್ಟಾರ್ ಸಿನಿಮಾ ಬೇರೆ. ಏನಾದರೂ ವಿಭಿನ್ನವಾಗಿಯೇ ಇಡಬೇಕಿತ್ತು. ಆ ಹಂತ ಅನಿವಾರ್ಯವಾದಾಗ ಟೈಟಲ್ ಬಗ್ಗೆ ಆಲೋಚಿಸಲಾರಂಭಿಸಿದೆ. ನೀವು ನಂಬ್ತೀರೋ ಬಿಡ್ತೀರೋ. ಸಾರಥಿ ಟೈಟಲ್ ಚಿಟಿಕೆ ಹೊಡೆದಷ್ಟು ವೇಗವಾಗಿ ಹೊಳೆದುಬಿಟ್ಟಿತು! ಒಬ್ಬರೂ ಅದನ್ನು ನಿರಾಕರಿಸಲೂ ಇಲ್ಲ. ಈ ಚಿತ್ರದ ಕಥಾನಾಯಕ ಓರ್ವ ಆಟೋ ಡ್ರೈವರ್. ನಿಮಗೇ ಗೊತ್ತು, ಆಟೋ ಡ್ರೈವರ್ ಅಂದರೆ ಸುಮ್ಮನೆ ಮಾತಲ್ಲ. ಅವರ ಆತ್ಮಾಭಿಮಾನ ಮೈನವಿರೇಳಿಸುವಂತಿರುತ್ತದೆ. ಒಬ್ಬ ಪ್ರಯಾಣಿಕ ಗಾಡಿ ಏರಿದನೆಂದರೆ, ಆತನನ್ನು ಅವನ ಡೆಸ್ಟಿನೇಷನ್‌ಗೆ ತಲುಪಿಸುವ ವಿಷಯದಲ್ಲಿ ಅವರದ್ದು ಚಿರತೆ ವೇಗ. ಆ ಹೊತ್ತಿಗೆ ಅವರು ಬೇರೇನನ್ನೂ ಯೋಚಿಸರು, ಅವರಿಗೆ ಅದಷ್ಟೇ ಗುರಿ. ಆ ಜವಾಬ್ದಾರಿ ದೊಡ್ಡದಲ್ಲವೇ? ಅದನ್ನು ಪ್ರತಿಫಲಿಸುವಂಥದ್ದೇ ಏನಾದರೂ ಸಿನಿಮಾಗಿಡಬೇಕು ಅಂತ ಆಲೋಚಿಸಿದ್ದೆ. ಅದಕ್ಕೆ ಪೂರಕವಾಗುವಂಥ ಸಂದರ್ಭ ಒಂದು ದಿನ ವಾಕಿಂಗ್ ವೇಳೆ ಘಟಿಸಿತು. ಯಾವ ಹಾಡೋ ನೆನಪಿಲ್ಲ. ಆ ಹಾಡಿನಲ್ಲಿ ಸಾರಥಿ, ಸಾರಥ್ಯದ ಬಗ್ಗೆ ಪುನರಾವರ್ತಿತ ಸಾಲುಗಳಿದ್ದವು. ಅದರಲ್ಲಿ ನನಗೆ ಸಾರಥಿ ಪದ ತುಂಬಾ ಹಿಡಿಸಿತು. ಮಹಾಭಾರತದಲ್ಲಿ ಕೃಷ್ಣ ಅರ್ಜುನನಿಗೆ ಸಾರಥಿ. ನಮ್ಮ ಆಟೋ ಚಾಲಕ ಬಡವರ ಪ್ರಯಾಣಕ್ಕೆ ಸಾರಥಿ. ಆ ಇಬ್ಬರ ಅನುಭವ, ಪ್ರಪಂಚವನ್ನು ಅವರು ನೋಡುವ ನೋಟ ಅಭೂತಪೂರ್ವ. ಅಲ್ಲದೇ ಚಿತ್ರದಲ್ಲಿ ನಾಯಕನ ಹೆಸರು ಕೃಷ್ಣ. ಯಾಕೋ ನಮ್ಮ ಸಿನಿಮಾಗೆ ಸಾರಥಿಯೆ ಸರಿ ಹೊಂದುತ್ತದೆ ಅನ್ನಿಸಿತು. ಹಿಂದೂ ಮುಂದೂ ಯೋಚಿಸದೆ ಅದನ್ನೇ ಫಿಕ್ಸ್ ಎಂಬಂತೆ ಇಟ್ಟುಬಿಟ್ಟೆ...' ಎಂದರು ದಿನಕರ್ ತೂಗುದೀಪ. ಮತ್ತೆ ನವಗ್ರಹ? ಬುಲ್ ಬುಲ್? ಅದು ದಿನಕರ್ ಮತ್ತು ದರ್ಶನ್ ಕಾಂಬಿನೇಷನ್‌ನ ಇನ್ನೆರಡು ಸಿನಿಮಾಗಳು. ಈ ಬಗ್ಗೆ ಪ್ರಶ್ನಿಸಿದಾಗ ದಿನಕರ್ ಅದರ ನಾಮಕರಣವೂ ಸಾರಥಿಯಷ್ಟೇ ಸುಲಲಿತವಾಗಿ ನೆರವೇರಿದ್ದರ ಬಗ್ಗೆ ಹೇಳಿಕೊಂಡರು.
ಗ್ರಹಗಳ ಹೆಸರನ್ನು ಸಿನಿಮಾದ ಶೀರ್ಷಿಕೆಯಾಗಿಡಲು ಬಹಳಷ್ಟು ಜನ ಹೆದರುತ್ತಾರೆ. ಆದರೆ ನವಗ್ರಹ ಅಂತಿಡಲು ನಾವು ಧೈರ್ಯ ಮಾಡಿದೆವು. ಅದಕ್ಕೂ ಮುಖ್ಯ ಕಾರಣವಿತ್ತು. ಆ ಕಥೆಯಲ್ಲಿ ಒಟ್ಟು ಒಂಭತ್ತು ಪ್ರಮುಖ ಕ್ಯಾರೆಕ್ಟರ್‌ಗಳಿದ್ದವು. ಒಬ್ಬರಷ್ಟೇ ಅಲ್ಲ, ಎಲ್ಲರೂ ಮುಖ್ಯ ಎನ್ನುವಂತೆ ಟೈಟಲ್ ಇರಬೇಕು ಅನ್ನೋದು ಆಶಯವಾಗಿತ್ತು. ನವಗ್ರಹ ಅದಕ್ಕೆ ಹೇಳಿ ಮಾಡಿಸಿದಂತೆ ಕೂಡಿಕೊಂಡಿತು. ಕಥೆಯ ಮೊದಲ ಡ್ರಾಫ್ಟ್ ಸಿದ್ಧವಾದಾಗ ಈ ಚಿತ್ರಕ್ಕೆ ಅಂಬಾರಿ ಅಂತ ಹೆಸರಿಡೋಣ ಅಂದುಕೊಂಡದ್ದು ನಿಜ. ಆದರೆ ಅಂಬಾರಿಗಿಂತ ಮುಂದೆ ಇದೇ ಹಿಡಿಸಿತು…' ಎನ್ನುವ ವಿವರಣೆ ಬಂತು.
ಇನ್ನು ಬುಲ್‌ಬುಲ್ ಟೈಟಲ್ಲಂತೂ ಹೂವೆತ್ತಿದಷ್ಟು ಸರಳವಾಗಿ ನಿಕ್ಕಿಯಾದ ಶೀರ್ಷಿಕೆಯಂತೆ. ತೆಲುಗಿನ ಡಾರ್ಲಿಂಗ್ ಸಿನಿಮಾವನ್ನು ರಿಮೇಕ್ ಮಾಡೋಣ ಅಂತ ತೀರ್ಮಾನಿಸಿದಾಗ, ಆಗಿನ್ನು ಹೆಸರಿನ ಬಗ್ಗೆ ಯೋಚಿಸಿರಲಿಲ್ಲ. ನಮ್ಮ ಗ್ರೂಪ್‌ನಲ್ಲೇ ಒಬ್ಬರಾದ ಸಂಗೀತ ನಿರ್ದೇಶಕ ವಿ.ಹರಿಕೃಷ್ಣರನ್ನು
ಈ ಚಿತ್ರಕ್ಕೆ ಸಂಗೀತ ನಿಮ್ಮದು. ಜೊತೆಗೆ ನಿರ್ಮಾಣದಲ್ಲಿ ಪಾರ್ಟ್ನರ್ ಆಗುವ ಅವಕಾಶವೂ ಇದೆ, ಒಪ್ಪಿಕೊಳ್ತೀರಾ?' ಅಂತ ಕೇಳೋಕೆ ಹೋದೆ. ಅವರು ಬೇರೆ ವಿಷಯದ ಬಗ್ಗೆ ಮಾತೇ ಆಡಲಿಲ್ಲ. ಹೇಳಿದ್ದು ಒಂದೇ ಮಾತು- ಈ ಸಿನಿಮಾಕ್ಕೆ ಬುಲ್ ಬುಲ್ ಅಂತ ಹೆಸರಿಡೋಣ, ಕ್ಯಾಚಿಯಾಗಿರುತ್ತೆ...' ಅವರು ಹಾಗನ್ನುತ್ತಿದ್ದಂತೇ ನಮ್ಮ ತಂಡದ ಇತರೆ ಸದಸ್ಯರೆಲ್ಲರೂ ಅದನ್ನು ಅಲ್ಲೇ ಲಬಕ್ಕನೆ ಕ್ಯಾಚ್ ಹಿಡಿದು ಕೊಂಡುಬಿಟ್ಟರು.
ಓಹ್ಹೋ… ಅಂದ ಮೇಲೆ ಇದು ನಿಜಕ್ಕೂ ಕ್ಯಾಚಿಯೇ ಇರಬೇಕು ಅನ್ನಿಸಿ ಓಕೆ ಮಾಡಿಬಿಟ್ಟೆ' ಎನ್ನುತ್ತಾ ನಕ್ಕರು ದಿನಕರ್.