For the best experience, open
https://m.samyuktakarnataka.in
on your mobile browser.

ಚಂದನವನದಲ್ಲಿ ಲೈಂಗಿಕ ದೌರ್ಜನ್ಯ

01:57 AM Sep 06, 2024 IST | Samyukta Karnataka
ಚಂದನವನದಲ್ಲಿ ಲೈಂಗಿಕ ದೌರ್ಜನ್ಯ

ಕನ್ನಡ ಸ್ಯಾಂಡಲ್‌ವುಡ್‌ನಲ್ಲಿ ಲೈಂಗಿಕ ದೌರ್ಜನ್ಯ ವಿರುದ್ಧ ಕೂಗು ಇಂದು ನಿನ್ನೆಯದಲ್ಲ. ಆಗಾಗ್ಗೆ ಇದು ಕೇಳಿ ಬರುತ್ತದೆ ಹಾಗೂ ತಣ್ಣಗಾಗಿ ಹೋಗುತ್ತದೆ. ಈಗ ಮಲೆಯಾಳಂ ಕಾಲಿವುಡ್‌ನಲ್ಲಿ ನ್ಯಾಯಮೂರ್ತಿ ಹೇಮಾ ಆಯೋಗದ ವರದಿ ಬಂದ ಮೇಲೆ ಕನ್ನಡದಲ್ಲೂ ಇದೇ ರೀತಿ ಆಯೋಗ ರಚಿಸುವುದು ಅಗತ್ಯ ಎಂದು ೧೫೩ ಕಲಾವಿದರು ಸಹಿ ಮಾಡಿದ ಮನವಿ ಪತ್ರವನ್ನು ಮುಖ್ಯಮಂತ್ರಿಗೆ ಸಲ್ಲಿಸಿ ಒತ್ತಾಯಸಿದ್ದಾರೆ. ಹೀಗಾಗಿ ಸರ್ಕಾರ ಆಯೋಗ ರಚಿಸಬೇಕಾದ ಅನಿವಾರ್ಯತೆ ಕಂಡು ಬಂದಿದೆ.
ಸ್ಯಾಂಡಲ್‌ವುಡ್‌ನಲ್ಲಿ ೨೦೧೬ ರಲ್ಲಿ `ಮೀಟು' ಆಂದೋಲನ ನಡೆದವು. ಅವುಗಳ ಪ್ರಭಾವದಿಂದ ೨೦೧೯ರಲ್ಲಿ ದೂರುಗಳು ಕೇಳಿ ಬಂದವು. ಆಗ ಅಂಬರೀಶ್ ಫಿಲ್ಮ್ ಚೇಂಬರ್ ಅಧ್ಯಕ್ಷರಾಗಿ ಪ್ರಭಾವಿ ಪಾತ್ರವಹಿಸಿದರು. ಆಗಲೂ ಶೃತಿ ಹರಿಹರನ್ ದೂರು ಸಲ್ಲಿಸಿದ್ದರು. ಕೊನೆಗೆ ಆರೋಪ-ಪ್ರತ್ಯಾರೋಪದಲ್ಲೇ ಮುಕ್ತಾಯಗೊಂಡಿತು. ಈಗ ಮತ್ತೆ ಆರೋಪ-ಪ್ರತ್ಯಾರೋಪಗಳು ಕೇಳಿ ಬಂದಿವೆ. ಈಗ ತನಿಖೆಗೆ ಆಯೋಗ ರಚಿಸುವುದಂತೂ ಅನಿವಾರ್ಯ. ಅದರ ಆಧಾರದ ಮೇಲೆ ನಿಯಮಗಳನ್ನು ರಚಿಸುವುದು ಅಗತ್ಯ.
ಸ್ಯಾಂಡಲ್‌ವುಡ್‌ನಲ್ಲಿ ನೈಜತೆ-ಕಲಾತ್ಮಕತೆ-ಲೈಂಗಿಕತೆ ಸೇರಿಕೊಂಡು ಬಿಟ್ಟಿದೆ. ನೈಜತೆ-ಕಲಾತ್ಮಕತೆ ತೆರೆಯ ಮೇಲೆ ಕಾಣುವ ಸಂಗತಿಗಳು. ಇದನ್ನು ನೋಡಿ ಜನ ಆನಂದಿಸುತ್ತಾರೆ. ಲೈಂಗಿಕತೆ ತೆರೆಯ ಹಿಂದೆ ನಡೆಯುವ ಸಂಗತಿಗಳಿಗೆ ಸಂಬಂಧಿಸಿದ್ದು. ಇದಕ್ಕೂ ಪ್ರೇಕ್ಷಕರಿಗೂ ಸಂಬಂಧವಿಲ್ಲ. ಆದರೆ ಕಲೆ-ಸಂಸ್ಕೃತಿ ಪ್ರದರ್ಶನಕ್ಕೆ ಮೀಸಲಾದ ಪ್ರಕಾರದಲ್ಲಿ ಅನೈತಿಕ ಕ್ರಿಯೆಗಳು ನುಸುಳಬಾರದು. ಹೀಗಾಗಿ ತೆರೆಯ ಹಿಂದೆ ನಡೆಯುವ ಕ್ರಿಯೆಗಳು ಕಾನೂನು ಪರಿಧಿಗೆ ಬರುತ್ತವೆ. ಮಾಲಿವುಡ್ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ದೂರು ನೀಡಿದ್ದರಿಂದ ಹೇಮಾ ಆಯೋಗ ರಚನೆಯಾಯಿತು. ಈಗ ಕೇರಳ ಸರ್ಕಾರ ಕ್ರಮ ಕೈಗೊಳ್ಳಲು ಮುಂದಾಗಿದೆ. ಇದರ ಮೂಲಕ ಸಿನಿ ಪ್ರಪಂಚದ ಶುದ್ಧೀಕರಣ ಕೈಗೊಳ್ಳುವುದು ಸೂಕ್ತ. ಲೈಂಗಿಕ ದೌರ್ಜನ್ಯದ ಆರೋಪಗಳಿಗೆ ಕ್ರಮ ಕೈಗೊಳ್ಳಲು ಸೂಕ್ತ ನಿಯಮಗಳನ್ನು ರಚಿಸಬೇಕು. ಅದು ವ್ಯಕ್ತಿಗೆ ಸೀಮಿತ ಆಗಬಾರದು. ಸಾಮೂಹಿಕ ಪರಿಹಾರ ಕಂಡು ಹಿಡಿಯಬೇಕು. ನಿರ್ಮಾಪಕ ಹೊರಾಂಗಣ ಚಿತ್ರೀಕರಣ ನಡೆಯುವಾಗ ನಟಿಯರಿಗೆ ಸೂಕ್ತರಕ್ಷಣೆ ವ್ಯವಸ್ಥೆ ಮಾಡಬೇಕು. ಅದಕ್ಕೂ ಸೂಕ್ತ ನಿಯಮಗಳನ್ನು ಜಾರಿಗೆ ತರಬೇಕು. ಒಂದು ವೇಳೆ ಮಹಿಳಾ ಕಲಾವಿದರು ದೂರು ನೀಡಿದರೆ ಅದನ್ನು ಪರಿಶೀಲಿಸಲು ಆಂತರಿಕ ಸಮಿತಿ ಪರಿಶೀಲಿಸಬೇಕು. ಅನಾಮಧೇಯ ದೂರಿಗೂ ಅವಕಾಶ ಇರಬೇಕು. ಹೊರಾಂಗಣ ಚಿತ್ರೀಕರಣವಲ್ಲದೆ ಕಡೆ ನಟಿಯರು ತಮ್ಮದೇ ಆದ ವ್ಯವಸ್ಥೆ ಹೊಂದಿರುತ್ತಾರೆ. ಎಲ್ಲ ವೃತ್ತಿಗಳಲ್ಲೂ ಮಹಿಳೆಯರಿಗೆ ಕಷ್ಟ ಇದ್ದೇ ಇರುತ್ತದೆ. ಅದರಲ್ಲೂ ಸಿನಿಲೋಕದಲ್ಲಿ ಕಷ್ಟಗಳು ಹೆಚ್ಚು. ಅಲ್ಲಿ ಮಹಿಳೆ ದೇಹಕ್ಕೆ ಹೆಚ್ಚಿನ ಬೆಲೆ. ಬೌದ್ಧಿಕ ಸಾಮರ್ಥ್ಯಕ್ಕೆ ಬೆಲೆ ಇರುವುದಿಲ್ಲ. ಪ್ರೇಕ್ಷಕರನ್ನು ರಂಜಿಸುವುದಕ್ಕಾಗಿ ನಿರ್ಮಾಪಕರು ಕೆಲವು ಸನ್ನಿವೇಶಗಳನ್ನು ಉದ್ದೇಶಪೂರ್ವಕವಾಗಿ ಸೇರ್ಪಡೆ ಮಾಡಿರುತ್ತಾರೆ. ಅದು ಸಿನಿಮಾದಲ್ಲಿ ಚೆನ್ನಾಗಿ ಕಾಣುತ್ತದೆ. ಆದರೆ ನಿಜಜೀವನದಲ್ಲಿ ಆ ರೀತಿ ನೋಡುವುದು ಅಶ್ಲೀಲಕ್ಕೆ ಕಾರಣವಾಗುತ್ತದೆ.
ಸಿನಿಮಾ ಮತ್ತು ನಿಜ ಜೀವನದ ನಡುವೆ ದೊಡ್ಡ ಅಂತರ ಇರಲೇಬೇಕು. ಅದನ್ನು ಕಲಾವಿದರು ಮತ್ತು ಜನಸಾಮಾನ್ಯರು ಅರಿತು ಅದರಂತೆ ನಡೆದುಕೊಳ್ಳಬೇಕು. ಸಿನಿಮಾದಲ್ಲಿ ರಾಮನ ಪಾತ್ರ ಮಾಡಿದವನು ನಿಜಜೀವನದಲ್ಲಿ ರಾಮನ ರೀತಿ ಇರಲು ಆಗುವುದಿಲ್ಲ. ಇದು ಸಿನಿಮಾ ಸೃಷ್ಟಿಸುವ ಭ್ರಮಾಲೋಕ. ಇದನ್ನು ಅರಿತು ನಡೆದರೆ ಯಾವ ಸಮಸ್ಯೆಯೂ ಬರುವುದಿಲ್ಲ. ತೆರೆಯ ಮೇಲೆ ಪ್ರೇಮ ಸಲ್ಲಾಪ ನಡೆಸುವವರು ನಿಜ ಜೀವನದಲ್ಲೂ ನಡೆಸಲು ಹೋದಲ್ಲಿ ಅದು ಅಶ್ಲೀಲಕ್ಕೆ ಕಾರಣವಾಗುತ್ತದೆ. ಮಹಿಳೆಯರ ಸುರಕ್ಷತೆಗೆ ಸೂಕ್ತ ಮಾನದಂಡವನ್ನು ಸಿನಿಮಾ ಚೇಂಬರ್ ರೂಪಿಸಬೇಕು. ಬಹಿರಂಗವಾಗಿ ದೂರು ಬರುವವರೆಗೆ ಕಾಯುವ ಅಗತ್ಯವಿಲ್ಲ. ಇಂಥ ದೂರುಗಳು ಕೇವಲ ಪ್ರಚಾರಕ್ಕಾಗಿ ಮಾಡಿದವು ಎಂದಾಗಬಾರದು.
ಮೆಗಾಸ್ಟಾರ್‌ಗಳ ಕಾಲ ಬಂದ ಮೇಲೆ ಸಿನಿ ಉದ್ಯಮ ಯಾರ ಕೈಯಲ್ಲೂ ಉಳಿದಿಲ್ಲ. ಹಿಂದೆ ರಾಜಕುಮಾರ್ ಹೇಳಿದರೆ ಕನ್ನಡ ಸಿನಿ ಲೋಕದವರು ಚಕಾರ ಎತ್ತುತ್ತಿರಲಿಲ್ಲ. ಈಗ ಯಾರ ಮಾತೂ ಯಾರೂ ಕೇಳುವುದಿಲ್ಲ. ಹೀಗಾಗಿ ಕಾನೂನು ಮೂಲಕ ನಿಯಂತ್ರಣಕ್ಕೆ ತರುವುದು ಅಗತ್ಯ. ಸೆನ್ಸಾರ್ ಮಂಡಳಿ ಸಿನಿಮಾ ಮಾತ್ರ ನೋಡಿ ಪ್ರದರ್ಶನಕ್ಕೆ ಅನುಮತಿ ನೀಡಬಹುದೋ ಇಲ್ಲವೊ ಎಂಬುದನ್ನು ತೀರ್ಮಾನಿಸುತ್ತದೆ. ಉದ್ಯಮದಲ್ಲಿ ಉಳಿದ ಸಮಸ್ಯೆಗಳ ಬಗ್ಗೆ ನ್ಯಾಯಾಲಯಕ್ಕೆ ಮೊರೆ ಹೋಗಬೇಕು.
ಅದರಲ್ಲೂ ಲೈಂಗಿಕ ದೌರ್ಜನ್ಯಗಳನ್ನು ನಿಯಂತ್ರಿಸುವುದು ಸುಲಭದ ಕೆಲಸವಲ್ಲ. ಸಿನಿಮಾ ಬಣ್ಣದ ಲೋಕವಾಗಿರುವುದರಿಂದ ಅಲ್ಲಿಯ ನಿಯಮಗಳೇ ಬೇರೆ. ಯಾರೂ ಯಾರ ಬಗ್ಗೆಯೂ ಚಿಂತಿಸುವುದಿಲ್ಲ. ಹೀಗಾಗಿ ಒಂದು ರೀತಿಯ ಸ್ವಚ್ಛಂದ ಪ್ರವೃತ್ತಿ. ಹೀಗಾಗಿ ತೆರೆಯ ಮುಂದೆ ನಡೆಯುವುದೇ ಬೇರೆ. ತೆರೆಯ ಹಿಂದೆ ನಡೆಯುವ ಜೀವನವೇ ಬೇರೆ ಎನ್ನುವಂತಾಗಿದೆ. ಸರ್ಕಾರ ಈಗ ಉದ್ಯಮಕ್ಕೆ ಕಾನೂನಿನ ಚೌಕಟ್ಟಿಗೆ ತರುವ ಕಾಲ ಬಂದಿದೆ.