For the best experience, open
https://m.samyuktakarnataka.in
on your mobile browser.

ಚಳಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದರೂ…

01:35 PM Jan 08, 2025 IST | Samyukta Karnataka
ಚಳಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದರೂ…

ಹೆಚ್ಚುತ್ತಿರುವ ಜೀವನ ವೆಚ್ಚ, ಬೆಲೆ ಏರಿಕೆಯಿಂದ ಜೀವನವೂ ದುಸ್ತರ

ಬೆಂಗಳೂರು: ನಗರದ ಫ್ರೀಡಂ ಪಾರ್ಕ್‌ನಲ್ಲಿ 25 ಸಾವಿರಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದ್ದಾರೆ‌ ಆದರೆ ಸರ್ಕಾರದ ಪ್ರತಿನಿಧಿ ಅವರ ಬಳಿ ಹೋಗದೆ ಇರುವುದು ನಿಜಕ್ಕೂ ಅಮಾನವೀಯ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಭಾರೀ ಆಕ್ರೋಶ ಹೊರ ಹಾಕಿದ್ದಾರೆ. ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಆಶಾ ಕಾರ್ಯಕರ್ತೆಯರು [ASHA - Accredited Social Health Activist] ಮೈ ಕೊರೆಯುವ ಚಳಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದರೂ ಸರ್ಕಾರದ ಯಾವುದೇ ಪ್ರತಿನಿಧಿ ಅವರ ಬಳಿ ಹೋಗದೆ ಇರುವುದು ನಿಜಕ್ಕೂ ಅಮಾನವೀಯವಾದದ್ದು. ಆಶಾ ಕಾರ್ಯಕರ್ತೆಯರು ಮೂಲಭೂತ ಆರೋಗ್ಯ ಸೇವೆಗಳನ್ನು ತಲುಪಿಸಲು, ಆರೋಗ್ಯ ಜಾಗೃತಿಯನ್ನು ಉತ್ತೇಜಿಸುವ ಮಹತ್ತರವಾದ ಪಾತ್ರವನ್ನು ವಹಿಸುತ್ತಾರೆ.

ಸುರಕ್ಷಿತ ಹೆರಿಗೆ, ಆರೋಗ್ಯವಂತ ಶಿಶುವಿನ ಜನನ, ಆರೈಕೆ ಹಾಗೂ ಪೌಷ್ಟಿಕತೆಯ ಅರಿವು ಮೂಡಿಸುವುದಲ್ಲದೆ ಕ್ಷಯ, ಮಲೇರಿಯಾ, ಡೆಂಗೀ, ಮತ್ತಿತರ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಅವಿರತ ಶ್ರಮಿಸುತ್ತಿದ್ದಾರೆ. ಚುನಾವಣಾ ಪೂರ್ವದಲ್ಲಿ ಆಶಾ ಕಾರ್ಯಕರ್ತೆಯರ ಸಂಬಳವನ್ನು 15,000 ರೂ ಕ್ಕೆ ಏರಿಸುತ್ತೇವೆ ಎಂದು ಹೇಳಿದ್ದ ಕಾಂಗ್ರೆಸ್ ಸರ್ಕಾರ ಈಗ ತನ್ನ ಮಾತನ್ನು ತಪ್ಪಿದೆ.

ಹೆಚ್ಚುತ್ತಿರುವ ಜೀವನ ವೆಚ್ಚ, ಬೆಲೆ ಏರಿಕೆಯಿಂದ ಆಶಾ ಕಾರ್ಯಕರ್ತೆಯರ ಜೀವನವೂ ದುಸ್ತರವಾಗಿದೆ. ಕಾಂಗ್ರೆಸ್ ಸರ್ಕಾರ ತನ್ನ ಪ್ರತಿಷ್ಠೆಯನ್ನು ಬಿಟ್ಟು ಕೂಡಲೇ ಇವರ ಬೇಡಿಕೆಗಳಿಗೆ ಸ್ಪಂದಿಸಬೇಕು ಹಾಗೂ ಅವರ ಆಶ್ವಾಸನೆ ನೀಡಿದಂತೆ ಅವರ ವೇತನವನ್ನು 15,000 ರೂ ಗೆ ಏರಿಸಬೇಕು ಎಂದಿದ್ದಾರೆ.

Tags :