ಚರಂಡಿಗೆ ಹಾಕಿದ ಕಬ್ಬಿಣದ ರಾಡ್ ಸಿಲುಕಿ ವ್ಯಕ್ತಿ ವಿಲವಿಲ
ಹುಬ್ಬಳ್ಳಿ: ಗೋಕುಲ ರಸ್ತೆಯ ಕೇಂದ್ರ ಬಸ್ ನಿಲ್ದಾಣದಲ್ಲಿ ಕೈಗೊಂಡ ಚರಂಡಿ ನಿರ್ಮಾಣ ಸ್ಥಳದ ಬಳಿ ತೆರಳುತ್ತಿದ್ದ ವ್ಯಕ್ತಿ ಆಯತಪ್ಪಿ ಬಿದ್ದು ಆತನ ಬಲ ಕಾಲಿಗೆ ಕಾಂಕ್ರೀಟ್‌ಗೆ ಬಳಸುವ ಕಬ್ಬಿಣದ ಸರಳು ಸಿಲುಕಿ ತೀವ್ರವಾಗಿ ಗಾಯಗೊಂಡ ಘಟನೆ ಬುಧವಾರ ರಾತ್ರಿ ಸಂಭವಿಸಿದೆ.
ಕೇಂದ್ರ ಬಸ್ ನಿಲ್ದಾಣದಲ್ಲಿರುವ ಕಾರ್ಗೊ (ಪಾರ್ಸಲ್ ಸರ್ವಿಸ್) ಹಿಂಬದಿಯಲ್ಲಿ ಈ ವ್ಯಕ್ತಿ ತೆರಳುವಾಗಿ ಆಯತಪ್ಪಿ ಬಿದ್ದಿದ್ದಾನೆ. ಮೂತ್ರ ವಿಸರ್ಜನೆಗೆ ತೆರಳುತ್ತಿದ್ದರೊ, ಬಸ್ಸಿಗಾಗಿ ತೆರಳುತ್ತಿದ್ದರೊ ಗೊತ್ತಿಲ್ಲ. ಕಾರ್ಗೊಗೆ ಪಾರ್ಸಲ್ ಕೊಡಲು ತೆರಳಿದ್ದ ಎಲ್‌ಐಸಿ ಅಧಿಕಾರಿ ಎಂ.ಕೆ ಪಾಟೀಲ ಅವರು ಆ ವ್ಯಕ್ತಿ ಬಿದ್ದಿದ್ದನ್ನು ಕಂಡು ಸುತ್ತಮುತ್ತಿನ ಜನರನ್ನು, ಆಟೋ ಚಾಲಕರನ್ನು ಕರೆದು ರಕ್ಷಣೆಗೆ ಧಾವಿಸಿದ್ದಾರೆ. ಬಳಿಕ ೧೦೮ ಗೆ ಕರೆ ಮಾಡಿ ಕಿಮ್ಸ್ ಆಸ್ಪತ್ರೆಗೆ ಸಾಗಿಸಿದ್ದಾರೆ.
ಇದೇ ರೀತಿ ಒಂದು ವಾರದ ಹಿಂದೆ ವೃದ್ಧರೊಬ್ಬರು ಇಲ್ಲಿ ಬಿದ್ದು ಮೂರ್ನಾಲ್ಕು ಕಡೆ ಗಾಯವಾಗಿತ್ತಂತೆ. ಕಾಮಗಾರಿ ಗುತ್ತಿಗೆದಾರರು, ವಾಕರಸಾಸಂ ಭದ್ರತಾ ಸಿಬ್ಬಂದಿಯ ನಿರ್ಲಕ್ಷ್ಯವೇ ಇದಕ್ಕೆ ಕಾರಣ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಗಾಯಗೊಂಡ ವ್ಯಕ್ತಿಯ ರಕ್ಷಣೆಗೆ ಧಾವಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು.