ಗ್ರಾಹಕರ ಮನೆಗೆ ಬರಲಿದೆ ಸಾವಯವ ಉತ್ಪನ್ನ
ಡಾ. ವಿಶ್ವನಾಥ ಕೋಟಿ
ಧಾರವಾಡ: ಎಲ್ಲರಿಗೂ ರಾಸಾಯನಿಕ ರಹಿತ, ಸಾವಯವ ಉತ್ಪನ್ನಗಳು ದೊರೆಯಬೇಕು ಎನ್ನುವ ಕೊಲ್ಹಾಪುರದ ಕನೇರಿಮಠದ ಶ್ರೀ ಕಾಡಸಿದ್ದೇಶ್ವರ ಸ್ವಾಮೀಜಿಗಳ ಅಭಿಲಾಷೆಯಂತೆ ೯ ರೈತರು ಸಾವಯವ ತರಕಾರಿ, ಹಣ್ಣು ಹಾಗೂ ತರಕಾರಿ ಬೆಳೆಯುವುದರೊಂದಿಗೆ ಅವುಗಳನ್ನು ಜನರಿಗೆ ತಲುಪಿಸುವ ದಿಸೆಯಲ್ಲಿ ಹೊಸ ಪ್ರಯತ್ನಕ್ಕೆ ಮುಂದಾಗಿದ್ದು, ಗೂಡ್ಸ್ ವಾಹನದ ಮೂಲಕ ಅವಳಿನಗರದ ಬಡಾವಣೆಗಳಿಗೆ ತೆರಳಿ ಆಸಕ್ತ ಜನರಿಗೆ ಮಾರಾಟ ಮಾಡುತ್ತಿದ್ದಾರೆ.
ಪ್ರಸ್ತುತ ಸಾವಯವ ಎಂದರೆ ತುಟ್ಟಿ ಎಂಬ ನಂಬಿಕೆಯಿದೆ. ಸಾವಯವ ಉತ್ಪನ್ನ ಎಂದು ಸುಳ್ಳು ಹೇಳಿ ಹೆಚ್ಚಿನ ಬೆಲೆಗೆ ಮಾರುವವರೂ ಸಾಕಷ್ಟಿದ್ದಾರೆ. ದಲ್ಲಾಳಿಗಳ ಕೈವಾಡ ಇರದಿದ್ದರಿಂದ ಸಾಮಾನ್ಯ ತರಕಾರಿ, ಹಣ್ಣುಗಳಿಗಿಂತ ಕಡಿಮೆ ದರದಲ್ಲಿ ಸಾವಯವ ಉತ್ಪನ್ನ ನೀಡಲು ರೈತರು ಮುಂದಾಗಿದ್ದಾರೆ. ಜಿಲ್ಲೆಯ ಕಲಘಟಗಿ ಹಾಗೂ ಶಿಗ್ಗಾವಿ ತಾಲೂಕಿನ ಗುಡ್ಡದ ಹೂಲಿಕಟ್ಟಿ, ಮಲಕನಕೊಪ್ಪ, ಇಂದೂರ, ಕುನ್ನೂರ, ಕುಕನೂರ ಮೊದಲಾದ ಗ್ರಾಮಗಳ ಸಾವಯವ ಕೃಷಿ ಮಾಡುವ ರೈತರಾದ ಎಂ.ವಿ. ಪಾಟೀಲ, ರಾಜು ಸೋಮನಗೌಡರ, ಅರ್ಜುನ ಸುಳಿಭಾವಿಮಠ, ವಿಠ್ಠಲ ಕುರಿಯವರ, ಪವನ ಭಟ್, ಜಾಹ್ವವಿ ರವೀಶ, ಶಂಕರ ಸೊಗಲಿ, ಈರಣ್ಣ ಬಾರಕೇರ, ಎಸ್.ವಿ. ಸೋಮಣ್ಣವರ ಸೇರಿಕೊಂಡು ಗ್ರಾಹಕರ ಮನೆಗೆ ಸಾವಯವ ಉತ್ಪನ್ನಗಳನ್ನು ತಲುಪಿಸಲು ಸಜ್ಜಾಗಿದ್ದಾರೆ.
ಸ್ವದೇಶಿ ಚಿಂತಕ ರಾಜೀವ ದೀಕ್ಷಿತ ಅವರ ಪ್ರಭಾವಕ್ಕೊಳಗಾಗಿ ಸಾವಯವ ಕೃಷಿ ಆರಂಭಿಸಿದ ಸಮಾನ ಮನಸ್ಕ ರೈತರು ಒಗ್ಗಟ್ಟಾಗಿ ಹೊಸ ಸವಾಲಿಗೆ ಸಿದ್ದಗೊಂಡಿದ್ದಾರೆ.
ಸಾವಯವ ತರಕಾರಿ, ಹಣ್ಣುಗಳನ್ನು ಮಾರಾಟ ಮಾಡಲು ಹೆಚ್ಚಿನ ಅವಕಾಶಗಳಿಲ್ಲ. ಇದರಿಂದ ಗ್ರಾಹಕರು ಸಾವಯವ ಉತ್ಪನ್ನಗಳಿಗೆ ಅಲೆದಾಡಬೇಕಾಗಿತ್ತು. ಇದನ್ನರಿತ ರೈತರು ಗೂಡ್ಸ್ ವಾಹನ ಖರೀದಿಸಿ ಗ್ರಾಹಕರಿಗೆ ತಲುಪಿಸಲು ಯೋಜನೆ ರೂಪಿಸಿಕೊಂಡಿದ್ದಾರೆ. ಸೇವೆ ಆರಂಭಗೊಂಡು ೪ ದಿನಗಳಲ್ಲಿಯೇ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಾಮಾನ್ಯ ತರಕಾರಿಗಿಂತ ಕಡಿಮೆ ದರದಲ್ಲಿ ಸಾವಯವ ತರಕಾರಿಗಳನ್ನು ನೀಡುತ್ತಿರುವುದು ವಿಶೇಷ. ಕೆಲ ರೈತರು ತರಕಾರಿ ಬೆಳೆದರೆ, ಇನ್ನು ಕೆಲ ರೈತರು ಹಣ್ಣು ಬೆಳೆಯುತ್ತಾರೆ. ಇನ್ನು ಕೆಲವರು ಜವಾರಿ ಆಕಳುಗಳ ಸಾಕಣೆ ಮಾಡಿ ಹಾಲು, ತುಪ್ಪ ಮಾರಾಟ ಮಾಡುತ್ತಾರೆ. ಒಬ್ಬ ರೈತರು ಎಣ್ಣೆ ಗಾಣ ಹಾಕಿ ಕೋಲ್ಡ್ ಪ್ರೆಸ್ಡ್ ಎಣ್ಣೆ ಉತ್ಪಾದಿಸುತ್ತಾರೆ. ಇದರಿಂದ ವಿವಿಧ ಸಾವಯವ ಉತ್ಪನ್ನಗಳು ಒಂದೆಡೆ ಲಭ್ಯವಾಗುತ್ತವೆ. ಸದ್ಯ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಲಭಿಸುತ್ತಿದ್ದು, ಸಂಘ ಸಂಸ್ಥೆಗಳು ಸಹಕಾರ ನೀಡಿದರೆ ಇನ್ನಷ್ಟು ವಾಹನಗಳ ಮೂಲಕ ಹೆಚ್ಚು ಗ್ರಾಹಕರಿಗೆ ಉತ್ಪನ್ನಗಳನ್ನು ತಲುಪಿಸುವುದು ರೈತರ ಉದ್ದೇಶವಾಗಿದೆ. ಸಾವಯವ ತರಕಾರಿ, ಹಣ್ಣು ಹಾಗೂ ಧಾನ್ಯಗಳ ವಾಹನವನ್ನು ನಿಮ್ಮ ಬಡಾವಣೆಗೆ ಕರೆಸಲು (೯೯೭೨೭೦೦೯೫೮) ಸಂಪರ್ಕಿಸಬಹುದಾಗಿದೆ.
ವಿಷಮುಕ್ತ ಆಹಾರದ ಬಗ್ಗೆ ಜನರಲ್ಲಿ ಜಾಗೃತಿ ಮೂಡುತ್ತಿದ್ದು, ಜನರು ಸಾವಯವ ಉತ್ಪನ್ನಗಳಿಗೆ ಹುಡುಕಾಡುತ್ತಿದ್ದಾರೆ. ದಲಾಲರ ಹಾವಳಿ ಇಲ್ಲದೇ ರೈತರಿಂದ ನೇರವಾಗಿ ಗ್ರಾಹಕರಿಗೆ ಸಾವಯವ ಉತ್ಪನ್ನಗಳನ್ನು ನೀಡುವುದು ನಮ್ಮ ಉದ್ದೇಶವಾಗಿದೆ. ಸಾವಯವ ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಒಂದು ಮಳಿಗೆ ನೀಡುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಿಕೊಳ್ಳಲಾಗುವುದು. ದಲಾಲರು ಸಾವಯವ ಉತ್ಪನ್ನಗಳಿಗೆ ಕಿಮ್ಮತ್ತು ನೀಡುವುದಿಲ್ಲ. ದಲಾಲರಿಲ್ಲದೇ ನೇರವಾಗಿ ಮಾರಾಟ ಮಾಡುವುದರಿಂದ ಕಡಿಮೆ ದರದಲ್ಲಿ ಸಾವಯವ ಉತ್ಪನ್ನಗಳನ್ನು ಗ್ರಾಹಕರಿಗೆ ನೀಡಲು ಸಾಧ್ಯವಾಗುತ್ತಿದೆ. ಜನರು ಸಾವಯವ ಉತ್ಪನ್ನಗಳನ್ನು ಖರೀದಿಸಿ ಪ್ರೋತ್ಸಾಹಿಸಿದರೆ ಸಾವಯವ ಕೃಷಿಕರ ಸಂಖ್ಯೆ ಹೆಚ್ಚಾಗುವುದರಲ್ಲಿ ಸಂದೇಹವಿಲ್ಲ.
- ಎಂ.ವಿ. ಪಾಟೀಲ, ಸಾವಯವ ಕೃಷಿಕರು.
ರಾಜೀವ ದೀಕ್ಷಿತ ಕೃಷಿ ಆಶ್ರಮ
ಆಗ್ರೊ ಟೂರಿಸಂ ಮಾದರಿಯಲ್ಲಿ ರಾಜೀವ ದೀಕ್ಷಿತ ಕೃಷಿ ಆಶ್ರಮ ಮಾಡುವ ಉದ್ದೇಶ ರೈತರಿಗಿದೆ. ಜನರಿಗೆ ಒಂದು ದಿನ ತಮ್ಮ ಹೊಲಗಳಲ್ಲಿ ವಾಸವಾಗಿದ್ದು, ವಿಷಮುಕ್ತ ಕೃಷಿ ಪದ್ಧತಿ ಬಗ್ಗೆ ತಿಳಿಸಿಕೊಡುವುದರೊಂದಿಗೆ ಅತಿಥಿಗಳಿಗೆ ಸಾವಯವ ಊಟ, ತಿಂಡಿ ವ್ಯವಸ್ಥೆ ಮಾಡಲಾಗುತ್ತದೆ. ಅಲ್ಲದೇ ತಮ್ಮ ಸಾವಯವ ಉತ್ಪನ್ನಗಳ ವಿಶೇಷತೆ ತಿಳಿಸಿ ಮಾರಾಟ ಮಾಡುವುದು ಕೃಷಿ ಆಶ್ರಮದ ಉದ್ದೇಶ. ಕೃಷಿ ಆಶ್ರಮ ನಿರ್ಮಿಸುವ ದಿಸೆಯಲ್ಲಿ ರೈತರು ಪ್ರಯತ್ನ ಮಾಡುತ್ತಿದ್ದಾರೆ.