ಚಂಚಲ, ಆದರೆ ನಿರಂತರ ಈ ನಿತೀಶ್‌ಕುಮಾರ್
೨೦೦೫ರಿಂದ ೨೦೨೪ರವರೆಗೂ ಅಂದರೆ ಸತತವಾಗಿ ೧೮ ವರ್ಷಗಳ ಕಾಲ ಬಿಹಾರದ ಮುಖ್ಯಮಂತ್ರಿ ಪದವಿಯನ್ನಲಂಕರಿಸಿರುವ ನಿತೀಶ್‌ಕುಮಾರ್ ಆ ಪೈಕಿ ೧೩ ವರ್ಷ ಭಾಜಪ ಜೊತೆಗೆ ಎನ್‌ಡಿಎ ಮೈತ್ರಿಕೂಟದ ಸಹವಾಸದಲ್ಲಿದ್ದರೂ ಇವತ್ತಿಗೂ ಅವರನ್ಯಾರೂ ಕೋಮುವಾದಿ ಎಂದು ನಿಂದಿಸಿಲ್ಲ. ಅವರ ಸೆಕ್ಯೂಲರ್ ಬದ್ಧತೆಯನ್ನು ಪ್ರಶ್ನಿಸಿಲ್ಲ. ಹಾಗೆಯೇ ಇನ್ನುಳಿದ ೫ ವರ್ಷಗಳಲ್ಲಿ ಎರಡು ವಿಭಿನ್ನ ಅವಧಿಗೆ ಲಾಲೂ ಪ್ರಸಾದ್ ಯಾದವ್‌ರ ಆರ್‌ಜೆಡಿ ಪಾರ್ಟಿ ಜೊತೆಗೆ ಹೊಂದಾಣಿಕೆ ಮಾಡಿಕೊಂಡ ನಂತರವೂ ಆ ಮಹಾಘಟಬಂಧನ್ ಸರ್ಕಾರದ ಮುಖ್ಯಮಂತ್ರಿಯಾಗಿ ಒಂದೇ ಒಂದು ಭ್ರಷ್ಟಾಚಾರದ ಕಪ್ಪುಚುಕ್ಕೆ ನಿತೀಶ್ ವ್ಯಕ್ತಿತ್ವಕ್ಕೆ ಅಂಟಿಲ್ಲ. ಇನ್ನು ಇದ್ದೊಬ್ಬ ಇಂಜಿನಿಯರಿಂಗ್ ಪದವೀಧರ ಪುತ್ರನನ್ನು ಗಾವುದ ದೂರವಿಟ್ಟುಕೊಂಡೇ ಅಧಿಕಾರ ಚಲಾಯಿಸುತ್ತಾ ಬಂದಿರುವುದರಿಂದ ಕುಟುಂಬ ರಾಜಕಾರಣ ಅಥವಾ ಸ್ವಜನ ಪಕ್ಷಪಾತದ ನೆರಳೂ ಅವರತ್ತ ಸುಳಿದಿಲ್ಲ.
ಇಷ್ಟೆಲ್ಲಾ ಧನಾತ್ಮಕ ಅಂಶಗಳಿದ್ದೂ ಈ ಅಪ್ಪಟ ಸಮಾಜವಾದಿ ಜಾಯಮಾನದ ನಾಯಕ ನಿತೀಶ್‌ಕುಮಾರ್‌ಗೆ ತನ್ನ ತವರು ರಾಜ್ಯದ ಅತ್ಯಂತ ಕೋಲಾಹಲಕಾರಿ ಹಾಗೂ ಸಂಘರ್ಷಮಯ ಸಾಮಾಜಿಕ ತಲ್ಲಣಗಳಿಂದಾಗಿಯೇ ಆಗಾಗ್ಗೆ ರಾಜಕೀಯ ನಿಷ್ಠೆ ಬದಲಿಸಬೇಕಾದ ಅನಿವಾರ್ಯತೆ ಎದುರಾಗುತ್ತಾ ಬಂತು. ಇಂದು ಜನವರಿ ೨೮ರ ಭಾನುವಾರ ಬೆಳಗ್ಗೆ ಸಹ ಮತ್ತೊಮ್ಮೆ ನಿತೀಶ್‌ಕುಮಾರ್‌ಗೆ ಅನಿಶ್ಚಿತತೆ, ಅಭದ್ರತೆ ಮತ್ತು ಅಸ್ಥಿರತೆಯ ವಾತಾವರಣ ಕಾಡುವಂತಾಗಿದೆ. ಹಾಗೆಯೇ ಅವರ ಸಮಗ್ರ ರಾಜಕೀಯ ಬದುಕನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಬಂದ ನಮ್ಮಂತಹರಿಗೆ ಸಹಜವಾಗಿಯೇ ಒಂದು ವಿಷಾದಭಾವ ಬಾಧಿಸತೊಡಗಿದೆ. ಆದರೆ ನಿತೀಶ್‌ರನ್ನು ಮತ್ತೋರ್ವ ಯಕಶ್ಚಿತ್ ಅಧಿಕಾರದಾಹಿ ರಾಜಕಾರಣಿ ಎಂದಷ್ಟೇ ಸಿನಿಕತನದಿಂದ ದೂರುತ್ತಾ ಬಂದವರ ಕಣ್ಣಲ್ಲಿ ಅವರೊಬ್ಬ ದೊಡ್ಡ ಖಳನಾಯಕ ಎಂದೇ ಗೋಚರಿಸುತ್ತಿದ್ದಾರೆ.
೧೯೭೦ರ ದಶಕದಿಂದಲೇ ಅಂದಿನ ಇಂದಿರಾ-ಕಾಂಗ್ರೆಸ್ ವಿರೋಧಿ ರಾಜಕೀಯ ಸಂಗ್ರಾಮದ ಪ್ರೇರಕ ಶಕ್ತಿಯಂತಿದ್ದ ಲೋಕನಾಯಕ ಜಯಪ್ರಕಾಶ್ ನಾರಾಯಣ್‌ರ ಅಚ್ಚುಮೆಚ್ಚಿನ ಶಿಷ್ಯರ ಪೈಕಿ ಒಬ್ಬರಾಗಿದ್ದ ನಿತೀಶ್‌ಕುಮಾರ್ ತಮ್ಮ ತದನಂತರದ ರಾಜಕೀಯ ವೈರಿ ಲಾಲೂ ಪ್ರಸಾದ್ ಯಾದವ್‌ರ ಒಡನಾಡಿಯಾಗಿಯೇ ಲೋಹಿಯಾ ಸಮಾಜವಾದ ಮತ್ತು ಸಾಮಾಜಿಕ ನ್ಯಾಯದ ಹೋರಾಟದ ಹಾದಿಯಲ್ಲಿ ಸಾಗಿಬಂದವರು. ಹೀಗಾಗಿ ನಿತೀಶರ ಪೂರ್ವಾಶ್ರಮದ ರಾಜಕೀಯ ಸಂಸ್ಕಾರವೆಲ್ಲವೂ ಜೆಪಿ ಚಳವಳಿಯಿಂದ ಉದ್ಭವಿಸಿದ ಜನತಾ ಪಕ್ಷ ಮತ್ತು ಅದರ ರೂಪಾಂತರಿ ಜನತಾದಳ ಪರಿವಾರದಲ್ಲಿಯೇ ರೂಪುಗೊಂಡಿತ್ತು.
ಮುಂದೆ ೧೯೯೦ರಿಂದ ೨೦೦೫ರವರೆಗೂ ಬಿಹಾರದ ಮುಖ್ಯಮಂತ್ರಿಯಾಗಿ, ಸಾರ್ವಭೌಮ ಸಾಮ್ರಾಟನಂತೆ ವಿಜೃಂಭಿಸಿದ ತನ್ನ ಹಳೆಯ ಕಾಮ್ರೇಡ್ ಲಾಲೂ ಯಾದವ್ ಕಾಲದ ಭ್ರಷ್ಟಾಚಾರ, ಕುಟುಂಬ ರಾಜಕಾರಣದ ದೌಲತ್ತು ಮತ್ತು ಯಾದವ್ ಸಮುದಾಯದ ಸಂಖ್ಯಾಬಲದ ದಬ್ಬಾಳಿಕೆಯಿಂದಾಗಿಯೇ ನೊಂದು ಸಿಡಿದೆದ್ದ ನಿತೀಶ್‌ಗೆ ಆಸರೆಯಾಗಿದ್ದು ದಿವಂಗತ ಜಾರ್ಜ್ ಫನಾಂಡಿಸ್‌ರ ಸಮತಾ ಪಕ್ಷ. ತತ್ಪರಿಣಾಮವಾಗಿ ಮುಂದೆ ೧೯೯೮ರಿಂದ ೨೦೦೨ರವರೆಗೆ ಅಟಲ್ ಬಿಹಾರಿ ವಾಜಪೇಯಿ ನಾಯಕತ್ವದ ಎನ್‌ಡಿಎ ಕೇಂದ್ರ ಸರ್ಕಾರದಲ್ಲಿ ರೈಲ್ವೆ ಸಚಿವರಾಗಿ ತಮ್ಮ ಆಡಳಿತ ಸಾಮರ್ಥ್ಯ ಹಾಗೂ ನಿರ್ವಹಣಾ ಪ್ರತಿಭೆಯನ್ನು ಸಾಬೀತು ಮಾಡಿದ್ದರು ನಿತೀಶ್‌ಕುಮಾರ್.
ಲಾಲೂ ಯಾದವ್‌ರ ಕುಟುಂಬ ರಾಜಕಾರಣದ ಅತಿರೇಕದ ವಿರುದ್ಧ ಪರ್ಯಾಯ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಿದ ಜೆಡಿ(ಯು) ಪಕ್ಷದ ಸರ್ವೋಚ್ಛ ನಾಯಕನಾಗಿ ೨೦೦೫ರಿಂದ ಭಾಜಪ ಸಹಭಾಗಿತ್ವದಲ್ಲಿ ಬಿಹಾರದ ಮುಖ್ಯಮಂತ್ರಿಯಾಗಿ ಅರಳಿದ ನಿತೀಶ್‌ಕುಮಾರ್ ಅಲ್ಲಿಂದಾಚೆ ಮುಂದೆಂದೂ ಹಿಂದಿರುಗಿ ನೋಡುವ ಪ್ರಸಂಗವೇ ಬರಲಿಲ್ಲ. ತಮ್ಮ ಸರ್ಕಾರದಲ್ಲಿ ಹಣಕಾಸು ಸಚಿವ ಮತ್ತು ಉಪಮುಖ್ಯಮಂತ್ರಿಯಾಗಿ ಕೆಲಸ ಮಾಡಿದ ಭಾಜಪ ನಾಯಕ ಸುಶೀಲ್ ಕುಮಾರ್ ಮೋದಿಯೊಂದಿಗೆ ಪರಸ್ಪರ ಸಹಕಾರ ಮತ್ತು ವಿಶ್ವಾಸದಿಂದ ಆಡಳಿತ ನಡೆಸುತ್ತಾ ಬಂದರು ನಿತೀಶ್‌ಕುಮಾರ್. ಹೀಗಾಗಿ ಉತ್ತರ ಭಾರತದ ಐದು ರೋಗಪೀಡಿತ ರಾಜ್ಯಗಳ ಪೈಕಿ (`ಬಿಮಾರು ಪ್ರದೇಶ್!) ಒಂದೆನಿಸಿದ್ದ ಬಿಹಾರ್‌ನಲ್ಲಿ ಅಭಿವೃದ್ಧಿ ಕೇಂದ್ರಿತ ಆಡಳಿತವನ್ನು ನೆಲೆಗೊಳಿಸುವಲ್ಲಿ ಯಶಸ್ವಿಯಾದರು. ಗೂಂಡಾಗಿರಿ ಮತ್ತು ದಾದಾಗಿರಿಯ ಸಂಸ್ಕೃತಿಯನ್ನು ಹದ್ದುಬಸ್ತಿನಲ್ಲಿಟ್ಟು ಕಾನೂನು ಮತ್ತು ಸುವ್ಯವಸ್ಥೆಯನ್ನು ಸ್ಥಾಪಿಸಿದರು. ಯಾದವೇತರ ಹಿಂದುಳಿದ ಸಮುದಾಯಗಳು, ದಲಿತರು ಮತ್ತು ಮುಸ್ಲಿಮರ ಪರ್ಯಾಯ ಶಕ್ತಿಕೇಂದ್ರವನ್ನು ತಮ್ಮ ಯಶಸ್ವಿನ ಅಡಿಪಾಯವನ್ನಾಗಿಸಿಕೊಂಡರು.
ಇಂತಹ ನಿತೀಶ್‌ಕುಮಾರ್‌ಗೆ ಇದ್ದಕ್ಕಿದ್ದಂತೆಯೇ ಕೊಂಚ ಅಭದ್ರತೆ ಹಾಗೂ ಒಂದಷ್ಟು ಅಸೂಯಾಪರ ಭಾವನೆ ಮೂಡಿದ್ದೇ ೨೦೧೪ರಿಂದ ತಮಗಿಂತ ರಾಜಕೀಯದಲ್ಲಿ ಕನಿಷ್ಠ ೨ ದಶಕಗಳಷ್ಟು ಕಿರಿಯನಾಗಿದ್ದ ನರೇಂದ್ರ ಮೋದಿ ಎಂಬ ಗುಜರಾತಿನ ಓಬಿಸಿ ನಾಯಕನೊಬ್ಬ ಇದ್ದಕ್ಕಿದ್ದಂತೆಯೇ ಭಾಜಪಕ್ಕೆ ಪ್ರಚಂಡ ಗೆಲುವು ತಂದುಕೊಟ್ಟು ಭಾರತದ ಅತ್ಯಂತ ಜನಪ್ರಿಯ ಹಾಗೂ ಬಲಿಷ್ಠ ಪ್ರಧಾನಮಂತ್ರಿ ಎನಿಸಿಕೊಂಡಾಗಲೇ. ಹೀಗೆ ಕಳೆದ ೧೦ ವರ್ಷಗಳಿಂದಲೂ ಮೋದಿಯ ಕಾರಣದಿಂದಲೇ ಬಗೆಬಗೆಯ ಏರಿಳಿತಗಳನ್ನನುಭವಿಸುತ್ತಾ ಬಂದ ನಿತೀಶ್‌ಕುಮಾರ್ ಇಂದು ಸಂಜೆ ೨೦೨೪ ಜನವರಿ ೨೮ರಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ, ಅದೇ ಮೋದಿ ನೇತೃತ್ವದ ಎನ್‌ಡಿಎಗೇ ಮರಳುವಂತಾಗಿದೆ. ನಿತೀಶ್‌ಕುಮಾರರ ಸಮಾಜವಾದಿ ರಾಜಕೀಯ ಮತ್ತು ಸಾಮಾಜಿಕ ನ್ಯಾಯದ ದೃಷ್ಟಿಕೋನ ಯಾವ ಮಟ್ಟದ್ದೆಂದರೆ ಇವತ್ತಿಗೂ ೨೪೩ ಸಂಖ್ಯಾಬಲದ ಬಿಹಾರ್ ಅಸೆಂಬ್ಲಿಯಲ್ಲಿ ೨೮ ಮಂದಿ ಮಹಿಳೆಯರು ಮತ್ತು ೨೪ ಮಂದಿ ಮುಸ್ಲಿಮರು ಎಮ್ಮೆಲ್ಲೆಗಳಾಗಿದ್ದಾರೆ. ಹೀಗಾಗಿಯೇ ಅವರು ಸೆಕ್ಯೂಲರ್-ಕಮ್ಯುನಲ್ ರಾಜಕೀಯದ ಮಡಿವಂತಿಕೆಯಿಂದ ಮುಕ್ತರಾಗಿದ್ದಾರೆ.