ಚಳ್ಳಕೆರೆ ರಂಗಭೂಮಿ ಕಲಾವಿದ ತಿಪ್ಪೇಸ್ವಾಮಿಗೆ ರಾಜ್ಯೋತ್ಸವ ಪ್ರಶಸ್ತಿ
ಚಿತ್ರದುರ್ಗ: ಮೂಲತ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ರಂಗಭೂಮಿಯಲ್ಲಿ ತಮ್ಮದೆ ಆದ ಛಾಪು ಮೂಡಿಸಿಕೊಂಡಿರುವ ಚಳ್ಳಕೆರೆ ಪಿ.ತಿಪ್ಪೇಸ್ವಾಮಿ ೨೦೨೩ರ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ದಿವಂಗತ ವೀರಣ್ಣ-ವೀರಮ್ಮನವರ ಪುತ್ರನಾಗಿ ಚಳ್ಳಕೆರೆಯಲ್ಲಿ ೧೯೪೬ ರಲ್ಲಿ ತಿಪ್ಪೇಸ್ವಾಮಿ ಜನಿಸಿದರು. ಬಾಲ್ಯದಿಂದಲೂ ನಾಟಕ-ಸಂಗೀತದತ್ತ ಒಲವು ಹೊಂದಿದ್ದ ಅವರು ಬಿ.ಎ. ಪದವಿಯ ನಂತರ ಬಿ.ಇಡಿ. ಶಿಕ್ಷಣವನ್ನು ಪೂರೈಸಿ ಚಳ್ಳಕೆರೆಯ ಕಾಟಪ್ಪನಹಟ್ಟಿಯಲ್ಲಿನ ಕಾಟಂಲಿಂಗೇಶ್ವರ ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ೧೯೭೩ ರಿಂದ ೨೦೦೪ ರವರೆಗೆ ಸೇವೆ ಸಲ್ಲಿಸಿ ನಿವೃತ್ತಿ ಪಡೆದರು.
ಗ್ರಾಮೀಣ ರಂಗಭೂಮಿಯ ಸೇವೆಯನ್ನು ಗುರುತಿಸಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ (೨೦೦೧) ನೀಡಿ ಗೌರವಿಸಿದೆ. ನಾಟಕ ಆಕಾಡೆಮಿಯ ಸದಸ್ಯತ್ವ (೨೦೧೪) ನೀಡಿ ರಂಗಕಲಾವಿದರ ಸೇವೆ ಮಾಡಲು, ಚಿತ್ರದುರ್ಗ ಜಿಲ್ಲೆಯಾದ್ಯಂತ ರಂಗಚಟುವಟಿಕೆಗಳು ಗರಿಗೆದರಲು ಅವಕಾಶ ಕಲ್ಪಿಸಿತ್ತು. ಎಪ್ಪತ್ತರ ಇಳಿವಯಸ್ಸಲ್ಲೂ ಬತ್ತದ ಅವರ ಉತ್ಸಾಹ ಜಾನಪದ ರಂಗಭೂಮಿಯ ಮುಮ್ಮೇಳಗಾರರ (ಭಾಗವತರ) ಸಂಘವನ್ನು ಕಟ್ಟಿ ಅವರಿಗೆ ನ್ಯಾಯಯುತವಾಗಿ ದಕ್ಕಬೇಕಾದ ಮಾಸಾಶನ ಹಾದಿ ಸವಲತ್ತುಗಳನ್ನು ಕೊಡಿಸಲು ಸಂಘಟಿತ ಹೋರಾಟ ನಡೆಸಿದ್ದಾರೆ. ಚಳ್ಳಕೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕದ ಅಧ್ಯಕ್ಷರಾಗಿ ಎರಡು ಅವಧಿಗೆ (೨೦೦೫-೨೦೦೭, ೨೦೦೮-೨೦೧೦) ಸೇವೆ. ಸಂಚಾಲಕರಾಗಿ ಜಿಲ್ಲಾ ಜಾನಪದ ಜಾತ್ರೆ (೨೦೦೫-೨೦೦೬), ಕಾಲೇಜು ರಂಗೋತ್ಸವ (೨೦೧೬-೨೦೧೭) ಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಜಿಲ್ಲಾ ವಾಲ್ಮೀಕಿ ಪ್ರಶಸ್ತಿ (೨೦೧೫-೧೬), ಯಾದಗಿರಿ ಜಿಲ್ಲೆಯಲ್ಲಿ ನಡೆದ ಜಾನಪದೋತ್ಸವದಲ್ಲಿ 'ಜಾನಪದ ಕಲಾಲೋಕ ಪ್ರಶಸ್ತಿ' (೨೦೧೭), ಸಿಜಿಕೆ ನಾಟಕೋತ್ಸವದಲ್ಲಿ ಸಿಜಿಕೆ ಪ್ರಶಸ್ತಿ' (೨೦೧೮) ಗಳ ಗೌರವ ಸಂದಿವೆ. ಪ್ರಸ್ತುತ ಮಹತ್ವಾಕಾಂಕ್ಷಿಯ ಕ್ಷೇತ್ರಕಾರ್ಯಾಧಾರಿತ ಕೃತಿ 'ಮ್ಯಾಸ ಬೇಡರ ಮೌಖಿಕ ಕಥನಗಳು' (೨೦೧೯) ಪ್ರಕಟ. ಈ ಕೃತಿಗೆ ೨೦೨೦ ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿಯವರು ಸಂಶೋಧನೆ ಪ್ರಕಾರದಲ್ಲಿ ಅತ್ಯುತ್ತಮ ಕೃತಿಯೆಂದು ಪರಿಗಣಿಸಿ, ಪುಸ್ತಕ ಬಹುಮಾನ ಪ್ರಶಸ್ತಿ ನೀಡಿದೆ. ನವೆಂಬರ್ ಒಂದರಂದು ಬೆಂಗಳೂರಿನಲ್ಲಿ ನಡೆಯುವ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದಿಸಿ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ.
ಪ್ರಶಸ್ತಿ ಮೊದಲೇ ಸಿಗಬೇಕಾಗಿತ್ತು. ತಡವಾಗಿ ಬಂದಿದೆ. ಪ್ರಶಸ್ತಿಯನ್ನು ಜಿಲ್ಲೆಯ ರಂಗಭೂಮಿ ಕಲಾವಿದರಿಗೆ ಅರ್ಪಣೆ ಮಾಡುತ್ತೆನೆ. ಸರ್ಕಾರ ಈಗಲಾದರೂ ಗುರುತಿಸಿ ನೀಡಿರುವುದಕ್ಕೆ ಸಂತೋಷವಾಗಿದೆ ಎಂದು ತಿಪ್ಪೇಸ್ವಾಮಿ ತಮ್ಮ ಅನಿಸಿಕೆಯನ್ನು ಪತ್ರಿಕೆಯೊಂದಿಗೆ ಹಂಚಿಕೊಂಡರು.