For the best experience, open
https://m.samyuktakarnataka.in
on your mobile browser.

ಕಾಡಾನೆಗಳನ್ನು ಹಿಮ್ಮೆಟ್ಟಿಸಲು ಅಭಿಮನ್ಯು ತಂಡ

03:00 AM Jan 31, 2024 IST | Samyukta Karnataka
ಕಾಡಾನೆಗಳನ್ನು ಹಿಮ್ಮೆಟ್ಟಿಸಲು ಅಭಿಮನ್ಯು ತಂಡ

ಚಿಕ್ಕಮಗಳೂರು: ಆಹಾರಕ್ಕಾಗಿ ಕಾಡು ಬಿಟ್ಟು ನಾಡಿಗೆ ಆನೆಗಳು ಹಿಂಡು ಹಿಂಡಾಗಿ ಬರುತ್ತಿವೆ. ಹಾಸನದಲ್ಲಿ ಉಪಟಳ ನೀಡುತ್ತಿದ್ದ ಬೀಟಮ್ಮ ಗುಂಪಿನ ಕಾಡಾನೆಗಳು ಈಗ ಚಿಕ್ಕಮಗಳೂರಿಗೆ ಲಗ್ಗೆ ಇಟ್ಟಿವೆ.
ನಗರದ ಹೊರವಲಯದಲ್ಲಿ ಬೀಡುಬಿಟ್ಟಿರುವ ೩೦ಕ್ಕೂ ಹೆಚ್ಚು ಕಾಡಾನೆಗಳನ್ನು ಹಿಮ್ಮೆಟ್ಟಿಸಲು ಅಭಿಮನ್ಯು ತಂಡ ಆಗಮಿಸಿದೆ. ಚಿಕ್ಕಮಗಳೂರು ಬಳಿಯ ಮತ್ತಾವರಕ್ಕೆ ನಾಗರಹೊಳೆ ಹಾಗೂ ದುಬಾರೆಯಿಂದ ಎಂಟು ಸಾಕಾನೆಗಳು ಬಂದಿವೆ.
ಇದೀಗ ಬೀಟಮ್ಮ ಟೀಂ ಕೆ.ಆರ್.ಪೇಟೆಯ ನೀಲಗಿರಿ ಪ್ಲಾಂಟೇಶನ್ ಬಳಿ ಬಂದಿವೆ. ಇವುಗಳನ್ನು ಕಾಡಿಗಟ್ಟಲು ಸಿದ್ಧತೆ ನಡೆದಿದೆ. ಈ ಕಾರ್ಯಾಚರಣೆಗಾಗಿ ನೂರಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿ ಹಾಗೂ ನುರಿತ ತಜ್ಞರು, ಅಧಿಕಾರಿಗಳು ಭಾಗಿಯಾಗಿದ್ದಾರೆ.
ನಗರದ ಮುಗ್ತಿಹಳ್ಳಿಯಲ್ಲಿರುವ ಆಂಬರ್‌ವ್ಯಾಲಿ ವಸತಿ ಶಾಲೆಯಲ್ಲಿ ೨೫ಕ್ಕೂ ಹೆಚ್ಚು ಕಾಡಾನೆಗಳು ಬೀಡು ಬಿಟ್ಟಿರುವ ಹಿನ್ನೆಲೆಯಲ್ಲಿ, ಶಾಲೆಯಲ್ಲಿರುವ ಇರುವ ಸುಮಾರು ೫೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗೆ ಯಾವುದೇ ಕಾರಣಕ್ಕೂ ವಸತಿ ಶಾಲೆಯಿಂದ ಹೊರಗಡೆ ಬರಬೇಡಿ ಎಂದು ಅರಣ್ಯ ಇಲಾಖೆ ಸೂಚನೆ ನೀಡಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಮುಗ್ತಿಹಳ್ಳಿ ಬಳಿಯ ಶಾಲಾ ಕಾಲೇಜುಗಳಿಗೆ ಮಂಗಳವಾರವೂ ರಜೆ ಘೋಷಿಸಲಾಗಿದೆ. ವಸತಿ ಶಾಲೆಗೆ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರಿಂದ ಬಿಗಿ ಭದ್ರತೆ ಒದಗಿಸಲಾಗಿತ್ತು
ನಿಷೇಧಾಜ್ಞೆ ಜಾರಿ: ಆನೆಗಳ ಹಿಂಡು ಬೀಡು ಬಿಟ್ಟಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಜ.೩೦ರ ಬೆಳಿಗ್ಗೆಯಿಂದ ೩೧ರ ಬೆಳಿಗ್ಗೆ ೧೦ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಉಪವಿಭಾಗದ ಉಪವಿಭಾಗೀಯ ದಂಡಾಧಿಕಾರಿ ಹಾಗೂ ಉಪವಿಭಾಗಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.