For the best experience, open
https://m.samyuktakarnataka.in
on your mobile browser.

ಗ್ರಹಿಕೆಯೇ ಜಗತ್ತು; ಜಗತ್ತೇ ಗ್ರಹಿಕೆ

03:59 AM Oct 08, 2024 IST | Samyukta Karnataka
ಗ್ರಹಿಕೆಯೇ ಜಗತ್ತು  ಜಗತ್ತೇ ಗ್ರಹಿಕೆ

ಜಗತ್ತಿನಲ್ಲಿ “ಅದು ನಿಮ್ಮದು” ಮತ್ತು “ಇದು ನನ್ನದು” ಎಂಬುದಾಗಿ ಪ್ರತ್ಯೇಕ ಪಾಲನ್ನು ಹೊಂದಿರುವವರೆಗೆ ಹಿಂಸೆಯ ಚಕ್ರವು ತಿರುಗುತ್ತಲೇ ಇರುತ್ತದೆ. ದೇಹದಲ್ಲಿಯೂ ಕೂಡಾ ಇಂತಹುದೇ ಫಲಿತಾಂಶಗಳನ್ನು ಕಾಣಬಹುದು. ಆರೋಗ್ಯಕರ ದೇಹದಲ್ಲಿ ಪ್ರತಿಯೊಂದು ಜೀವಕೋಶವೂ ಇತರ ಜೀವಕೋಶಗಳಲ್ಲಿ ತನ್ನನ್ನು ಗುರುತಿಸಿಕೊಳ್ಳುತ್ತದೆ. ಈ ಗುರುತಿಸಿಕೊಳ್ಳುವಿಕೆಯ ಗ್ರಹಿಕೆಯು ಅಸ್ಪಷ್ಟವಾದಾಗ ಅಥವಾ ಹೊರಗಿನಿಂದ ಅಡ್ಡಿಪಡಿಸಲ್ಪಟ್ಟಾಗ ಕೆಲವು ಜೀವಕೋಶಗಳು “ಇತರರೆಂಬ ಪ್ರತ್ಯೇಕತಾ ಭಾವನೆಗೆ” ಒಳಗಾಗುವ ಕಾರಣದಿಂದ ದೇಹವು ತನ್ನ ವಿರುದ್ಧ ತಾನೇ ಆಕ್ರಮಣಕ್ಕೆ ಸಿದ್ಧವಾಗುತ್ತದೆ. ಈ ಸ್ಥಿತಿಯನ್ನು ವೈದ್ಯಕೀಯ ಪರಿಭಾಷೆಯಲ್ಲಿ “ಸ್ವಯಂ-ನಿರೋಧಕ ಅಸ್ವಸ್ಥತೆ” ಎಂದು ಕರೆಯಲಾಗುತ್ತದೆ. ಇದಕ್ಕೆ ಸಂಧಿವಾತ ಮತ್ತು ಲೂಪಸ್ (ಚರ್ಮದ ಮೇಲೆ ಹುಣ್ಣುಗಳಾಗುವ ಚರ್ಮರೋಗ) ವಿನಾಶಕಾರಿ ಉದಾಹರಣೆಗಳು. ಲೂಪಸ್‌ನಿಂದ ಉಂಟಾಗುವ ಉರಿಯೂತವು ಕೀಲುಗಳು, ಚರ್ಮ, ಮೂತ್ರಪಿಂಡಗಳು, ರಕ್ತಕಣಗಳು, ಮಿದುಳು, ಹೃದಯ ಮತ್ತು ಶ್ವಾಸಕೋಶಗಳನ್ನು ಒಳಗೊಂಡಂತೆ ದೇಹದ ವಿವಿಧ ಜೈವಿಕ ವ್ಯವಸ್ಥೆಗಳ ಮೇಲೆ ದುಷ್ಪರಿಣಾಮ ಬೀರುತ್ತದೆ. ತನ್ನ ವಿರುದ್ಧ ತಾನೇ ಹಿಂಸಾಚಾರ ಮಾಡುವ ಈ ಸ್ಥಿತಿ ಉಂಟಾಗುವುದು ಜೀವಕೋಶಗಳ ತಪ್ಪು ಪರಿಕಲ್ಪನೆಯಿಂದ. ಇದಕ್ಕೆ ಔಷಧವು ತಕ್ಕಮಟ್ಟಿಗೆ ಪರಿಹಾರ ತಂದರೂ ತಪ್ಪಾದ ಪರಿಕಲ್ಪನೆಯನ್ನು ಮೂಲದಲ್ಲಿಯೇ ಸರಿಪಡಿಸದೆ ಶಾಶ್ವತ ಪರಿಹಾರ ಸಾಧ್ಯವಿಲ್ಲ. ಹಿಂಸಾಚಾರವನ್ನು ಅಂತ್ಯಗೊಳಿಸುವ ಬಗ್ಗೆ ಗಂಭೀರವಾಗಿರುವುದು ಎಂದರೆ ಜಗತ್ತಿನಲ್ಲಿ ಎಲ್ಲರೂ ತಾವೇ ನಿರ್ಧರಿಸಿಕೊಂಡ ತಮ್ಮ ತಮ್ಮ ವೈಯಕ್ತಿಕ ಪಾಲನ್ನು ತ್ಯಜಿಸುವುದು ಎಂದರ್ಥ. ದೇಹದ ಮಟ್ಟಿಗಂತೂ ಇದೇ ವಾಸ್ತವ. ಗ್ರಹಿಕೆಯೇ ಜಗತ್ತು; ಜಗತ್ತೇ ಗ್ರಹಿಕೆಯಾಗಿದೆ.
ಒಬ್ಬ ವ್ಯಕ್ತಿ ಒಂದು ವಾಸ್ತವ ಅಥವಾ ನೈಜತೆಯನ್ನು ಕಂಡುಕೊಳ್ಳಲು ಅಧ್ಯಾತ್ಮಿಕ ಅನ್ವೇಷಕನಾಗಬೇಕಿಲ್ಲ. ಏಕೆಂದರೆ; ಈ ಸೃಷ್ಟಿಯಲ್ಲಿನ ಪ್ರತಿಯೊಬ್ಬರ ಜೀವನವು ಈಗಾಗಲೇ ಅಧ್ಯಾತ್ಮಿಕತೆಗೆ ತನ್ನ ಮೂಲವಿನ್ಯಾಸದಲ್ಲೇ ಹೊಂದಿಕೊಂಡಿದೆ. ಸೃಷ್ಟಿಕರ್ತನು ಸೃಷ್ಟಿಯ ಪ್ರತಿಯೊಂದು ಕಣವನ್ನೂ ಸಮಾನವಾಗಿ ಸೃಷ್ಟಿಸಿದ್ದಾನೆ ಮತ್ತು ಸಮಾನವಾಗಿ ವ್ಯಾಪಿಸಿದ್ದಾನೆ ಹಾಗೂ ಅದೇ ದೈವಿಕ ಕಿಡಿಯು ತನ್ನನ್ನು ಅದರ ಸರ್ವರೂಪಗಳಲ್ಲಿ ಪ್ರಕಟಗೊಳಿಸಿದೆ. ಇಂದು ನಾವು ಈ ದೃಷ್ಟಿಕೋನವನ್ನು `ಅತೀಂದ್ರಿಯ' ಎಂದು ಕರೆಯುತ್ತೇವೆ. ಏಕೆಂದರೆ, ಇದು ಅದೃಶ್ಯ ವಿಷಯಗಳಲ್ಲಿ ವ್ಯವಹರಿಸುತ್ತದೆ. ಆದರೆ ನಮ್ಮ ಪೂರ್ವಜರಿಗೆ ಈಗ ಇರುವಂತಹ ಸೂಕ್ಷ್ಮದರ್ಶಕಗಳ ವ್ಯವಸ್ಥೆಯೇನಾದರೂ ಇದ್ದಿದ್ದರೆ ಜೀವಕೋಶಗಳು ವರ್ತಿಸುವ ರೀತಿಯಲ್ಲಿ ಅವರ ಅತೀಂದ್ರಿಯತೆಯ ಸಾಂದ್ರ ಹಾಗೂ ಸಾಕ್ಷ್ಯರೂಪವನ್ನು ಕಾಣುತ್ತಿದ್ದರೇನೋ?! ಸರ್ವವನ್ನೂ ಒಳಗೊಳ್ಳುವ ವಾಸ್ತವದಲ್ಲಿ ಇಡುವ ನಂಬಿಕೆಯು ಪ್ರತಿಯೊಬ್ಬರನ್ನೂ ನೈಜ ಅಸ್ತಿತ್ವದ ಕೇಂದ್ರದಲ್ಲಿರಿಸುತ್ತದೆ; ವೃತ್ತವೊಂದರ ಕೇಂದ್ರಬಿಂದುವಿನಂತೆ. ವೃತ್ತದೊಳಗಿನ ಪ್ರತಿಯೊಂದು ಬಿಂದುರೂಪದ ವ್ಯಕ್ತಿಯೂ ವಂಶವಾಹಿಯ (ಡಿಎನ್‌ಎ) ಕೇಂದ್ರಬಿಂದುವಾಗಿದ್ದು ಶತಕೋಟಿ ವರ್ಷಗಳ ವಿಕಾಸಕ್ಕೆ ಸಂಪರ್ಕಿಸುವ ಚಿಕ್ಕ ಕೋಶದಂತಿದೆ.
ಆಧುನಿಕ ಜಗತ್ತಿನಲ್ಲಿ ವಿಮಾನ ಪ್ರಯಾಣವೆಂಬುದು ಅತೀ ಕುತೂಹಲಕರ ಸಂಗತಿ. ಇದಕ್ಕೆ ಪುರಾಣಗಳಲ್ಲಿರುವ ಕಲ್ಪನೆಯೂ ಕಾರಣ. ಹಾಗೆಯೇ ಅತೀಂದ್ರಿಯ ಪ್ರಯಾಣವೂ. ಒಮ್ಮೆ ಈ ಪ್ರಯಾಣದಲ್ಲಿ ತೊಡಗಿದನೆಂದರೆ ಕುತೂಹಲಗಳ ಲೋಕವೇ ತೆರೆದುಕೊಳ್ಳುತ್ತದೆ. ವಿಮಾನ ಪ್ರಯಾಣಿಕನಿಂದ ಆರಂಭಿಸಿದ ಯೋಚನಾಲಹರಿ ವಿಮಾನಚಾಲಕ (ಪೈಲಟ್), ವಿಮಾನದ ವಿನ್ಯಾಸಕಾರನವರೆಗಿನ ಪ್ರಗತಿಯು ಒಂದು ಅಧ್ಯಾತ್ಮಿಕ ಪ್ರಯಾಣದ ಸಂಕೇತ. ವಿಮಾನ ಪ್ರಯಾಣಿಕ ತನ್ನ ಸುರಕ್ಷಿತ ಪ್ರಯಾಣದ ಬಗ್ಗೆಯೇ ಚಿಂತಿತನಾಗಿರುವ ಮೂಲಕ ಪಂಚೇಂದ್ರಿಯಗಳಲ್ಲಿ ಬಂಧಿಯಾಗಿರುತ್ತಾನೆ. ಏಕೆಂದರೆ; ತಾತ್ವಿಕವಾಗಿ ಲೋಹವನ್ನು ಗಾಳಿಗೆ ಹೋಲಿಸಿದಾಗ ಲೋಹದಿಂದ ತಯಾರಿಸಲ್ಪಟ್ಟ ವಿಮಾನ ಹಾರಾಟದ ಸಂದರ್ಭದಲ್ಲಿ ಕೆಳಗೆ ಬೀಳುವ ಸಂಭವನೀಯತೆಯೇ ಹೆಚ್ಚು ಎಂಬ ಭಯದ ಹಿನ್ನೆಲೆಯಲ್ಲಿ ಅದರ ಹಾರಾಟ ಸಾಮರ್ಥ್ಯದ ಬಗ್ಗೆ ಸಂಶಯಿತ ಗ್ರಹಿಕೆಯನ್ನು ಹೊಂದಿರುತ್ತಾನೆ. ವಿಮಾನಚಾಲಕನಿಗೆ ವಿಮಾನ ಹಾರಾಟದ ತತ್ವಗಳ ಅರಿವಿದ್ದು ಪ್ರಕೃತಿನಿಯಮಕ್ಕೆ ವಿರುದ್ಧವಾಗಿಯೂ ಅದರ ಹಾರಾಟ ಸಾಮರ್ಥ್ಯದ ತಂತ್ರಜ್ಞಾನದ ಬಗ್ಗೆ ದೃಢಮನಸ್ಕನಾಗಿರುತ್ತಾನೆ. ವಿಮಾನದ ವಿನ್ಯಾಸಕಾರ ಪ್ರಕೃತಿಯ ನಿಯಮಗಳನ್ನು ಹಾಗೂ ಅವುಗಳನ್ನು ನಿಭಾಯಿಸಬೇಕಾದ ಕುಶಲತೆಯ ಹಾಗೂ ವೈಜ್ಞಾನಿಕ ತಂತ್ರೋಪಾಯಗಳ ಬಗ್ಗೆ ವಿಸ್ತೃತ ಜ್ಞಾನಹೊಂದಿದ್ದು ಉದ್ದೇಶಿತ ಪರಿಣಾಮವನ್ನು ತಲುಪಲು ಸಾಧ್ಯವಾಗುವಂತೆಯೇ ವಿಮಾನವನ್ನು ವಿನ್ಯಾಸಗೊಳಿಸಿರುತ್ತಾನೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ; ವಿನ್ಯಾಸಕಾರ ಪಂಚೇಂದ್ರಿಯಗಳ ಬಲಿಪಶುವಾಗಿರದೆ ಅಥವಾ ನೈಸರ್ಗಿಕ ನಿಯಮಗಳ ಮುಂದೆ ಮೂಕಪ್ರೇಕ್ಷಕನಾಗಿ ಕೂರದೆ, ತಾನೇ ಸ್ವತಃ ಸಹ-ಸೃಷ್ಟಿಕರ್ತನಾಗಿ ಕಾರ್ಯನಿರ್ವಹಿಸುವ ಮೂಲಕ ವಾಸ್ತವಕ್ಕೆ ಬಹಳ ಹತ್ತಿರವಿರುತ್ತಾನೆ.
ನಮ್ಮ ಇಂದ್ರಿಯಗಳ ಅನುಭವಕ್ಕೆ ಬಾರದ ನೂರಾರು ರೀತಿಯ ತರಂಗಗಳೇ ಮಾನವಜನಾಂಗದ ಆಧಾರಸ್ತಂಭಗಳಾಗಿವೆ. ಮಾಹಿತಿ ತಂತ್ರಜ್ಞಾನ, ಕೃಷಿ, ವೈದ್ಯಕೀಯ, ಬಾಹ್ಯಾಕಾಶ ಕ್ಷೇತ್ರ…….. ಎಲ್ಲೆಂದರಲ್ಲಿ ಅತೀಂದ್ರಿಯ ತರಂಗಗಳೇ ಮಹತ್ವದ ಪಾತ್ರವಹಿಸುತ್ತಿವೆ. ಹಾಗಾಗಿ ಇಂದು ಇಂದ್ರಿಯಗಳು ನೀಡುವ ಅನುಭವವೇ ಕಟ್ಟಕಡೆಯದು ಎಂದು ಹೇಳುವಂತಿಲ್ಲ. ಅಧ್ಯಾತ್ಮಜೀವಿಯ ಮನದಲ್ಲಿ ಒಬ್ಬ ವಿಜ್ಞಾನಿ ಇರಬೇಕು. ವಿಜ್ಞಾನಿಯ ಮನದಲ್ಲಿ ಈ ಜಗತ್ಕಾರಣಶಕ್ತಿಗೆ ಶರಣಾಗುವ ಭಾವುಕನಿರಬೇಕು. ಆಗಲೇ ವಿಚಾರಗಳು ಪರಿಪೂರ್ಣತೆಯನ್ನು ಪಡೆಯುವುದು. ಮನಸ್ಸು ಬಂಧಮುಕ್ತವಾಗುವುದು.
ನೀವು ನಿಮ್ಮ ಮನಸ್ಸನ್ನು ಪ್ರೀತಿಸುತ್ತೀರಾ? ಸುಂದರವಾದ ಮುಖ ಹಾಗೂ ಮೈಕಟ್ಟನ್ನು ಹೊಂದಿರುವವರು ಆಗಾಗ್ಗೆ ತಮಗೆ ದೊರೆತ ಪ್ರಕೃತಿಯ ಉಡುಗೊರೆಯನ್ನು ಪ್ರೀತಿಸುತ್ತಾರೆ. (ಬಹಳಷ್ಟು ಸಂದರ್ಭಗಳಲ್ಲಿ ಇದಕ್ಕೆ ವಿರುದ್ಧವಾಗಿ ಅಭದ್ರತೆ ಅಥವಾ ಭಯದಿಂದಲೂ ಇರುತ್ತಾರೆ). ಮನಸ್ಸನ್ನು ಪ್ರೀತಿಸುವುದು ಅಷ್ಟು ಸುಲಭಸಾಧ್ಯವಾದ ಕಾರ್ಯವಲ್ಲ ಏಕೆಂದರೆ; ಎಷ್ಟೋ ಬಾರಿ ಸಂಕಷ್ಟಗಳು ಕಾಣಿಸಿಕೊಂಡ ಕ್ಷಣಗಳಲ್ಲಿ ನಾವು ಅದರೊಳಗೆ ಸಿಕ್ಕಿಹಾಕಿಕೊಂಡಿದ್ದೇವೆ ಎಂದೂ ಭಾವಿಸುತ್ತೇವೆ. ಭಯವು ತನಗೆ ಬೇಕಾದಾಗ ಬೇಕಾದಂತೆ ಮನಸ್ಸನ್ನು ಸುತ್ತುವ ಮಾರ್ಗವನ್ನು ಹೊಂದಿದೆ. ಖಿನ್ನತೆ ಮನಸ್ಸನ್ನು ಅಂಧಕಾರಗೊಳಿಸಿದರೆ; ಕೋಪವು ಮನಸ್ಸನ್ನು ಅನಿಯಂತ್ರಿತ ಪ್ರಕ್ಷಬ್ಧತೆಯಲ್ಲಿ ಮುಳುಗಿಸುತ್ತದೆ. ಪ್ರಾಚೀನ ಸಂಸ್ಕೃತಿಗಳು ಮನಸ್ಸು ಪ್ರಕ್ಷಬ್ಧ ಮತ್ತು ವಿಶ್ವಾಸಾರ್ಹವಲ್ಲ ಎಂಬ ಕಲ್ಪನೆಯನ್ನು ಪ್ರತಿಧ್ವನಿಸುತ್ತವೆ. ಭಾರತದಲ್ಲಿ ಅತ್ಯಂತ ಸಾಮಾನ್ಯ ರೂಪಕವು ಮನಸ್ಸನ್ನು ಮದವೇರಿದ ಆನೆಗೆ ಹೋಲಿಸುತ್ತದೆ ಮತ್ತು ಮನಸ್ಸನ್ನು ಶಾಂತಗೊಳಿಸುವುದು ಮದವೇರಿದ ಆನೆಯನ್ನು ಕಂಬಕ್ಕೆ ಕಟ್ಟಿಹಾಕಿದಂತೆ ಎಂದು ಹೋಲಿಸುತ್ತದೆ. ಬೌದ್ಧಧರ್ಮದಲ್ಲಿ ಮನಸ್ಸನ್ನು ಪಂಚೇಂದ್ರಿಯಗಳ ಮೂಲಕ ಜಗತ್ತನ್ನು ಇಣುಕಿನೋಡುವ ಕೋತಿಗೆ ಹೋಲಿಸಲಾಗಿದೆ. ಏಕೆಂದರೆ; ಮನಸ್ಸು ಕೂಡಾ ಕೋತಿಗಳಂತೆಯೇ ಚಂಚಲ ಹಾಗೂ ಯಾವುದೇ ಪೂರ್ವಸೂಚನೆಯಿಲ್ಲದೆ ಹಠಾತ್ತನೆ ಪ್ರತಿಕ್ರಿಯಿಸುವ ಪ್ರವೃತ್ತಿಯನ್ನು ಹೊಂದಿದೆ. ಮನಸ್ಸನ್ನು ಶಾಂತಗೊಳಿಸುವ ಮತ್ತು ಶಾಂತತೆಯ ಅನುಭವಗಳನ್ನು ಕಂಡುಕೊಳ್ಳುವ ಗುಟ್ಟು ಮನಸ್ಸನ್ನು ಮುಕ್ತಗೊಳಿಸುವುದೇ ಆಗಿದೆ. ಆಗಲೇ ಮನಸ್ಸು ತನ್ನ ಸಂಚಾರವನ್ನು ಸ್ಥಗಿತಗೊಳಿಸಿ ಶಾಂತವಾಗಿ ನೆಲೆಗೊಳ್ಳುತ್ತದೆ.
ಹಾಗಾದರೆ ಮನಸ್ಸನ್ನು ಮುಕ್ತಗೊಳಿಸುವುದು ಹೇಗೆ? ಮೊತ್ತಮೊದಲು ಮಾಡಬೇಕಾದುದು ಅದು ಬಂಧಿಯಾದುದು ಹೇಗೆ ಎಂಬುದನ್ನು ತಿಳಿದುಕೊಳ್ಳುವುದು. ಸ್ವಾತಂತ್ರ್ಯವೆಂಬುದು ಬಾಗಿಲಹಿಡಿಯನ್ನು ತಿರುವಿ ಸರಳವಾಗಿ ನೇರ ಮನೆಯೊಳಗೆ ಪ್ರವೇಶಿಸಿದಂತಲ್ಲ. ಮನಸ್ಸು ತನ್ನನ್ನು ಹೇಗೆ ಬಂಧಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದಾಗ ಪ್ರಾಚೀನ ಭಾರತೀಯ ಋಷಿಮುನಿಗಳು ಸಂಸ್ಕಾರದ ಪ್ರಮುಖ ಪರಿಕಲ್ಪನೆಯನ್ನು ರೂಪಿಸಿದರು. (ಸಂಸ್ಕಾರ ಪದ ಸಂಸ್ಕೃತಮೂಲವಾಗಿದ್ದು ಎರಡು ಪದಗಳ ಸಂಯೋಜನೆಯಾಗಿದ್ದು “ಒಟ್ಟಿಗೆ ಹರಿಯುವುದು” ಎಂದರ್ಥ). ಸಂಸ್ಕಾರವು ಆಲೋಚನೆಗಳನ್ನು ಒಂದೇ ದಿಕ್ಕಿನಲ್ಲಿ ಕೇಂದ್ರಿತವಾಗಿ ಹರಿಯುವಂತೆ ಮಾಡುತ್ತದೆ. ವೈಯಕ್ತಿಕ ಸಂಸ್ಕಾರಗಳು ಹಿಂದಿನ ನೆನಪುಗಳಿಂದ ನಿರ್ಮಿಸಲ್ಪಟ್ಟಿದ್ದು ನಮ್ಮನ್ನು ಪದೇ ಪದೇ ಅದೇ ಸೀಮಿತ ರೀತಿಯಲ್ಲಿ ಪ್ರತಿಕ್ರಿಯಿಸಲು ಒತ್ತಾಯಿಸುತ್ತದೆ ಮತ್ತು ಹಾಗೆ ಮಾಡುವ ಮೂಲಕ ನಿಮ್ಮ ಮುಕ್ತ ಸ್ವಾತಂತ್ರವನ್ನು ಕಸಿದುಕೊಳ್ಳುತ್ತದೆ.